ಪ್ರಚಲಿತ ಸಮಸ್ಯೆಗಳಿಗೆ ಗಮನ ನೀಡಿ: 'ತುರ್ತು ಪರಿಸ್ಥಿತಿ' ಹೇಳಿಕೆಗೆ ಪ್ರತಿಪಕ್ಷಗಳ ಟೀಕೆ

ಮೊದಲ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ನಾನು ಹುಟ್ಟಿರಲಿಲ್ಲ.ಆದರೆ, ಬಿಜೆಪಿ ಕಳೆದ 10 ವರ್ಷಗಳಿಂದ ಅಘೋಷಿತ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದೆ ಎಂದು ಮಹುವಾ ಮೊಯಿತ್ರಾ ಹೇಳಿದ್ದಾರೆ.;

Update: 2024-06-24 12:27 GMT
ಸಂಸತ್ ಭವನದ ಸಂಕೀರ್ಣದ ಎದುರು ಸಂವಿಧಾನದ ಪ್ರತಿಯೊಂದಿಗೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ಪ್ರಧಾನಮಂತ್ರಿಯವರ ʻತುರ್ತು ಪರಿಸ್ಥಿತಿ" ಹೇಳಿಕೆಗೆ ತಿರುಗೇಟು ನೀಡಿರುವ ಪ್ರತಿಪಕ್ಷದ ನಾಯಕರು, ಅವರ ಸರ್ಕಾರದ ಕಾರ್ಯವೈಖರಿ ಯನ್ನು ಖಂಡಿಸಿದ್ದಾರೆ ಮತ್ತು ಪ್ರಸ್ತುತ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ.

18ನೇ ಲೋಕಸಭೆಯ ಮೊದಲ ಅಧಿವೇಶನದ ಆರಂಭಕ್ಕೂ ಮುನ್ನ ಸಂಸತ್ತಿನ ಸಂಕೀರ್ಣದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಜೂನ್‌ 25ರಂದು ತುರ್ತು ಪರಿಸ್ಥಿತಿಯ ವಾರ್ಷಿಕೋತ್ಸವ ಬರುತ್ತದೆ. ಅದು ಭಾರತದ ಸಂಸದೀಯ ಇತಿಹಾಸದಲ್ಲಿನ ಕಪ್ಪು ಚುಕ್ಕೆ. ಆಗ ದೇಶ ಕಾರಾಗೃಹವಾಗಿ ಬದಲಾಯಿತು ಎಂದು ಹೇಳಿದ್ದರು. 

ಮೊಯಿತ್ರಾ ಅವರ ಮರುಪ್ರಶ್ನೆ: ಟೀಕೆಗೆ ಪ್ರತಿಕ್ರಿಯಿಸಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ʻಬಿಜೆಪಿ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ದೇಶದ ಜನ ಅರಿತುಕೊಂಡಿದ್ದಾರೆ. ಇದರಿಂದಾಗಿ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ಬರಲಿಲ್ಲ,ʼ ಎಂದು ಹೇಳಿದರು. 

ʻಬಿಜೆಪಿ ಬಲ 303ರಿಂದ 240ಕ್ಕೆ ಇಳಿದಿದೆ. ಅಲ್ಪಮತದ ಸರ್ಕಾರ ನಡೆಸುತ್ತಿದ್ದಾರೆ. 400 ಪಾರ್‌ ಎಂದು ಹೇಳಿದವರು ಸರಳ ಬಹುಮತವನ್ನೂ ಪಡೆಯಲು ಆಗಲಿಲ್ಲ. ಒಂದು ಕಡೆ ಬಿಜೆಪಿ ಮತ್ತು ಇನ್ನೊಂದು ಕಡೆ ಸಂವಿಧಾನವಿದೆ ಎಂದು ದೇಶದ ಜನತೆ ಅರ್ಥ ಮಾಡಿಕೊಂಡಿದ್ದಾರೆ. ಜನರು ಸಂವಿಧಾನವನ್ನು ಆಯ್ಕೆ ಮಾಡಿದ್ದಾರೆ,ʼ ಎಂದು ಮೊಯಿತ್ರಾ ಹೇಳಿದರು. 

ʻಕೇಂದ್ರದ ಬಿಜೆಪಿ ಸರ್ಕಾರದ ಅಡಿಯಲ್ಲಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇತ್ತು. ಮೊದಲ ತುರ್ತು ಪರಿಸ್ಥಿತಿ ಸಮಯದಲ್ಲಿ ನಾನು ಹುಟ್ಟಿರಲಿಲ್ಲ. ಆದರೆ, ಅವರು (ಬಿಜೆಪಿ) ಕಳೆದ 10 ವರ್ಷದಿಂದ ಅಘೋಷಿತ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ; ದೇಶದ ಜನರು ಅದನ್ನು ಅನುಮತಿಸುವುದಿಲ್ಲ ಎಂದು ಹೇಳಿದರು,ʼ ಎಂದು ಟಿಎಂಸಿ ನಾಯಕಿ ಹೇಳಿದರು. 

ಕರಾಳ ದಿನ ಹಿಂತಿರುಗುವುದಿಲ್ಲ ಎಂದು ಭಾವಿಸುತ್ತೇವೆ: ಶಿವಸೇನೆ(ಯುಬಿಟಿ) 

ಶಿವಸೇನಾ (ಯುಬಿಟಿ) ನಾಯಕ ಅನಿ ದೇಸಾಯಿ ಮಾತನಾಡಿ, ತುರ್ತು ಪರಿಸ್ಥಿತಿ ಬಹಳ ಹಿಂದೆಯೇ ಮುಗಿದಿದೆ ಮತ್ತು ಸರ್ಕಾರ ವರ್ತಮಾನದತ್ತ ಗಮನಹರಿಸಬೇಕು ಎಂದರು. ʻತುರ್ತು ಪರಿಸ್ಥಿತಿ ಕಳೆದಿದೆ. ಆದರೆ, ಇಂದಿನ ಪರಿಸ್ಥಿತಿ ಏನು? ತುರ್ತು ಪರಿಸ್ಥಿತಿಯನ್ನು ನೆನಪಿಸಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಕರಾಳ ದಿನಗಳು ಹಿಂತಿರುಗುವುದಿಲ್ಲ ಎಂದು ನಾನು ಭಾವಿಸುತ್ತೇನೆ,ʼ ಎಂದು ಹೇಳಿದರು. 

ಆರ್‌ಎಸ್‌ಪಿ ನಾಯಕ ಎನ್‌.ಕೆ. ಪ್ರೇಮಚಂದ್ರನ್,ʻ1975ರ ತುರ್ತುಪರಿಸ್ಥಿತಿ ಬಗ್ಗೆ ಮಾತನಾಡುವುದು ಅಪ್ರಸ್ತುತʼ ಎಂದು ಹೇಳಿದ್ದಾರೆ. ʻಅದು 1975 ರಲ್ಲಿ ಸಂಭವಿಸಿತು. 50 ವರ್ಷಗಳು ಕಳೆದಿವೆ. ಈಗ ಅದು ಸಂಪೂರ್ಣವಾಗಿ ಅಪ್ರಸ್ತುತ. ನಾವು ಪ್ರಸ್ತುತ ನಡೆಯುತ್ತಿರುವ ವಿಷಯಗಳ ಬಗ್ಗೆ ಮಾತನಾಡಬೇಕಿದೆ,ʼ ಎಂದು ಹೇಳಿದರು. 

ಸ್ವಂತ ಸಲಹೆಯನ್ನು ಅನುಸರಿಸಿ: ಆಜಾದ್ ಸಮಾಜ ಪಕ್ಷದ (ಕಾನ್ಶಿ ರಾಮ್) ಸಂಸದ ಚಂದ್ರಶೇಖರ್ ಅವರು ಪ್ರಧಾನಿ ತಮ್ಮದೇ ಸಲಹೆಯನ್ನು ಅನುಸರಿಸಬೇಕು ಎಂದರು. ʻಅವರು ಹೇಳುತ್ತಿರುವುದನ್ನು ಕೆಲಸದಲ್ಲಿ ತೋರಿಸಿದ್ದರೆ ಚೆನ್ನಾಗಿತ್ತು. ಈ ಸಂಸತ್ತಿನಲ್ಲೇ 140 ಸಂಸದರನ್ನು ಅಮಾನತುಗೊಳಿಸಲಾಗಿದೆ ಮತ್ತು ಕಾನೂನುಗಳನ್ನು ಅಂಗೀಕರಿಸಲಾಗಿದೆ. ಜನಪ್ರಿಯತೆ ಇಲ್ಲದ ಈ ಸರ್ಕಾರವು ಜನರ ಭಾವನೆಗಳನ್ನು ಗೌರವಿಸುತ್ತದೆ ಮತ್ತು ಯಾವುದೇ ಕಾನೂನನ್ನು ಹೇರುವುದಿಲ್ಲ ಎಂದು ಭಾವಿಸುತ್ತೇವೆ,ʼ ಎಂದು ಹೇಳಿದರು. 

ʻಸಂವಿಧಾನ ಈ ದೇಶದ ಅಡಿಪಾಯʼ ಎಂದು ಚಂದ್ರಶೇಖರ್ ಹೇಳಿದರು.

Tags:    

Similar News