Haryana Assembly polls: ಜೆಜೆಪಿ- ಆಜಾದ್‌ ಸಮಾಜ ಪಕ್ಷ ಮೈತ್ರಿ

ರೈತರ ಹಕ್ಕುಗಳು ಮತ್ತು ಕ್ಷೇಮಕ್ಕಾಗಿ ಹೋರಾಡುವುದಾಗಿ ಹಾಗೂ ಯುವಜನರ ಸರ್ಕಾರ ರಚಿಸುವುದಾಗಿ ದುಶ್ಯಂತ್ ಚೌತಾಲಾ ಮತ್ತು ಚಂದ್ರಶೇಖರ್ ಆಜಾದ್ ಭರವಸೆ ನೀಡಿದ್ದಾರೆ.;

Update: 2024-08-28 07:43 GMT
ಜನನಾಯಕ್ ಜನತಾ ಪಕ್ಷ ಮತ್ತು ಆಜಾದ್ ಸಮಾಜ ಪಕ್ಷ (ಕಾನ್ಶಿ ರಾಮ್) ನಾಯಕರು ಮೈತ್ರಿಯನ್ನು ಘೋಷಿಸಿದರು.

ಹರಿಯಾಣ ವಿಧಾನಸಭಾ ಚುನಾವಣೆಗೆ ಜನನಾಯಕ್ ಜನತಾ ಪಕ್ಷ (ಜೆಜೆಪಿ) ಮತ್ತು ಆಜಾದ್ ಸಮಾಜ ಪಕ್ಷ (ಕಾನ್ಶಿರಾಮ್) ಕೈಜೋಡಿಸಿವೆ. 

90 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಭಾರತೀಯ ರಾಷ್ಟ್ರೀಯ ಲೋಕದಳದ (ಐಎನ್‌ಎಲ್‌ಡಿ) ಶಾಖೆಯಾದ ದುಶ್ಯಂತ್ ಚೌತಾಲಾ ಅವರ ಜೆಜೆಪಿ 70 ಸ್ಥಾನ ಹಾಗೂ ಚಂದ್ರಶೇಖರ್ ಆಜಾದ್ ಅವರ ಪಕ್ಷ 20 ಸ್ಥಾನದಲ್ಲಿ ಸ್ಪರ್ಧಿಸಲಿದೆ. 

ದೆಹಲಿಯಲ್ಲಿ ದುಷ್ಯಂತ್ ಮೈತ್ರಿಯನ್ನು ಘೋಷಿಸಿದರು. ರೈತರ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ ಹೋರಾಡುವುದಾಗಿ ಮತ್ತು ʻಯುವಜನರ ಸರ್ಕಾರʼ ರಚಿಸುವುದಾಗಿ ದುಶ್ಯಂತ್ ಮತ್ತು ಆಜಾದ್ ಭರವಸೆ ನೀಡಿದರು. 

ಜೆಜೆಪಿಗೆ ಹಿನ್ನಡೆ: ಚುನಾವಣೆಗೆ ಮುನ್ನ ಜೆಜೆಪಿಗೆ ಹಿನ್ನಡೆಯಾಗಿದ್ದು, ಪಕ್ಷದ ನಾಲ್ವರು ಶಾಸಕರು ಶನಿವಾರ ರಾಜೀನಾಮೆ ನೀಡಿದರು. ಮಾಜಿ ಸಚಿವ ಅನೂಪ್ ಧನಕ್, ದೇವೇಂದ್ರ ಬಬ್ಲಿ, ರಾಮ್ ಕರಣ್ ಕಲಾ ಮತ್ತು ಈಶ್ವರ್ ಸಿಂಗ್ ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದರು. ಪಕ್ಷಕ್ಕೆ ರಾಜೀನಾಮೆ ನೀಡಿದ ಮೊದಲ ಶಾಸಕ ರಾಮ್ ಕುಮಾರ್ ಗೌತಮ್. 

ಈಗ ಪಕ್ಷದಲ್ಲಿ ಮೂವರು ಶಾಸಕರು ಮಾತ್ರ ಇದ್ದಾರೆ. ಅವರೆಂದರೆ, ಭಿವಾನಿ ಜಿಲ್ಲೆಯ ಬಧ್ರಾದಿಂದ ಆಯ್ಕೆಯಾಗಿರುವ ನೈನಾ ಚೌತಾಲಾ (ದುಷ್ಯಂತ್ ಅವರ ತಾಯಿ), ಜಿಂದ್‌ನ ಉಚ್ಚಾನ ಕಲಾನ್‌ ಕ್ಷೇತ್ರದ ಶಾಸಕ ದುಶ್ಯಂತ್ ಮತ್ತು ಜಿಂದ್‌ನ ಜೂಲಾನಾ ಕ್ಷೇತ್ರದ ಶಾಸಕ ಅಮರ್‌ಜೀತ್ ಧಂಡಾ. ಶಾಸಕರಾದ ರಾಮ್ ನಿವಾಸ್ ಸೂರಜ್ ಖೇರಾ ಮತ್ತು ಜೋಗಿ ರಾಮ್ ಸಿಂಗ್ ಅವರು ಅನರ್ಹತೆ ಆರೋಪ ಎದುರಿಸುತ್ತಿದ್ದಾರೆ.

ಆತ್ಮವಿಶ್ವಾಸದಲ್ಲಿರುವ ಬಿಜೆಪಿ: ರಾಜ್ಯದ ಮಾಜಿ ಗೃಹ ಸಚಿವ ಅನಿಲ್ ವಿಜ್ ಅವರು ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಖಂಡಿತ. ಪ್ರಾದೇಶಿಕ ಪಕ್ಷಗಳ ಕಾಲ ಮುಗಿದಿದೆ ಮತ್ತು ಸ್ಪರ್ಧೆ ಇರುವುದು ಕಾಂಗ್ರೆಸ್ ಜೊತೆ ಮಾತ್ರ. ನಾವು ಕಾಂಗ್ರೆಸ್ ನ್ನು ಸುಲಭವಾಗಿ ಸೋಲಿಸುತ್ತೇವೆ,ʼ ಎಂದು ಹೇಳಿದರು.

ಅಕ್ಟೋಬರ್ 2019 ರಲ್ಲಿ 90 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಬಿಜೆಪಿ 40 ಸ್ಥಾನ ಗೆದ್ದು, ಬಹುಮತಕ್ಕೆ ಆರು ಸ್ಥಾನದ ಕೊರತೆ ಹೊಂದಿತ್ತು. ದುಷ್ಯಂತ್ ನೇತೃತ್ವದಲ್ಲಿ ಹೊಸದಾಗಿ ರಚನೆಯಾದ ಜೆಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು, ಸರ್ಕಾರ ರಚಿಸಿತು. ಕಳೆದ ಮಾರ್ಚ್‌ನಲ್ಲಿ ಜೆಜೆಪಿಯೊಂದಿನ ತನ್ನ ನಾಲ್ಕೂವರೆ ವರ್ಷಗಳ ಸಂಬಂಧ ಕಡಿದುಕೊಂಡು, ನಯಾಬ್ ಸಿಂಗ್ ಸೈನಿ ನೇತೃತ್ವದಲ್ಲಿ ಹೊಸ ಸರ್ಕಾರವನ್ನು ರಚಿಸಿತು. ಈಗ ಕೇಂದ್ರ ಸಚಿವರಾಗಿರುವ ಖಟ್ಟರ್ ಅವರ ಉತ್ತರಾಧಿಕಾರಿಯಾಗಿ ಸೈನಿ ಅಧಿಕಾರ ವಹಿಸಿಕೊಂಡರು.

ಕೌಟುಂಬಿಕ ಕಲಹದಿಂದ ದುರ್ಬಲ: ಮಾಜಿ ಉಪಪ್ರಧಾನಿ ಮತ್ತು ರಾಜ್ಯದ ಪ್ರಮುಖ ಜಾಟ್ ನಾಯಕ ಚೌಧರಿ ದೇವಿ ಲಾಲ್, ರಾಜ್ಯವನ್ನು ದಶಕಗಳ ಕಾಲ ಆಳಿದರು. ಐಎನ್‌ಎಲ್‌ಡಿಯಲ್ಲಿನ ಆಂತರಿಕ ಕಲಹದ ನಂತರ, ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಒ.ಪಿ. ಚೌತಾಲಾ ಅವರ ಮೊಮ್ಮಗ ದುಶ್ಯಂತ್ 2018 ರಲ್ಲಿ ಪಕ್ಷವನ್ನು ಒಡೆದು ಜೆಜೆಪಿ ರಚಿಸಿದರು. 

ಹರಿಯಾಣದ ಎರಡೂ ಪ್ರಾದೇಶಿಕ ಪಕ್ಷಗಳು(ಐಎನ್‌ಎಲ್‌ಡಿ ಮತ್ತು ಜೆಜೆಪಿ), ರಾಜ್ಯದ ಜನಸಂಖ್ಯೆಯ ಶೇ.28ರಷ್ಟು ಇರುವ ಜಾಟ್ ಮತಗಳನ್ನು ಅವಲಂಬಿಸಿವೆ. 

ಮತ ಸಮೀಕರಣ: ಈ ಪಕ್ಷಗಳು ಪ್ರಮುಖ ಜಾಟ್ ನಾಯಕ ಮತ್ತು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್‌ನಿಂದ ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿವೆ. ಆದರೆ, ಬಿಜೆಪಿಯು ಜಾಟೇತರ ಮತಗಳನ್ನು ಆಧರಿಸಿದೆ. ಐಎನ್‌ಎಲ್‌ಡಿ ಒಂಬತ್ತೂವರೆ ವರ್ಷ ಸೆರೆವಾಸದ ನಂತರ ಜುಲೈ 2, 2021 ರಂದು ತಿಹಾರ್ ಜೈಲಿನಿಂದ ಬಿಡುಗಡೆಯಾದ ಒ.ಪಿ. ಚೌತಾಲಾ ಅವರನ್ನು ಆಧರಿಸಿದೆ. 

ಅಧಿಕಾರದಲ್ಲಿರುವ ಬಿಜೆಪಿ, ಮೂರನೇ ಬಾರಿ ಗೆಲುವಿಗಾಗಿ ಶ್ರಮಿಸುತ್ತಿದೆ. ಅಕ್ಟೋಬರ್ 4 ರಂದು ಮತ ಎಣಿಕೆ ನಡೆಯಲಿದೆ.

Tags:    

Similar News