ಪಾರ್ಕಿಂಗ್ ವಿಚಾರಕ್ಕೆ ಜಗಳ; ಯುವ ವಿಜ್ಞಾನಿಯ ಹತ್ಯೆ
ಜಾರ್ಖಂಡ್ನ ಧನ್ಬಾದ್ನ ನಿವಾಸಿಯಾಗಿದ್ದ ಡಾ. ಸ್ವರ್ಣಕರ್ ಖ್ಯಾತ ವಿಜ್ಞಾನಿಯಾಗಿದ್ದು, ಅವರ ಸಂಶೋಧನೆ ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿತ್ತು. ಸ್ವಿಟ್ಜರ್ಲೆಂಡ್‌ನಲ್ಲಿ ಕಾರ್ಯನಿರ್ವಹಿಸಿದ್ದ ಅವರು ಇತ್ತೀಚೆಗೆ ಭಾರತಕ್ಕೆ ಮರಳಿ ಐಐಎಸ್ಇಆರ್‌ನಲ್ಲಿ ಪ್ರಾಜೆಕ್ಟ್ ವಿಜ್ಞಾನಿಯಾಗಿ ಸೇರಿಕೊಂಡಿದ್ದರು.;
ಮೊಹಾಲಿಯ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಆ್ಯಂಡ್ ರಿಸರ್ಚ್ನಲ್ಲಿ (ಐಐಎಸ್ಇಆರ್) ಕೆಲಸ ಮಾಡುತ್ತಿದ್ದ 39 ವರ್ಷದ ವಿಜ್ಞಾನಿಯೊಬ್ಬರನ್ನು ಪಾರ್ಕಿಂಗ್ ವಿಚಾರದ ಗಲಾಟೆ ವೇಳೆ ಹೊಡೆದು ಹತ್ಯೆ ಮಾಡಲಾಗಿದೆ. ವಿಜ್ಞಾನಿ ಡಾ. ಅಭಿಷೇಕ್ ಸ್ವರ್ಣಕರ್ ಹತ್ಯೆಯಾದವರು.
ಸೆಕ್ಟರ್ 67 ರಲ್ಲಿರುವ ತಮ್ಮ ಬಾಡಿಗೆ ಮನೆಯ ಬಳಿ ಪಾರ್ಕಿಂಗ್ ವಿಚಾರಕ್ಕೆ ಜಗಳ ನಡೆದಿದ್ದು, ಸುತ್ತಲಿನ ಮನೆಯವರಿಂದ ಥಳಿತಕ್ಕೆ ಒಳಗಾಗಿದ್ದರು. ಮಂಗಳವಾರ (ಮಾರ್ಚ್ 11) ರಾತ್ರಿ ನೆರೆಮನೆಯ ಮಾಂಟಿ ಎಂಬುವರೊಂದಿಗೆ ಪಾರ್ಕಿಂಗ್ ವಿಷಯಕ್ಕೆ ವಾಗ್ವಾದ ನಡೆಸಿದ್ದರು. ಈ ವೇಳೆ ಅಭಿಷೇಕ್ ಅವರನ್ನು ನೆಲಕ್ಕೆ ದೂಡಿ ಹಲ್ಲೆ ಮಾಡಲಾಗಿತ್ತು. ಈ ಭೀಕರ ಘಟನೆಯ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜಾರ್ಖಂಡ್ನ ಧನ್ಬಾದ್ನ ನಿವಾಸಿಯಾಗಿದ್ದ ಡಾ. ಸ್ವರ್ಣಕರ್ ಖ್ಯಾತ ವಿಜ್ಞಾನಿಯಾಗಿದ್ದು, ಅವರ ಸಂಶೋಧನೆ ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿತ್ತು. ಸ್ವಿಟ್ಜರ್ಲೆಂಡ್‌ನಲ್ಲಿ ಕಾರ್ಯನಿರ್ವಹಿಸಿದ್ದ ಅವರು ಇತ್ತೀಚೆಗೆ ಭಾರತಕ್ಕೆ ಮರಳಿ ಐಐಎಸ್ಇಆರ್‌ನಲ್ಲಿ ಪ್ರಾಜೆಕ್ಟ್ ವಿಜ್ಞಾನಿಯಾಗಿ ಸೇರಿಕೊಂಡಿದ್ದರು. ಇತ್ತೀಚೆಗೆ, ಅವರು ಮೂತ್ರಪಿಂಡ ಸಂಬಂಧಿತ ಕಾಯಿಲೆಗೆ ಒಳಗಾಗಿದ್ದು, ಅವರ ಸಹೋದರಿ ಮೂತ್ರಪಿಂಡ ದಾನ ಮಾಡಿ ಬದುಕಿಸಿದ್ದರು. ಅದಕ್ಕಾಗಿ ಅರು ಡಯಾಲಿಸಿಸ್ ಪಡೆಯುತ್ತಿದ್ದರು. ಈ ನಡುವೆ ಅವರು ಪಾರ್ಕಿಂಗ್ ವಿಚಾರದಲ್ಲಿ ಗಲಾಟೆ ನಡೆದು ಹಲ್ಲೆಗೆ ಒಳಗಾಗಿದ್ದರು.
ಇಬ್ಬರ ನಡುವೆ ಗಲಾಟೆ
ಡಾ. ಸ್ವರ್ಣಕರ್ ಅವರು ಮೊಹಾಲಿಯ ಸೆಕ್ಟರ್ 67 ರಲ್ಲಿರುವ ಮನೆಯಲ್ಲಿ ತಮ್ಮ ಹೆತ್ತವರೊಂದಿಗೆ ವಾಸವಾಗಿದ್ದರು. ಈ ದಾರುಣ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೆರೆ ಮನೆಯ ಮಾಂಟಿ ಬೈಕ್ ಬಳಿಯೇ ನಿಂತಿರುವುದು ಕಂಡು ಬಂದಿದೆ. ನಂತರ ಅಭಿಷೇಕ್ ಬೈಕ್ ತೆಗೆದುಕೊಳ್ಳಲು ಬಂದಾಗ ಇಬ್ಬರ ಮಧ್ಯೆ ವಾಗ್ವಾದ ಉಂಟಾದ ದೃಶ್ಯಗಳು ದಾಖಲಾಗಿದೆ.
ಈ ಘಟನೆ ಸಂಬಂಧ ಡಾ. ಸ್ವರ್ಣಕರ್ ಅವರ ಕುಟುಂಬ ಸದಸ್ಯರು ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಘಟನೆ ಬಳಿಕ ಆರೋಪಿ ಮಾಂಟಿ ಪರಾರಿಯಾಗಿದ್ದು, ಆತನನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇಂಥದ್ದು ಮಾಮೂಲಿ
ಪಾರ್ಕಿಂಗ್ ವಿಷಯಕ್ಕೆ ನೆರೆಹೊರೆಯವರ ನಡುವೆ ಜಗಳ ಉಂಟಾಗುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ, ದೆಹಲಿ ಮತ್ತು ಇತರ ಪ್ರಮುಖ ನಗರಗಳಲ್ಲಿ ಪಾರ್ಕಿಂಗ್ ಸ್ಥಳಗಳ ವಿಚಾರವಾಗಿ ನೆರೆಹೊರೆಯವರ ನಡುವೆ ನಡೆದ ಜಗಳಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇತ್ತೀಚೆಗೆ, ಕ್ಷುಲಕ ಕಾರಣಗಳಿಂದ ಗಲಾಟೆಗಳು ತೀವ್ರ ಸ್ವರೂಪ ಪಡೆದು ಕೊಲೆಯೊಂದಿಗೆ ಅಂತ್ಯ ಕಂಡ ಹಲವಾರು ಘಟನೆಗಳು ವರದಿಯಾಗಿವೆ.