ಮುಂಬೈನಲ್ಲಿ ಭಾರೀ ಮಳೆ; ವಿಮಾನ ಸಂಚಾರ ಸ್ಥಗಿತ, ಜಲಮೂಲಗಳು ಭರ್ತಿ

ಹವಾಮಾನ ಇಲಾಖೆಯು ಮುಂಬೈಗೆ ರೆಡ್ ಅಲರ್ಟ್ ಘೋಷಿಸಿದ್ದು, ಶುಕ್ರವಾರ ಬೆಳಗ್ಗೆ 8.30ರವರೆಗೆ ಕೆಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.

Update: 2024-07-25 09:53 GMT

ಮುಂಬೈ ಮತ್ತು ಅದರ ಉಪನಗರಗಳಲ್ಲಿ ಸುರಿದ ಭಾರೀ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದು, ರೈಲು ಮತ್ತು ವಿಮಾನ ಸೇವೆಗೆ ಅಡ್ಡಿಯುಂಟಾಗಿದೆ.

ಭಾರತ ಹವಾಮಾನ ಇಲಾಖೆ (ಐಎಂಡಿ) ಮುಂದಿನ 24 ಗಂಟೆಗಳಲ್ಲಿ ನಗರ ಮತ್ತು ಉಪನಗರಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾ ಗಲಿದೆ. ಮುಂಬೈ ನಗರಕ್ಕೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ಶುಕ್ರವಾರ (ಜುಲೈ 26) ಬೆಳಗ್ಗೆ 8.30 ರವರೆಗೆ ಕೆಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. 

ವಿಮಾನ ಸಂಚಾರ ಅಸ್ತವ್ಯಸ್ತ: ಗುರುವಾರ ಮಳೆಯಿಂದ ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಯಿತು ಮತ್ತು ಮಾರ್ಗವನ್ನು ಬದಲಿಸಲಾಯಿತು. ಭಾರೀ ಮಳೆಯಿಂದ ವಿಮಾನದ ವೇಳಾಪಟ್ಟಿಯಲ್ಲಿ ವಿಳಂಬ ಆಗಲಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ಪರಿಸ್ಥಿತಿಯನ್ನು ಪರಿಶೀಲಿಸಿಕೊಳ್ಳಬೇಕೆಂದು ಇಂಡಿಗೋ ಕೋರಿದೆ. ಸ್ಪೈಸ್ ಜೆಟ್ ಸಹ ಪ್ರಯಾಣಿಕರಿಗೆ ಇದೇ ರೀತಿಯ ವಿನಂತಿಯನ್ನು ಮಾಡಿದೆ. ಏರ್‌ ಇಂಡಿಯಾ ಮಳೆಯಿಂದ ಹಲವಾರು ವಿಮಾನಗಳನ್ನು ರದ್ದುಪಡಿಸಿತು ಮತ್ತು ಬೇರೆಡೆಗೆ ತಿರುಗಿಸಿತು. ಪ್ರಯಾಣಿಕರಿಗೆ ಸಂಪೂರ್ಣ ಮರುಪಾವತಿ ಅಥವಾ ಒಮ್ಮೆ ಉಚಿತ ಪ್ರಯಾಣ ಟಿಕೆಟ್‌ ನೀಡಿದೆ.

ತುಂಬಿ ಹರಿಯುತ್ತಿರುವ ಕೆರೆ: ಜಲಾನಯನ ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ, ವಿಹಾರ ಮತ್ತು ಮೋದಕ ಸಾಗರ ಕೆರೆಗಳು ತುಂಬಿವೆ. ಮಹಾನಗರಕ್ಕೆ ಕುಡಿಯುವ ನೀರು ಒದಗಿಸುವ ಏಳು ಜಲಾಶಯಗಳ ಪೈಕಿ ನಾಲ್ಕು ತುಂಬಿ ಹರಿಯುತ್ತಿದ್ದು, ಒಟ್ಟಾರೆ ನೀರಿನ ಸಂಗ್ರಹ ಸುಧಾರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಹಾರ್ ಸರೋವರ ಮುಂಜಾನೆ 3.50ಕ್ಕೆ ಮತ್ತು ಮೋದಕ್ ಸಾಗರ ಬೆಳಗ್ಗೆ 10.40 ಕ್ಕೆ ತುಂಬಿ ಹರಿಯಲು ಆರಂಭಿಸಿತು. ಪೊವಾಯಿ ಮತ್ತು ತುಳಸಿ ಕೆರೆಗಳು ಈಗಾಗಲೇ ತುಂಬಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರಂತರ ಮಳೆಯಿಂದ ನಗರದ ಕೈಗಾರಿಕಾ ಕೇಂದ್ರದ ಮೂಲಕ ಹಾದು ಹೋಗುವ ಮಿಥಿ ನದಿಯ ನೀರಿನ ಮಟ್ಟ 2.5 ಮೀಟರ್‌ಗೆ ಏರಿಕೆ. ಅದರ ಅಪಾಯದ ಗುರುತು 4.2 ಮೀಟರ್‌. ಅರಬ್ಬಿ ಸಮುದ್ರದಲ್ಲಿ 4.64 ಮೀಟರ್ ಎತ್ತರದ ಅಲೆಗಳ ಮುನ್ಸೂಚನೆ ನೀಡಲಾಗಿದೆ.

ಐಎಂಡಿ ಮುನ್ಸೂಚನೆ: ಮುಂಬೈನಲ್ಲಿ ಗಂಟೆಗೆ 50-60 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಗುರುವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ಗಂಟೆಗಳಲ್ಲಿ ದ್ವೀಪ ನಗರದಲ್ಲಿ 44 ಮಿಮೀ, ಅದರ ಪೂರ್ವ ಮತ್ತು ಪಶ್ಚಿಮ ಉಪನಗರಗಳಲ್ಲಿ ಕ್ರಮವಾಗಿ 90 ಮಿಮೀ ಮತ್ತು 89 ಮಿಮೀ ಮಳೆ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಜಾನೆ ಆರಂಭವಾದ ಭಾರೀ ಮಳೆಯಿಂದ ಕೆಲವು ತಗ್ಗು ಪ್ರದೇಶಗಳು ಜಲಾವೃತವಾದವು. ಬೆಸ್ಟ್(ಬೃಹನ್‌ಮುಂಬೈ ಎಲೆಕ್ಟ್ರಿಕ್ ಸಪ್ಲೈ ಮತ್ತು ಟ್ರಾನ್ಸ್‌ಪೋರ್ಟ್)‌ ತನ್ನ ವಾಹನಗಳ ಸಂಚಾರ ಕಡಿತಗೊಳಿಸಿತು.

ರೈಲುಗಳು ವಿಳಂಬ: ಪಶ್ಚಿಮ ರೈಲ್ವೆ ಮತ್ತು ಸೆಂಟ್ರಲ್ ರೈಲ್ವೆ ಉಪನಗರ ಸೇವೆಗಳು 10-15 ನಿಮಿಷ ತಡವಾಗಿ ಸಂಚರಿಸುತ್ತಿವೆ ಎಂದು ಪ್ರಯಾಣಿಕರು ದೂರಿದ್ದಾರೆ. ಭಾರೀ ಮಳೆಯಿಂದ ಗೋಚರತೆ ಕೊರತೆಯಿಂದ ಉಪನಗರ ರೈಲುಗಳ ವೇಗವನ್ನು ಕಡಿಮೆ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ವಕ್ತಾರರು ತಿಳಿಸಿದ್ದಾರೆ.

ಕುರ್ಲಾ ಮತ್ತು ಘಾಟ್‌ಕೋಪರ್ ನಿಲ್ದಾಣಗಳ ನಡುವಿನ ರೈಲು ಹಳಿಗಳಲ್ಲಿ ಬೆಳಗ್ಗೆ 10.30 ರಿಂದ ನೀರು ಸಂಗ್ರಹವಾಗಲು ಪ್ರಾರಂಭಿಸಿತು. ಎಲ್ಲ ಉಪನಗರ ರೈಲುಗಳು ಕಡಿಮೆ ವೇಗದಲ್ಲಿ ಚಲಿಸುತ್ತಿವೆ. ಪನ್ವೇಲ್-ಕರ್ಜತ್ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Similar News