Haryana polls: ಕಾಂಗ್ರೆಸ್ 3, 4ನೇ ಪಟ್ಟಿ ಬಿಡುಗಡೆ; ಸುರ್ಜೆವಾಲಾ ಪುತ್ರನಿಗೆ ಟಿಕೆಟ್‌

ಕಾಂಗ್ರೆಸ್ ಸೋಹ್ನಾ, ಭಿವಾನಿ, ನಾರ್ನಾಂಡ್ ಮತ್ತು ಉಕ್ಲಾನಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಿಲ್ಲ.ಇದು ಕೊನೆಯ ಕ್ಷಣದಲ್ಲಿ ಮೈತ್ರಿ ಸಾಧ್ಯತೆಯ ಊಹಾಪೋಹಗಳಿಗೆ ಇಂಬು ನೀಡಿದೆ.

Update: 2024-09-12 06:29 GMT

ಹರ್ಯಾಣ ವಿಧಾನಸಭಾ ಚುನಾವಣೆಗೆ 45 ಅಭ್ಯರ್ಥಿಗಳ ಮೂರನೇ ಮತ್ತು ನಾಲ್ಕನೇ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಈಮೂ ಲಕ ಒಟ್ಟು 86 ಅಭ್ಯರ್ಥಿಗಳನ್ನು ಘೋಷಿಸಿದ್ದು, ಕೈತಾಲ್‌ನಿಂದ ಸಂಸದ ರಣದೀಪ್ ಸುರ್ಜೇವಾಲಾ ಅವರ ಪುತ್ರ ಆದಿತ್ಯ ಸುರ್ಜೇವಾಲಾ ಅವರನ್ನು ಕಣಕ್ಕಿಳಿಸಿದೆ. 

ನಾಲ್ಕನೇ ಪಟ್ಟಿಯಲ್ಲಿ ಅಂಬಾಲಾ ಕಂಟೋನ್ಮೆಂಟಿನಿಂದ ಪರಿಮಳ್ ಪರಿ, ಪಾಣಿಪತ್ ಗ್ರಾಮಾಂತರದಿಂದ ಸಚಿನ್ ಕುಂದು, ನರ್ವಾನಾದಿಂದ ಸತ್ಬೀರ್ ದುಬ್ಲೇನ್ (ಎಸ್‌ಸಿ), ರಾನಿಯಾದಿಂದ ಸರ್ವಮಿತ್ರ ಕಾಂಬೋಜ್ ಮತ್ತು ಟಿಗಾಂವ್‌ನಿಂದ ರೋಹಿತ್ ನಗರ್ ಅವರನ್ನು ಕಣಕ್ಕಿಳಿಸಿದೆ. 

ಮೂರನೇ ಪಟ್ಟಿಯಲ್ಲಿ ಪಂಚಕುಲದಿಂದ ಮಾಜಿ ಉಪ ಮುಖ್ಯಮಂತ್ರಿ ಚಂದರ್ ಮೋಹನ್, ಅಂಬಾಲಾ(ನಗರ)ದಿಂದ ಮಾಜಿ ಸಚಿವ ನಿರ್ಮಲ್ ಸಿಂಗ್, ಜಗದ್ರಿಯಿಂದ ಅಕ್ರಮ್ ಖಾನ್, ಫತೇಹಾಬಾದ್‌ನಿಂದ ಬಲ್ವಾನ್ ಸಿಂಗ್ ದೌಲತ್‌ಪುರಿ, ಹಿಸಾರ್‌ನಿಂದ ರಾಮ್ ನಿವಾಸ್ ರಾರಾ, ಬವಾನಿ ಖೇರಾ (ಎಸ್‌ಸಿ) ದಿಂದ ಪ್ರದೀಪ್ ನರ್ವಾಲ್ ಮತ್ತು ಹಾಥಿನ್‌ನಿಂದ ಇಸ್ರೇಲ್ ಮೊಹಮ್ಮದ್ ಸ್ಪರ್ಧಿಸಲಿದ್ದಾರೆ. 

ಹಿಸಾರ್ ಸಂಸದ ಜೈ ಪ್ರಕಾಶ್ ಅವರ ಪುತ್ರ ವಿಕಾಸ್ ಕಲಾಯತ್‌ನಿಂದ ಮತ್ತು ಅಂಬಾಲಾ ಸಂಸದ ವರುಣ್ ಚೌಧರಿ ಅವರ ಪತ್ನಿ ಪೂಜಾ ಚೌಧರಿ ಮುಲಾನಾ (ಎಸ್‌ಸಿ) ಸ್ಥಾನದಿಂದ ಕಣಕ್ಕೆ ಇಳಿದಿದ್ದಾರೆ. ಕ್ಷೇತ್ರವನ್ನುಈಮೊದಲು ವರುಣ್ ಚೌಧರಿ ಪ್ರತಿನಿಧಿಸಿದ್ದರು. 

ಪಕ್ಷಾಂತರಿಗಳಿಗೂ ಟಿಕೆಟ್:‌ ಕುರುಕ್ಷೇತ್ರ ಜಿಲ್ಲೆಯ ಪೆಹೋವಾದಿಂದ ಮನ್‌ದೀಪ್ ಸಿಂಗ್ ಚಾಥಾ ಮತ್ತು ಸಿರ್ಸಾದಿಂದ ಗೋಕುಲ್ ಸೇಟಿಯಾ ಸ್ಪರ್ಧಿಸುವರು. ಹರಿಯಾಣ ಲೋಕಹಿತ್ ಪಕ್ಷದ ಮುಖ್ಯಸ್ಥ ಗೋಪಾಲ್ ಕಾಂಡ ಸಿರ್ಸಾದ ಹಾಲಿ ಶಾಸಕ. 

ಎಲ್ಲೇನಾಬಾದ್‌ನಲ್ಲಿ ಐಎನ್‌ಎಲ್‌ಡಿ ಹಿರಿಯ ನಾಯಕ ಅಭಯ್ ಸಿಂಗ್ ಚೌತಾಲಾ ಮರು ಆಯ್ಕೆ ಬಯಸಿದ್ದು, ಕಾಂಗ್ರೆಸ್ ಭರತ್ ಸಿಂಗ್ ಬೇನಿವಾಲ್ ಅವರನ್ನು ಕಣಕ್ಕಿಳಿಸಿದೆ. ಮಾಜಿ ಶಾಸಕ ರಾಮ್ ನಿವಾಸ್ ಘೋರೆಲಾ ಬರ್ವಾಲಾ, ರಾಕೇಶ್ ಕುಮಾರ್ ಕಾಂಬೋಜ್ ಇಂದ್ರಿ, ಸುಮಿತಾ ವಿರ್ಕ್ ಕರ್ನಾಲ್‌ ಹಾಗೂ ಜಗದ್ರಿಯಿಂದ ಹಿರಿಯ ನಾಯಕ ಅಕ್ರಮ್ ಖಾನ್ ಕಣಕ್ಕಿಳಿದಿದ್ದಾರೆ. 

ದಾದ್ರಿ ಮತ್ತು ಪುಂಡ್ರಿಯಿಂದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಪಕ್ಷಾಂತರಿ ಸ್ವತಂತ್ರ ಶಾಸಕರಾದ ಸೋಂಬಿರ್ ಸಾಂಗ್ವಾನ್ ಮತ್ತು ರಣಧೀರ್ ಗೊಲ್ಲೆನ್ ಅವರು ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. 

ನಾಲ್ಕು ಸ್ಥಾನ ಖಾಲಿ: ಸೋಹ್ನಾ, ಭಿವಾನಿ, ನಾರ್ನಾಂಡ್ ಮತ್ತು ಉಕ್ಲಾನಾ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಹೆಸರಿಸಿಲ್ಲ.ಇದರಿಂದ, ಕೊನೆಯ ಕ್ಷಣದಲ್ಲಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯ ಊಹಾಪೋಹ ಹೆಚ್ಚಿದೆ. ಆಮ್ ಆದ್ಮಿ ಪಕ್ಷ (ಎಎಪಿ) ಜೊತೆ ಸೀಟು ಹಂಚಿಕೆ ಮಾತುಕತೆ ವಿಫಲವಾಗಿದೆ. ಆಪ್‌ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕೆಲವು ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. 

Tags:    

Similar News