ಹರಿದ್ವಾರದ ಮಾನಸ ದೇವಿ ದೇಗುಲದಲ್ಲಿ ಕಾಲ್ತುಳಿತ: 6 ಭಕ್ತರ ದುರ್ಮರಣ, 25ಕ್ಕೂ ಹೆಚ್ಚು ಮಂದಿಗೆ ಗಾಯ
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. "ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ನಡೆದ ಕಾಲ್ತುಳಿತದ ಸುದ್ದಿ ಅತ್ಯಂತ ದುಃಖಕರ ಎಂದು ಬರೆದುಕೊಂಡಿದ್ದಾರೆ.;
ಉತ್ತರಾಖಂಡದ ಹರಿದ್ವಾರದಲ್ಲಿರುವ ಪ್ರಸಿದ್ಧ ಮಾನಸ ದೇವಿ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದು. 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಶ್ರಾವಣ ಮಾಸದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ದೇವಸ್ಥಾನಕ್ಕೆ ಸಾಗುವ ಮೆಟ್ಟಿಲುಗಳ ಮಾರ್ಗದಲ್ಲಿ ಜನಸಂದಣಿ ಮಿತಿಮೀರಿದ ಪರಿಣಾಮ ತಳ್ಳಾಟ-ನೂಕಾಟ ಉಂಟಾಗಿ, ಕಾಲ್ತುಳಿತ ಸಂಭವಿಸಿದೆ ಎಂದು ಅಧಿಕಾರಿಗಳು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.
ಏನಾಯಿತು?
ಭಾರಿ ಜನಸಂದಣಿಯಿಂದಾಗಿ ಮೆಟ್ಟಿಲುಗಳ ಮೇಲೆ ನುಗ್ಗಲು ಉಂಟಾಗಿದ್ದು, ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ಕೈಮೀರಿತು. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ, ಸ್ಥಳೀಯ ಪೊಲೀಸ್, ಆಡಳಿತ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಕ್ಷಣವೇ ಸ್ಥಳಕ್ಕೆ ಧಾವಿಸಿ, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಆರಂಭಿಸಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯನ್ನು ದೃಢಪಡಿಸಿರುವ ಗಢವಾಲ್ ವಿಭಾಗದ ಆಯುಕ್ತ ವಿನಯ್ ಶಂಕರ್ ಪಾಂಡೆ, "ಮಾನಸ ದೇವಿ ದೇವಸ್ಥಾನದಲ್ಲಿ ಭಾರಿ ಜನಸಂದಣಿಯಿಂದ ಉಂಟಾದ ಕಾಲ್ತುಳಿತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ನಾನು ಸ್ಥಳಕ್ಕೆ ತೆರಳುತ್ತಿದ್ದೇನೆ," ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಂತಾಪ
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. "ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ನಡೆದ ಕಾಲ್ತುಳಿತದ ಸುದ್ದಿ ಅತ್ಯಂತ ದುಃಖಕರ. ಎಸ್‌ಡಿಆರ್‌ಎಫ್, ಸ್ಥಳೀಯ ಪೊಲೀಸರು ಮತ್ತು ಇತರ ರಕ್ಷಣಾ ತಂಡಗಳು ಸ್ಥಳದಲ್ಲಿದ್ದು, ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ. ನಾನು ಸ್ಥಳೀಯ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ," ಎಂದು ಅವರು 'X' ನಲ್ಲಿ ಪೋಸ್ಟ್ ಮಾಡಿದ್ದಾರೆ.