ಜಮ್ಮು- ಕಾಶ್ಮೀರದಲ್ಲಿ 370ನೇ ವಿಧಿಯ ಮರುಸ್ಥಾಪನೆ; ಮಾತುಕತೆಗೆ ಬಾಗಿಲು ಮುಚ್ಚಿದೆಯೇ ಭಾಜಪ?
ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ಸಾಂವಿಧಾನಿಕ ವಿಶೇಷ ಸ್ಥಾನಮಾನ ಮರುಸ್ಥಾಪನೆ ಮಾಡಲು ನಿರ್ಣಯಗಳನ್ನು ಮಂಡಿಸಲಾಗಿದೆ. ಆದರೆ ಬಿಜೆಪಿ ಇದನ್ನು ಬಲವಾಗಿ ವಿರೋಧಿಸುತ್ತಿದ್ದು ರಾಜಕೀಯ ಧ್ರುವೀಕರಣ ಆಗುವ ಎಲ್ಲ ಸಾಧ್ಯತೆಗಳಿವೆ.;
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಬಿಸಿ ಬಿಸಿ ಅಧಿವೇಶನದಲ್ಲಿ ಈ ಪ್ರದೇಶಕ್ಕೆ ಸಾಂವಿಧಾನಿಕ ವಿಶೇಷ ಸ್ಥಾನಮಾನ ಮರುಸ್ಥಾಪಿಸುವ ಕುರಿತು ಕೇಂದ್ರ ಸರ್ಕಾರದ ಜತೆ ಮಾತುಕತೆಗೆ ಕರೆ ನೀಡುವ ನಿರ್ಣಯ ಮಂಡಿಸಲಾಗಿದೆ. ಇದು ಮಹತ್ವದ ರಾಜಕೀಯ ಚರ್ಚೆಗೆ ಕಾರಣವಾಗಿದೆ. 370ನೇ ವಿಧಿಯ ಪರಂಪರೆ ಮತ್ತು ಜಮ್ಮು ಮತ್ತು ಕಾಶ್ಮೀರದ ವಿಶಿಷ್ಟ ಸಾಂವಿಧಾನಿಕ ರಕ್ಷಣೆಗಳ ಭವಿಷ್ಯದ ಬಗ್ಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಈ ವಿವಾದ ಉಂಟಾಗಿದೆ.
ಚರ್ಚೆಯು ಮುಖ್ಯವಾಗಿ ಎರಡು ನಿರ್ಣಯಗಳ ಸುತ್ತ ಸುತ್ತುತ್ತಿದೆ. ಒಂದು, ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮಂಡಿಸಿರುವ ಕೇಂದ್ರ ಸರ್ಕಾರದೊಂದಿಗೆ ಸಂವಾದ ನಡೆಸುವ ಕೋರಿಕೆ ಮತ್ತೊಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) 370 ಮತ್ತು 35A ವಿಧಿಗಳನ್ನು ಮೂಲ ಸ್ವರೂಪದಲ್ಲಿ ಮರುಸ್ಥಾಪಿಸಲು ಆಗ್ರಹಿಸಿರುವುದು.
ಮೊದಲ ನಿರ್ಣಯವನ್ನು ಉಪಮುಖ್ಯಮಂತ್ರಿ ಸುರೇಂದ್ರ ಚೌಧರಿ ಮಂಡಿಸಿದ್ದಾರೆ. ಈ ತೀರ್ಮಾನದಲ್ಲಿ 370 ವಿಧಿಯ ಕುರಿತು ನೇರವಾಗಿ ಯಾವುದೇ ಉಲ್ಲೇಖ ಇಲ್ಲ. ಹೀಗಾಗಿ ರಾಜಕೀಯ ವಿಶ್ಲೇಷಕರು ಇದನ್ನು "ಎಚ್ಚರಿಕೆಯ ನಡೆ" ಎಂದು ಕರೆದಿದ್ದಾರೆ. ಈ ನಿರ್ಣಯದಲ್ಲಿ ಕೇಂದ್ರ ಮತ್ತು ಜಮ್ಮು-ಕಾಶ್ಮೀರದ ಚುನಾಯಿತ ಪ್ರತಿನಿಧಿಗಳ ನಡುವೆ ಸಂವಾದ ಅಗತ್ಯ ಎಂಬುದನ್ನು ಒತ್ತಿ ಹೇಳಲಾಗಿದೆ. ರಾಜಕೀಯ ವಿಶ್ಲೇಷಕ ಪುನೀತ್ ನಿಕೋಲಸ್ ಯಾದವ್, ಈ ನಿರ್ಣಯವು 370 ವಿಧಿಯ ಮರುಸ್ಥಾಪನೆಗೆ ನೇರವಾದ ಬೇಡಿಕೆಯಿಂದ ಹಿಂದೆ ಸರಿದಿದ್ದು, ಕೇವಲ ಮಾತುಕತೆಗೆ ಆಹ್ವಾನಿಸುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ನಿರ್ಣಯದಲ್ಲಿ ಬಳಕೆಯಾದ ಮೃದುವಾದ ಭಾಷೆಯು ಜಮ್ಮು-ಕಾಶ್ಮೀರದ ಭವಿಷ್ಯದ ಕುರಿತು ಚರ್ಚಿಸಲು ಪ್ರಾರಂಭಿಕ ಹಂತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ನಿರ್ಣಯದ ಈ ಮೃದು ಭಾಷೆಯ ಮನವಿಗೂ ಬಿಜೆಪಿ ಸದಸ್ಯರಿಂದ ʼಅಸಮ್ಮತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ಪಿಡಿಪಿ ಸದಸ್ಯರು 370 ವಿಧಿಯ ಮರುಸ್ಥಾಪನೆಗೆ ಬೇಡಿಕೆ ಇಟ್ಟು ಅಧಿವೇಶನದಲ್ಲಿ ಬ್ಯಾನರ್ ಪ್ರದರ್ಶಿಸಿದಾಗ ಬಿಜೆಪಿ ಸದಸ್ಯರು ಸದನದಲ್ಲಿ ಗಲಾಟೆ ಆರಂಭಿಸಿದರು. ಬಿಜೆಪಿ ವಕ್ತಾರ ಅಭಿಜೀತ್ ಜಸ್ರೋಟಿಯಾ, 370 ವಿಧಿಯ ಕುರಿತು ಮತ್ತೆ ಚರ್ಚೆ ಅನಗತ್ಯ ಎಂದು ವಾದಿಸಿದರು. 2019ರಲ್ಲಿ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ರದ್ದು ಮಾಡಿತ್ತು ಹಾಗೂ ಸುಪ್ರೀಂ ಕೋರ್ಟ್ ಮನ್ನಣೆಯೂ ನೀಡಿದೆ ಎಂದು ಹೇಳಿದ್ದಾರೆ.
As the debate over #JammuandKashmir’s constitutional status intensifies, the #BJP’s unwillingness to discuss #Article370 within the Assembly may further polarise the region’s political climate.https://t.co/76gKnykGw4
— The Federal (@TheFederal_News) November 9, 2024
ಈ ವಿಷಯವನ್ನು ಮತ್ತೆ ಪರಿಗಣಿಸುವ ಅಗತ್ಯವೇನು ಎಂದು ಅಭಿಜಿತ್ ಅವರು ಪ್ರಶ್ನಿಸಿದ್ದಾರೆ. “ನಾವು ಮುಂದಕ್ಕೆ ಸಾಗುತ್ತಿದ್ದೇವೆ. ನಾವು ಮತ್ತೆ 370 ವಿಧಿಯ ಹಳೆಯ ದಿನಗಳಿಗೆ ಹಿಂತಿರುಗಲು ಬಯಸುತ್ತಿಲ್ಲ,” ಎಂದೂ ಹೇಳಿದ್ದಾರೆ. ವಿಶೇಷ ಸ್ಥಾನಮಾನದ ಬಗ್ಗೆ ಬಿಜೆಪಿ ತನ್ನ ನಿಲುವು ಪ್ರಕಟಿಸಿದೆ. "ಈ ವಿಚಾರದಲ್ಲಿ ಯಾವುದೇ ಮಾತುಕತೆ ಇಲ್ಲ" ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.
370 ವಿಧಿಯ ಮರುಸ್ಥಾಪನೆಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತಿರುವುದನ್ನು ವಿಶ್ಲೇಷಕ ಪುನೀತ್ ಯಾದವ್ ಈ ರೀತಿ ಹೇಳುತ್ತಾರೆ. ಈ ವಿಚಾರದಲ್ಲಿ ಬಿಜೆಪಿ ನಾಯಕರು ಪರ್ಯಾಯ ದೃಷ್ಟಿಕೋನಗಳನ್ನು ಪರಿಗಣಿಸಲು ಸಿದ್ಧವಿಲ್ಲ ಎಂಬುದು ಸ್ಪಷ್ಟ. ಬಿಜೆಪಿ ತನ್ನ ಅಭಿಪ್ರಾಯವನ್ನು ಹೊರತುಪಡಿಸಿ ಬೇರೆ ದೃಷ್ಟಿಕೋನಗಳನ್ನು ಆಲಿಸಲು ಇಷ್ಟಪಡುವುದಿಲ್ಲ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜಮ್ಮುವಿನ ಡೈಲಿ ಟಸ್ಕೀನ್ ಪತ್ರಿಕೆಯ ಪ್ರಧಾನ ಸಂಪಾದಕ ಸುಹೇಲ್ ಕಾಜ್ಮೀ, ಚರ್ಚೆಯ ಪ್ರಸ್ತಾಪವನ್ನು ನಿರಾಕರಿಸಿದ ಬಿಜೆಪಿಯ ದೃಷ್ಟಿಕೋನವನ್ನು ಟೀಕಿಸಿದ್ದಾರೆ. ಇದು ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ . "ವಿಧಾನಸಭೆ ಅಧಿವೇಶನಗಳು ಚರ್ಚೆಗಳ ವೇದಿಕೆ. ಬಿಜೆಪಿ ಈ ಸಂಸ್ಥೆಗೆ ಗೌರವ ನೀಡಬೇಕು ಮತ್ತು ಆರೋಗ್ಯಕರ ಚರ್ಚೆಗಳ ಪ್ರಾಮುಖ್ಯತೆ ಅರ್ಥಮಾಡಿಕೊಳ್ಳಬೇಕು," ಎಂದು ಕಾಜ್ಮೀ ಅಭಿಪ್ರಾಯಪಟ್ಟಿದ್ದಾರೆ.
ಒಮ್ಮತದ ಚರ್ಚೆ ಅಗತ್ಯ
ನಿರ್ಣಯದ ಬೆಂಬಲಿಗರು, ಜಮ್ಮು-ಕಾಶ್ಮೀರದ ಜನರ ಅಗತ್ಯಗಳು ಮತ್ತು ಭಾವನೆಗಳಿಗೆ ಗೌರವ ಕೊಡಿ ಎಂದು ಒತ್ತಾಯಿಸಿದ್ದಾರೆ. ಯಾದವ್ ಪ್ರಕಾರ, ಈ ನಿರ್ಣಯ ಕೇಂದ್ರದ ವಿರುದ್ಧದ ಪ್ರತಿಕ್ರಿಯೆ ಎಂದು ಅಲ್ಲ. ಇದು ಪಾಲ್ಗೊಳ್ಳುವಿಕೆ ಮತ್ತು ಜಮ್ಮು-ಕಾಶ್ಮೀರದ ಜನರ ಆಶೋತ್ತರಗಳಿಗೆ ಗೌರವ ಸೂಚಕ ಪರಿಗಣಿಸಬೇಕಾಗಿದೆ. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಅವರಿಗೆ ಇದರ ಅರಿವು ಇದೆ. ಅವರು ವಿಧಿಯ ಮರುಸ್ಥಾಪನೆ ಮಾಡಲು ಬಿಜೆಪಿ ಯಾವ ಕಾರಣಕ್ಕೂ ನೆರವು ನೀಡದು ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಒಮ್ಮತದ ಚರ್ಚೆ ಅಗತ್ಯ ಎಂದು ಪುನೀತ್ ಯಾದವ್ ಭಾವಿಸುತ್ತಾರೆ.
ಅಭಿಜಿತ್ ಜಸ್ರೋಟಿಯಾ ತಮ್ಮ ನಿಲುವನ್ನು ದೃಢವಾಗಿ ಪ್ರಕಟಿಸಿದ್ದಾರೆ. ಮಾತುಕತೆಯ ಮನವಿಯನ್ನು "ಅವಕಾಶವಾದಿ ರಾಜಕೀಯʼʼ ಎಂದು ಹೇಳಿದ್ದಾರೆ. 370 ನೇ ವಿಧಿಯ ದುರುಪಯೋಗದಿಂದಾಗಿ ವಾಲ್ಮೀಕಿ ಸಮಾಜ ಮತ್ತು ಪಶ್ಚಿಮ ಪಾಕಿಸ್ತಾನಿ ನಿರಾಶ್ರಿತರಂತಹ ಸಮುದಾಯಗಳ ಶೋಷಣೆಗೆ ಕಾರಣವಾಗಿತ್ತು ಎಂದು ಅವರು ಹೇಳಿದ್ದರು. ತಮ್ಮ ಸಮಾರೋಪ ಭಾಷಣದಲ್ಲಿ, ಜಸ್ರೋಟಿಯಾ ಅವರು 370ನೇ ವಿಧಿಯ ಬಗ್ಗೆ ಮಾತುಕತೆಯ ಮನವಿಯನ್ನು ʼಅಪರಾಧ ಮಾಡಿದ ನಂತರ ಸಾಮರಸ್ಯ ಬಯಸುವ ಕಳ್ಳನಿಗೆ ಹೋಲಿಸಿದ್ದಾರೆʼ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೇಳುವುದು ಹಳೆಯ ಗಾಯಗಳನ್ನು ಕೆದಕಿದಂತೆ ಎಂಬ ಬಿಜೆಪಿಯ ನಂಬಿಕೆಯನ್ನುಅವರು ಪ್ರಕಟಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಸಾಂವಿಧಾನಿಕ ಸ್ಥಾನಮಾನದ ಬಗ್ಗೆ ಚರ್ಚೆ ತೀವ್ರಗೊಳ್ಳುತ್ತಿದ್ದಂತೆ, 370ನೇ ವಿಧಿಯನ್ನು ವಿಧಾನಸಭೆಯೊಂದಿಗೆ ಚರ್ಚಿಸಲು ಬಿಜೆಪಿ ಇಷ್ಟವಿಲ್ಲದಿರುವುದು ಈ ಪ್ರದೇಶದ ರಾಜಕೀಯ ವಾತಾವರಣವನ್ನು ಮತ್ತಷ್ಟು ಧ್ರುವೀಕರಿಸಬಹುದು. ಪ್ರತಿಪಕ್ಷಗಳಿಗೆ ಈ ವಿಷಯವು ಹಿಂದಿನ ರಕ್ಷಣೆಗಳನ್ನು ಪುನಃಸ್ಥಾಪಿಸುವ ಬಗ್ಗೆ ಮಾತ್ರವಲ್ಲ, ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಸಮುದಾಯಗಳಿಗೆ ಪ್ರಾತಿನಿಧ್ಯ ಮತ್ತು ಘನತೆಯನ್ನು ಖಚಿತಪಡಿಸುವ ವಿಷಯವಾಗಿದೆ..