Tahawwur Rana: ಉಗ್ರ ರಾಣಾನನ್ನು ಕೊಂಡೊಯ್ಯು ವಾಹನದ ಭದ್ರತಾ ವ್ಯವಸ್ಥೆಗಳು ಈ ರೀತಿ ಇವೆ
ಇಂದು(ಗುರುವಾರ) ಮಧ್ಯಾಹ್ನ ರಾಣಾನನ್ನು ಹೊತ್ತ ವಿಶೇಷ ವಿಮಾನ ನವದೆಹಲಿಗೆ ಬರಲಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.;
ಭಾರತ ಕಂಡ ಅತ್ಯಂತ ಹೇಯ ಕೃತ್ಯವಾಗಿರುವ 26/11 ಮುಂಬೈ ಉಗ್ರರ ದಾಳಿಯ ಸಂಚುಕೋರರಲ್ಲಿ ಒಬ್ಬನಾದ ಪಾಕಿಸ್ತಾನಿ ಮೂಲಕ ಕೆನಡಿಯನ್ ಪ್ರಜೆ ತಹಾವೂರ್ ರಾಣಾ ಆಗಮನದ ಹಿನ್ನೆಲೆಯಲ್ಲಿ ಸರ್ಕಾರ ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅದರಲ್ಲಿ ಅತ್ಯಂತ ಭದ್ರತಾ ವ್ಯವಸ್ಥೆ ಇರುವ ವಾಹನವೂ ಸೇರಿದೆ ಎಂಬುದಾಗಿ 'ಇಂಡಿಯಾ ಟುಡೆ' ವರದಿ ಮಾಡಿದೆ.
ಇಂದು(ಗುರುವಾರ) ಮಧ್ಯಾಹ್ನ ರಾಣಾನನ್ನು ಹೊತ್ತ ವಿಶೇಷ ವಿಮಾನ ನವದೆಹಲಿಗೆ ಬರಲಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ರಾಣಾನನ್ನು ಇಲ್ಲಿನ ಪಾಲಂ ವಿಮಾನ ನಿಲ್ದಾಣದಿಂದ ಬುಲೆಟ್ ಪ್ರೂಫ್ ವಾಹನದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪ್ರಧಾನ ಕಚೇರಿಗೆ ಕರೆದೊಯ್ಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ದೆಹಲಿ ಪೊಲೀಸ್ ವಿಶೇಷ ಘಟಕವನ್ನು ಹೈಅಲರ್ಟ್ ನಲ್ಲಿ ಇರಿಸಲಾಗಿದ್ದು, ಸ್ವಾಟ್ (ವಿಶೇಷ ಶಸ್ತ್ರಾಸ್ತ್ರಗಳು ಮತ್ತು ತಂತ್ರಗಳು) ಕಮಾಂಡೋಗಳನ್ನು ಈಗಾಗಲೇ ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾಗಿದೆ. ರಾಣಾ ಬಂದಿಳಿದ ಕೂಡಲೇ ಆತನನ್ನು ಬುಲೆಟ್ ಪ್ರೂಫ್ ಕಾರಿಗೆ ಹತ್ತಿಸಲಾಗುತ್ತದೆ. ನಂತರ ಆ ಕಾರಿಗೆ ಶಸ್ತ್ರಸಜ್ಜಿತ ವಾಹನಗಳ ಬೆಂಗಾವಲು ಇರಲಿವೆ ಎಂದೂ ಮೂಲಗಳು ತಿಳಿಸಿವೆ.
ಬುಲೆಟ್ ಪ್ರೂಫ್ ವಾಹನದ ಜೊತೆಗೆ, "ಮಾರ್ಕ್ಸ್ ಮ್ಯಾನ್" ವಾಹನವನ್ನೂ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. "ಮಾರ್ಕ್ಸ್ ಮ್ಯಾನ್" ವಾಹನವು ಅತ್ಯಧಿಕ ಸುರಕ್ಷಿತ ಮತ್ತು ಶಸ್ತ್ರಸಜ್ಜಿತ ಕಾರಾಗಿದ್ದು, ಯಾವುದೇ ರೀತಿಯ ದಾಳಿಯನ್ನೂ ತಡೆದುಕೊಳ್ಳುವ ಸಾಮರ್ಥ್ಯವನ್ನು ಅದು ಹೊಂದಿದೆ. ಭಯೋತ್ಪಾದಕರು, ಗ್ಯಾಂಗ್ ಸ್ಟರ್ ಗಳು ಸೇರಿದಂತೆ ಹೈರಿಸ್ಕ್ ವ್ಯಕ್ತಿಗಳನ್ನು ನ್ಯಾಯಾಲಯಕ್ಕೆ ಅಥವಾ ತನಿಖಾ ಕಚೇರಿಗಳಿಗೆ ಹಾಜರುಪಡಿಸುವ ವೇಳೆ ಭದ್ರತಾ ಸಂಸ್ಥೆಗಳು ಇದೇ ವಾಹನವನ್ನು ಬಳಸುತ್ತವೆ.
16 ವರ್ಷದ ಬಳಿಕ ಭಾರತಕ್ಕೆ
ಬಂಧನಕ್ಕೊಳಗಾಗಿ ಸುಮಾರು 16 ವರ್ಷಗಳ ಬಳಿಕ ಅಮೆರಿಕದಿಂದ ಗಡೀಪಾರಾಗಿರುವ ರಾಣಾನನ್ನು ಮೊದಲಿಗೆ ಎನ್ಐಎ ಅಧಿಕೃತವಾಗಿ ಬಂಧಿಸಲಿದೆ. ನಂತರ ಆತನನ್ನು ವರ್ಚುವಲ್ ಆಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ವಶಕ್ಕೆ ಪಡೆಯಲಾಗುತ್ತದೆ. ಪಾಕಿಸ್ತಾನದ ಮಾಜಿ ಸೇನಾ ಸಿಬ್ಬಂದಿಯೂ ಆಗಿರುವ ಈತನನ್ನು ತಿಹಾರ್ ಜೈಲಿನ ಹೈ ಸೆಕ್ಯೂರಿಟಿ ವಾರ್ಡ್ ನಲ್ಲಿ ಇರಿಸಲಾಗುತ್ತದೆ.
ಎನ್ಐಎ ವಶದಲ್ಲಿರುವ ವೇಳೆ, 26/11 ದಾಳಿಯ ಹಿಂದೆ ಪಾಕಿಸ್ತಾನಿ ಸರ್ಕಾರದ ಪಾತ್ರದ ಬಗ್ಗೆ ರಾಣಾನ ಬಾಯಿಬಿಡಿಸಲು ಅಧಿಕಾರಿಗಳು ಯತ್ನಿಸುವ ಸಾಧ್ಯತೆಯಿದೆ. ಈತನ ವಿಚಾರಣೆಯು ಮುಂಬೈ ದಾಳಿಯ ತನಿಖೆಯ ಮೇಲೆ ಹೊಸ ಬೆಳಕನ್ನು ಚೆಲ್ಲಬಹುದು ಎಂದು ನಿರೀಕ್ಷಿಸಲಾಗಿದೆ.
ನವೆಂಬರ್ 26, 2008 ರಂದು, 10 ಲಷ್ಕರ್-ಎ-ತೈಬಾ (ಎಲ್ಇಟಿ) ಭಯೋತ್ಪಾದಕರು ಮುಂಬೈನ ತಾಜ್ ಹೋಟೆಲ್ ಸೇರಿದಂತೆ 12 ಸ್ಥಳಗಳಲ್ಲಿ ಸಂಘಟಿತ ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದರು. ದಾಳಿಯಲ್ಲಿ 166 ಜನರು ಹತರಾಗಿ, ಹಲವರು ಗಾಯಗೊಂಡರು. ಈ ದಾಳಿಕೋರರಲ್ಲಿ ಒಬ್ಬನಾದ ಅಜ್ಮಲ್ ಕಸಬ್ ನನ್ನು ಬಂಧಿಸಿ, 2012 ರಲ್ಲಿ ಪುಣೆ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಪ್ರಸ್ತುತ ಅಮೆರಿಕದ ಜೈಲಿನಲ್ಲಿರುವ ಪಾಕಿಸ್ತಾನಿ ಅಮೆರಿಕನ್ ಡೇವಿಡ್ ಕೋಲ್ಮನ್ ಹೆಡ್ಲಿ ಮುಂಬೈ ದಾಳಿಗೂ ಮುನ್ನ ಎಲ್ಲೆಲ್ಲಿ ಹೇಗೆ ದಾಳಿ ನಡೆಸಬೇಕೆಂದು ಬೇಹುಗಾರಿಕೆ ನಡೆಸಿದ್ದ. ಆ ಸಮಯದಲ್ಲಿ ವಲಸೆ ಕನ್ಸಲ್ಟೆನ್ಸಿ ಬ್ಯುಸಿನೆಸ್ ನಡೆಸುತ್ತಿದ್ದ ತಹಾವೂರ್ ರಾಣಾ, ತನ್ನ ಏಜೆನ್ಸಿಯ ಮೂಲಕ ಈ ಬೇಹುಗಾರಿಕೆಗೆ ಅನುಕೂಲ ಮಾಡಿಕೊಟ್ಟಿದ್ದಾನೆ ಎಂದು ಎನ್ಐಎ ಆರೋಪಿಸಿದೆ.