Hindenburg-Adani Row | ಸಂಸದೀಯ ಸಮಿತಿಯಿಂದ ಸೆಬಿ ಮುಖ್ಯಸ್ಥೆಗೆ ಸಮನ್ಸ್
ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅಧ್ಯಕ್ಷೆ ಮಾಧಬಿ ಪುರಿ ಬುಚ್ ಹಾಗೂ ಆರ್ಥಿಕ ವ್ಯವಹಾರಗಳ ಇಲಾಖೆಯ ಅಧಿಕಾರಿಗಳಿಗೆ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಶುಕ್ರವಾರ ಸಮನ್ಸ್ ಜಾರಿ ಮಾಡಿದೆ.
ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ದ ಅಧ್ಯಕ್ಷ ಅನಿಲ್ ಕುಮಾರ್ ಲಹೋಟಿ ಅವರಿಗೂ ಸಮನ್ಸ್ ನೀಡಿದ್ದು,ಅಕ್ಟೋಬರ್ 24 ರಂದು ಸಂಸದೀಯ ಸಮಿತಿ ಮುಂದೆ ಹಾಜರಾಗುವಂತೆ ಸೂಚಿಸಿದೆ. ಸಂಸ್ಥೆಗಳ ಮುಖ್ಯಸ್ಥರು ಸಮಿತಿ ಮುಂದೆ ವೈಯಕ್ತಿಕವಾಗಿ ಹಾಜರಾಗಬಹುದು. ಆದರೆ, ಕೆಲವು ಪಿಎಸಿ ಸದಸ್ಯರು ಬುಚ್ ಮತ್ತು ಲಹೋಟಿ ಅವರನ್ನು ಹಿರಿಯ ಅಧಿಕಾರಿಗಳು ಪ್ರತಿನಿಧಿಸಬಹುದು ಎಂದು ಹೇಳಿದ್ದಾರೆ.
ಅಧಿಕೃತ ಕಾರ್ಯಸೂಚಿ
ಪಿಎಸಿಯು ʻಸಂಸತ್ತಿನ ಕಾಯಿದೆಯಿಂದ ಸ್ಥಾಪಿಸಲ್ಪಟ್ಟ ನಿಯಂತ್ರಕ ಸಂಸ್ಥೆಗಳ ಕಾರ್ಯಕ್ಷಮತೆಯ ಪರಿಶೀಲನೆʼ ನಡೆಸುತ್ತದೆ. ಆಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆಯಲ್ಲಿ ಸಂಸ್ಥೆಗಳ ಪರಿಣಾಮಕಾರಿತ್ವವನ್ನು ನಿರ್ಣಯಿಸುವುದು ಸಮಿತಿಯ ಉದ್ದೇಶ.
ಸೆಬಿ ಮುಖ್ಯಸ್ಥೆ ಮತ್ತು ಅವರ ಪತಿ ಧವಲ್ ಬುಚ್ ಅವರು ಅದಾನಿ ಗ್ರೂಪ್ ಜೊತೆಗೆ ಸಂಪರ್ಕದ ವಿವಾದದಲ್ಲಿ ಸಿಲುಕಿರುವುದರಿಂದ, ಪಿಎಸಿ ಸಭೆ ವಿಶೇಷ ಪ್ರಾಮುಖ್ಯತೆ ಪಡೆದುಕೊಂಡಿದೆ.
ಅದಾನಿ ಗುಂಪಿಗೆ ಸಂಬಂಧಿಸಿದ ಕಡಲಾಚೆಯ ಕಂಪನಿಗಳಲ್ಲಿ ಬುಚ್ ದಂಪತಿ ಪಾಲು ಹೊಂದಿದ್ದಾರೆ ಎಂದು ಹಿಂಡೆನ್‌ಬರ್ಗ್ ರಿಸರ್ಚ್ ಆರೋಪಿಸಿದೆ. 18 ತಿಂಗಳ ಹಿಂದೆ ದೂರಿದ್ದರೂ, ಅದಾನಿ ಕಂಪನಿಗಳ ವಿರುದ್ಧದ ಆರೋಪಗಳನ್ನು ಸೆಬಿ ಸರಿಯಾಗಿ ತನಿಖೆ ಮಾಡಿಲ್ಲ ಎಂದು ಹಿಂಡೆನ್‌ಬರ್ಗ್ ಟೀಕಿಸಿದೆ.
ಕಾಂಗ್ರೆಸ್ ಈ ಸಂಬಂಧ ಆಗಸ್ಟ್‌ನಲ್ಲಿ ದೇಶಾದ್ಯಂತ ಪ್ರತಿಭಟನೆ ನಡೆಸಿದ್ದು, ಮಾಧಬಿ ಪುರಿ ಬುಚ್ ಅವರು ಸೆಬಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿತು. ಆದರೆ, ಬುಚ್ ದಂಪತಿ ಮತ್ತು ಅದಾನಿ ಗುಂಪು ಈ ಆರೋಪಗಳನ್ನು ನಿರಾಕರಿಸಿದೆ.
ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಅವರು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ. ಸಮಿತಿಯಲ್ಲಿ ಎನ್‌ಡಿಎ ಮತ್ತು ಇಂಡಿಯ ಒಕ್ಕೂಟದ ಸದಸ್ಯರು ಇದ್ದಾರೆ.