ಬಾಲಸೋರ್ (ಒಡಿಶಾ): ಒಡಿಶಾ ಕರಾವಳಿಯ ಚಂಡಿಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನಿಂದ ಲಂಬ ಉಡಾವಣೆ ಕಿರು ಶ್ರೇಣಿಯ ಭೂಮಿಯಿಂದ ಆಗಸ ಕ್ಷಿಪಣಿ (ವಿಎಲ್‌ಎಸ್‌ಆರ್-ಎಸ್‌ಎಎಂ)ಗಳನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 12 ಮತ್ತು 13 ರಂದು ನಡೆದ ಎರಡೂ ಪರೀಕ್ಷೆಗಳು ಯಶಸ್ವಿಯಾಗಿವೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹೇಳಿದೆ.
ʻಎರಡೂ ಪರೀಕ್ಷೆಗಳಲ್ಲಿ ಕ್ಷಿಪಣಿಯು ಹೆಚ್ಚು ವೇಗ-ಕಡಿಮೆ ಎತ್ತರದಲ್ಲಿ ಚಲಿಸುತ್ತಿದ್ದ ಗುರಿಯನ್ನು ಯಶಸ್ವಿಯಾಗಿ ತಡೆಹಿಡಿದಿದೆ. ಕ್ಷಿಪಣಿ ನಿಖರತೆ ಮತ್ತು ಗುರಿಯನ್ನು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದೆ,ʼ ಎಂದು ಹೇಳಿಕೆ ತಿಳಿಸಿದೆ.
ಡಿಆರ್‌ಡಿಒ, ಭಾರತೀಯ ನೌಕಾಪಡೆ ಮತ್ತು ಸಂಬಂಧಿಸಿದ ತಂಡಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶ್ಲಾಘಿಸಿದ್ದಾರೆ. ʻಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಈ ಕ್ಷಿಪಣಿಯು ಸಶಸ್ತ್ರ ಪಡೆಗಳಿಗೆ ತಾಂತ್ರಿಕ ಉತ್ತೇಜನ ನೀಡುತ್ತದೆ,ʼ ಎಂದು ಹೇಳಿದ್ದಾರೆ.
ಬಾಲಸೋರ್ ಜಿಲ್ಲಾಡಳಿತವು ಸುರಕ್ಷತೆಯ ದೃಷ್ಟಿಯಿಂದ ಐಟಿಆರ್ ಲಾಂಚ್ ಪ್ಯಾಡ್ 3 ರ 2.5 ಕಿಮೀ ವ್ಯಾಪ್ತಿಯಲ್ಲಿರುವ ಆರು ಗ್ರಾಮಗಳ 3,100 ನಿವಾಸಿಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಿತ್ತು ಎಂದು ಕಂದಾಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುರುವಾರ ನಡೆಸಿದ ಪರೀಕ್ಷೆಯಲ್ಲಿ ವಿಎಲ್‌ಎಸ್‌ಆರ್‌ಎಸ್‌ಎಎಂ ಇನ್ನೊಂದು ಕ್ಷಿಪಣಿಯನ್ನು ಪರಿಣಾಮಕಾರಿಯಾಗಿ ತಡೆದಿತ್ತು. ಸತತ ಎರಡು ಯಶಸ್ಸಿನಿಂದ ಶಸ್ತ್ರಾಸ್ತ್ರ ವ್ಯವಸ್ಥೆಯ ವಿಶ್ವಾಸಾರ್ಹತೆ ಸಾಬೀತಾಗಿದ್ದು, ಕ್ಷಿಪಣಿಯ ವಿವಿಧ ಘಟಕಗಳಿಗೆ ಇತ್ತೀಚೆಗೆ ಮಾಡಲಾದ ನವೀಕರಣಗಳನ್ನು ಸಾಬೀತುಪಡಿಸುತ್ತದೆ.
ರಕ್ಷಣಾ ಇಲಾಖೆ ಕಾರ್ಯದರ್ಶಿ (ಆರ್ ಮತ್ತು ಡಿ) ಮತ್ತು ಡಿಆರ್‌ಡಿಒ ಅಧ್ಯಕ್ಷ ಡಾ. ಸಮೀರ್ ವಿ. ಕಾಮತ್ ಅವರು ವಿಎಲ್‌ಎಸ್‌ಆರ್‌ಎಸ್‌ಎಎಂ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ತಂಡಗಳನ್ನು ಅಭಿನಂದಿಸಿದ್ದಾರೆ.