ಕಿಂಗ್​ಫಿಶರ್ ಟವರ್ಸ್​ನಲ್ಲಿ 50 ಕೋಟಿ ರೂ.ಗೆ ಫ್ಲ್ಯಾಟ್ ಖರೀದಿಸಿದ ಇನ್ಫೋಸಿಸ್ ನಾರಾಯಣ ಮೂರ್ತಿ

ಬೆಂಗಳೂರಿನ ಹೃದಯಭಾಗದಲ್ಲಿರುವ ಯುಬಿ ಸಿಟಿಯಲ್ಲಿರುವ ಕಿಂಗ್​ಫಿಶರ್​​ ಟವರ್ಸ್, ಪ್ರೆಸ್ಟೀಜ್ ಗ್ರೂಪ್ ಮತ್ತು ವಿಜಯ್ ಮಲ್ಯ ಸಹಭಾಗಿತ್ವದಲ್ಲಿ 2010ರಲ್ಲಿ ನಿರ್ಮಾಣಗೊಂಡಿತ್ತು. ಇದು ಮಲ್ಯ ಪೂರ್ವಜರ ಮನೆ ಹೊಂದಿದ್ದ 4.5 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ.

Update: 2024-12-07 05:56 GMT
ಕಿಂಗ್​ ಫಿಶರ್ ಟವರ್.

ಇನ್ಫೋಸಿಸ್​​ ಸಂಸ್ಥೆಯ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಎನ್.ಆರ್.ನಾರಾಯಣ ಮೂರ್ತಿ ಅವರು ಬೆಂಗಳೂರಿನ ಕಿಂಗ್​ಫಿಶರ್​ ಟವರ್ಸ್​ನಲ್ಲಿ ಐಷಾರಾಮಿ ಫ್ಲ್ಯಾಟ್ ಖರೀದಿ ಮಾಡಿದ್ದಾರೆ. ಅದಕ್ಕಾಗಿ 50 ಕೋಟಿ ರೂಪಾಯಿ ವಿನಿಯೋಗಿಸಿದ್ದಾರೆ.


8,400 ಚದರ ಅಡಿ ವಿಸ್ತೀರ್ಣದ 4 ಬೆಡ್ ರೂಮ್ ಫ್ಲ್ಯಾಟ್ 16 ನೇ ಮಹಡಿಯಲ್ಲಿದೆ. ಈ ಫ್ಲ್ಯಾಟ್​ಗೆ ಐದು ಕಾರ್ ಪಾರ್ಕ್​ಗಳಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 50 ಕೋಟಿ ರೂ.ಗಳ ದರವಾದರೆ ಪ್ರತಿ ಚದರ ಅಡಿಗೆ 59,500 ರೂಪಾಯಿ ನೀಡಿದಂತಾಗುತ್ತದೆ. ಹೀಗಾಗಿ ಇದು ನಗರದ ಅತ್ಯಂತ ದುಬಾರಿ ವಸತಿ ಖರೀದಿಗಳಲ್ಲಿ ಒಂದಾಗಿದೆ.

ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ 2020ರಲ್ಲಿ ಅದೇ ಸಂಕೀರ್ಣದ 23ನೇ ಮಹಡಿಯಲ್ಲಿ 29 ಕೋಟಿ ರೂ.ಗೆ ಫ್ಲ್ಯಾಟ್ ಖರೀದಿಸಿದ್ದರು.

ಯುಬಿ ಸಿಟಿಯಲ್ಲಿದೆ ಕಿಂಗ್ ಫಿಶರ್ ಟವರ್ಸ್

ಕಿಂಗ್​ಫಿಶರ್​ ಟವರ್ಸ್ ಬೆಂಗಳೂರಿನ ಹೃದಯಭಾಗದಲ್ಲಿರುವ ಯುಬಿ ಸಿಟಿಯಲ್ಲಿದೆ. 2010ರಲ್ಲಿ ಪ್ರೆಸ್ಟೀಜ್ ಗ್ರೂಪ್ ಮತ್ತು ವಿಜಯ್ ಮಲ್ಯ ಜಂಟಿಯಾಗಿ 4.5 ಎಕರೆ ಭೂಮಿಯಲ್ಲಿ ಈ ಟವರ್​ ನಿರ್ಮಿಸಿತ್ತು. ಇದು ಮಲ್ಯ ಅವರ ಪೂರ್ವಜರ ಮನೆಯಿದ್ದ ಜಾಗವಾಗಿದೆ. 34 ಅಂತಸ್ತಿನ ಕಿಂಗ್​ಫಿಶರ್​ ಟವರ್ಸ್ ಮೂರು ಬ್ಲಾಕ್​​ಗಳನ್ನು ಹೊಂದಿದ್ದು, 8,000 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ 81 ಅಲ್ಟ್ರಾ-ಐಷಾರಾಮಿ ಅಪಾರ್ಟ್​ಮೆಂಟ್​ಗಳನ್ನು ಹೊಂದಿದೆ,. 2010 ರಲ್ಲಿ ಈ ಯೋಜನೆಯನ್ನು ಮೊದಲು ಪ್ರಾರಂಭಿಸಿದಾಗ, ಫ್ಲ್ಯಾಟ್​ಗಳನ್ನು ಪ್ರತಿ ಚದರ ಅಡಿಗೆ 22,000 ರೂ.ಗೆ ಮಾರಾಟ ಮಾಡಲಾಗಿತ್ತು.

ಇನ್ಫೋಸಿಸ್ ಸಹ-ಸಂಸ್ಥಾಪಕರು ಸುಮಾರು 10 ವರ್ಷಗಳ ಈ ಅಪಾರ್ಟ್​ಮೆಂಟ್​ ಖರೀದಿ ಮಾಡಿದ್ದ ಮುಂಬೈ ಮೂಲದ ಉದ್ಯಮಿಯಿಂದ ಅಪಾರ್ಟ್​ಮೆಂಟ್​ ಖರೀದಿ ಮಾಡಿದ್ದಾರೆ.

ಯುಬಿ ಸಿಟಿ ಬೆಂಗಳೂರಿನ ಪ್ರಮುಖ ವಾಣಿಜ್ಯ ಮತ್ತು ವಸತಿ ತಾಣವಾಗಿದ್ದು ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಲ್ಯಾವೆಲ್ಲೆ ರಸ್ತೆಗೆ ಹತ್ತಿರದಲ್ಲಿದೆ. ಇದು ದಿ ಕಲೆಕ್ಷನ್ ಎಂಬ ಐಷಾರಾಮಿ ಮಾಲ್, ಕಚೇರಿಗಳು ಮತ್ತು ಸರ್ವಿಸ್​ ಅಪಾರ್ಟ್​ಮೆಂಟ್​​ಗಳನ್ನೂ ಹೊಂದಿದೆ.

ಇಲ್ಲಿ ಇನ್ಯಾರು ಇದ್ದಾರೆ?

ಕಿಂಗ್​ಫಿಶರ್​ ಟವರ್ಸ್ ಬೆಂಗಳೂರಿನ ಅತ್ಯಂತ ಬೇಡಿಕೆಯ ವಸತಿ ಸಂಕೀರ್ಣಗಳಲ್ಲಿ ಒಂದು. ಬಯೋಕಾನ್ ಕಾರ್ಯನಿರ್ವಾಹಕ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ಕರ್ನಾಟಕ ಸಚಿವ ಕೆ.ಜೆ.ಜಾರ್ಜ್ ಅವರ ಪುತ್ರ ರಾಣಾ ಜಾರ್ಜ್ ಮತ್ತು ಯುಎಸ್ ಮೂಲದ ಉದ್ಯಮಿ ಕೃಷ್ಣ ಚಿವುಕುಲಾ ಅವರಂತಹ ಹಲವಾರು ಪ್ರಮುಖ ವ್ಯಕ್ತಿಗಳು ಇಲ್ಲಿ ಅಪಾರ್ಟ್​ಮೆಂಟ್​​ಗಳನ್ನು ಹೊಂದಿದ್ದಾರೆ.

ಹೆಚ್ಚಿನ ಬೇಡಿಕೆ ಮತ್ತು ಕಡಿಮೆ ಪೂರೈಕೆಯಿಂದಾಗಿ ಉದ್ಯಾನ ನಗರಿಯಲ್ಲಿ ಅಲ್ಟ್ರಾ ಐಷಾರಾಮಿ ಅಪಾರ್ಟ್ಮೆಂಟ್​​ಗಳ ಬೆಲೆ ಕಳೆದ ಎರಡು ವರ್ಷಗಳಲ್ಲಿ ಸುಮಾರು 30 ಪ್ರತಿಶತದಷ್ಟು ಹೆಚ್ಚಾಗಿದೆ. 

70  ಗಂಟೆ ಕೆಲಸ ಮಾಡಿ ಎಂದಿದ್ದ ನಾರಾಯಣ ಮೂರ್ತಿ



​​ಉದ್ಯೋಗಿಗಳ ವಾರಕ್ಕೆ 70ಕ್ಕೂ ಅಧಿಕ ಗಂಟೆಗಳ ಕಾಳ ಕರ್ತವ್ಯ ನಿರ್ವಹಿಸಬೇಕು ಎಂದು ನಾರಾಯಣ ಮೂರ್ತಿ ಅವರು ನೀಡುವ ಹೇಳಿಕೆ ಆಗಾಗ ಚರ್ಚೆಗೆ ಕಾರಣವಾಗುತ್ತಿವೆ. ಕೆಲವು ವಾರಗಳ ಹಿಂದೆ ಟಿವಿ ಕಾರ್ಯಕ್ರಮವೊಂದರಲ್ಲಿ ಅವರು ತಮ್ಮ ಮಾತನ್ನು ಪುನರುಚ್ಛರಿಸಿದ್ದಾರೆ. ಈ ವೇಳೆಯೂ ಅವರು ವಿವಾದಕ್ಕೆ ಕಾರಣವಾಗಿದ್ದರು. ವಾರಕ್ಕೆ 70 ಗಂಟೆ ಅಂದರೆ ದಿನಕ್ಕೆ 12 ಗಂಟೆಗಳ ಕೆಲಸವಾಗುತ್ತದೆ. ಇದು ಅಸಾಧ್ಯ ಎಂದು ಬಹುತೇಕ ಉದ್ಯೋಗದಾತರು ಹೇಳಿಕೊಳ್ಳುತ್ತಿದ್ದಾರೆ. ಆದಾಗ್ಯೂ ಅವರು ತಮ್ಮ ಮಾತಿಗೆ ಬದ್ಧರಾಗಿದ್ದಾರೆ. ಹೀಗಾಗಿ ನಾರಾಯಣ ಮೂರ್ತಿ ಅವರನ್ನು ಟ್ರೋಲ್ ಮಾಡುವುದು ಮುಂದುವರಿದಿದೆ. 

Tags:    

Similar News