ಭಾರತ ಯಶಸ್ವಿಯಾಗಿ ಪರೀಕ್ಷೆ ನಡೆಸಿದ ಹೈಪರ್‌ಸಾನಿಕ್‌ ಕ್ಷಿಪಣಿಯ ಮಹತ್ವವೇನು? ಪೂರ್ಣ ವಿವರ ಇಲ್ಲಿದೆ

ಭಾರತೀಯ ರಕ್ಷಣಾ ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ. ಅಂತೆಯ ಶನಿವಾರ ಮುಂಜಾನೆ ನಡೆಸಿದ ಪರೀಕ್ಷೆಯಲ್ಲಿ ನಿಖರ ಫಲಿತಾಂಶ ಒದಗಿಸಿದೆ. ವಿಭಿನ್ನ ಹಂತದಲ್ಲಿ ನಿಯೋಜಿಸಲಾದ ಕ್ಷಿಪಣಿಗಳು ಸಮಪರ್ಕವಾಗಿ ಕಾರ್ಯ ನಿರ್ವಹಿಸಿವೆ.;

Update: 2024-11-17 08:59 GMT
ಬ್ಯಾಲಿಸ್ಟಿಕ್‌ ಕ್ಷಿಪಣಿ.

ಶನಿವಾರ ರಾತ್ರಿ ಭಾರತ ತನ್ನ ಮಿಲಿಟರಿ ಸಾಮರ್ಥ್ಯವನ್ನು ಮತ್ತೊಂದು ಸಲ ಜಗತ್ತಿಗೆ ಪ್ರದರ್ಶಿಸಿದೆ. ಈ ಬಾರಿ ಹೈಪರ್‌ಸಾನಿಕ್‌, ಲಾಂಗ್‌ ರೇಂಜ್‌ನ (ದೂರಗಾಮಿ) ಕ್ಷಿಪಣಿಯೊಂದರ ಯಶಸ್ವಿ ಪರೀಕ್ಷೆ ನಡೆಸಿದೆ. ಈ ಮೂಲಕ ಹೈಪರ್‌ಸಾನಿಕ್‌ ಕ್ಷಿಪಣಿ ಹೊಂದಿರುವ ಎಲೈಟ್‌ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆಗೊಂಡಿದೆ. (ಅಮೆರಿಕ, ಚೀನಾದಂಥ ದೇಶಗಳ ಬಳಿ ಇವೆ) ಈ ಸಾಧನೆ ಮಿಲಿಟರಿ ಸನ್ನದ್ಧತೆಗೆ ಗಮನಾರ್ಹ ಉತ್ತೇಜನ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಹೇಳಿದ್ದಾರೆ.


ಪರೀಕ್ಷೆಯಲ್ಲಿ ಗೆದ್ದಿರುವ ಕ್ಷಿಪಣಿಯ ಮೂಲಕ ಸಶಸ್ತ್ರ ಪಡೆಗಳು 1500 ಕಿ.ಮೀ.ಗಿಂತ ದೂರದ ವ್ಯಾಪ್ತಿಯ ಗುರಿಯನ್ನು ನಿಖರವಾಗಿ ಮುಟ್ಟಲು ಸಾಧ್ಯ ಹಾಗೂ ಹಲವು ಬಗೆಯ ಪೇಲೋಡ್‌ಗಳನ್ನು (ಬಾಂಬ್‌ಗಳು ಮತ್ತು ಸಿಡಿ ತಲೆಗಳು) ಸಾಗಿಸಲು ಸಾಧ್ಯವಾಗುತ್ತದೆ. ಭಾರತವು ನಿರ್ಣಾಯಕ ಮತ್ತು ಸುಧಾರಿತ ಮಿಲಿಟರಿ ತಂತ್ರಜ್ಞಾನ ಹೊಂದಿರುವ ಕೆಲವೇ ರಾಷ್ಟ್ರಗಳ ಗುಂಪಿಗೆ ಸೇರಿಕೊಂಡಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

"ಭಾರತೀಯರ ಪಾಲಿಗೆ ಇದು ಐತಿಹಾಸಿಕ ಕ್ಷಣ ಮತ್ತು ಈ ಮಹತ್ವದ ಸಾಧನೆ. ನಮ್ಮ ದೇಶವನ್ನು ಸುಧಾರಿತ ಮಿಲಿಟರಿ ತಂತ್ರಜ್ಞಾನಗಳ ಸಾಮರ್ಥ್ಯ ಹೊಂದಿರುವ ಆಯ್ದ ರಾಷ್ಟ್ರಗಳ ಪಟ್ಟಿಗೆ ಸೇರುವಂತೆ ಮಾಡಿದೆ " ಎಂದು ರಾಜನಾಥ್ ಸಿಂಗ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.


ಭಾರತೀಯ ರಕ್ಷಣಾ ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ. ಅಂತೆಯ ಶನಿವಾರ ಮುಂಜಾನೆ ನಡೆಸಿದ ಪರೀಕ್ಷೆಯಲ್ಲಿ ನಿಖರ ಫಲಿತಾಂಶ ಒದಗಿಸಿದೆ. ವಿಭಿನ್ನ ಹಂತದಲ್ಲಿ ನಿಯೋಜಿಸಲಾದ ಕ್ಷಿಪಣಿಗಳು ಸಮಪರ್ಕವಾಗಿ ಕಾರ್ಯ ನಿರ್ವಹಿಸಿವೆ.

ಎಲ್ಲಿ ತಯಾರಾದ ಕ್ಷಿಪಣಿ?

ಹೈಪರ್‌ಸಾನಿಕ್‌ ಕ್ಷಿಪಣಿ ಹೈದರಾಬಾದ್‌ನ ಡಾ.ಎಪಿಜೆ ಅಬ್ದುಲ್ ಕಲಾಂ ಕ್ಷಿಪಣಿ ಸಂಕೀರ್ಣದ ಪ್ರಯೋಗಾಲಯಗಳು ದೇಶದ ಉಳಿದ ಭಾಗದಲ್ಲಿರುವ ಡಿಆರ್‌ಡಿಒ ಪ್ರಯೋಗಾಲಯಗಳು ಮತ್ತು ಉದ್ಯಮ ಪಾಲುದಾರರ ಸಹಭಾಗಿತ್ವದೊಂದಿಗೆ ದೇಶೀಯವಾಗಿ ನಿರ್ಮಿಸಲಾಗಿದೆ. . ಹಿರಿಯ ಡಿಆರ್‌ಡಿಒ ವಿಜ್ಞಾನಿಗಳು ಮತ್ತು ಸಶಸ್ತ್ರ ಪಡೆಗಳ ಸದಸ್ಯರ ಸಮ್ಮುಖದಲ್ಲಿ ಕ್ಷಿಪಣಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಹೈಪರ್‌ಸಾನಿಕ್‌ ಕ್ಷಿಪಣಿಗಳು ಅನಿವಾರ್ಯ ಯಾಕೆ? 

ಹೈಪರ್‌ಸಾನಿಕ್‌ ಕ್ಷಿಪಣಿಗಳು ಶಬ್ದಕ್ಕಿಂತ ಐದು ಪಟ್ಟು ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವುದೇ ಅದರ ವಿಶೇಷತೆ. ಅವುಗಳು ಚಲಿಸುವ ವ್ಯಾಪ್ತಿ (ರೇಂಜ್‌) ಮ್ಯಾಕ್‌ 5 ವೇಗದಲ್ಲಿ (ಹೈಪರ್‌ಸಾನಿಕ್‌ ವೇಗವನ್ನು ಅಳೆಯವ ಮಾನದಂಡ, ಅಂದರೆ ಶಬ್ದಕ್ಕಿಂತ ಐದು ಪಟ್ಟು ವೇಗದಲ್ಲಿ ಸಾಗಿದರೆ ಮಾತ್ರ ಹೈಪರ್‌ಸಾನಿಕ್‌ ಎನಿಸಿಕೊಳ್ಳುತ್ತದೆ) ಗಂಟೆಗೆ 6,125 ಕಿಮೀ ಮತ್ತು ಮ್ಯಾಕ್‌ 20 ಗಂಟೆಗೆ ಸುಮಾರು 24,140 ಕಿ.ಮೀ ವೇಗದಲ್ಲಿ ಸಾಗುತ್ತದೆ. ಈ ವೇಗದ ಕಾರಣಕ್ಕೆ ಕ್ಷಿಪಣಿ ವಿರುದ್ಧ ಪ್ರತಿದಾಳಿ ಅಥವಾ ತಡೆಯೊಡ್ಡುವುದು ಅಸಾಧ್ಯ .

ಹೈಪರ್‌ ಕ್ಷಿಪಣಿಗಳಲ್ಲಿ ಎರಡು ವಿಧಗಳಿವೆ. ಹೈಪರ್ಸಾನಿಕ್ ಗ್ಲೈಡ್ ವೆಹಿಕಲ್ಸ್ (ಎಚ್‌ಜಿವಿಗಳು) ಮತ್ತು ಹೈಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳು. ಎಚ್‌ಜಿವಿಗಳನ್ನು ರಾಕೆಟ್ ಬೂಸ್ಟರ್ ಬಳಸಿ ಬ್ಯಾಲಿಸ್ಟಿಕ್ ಕ್ಷಿಪಣಿಗಳಂತೆ ಉಡಾಯಿಸಲಾಗುತ್ತದೆ. ಇದು ನಿರ್ದಿಷ್ಟ ಎತ್ತರ ತಲುಪಿದ ನಂತರ ಬೂಸ್ಟರ್‌ನಿಂದ ಬೇರ್ಪಟ್ಟು ತನ್ನ ಗುರಿಯತ್ತ ಸಾಗುತ್ತದೆ. ಪ್ರತಿದಾಳಿ ತಪ್ಪಿಸಲು ಹಾರಾಟದಲ್ಲಿ ತಂತ್ರಗಾರಿಕೆ ಪ್ರದರ್ಶಿಸುತ್ತದೆ .

ಹೈಪರ್‌ಸಾನಿಕ್‌ ಕ್ರೂಸ್ ಕ್ಷಿಪಣಿಗಳು ಗುರಿ ಮುಟ್ಟುತ ತನಕ ಶಬ್ದಕ್ಕಿಂತ ಐದು ಪಟ್ಟು ಹೆಚ್ಚು ವೇಗ (ಹೈಪರ್‌ಸಾನಿಕ್‌) ಉಳಿಸಿಕೊಳ್ಳುತ್ತದೆ. ಈ ವೇಗ ವರ್ಧನೆಗೆ ಸ್ಕ್ರಾಮ್ಜೆಟ್ ಎಂಜಿನ್‌ ಬಳಸಲಾಗುತ್ತದೆ. ಇದು ಹೆಚ್ಚು ಎತ್ತರದದಲ್ಲಿ ಹಾರುವುದಿಲ್ಲ. ಆದರೆ ಹಾರಾಟದಲ್ಲಿ ಅಪಾರ ಕೌಶಲ ಪ್ರದರ್ಶಿಸುತ್ತದೆ.

ಸವಾಲು ಮೀರಿದ ಭಾರತ

ಹೈಪರ್‌ಸಾನಿಕ್‌ ಕ್ಷಿಪಣಿಗಳ ಹಾರಾಟ ಸುಲಭವಲ್ಲ. ಅದು ತೀವ್ರ ಶಾಖ ಉತ್ಪಾದನೆ ಮಾಡುವ ಕಾರಣ ನಿಯಂತ್ರಣ ಕಷ್ಟ. ನ್ಯಾವಿಗೇಷನ್‌ ಕೂಡ ಕ್ಲಿಷ್ಟಕರ. ಕ್ಷಿಪಣಿಯ ಪತ್ತೆ ಮತ್ತು ಟ್ರ್ಯಾಕಿಂಗ್ ತೊಂದರೆಗಳು ಇರುತ್ತವೆ. ಪ್ರತಿದಾಳಿಯ ವಿರುದ್ಧದ ಹೋರಾಟ ಸೇರಿದಂತೆ ಹಲವು ಸವಾಲುಗಳು ಇರುತ್ತವೆ. ಹೀಗಾಗಿ ಈ ಯಶಸ್ವಿ ಪರೀಕ್ಷೆಯ ಮೂಲಕ ಭಾರತದ ವಿಜ್ಞಾನಿಗಳು ಸವಾಲುಗಳನ್ನು ಗೆದ್ದುಸಂಭ್ರಮಿಸಿದ್ದಾರೆ.

ಹೈಪರ್‌ಸಾನಿಕ್‌ ಕ್ಷಿಪಣಿಗಳು ಅವುಗಳ ವೇಗ, ಕುಶಲತೆ ಮತ್ತು ರೇಂಜ್‌ನಿಂದ ಯುದ್ಧದಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ. ಈ ಕ್ಷಿಪಣಿಗಳು ಮಿಲಿಟರಿ ಕಾರ್ಯಾಚರಣೆಯಲ್ಲಿ ಒಟ್ಟು ಪ್ರತಿಕ್ರಿಯೆಯ ಸಮಯ ಕಡಿಮೆ ಮಾಡುತ್ತದೆ ಮತ್ತು ಸಾಂಪ್ರದಾಯಿಕ ಕ್ಷಿಪಣಿ ವ್ಯವಸ್ಥೆಗಳ ಬಳಕೆ ತಗ್ಗಿಸುತ್ತದೆ .

ಈ ಕ್ಷಿಪಣಿಗಳು ಹೇಗೆ ಕೆಲಸ ಮಾಡುತ್ತವೆ

ಹೈಪರ್ಸಾನಿಕ್ ಕ್ಷಿಪಣಿಗಳನ್ನು ರಾಕೆಟ್‌ ಯಂತ್ರಗಳ ಮೂಲಕ ಉಡಾಯಿಸಲಾಗುತ್ತದೆ. ಗ್ಲೈಡ್ ವೆಹಿಕಲ್‌ ಮತ್ತು ಮಿಸೈಲ್‌ಗಳನ್ನು ಈ ರಾಕೆಟ್‌ಗಳು ಗರಿಷ್ಠ ಎತ್ತರಕ್ಕೆ ಕೊಂಡೊಯ್ಯುತ್ತವೆ. ನಿರೀಕ್ಷಿತ ಎತ್ತರದಲ್ಲಿ ಕ್ಷಿಪಣಿ ಹೈಪರ್ಸಾನಿಕ್ ವೇಗ ಪಡೆಯುತ್ತದೆ. ಕ್ರೂಸ್ ಕ್ಷಿಪಣಿಗಳಾದರೆ ಸ್ಕ್ರಾಮ್ಜೆಟ್ ಎಂಜಿನ್‌ಗಳನ್ನು ಬಳಸಲಾಗುತ್ತದೆ. ಒಳ ನುಗ್ಗುವ ಗಾಳಿಯನ್ನು ಇಂಧನದೊಂದಿಗೆ ಬೆರೆಸಿಕೊಂಡು ಶಬ್ದಕ್ಕಿಂತ ಐದು ಪಟ್ಟು ವೇಗದಲ್ಲಿ ಹಾರುತ್ತದೆ.

ಸಾಂಪ್ರದಾಯಿಕ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಗಿಂತ ಭಿನ್ನವಾಗಿ, ಹೈಪರ್‌ಸಾನಿಕ್‌ ಕ್ಷಿಪಣಿಗಳು ಹಾರಾಟದ ಸಮಯದಲ್ಲಿ ಕೌಶಲ ಪ್ರದರ್ಶಿಸುತ್ತವೆ. ಈ ಕ್ಷಿಪಣಿ ಸಾಗುವ ಪಥವನ್ನು ನಿರೀಕ್ಷಿಸುವುದು ಕಷ್ಟ. ಹೀಗಾಗಿ ಪ್ರತಿದಾಳಿ ಸಾಧ್ಯವಿಲ್ಲ. ಉದಾಹರಣೆಗೆ, ಗ್ಲೈಡ್ ವಾಹನಗಳು ತಮ್ಮ ಗುರಿಗಳ ಕಡೆಗೆ ವೇಗದಲ್ಲಿ ಸಾಗಲು ಏರೋಡೈನಾಮಿಕ್‌ ಲಿಫ್ಟ್‌ ಬಳಸಿಕೊಳ್ಳುತ್ತದೆ. , ಕ್ರೂಸ್ ಕ್ಷಿಪಣಿಗಳು ವೇಗ ಮತ್ತು ದಿಕ್ಕಿನಡೆಗೆ ಎಂಜಿನ್ ಸಹಾಯದಿಂದ ಸಾಗುತ್ತದೆ.

ಹೈಪರ್‌ಸಾನಿಕ ಕ್ಷಿಪಣಿಗಳ ಗರಿಷ್ಠ ವೇಗ ಮತ್ತು ಕೌಶಲದ ಮೂಲಕ ಗುರಿಯೆಡೆಗೆ ನಿಖರವಾಗಿ ಸಾಗುತ್ತದೆ. ಈ ಕ್ಷಿಪಣಿಗಳು ಸಾಂಪ್ರದಾಯಿಕ ಅಥವಾ ಪರಮಾಣು ಬಾಂಬ್‌ಗಳನ್ನೂ ಸಾಗಿಸುವ ಸಾಮರ್ಥ್ಯ ಹೊಂದಿದೆ. ಎಲ್ಲ ರೀತಿಯ ಕಾರ್ಯಾಚರಣೆಗೂ ಬಳಸಬಹುದು.

ಇನ್ನು ಯಾವ ದೇಶಗಳ  ಬಳಿ ಇವೆ?

ಭಾರತ ಇದೀಗ ಈ ಕ್ಷೇತ್ರದಲ್ಲಿ ಸಾಧನೆ ಮಾಡಿದೆ. ಇನ್ನುಳಿದಂತೆ ಯುನೈಟೆಡ್ ಸ್ಟೇಟ್ಸ್ ಆಫ್‌ ಅಮೆರಿಕ , ರಷ್ಯಾ ಮತ್ತು ಚೀನಾ ಸೇರಿದಂತೆ ಹಲವಾರು ದೇಶಗಳು ಹೈಪರ್‌ಸಾನಿಕ್‌ ಕ್ಷಿಪಣಿಗಳನ್ನು ಹೊಂದಿವೆ.

Tags:    

Similar News