J&K Polls|ಮೊದಲ ಹಂತದಲ್ಲಿ ಶೇ.61 ಮತ ಚಲಾವಣೆ; ಕಿಶ್ತ್ವಾರ್‌ನಲ್ಲಿ ಅತಿ ಹೆಚ್ಚು ಶೇ.80

ಮೊದಲ ಹಂತದಲ್ಲಿ ಮತದಾನ ನಡೆದ ಎಲ್ಲಾ ಏಳು ಜಿಲ್ಲೆಗಳಲ್ಲಿ ಮತದಾರರ ಪಾಲ್ಗೊಳ್ಳುವಿಕೆಯು ಲೋಕಸಭೆ 2024ರ ಚುನಾವಣೆಗಿಂತ ಹೆಚ್ಚು ಇದೆ ಎಂದು ಚುನಾವಣೆ ಆಯೋಗ ಹೇಳಿದೆ.;

Update: 2024-09-19 06:29 GMT
ಅನಂತ್‌ನಾಗ್ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ.

ಜಮ್ಮು- ಕಾಶ್ಮೀರದಲ್ಲಿ ಮೊದಲ ಹಂತದ ವಿಧಾನಸಭೆ ಚುನಾವಣೆ ಬಹುತೇಕ ಶಾಂತಿಯುತವಾಗಿದ್ದು,ಶೇ.61ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ. 

ಅಂಚೆ ಮತಪತ್ರಗಳ ಸೇರ್ಪಡೆ ಮತ್ತು ಕೆಲವು ಕೇಂದ್ರಗಳ ದತ್ತಾಂಶ ಸಂಗ್ರಹವಾಗಬೇಕಿರುವುದರಿಂದ, ಅಂತಿಮ ಮತದಾನದ ಶೇಕಡಾವಾರು ಹೆಚ್ಚಾಗಬಹುದು ಎಂದು ಆಯೋಗ ಹೇಳಿದೆ. ಕಿಶ್ತ್ವಾರ್‌ನಲ್ಲಿ ಅತಿ ಹೆಚ್ಚು: ಒಂದು ದಶಕದ ಬಳಿಕ ಹಾಗೂ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ನಡೆದ ಮೊದಲ ಚುನಾವಣೆ ಇದಾಗಿದೆ. ಜಮ್ಮುವಿನ ಚೀನಾಬ್ ಕಣಿವೆ ಪ್ರದೇಶದ ಕಿಶ್ತ್ವಾರ್ ಜಿಲ್ಲೆಯಲ್ಲಿ ಅತಿ ಹೆಚ್ಚು(ಶೇ.80.14) ಮತದಾನವಾಗಿದೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆ ಶೇ.62.46, ಅನಂತ್‌ನಾಗ್ ಜಿಲ್ಲೆ (ಶೇ. 57.84), ಶೋಪಿಯಾನ್ ಜಿಲ್ಲೆ (ಶೇ. 55.96) ಮತ್ತು ಪುಲ್ವಾಮಾ ಜಿಲ್ಲೆ (ಶೇ. 46.65) ಮತ ಚಲಾವಣೆ ಆಗಿದೆ ಎಂದು ಇಸಿ ತಿಳಿಸಿದೆ. 

ʻಜಮ್ಮು-ಕಾಶ್ಮೀರ ಹಂತ-1ರಲ್ಲಿ ರಾತ್ರಿ 11:30 ರ ಹೊತ್ತಿಗೆ ಅಂದಾಜು ಶೇ.61.11 ಮತದಾನ ಆಗಿದೆ. ಪ್ರತಿ ಮತಗಟ್ಟೆಯಲ್ಲಿ ದಾಖಲಾದ ಮತ ಗಳನ್ನು ಫಾರ್ಮ್ 17 ಸಿ ಯಲ್ಲಿ ಮತಗಟ್ಟೆ ಏಜೆಂಟರೊಂದಿಗೆ ಹಂಚಿಕೊಳ್ಳಲಾಗುತ್ತದೆ,ʼ ಎಂದು ಇಸಿ ಹೇಳಿದೆ. 

ಕಿಶ್ತ್ವಾರ್ ಜಿಲ್ಲೆಯ ಇಂದರ್ವಾಲ್ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ. 82.16, ಪಾಡರ್-ನಾಗ್ಸೇನಿ (ಶೇ.80.67) ಮತ್ತು ಕಿಶ್ತ್ವಾರ್ (ಶೇ 78.11), ದೋಡಾ ಜಿಲ್ಲೆಯ ದೋಡಾ ಪಶ್ಚಿಮದಲ್ಲಿ ಶೇ.75.98, ದೋಡಾ (ಶೇ. 72.48) ಮತ್ತು ಭದೇರ್ವಾ (ಶೇ. 67.18), ರಾಂಬನ್ ಜಿಲ್ಲೆಯಲ್ಲಿ ಬನಿಹಾಲ್ ಶೇ.71.28 ಮತ್ತು ರಾಂಬನ್ ಶೇ.69.60ರಷ್ಟು ಮತದಾನವಾಗಿದೆ.

ಅನಂತನಾಗ್ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಪಹಲ್ಗಾಂನಲ್ಲಿ ಅತಿ ಹೆಚ್ಚು ಶೇ.71.26, ಕೊಕರ್ನಾಗ್ (ಶೇ. 62), ದೂರು (ಶೇ. 61.61), ಶ್ರೀಗುಫ್ವಾ ರಾ-ಬಿಜ್ಬೆಹರಾ (ಶೇ. 60.33), ಶಾಂಗುಸ್-ಅನಂತ್‌ನಾಗ್ (ಶೇ. 56.72), ಅನಂತನಾಗ್ ಪಶ್ಚಿಮ (ಶೇ. 48.73) ಮತ್ತು ಅನಂತನಾಗ್ ಶೇ.45.62 ಮತ ಚಲಾವಣೆ ಆಗಿದೆ.

ಪುಲ್ವಾಮಾ ಜಿಲ್ಲೆಯಲ್ಲಿ ಪುಲ್ವಾಮಾ ಶೇ. 50.42, ರಾಜ್‌ಪೋರಾ (ಶೇ. 48.07), ಪಾಂಪೋರ್ (ಶೇ. 44.74) ಮತ್ತು ಟ್ರಾಲ್ (ಶೇ. 43.21) ಮತ ಚಲಾವಣೆಯಾಗಿದೆ.

ಶೋಪಿಯಾನ್ ಜಿಲ್ಲೆಯಲ್ಲಿ ಶೋಪಿಯಾನ್ ವಿಭಾಗ ಶೇ.57.78, ಝೈನಾಪೋರಾದಲ್ಲಿ ಶೇ.54.28ರಷ್ಟು ಹಾಗೂ ಕುಲ್ಗಾಮ್ ಜಿಲ್ಲೆಯಲ್ಲಿ ಡಿಎಚ್ ಪೋರಾ ಶೇ.68.45, ಕುಲ್ಗಾಮ್ ಶೇ.62.76 ಮತ್ತು ದೇವ್ಸರ್ ನಲ್ಲಿ ಶೇ.57.33 ಮತದಾನವಾಗಿದೆ.

ಶಾಂತಿಯುತ ಮತದಾನ: ʻಮತದಾನ ಶಾಂತಿಯುತವಾಗಿತ್ತು. ಸಂಜೆ 6 ಗಂಟೆಗೆ ಶೇ. 59 ಮತ ಚಲಾವಣೆಯಾಗಿದ್ದು, ಕಳೆದ ಏಳು ಚುನಾವಣೆಗಳಲ್ಲಿ (ನಾಲ್ಕು ಲೋಕಸಭೆ ಮತ್ತು ಮೂರು ವಿಧಾನಸಭೆ) ಅತ್ಯಧಿಕ. ಮರು ಮತದಾನಕ್ಕೆ ಒತ್ತಾಯಿಸಬಹುದಾದ ಯಾವುದೇ ಗಂಭೀರ ಘಟನೆ ಸಂಭವಿಸಿಲ್ಲ,ʼ ಎಂದು ಮುಖ್ಯ ಚುನಾವಣಾಧಿಕಾರಿ ಪಿ.ಕೆ.ಪೋಲ್ ಹೇಳಿದರು.

ಕಿಶ್ತ್‌ವಾರ್‌ನ ಮತಗಟ್ಟೆಯೊಂದರಲ್ಲಿ ಪಿಡಿಪಿ ಮತ್ತು ಬಿಜೆಪಿ ಅಭ್ಯರ್ಥಿಗಳು ಮತಗಟ್ಟೆಯಲ್ಲಿ ವಾಗ್ವಾದ ನಡೆಸಿದರು. ಪೊಲೀಸ್‌ ಸಿಬ್ಬಂದಿಯೊಬ್ಬರು ಬಂದೂಕು ಗುರಿಮಾಡಿರುವ ವಿಡಿಯೋಕ್ಕೆ ಸಂಬಂಧಿಸಿದಂತೆ ಪ್ರಶ್ನೆಗೆ ವಿಷಯವನ್ನು ಜಿಲ್ಲಾ ಚುನಾವಣಾಧಿಕಾರಿ ಮತ್ತು ಮತಗಟ್ಟೆ ಅಧಿಕಾರಿ ಗಮನಕ್ಕೆ ತರಲಾಗಿದ್ದು, ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲಾಗಿದೆ ಎಂದು ಪೋಲ್‌ ಹೇಳಿದರು.

ಸುಧಾರಿತ ಭದ್ರತಾ ಪರಿಸ್ಥಿತಿ, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಸಕ್ರಿಯ ಭಾಗವಹಿಸುವಿಕೆ ಮತ್ತು ಪ್ರಚಾರ ಸೇರಿದಂತೆ ವಿವಿಧ ಅಂಶಗಳಿಂದ ಮತದಾನದ ಪ್ರಮಾಣ ಹೆಚ್ಚಳಗೊಂಡಿದೆ.

2014 ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲಾವಾರು ಮತದಾನದ ಶೇಕಡಾವಾರು: ಪುಲ್ವಾಮಾ (ಶೇ. 44), ಶೋಪಿಯಾನ್ (ಶೇ. 48), ಕುಲ್ಗಾಮ್ (ಶೇ. 59), ಅನಂತನಾಗ್ (ಶೇ. 60), ರಾಂಬನ್ (ಶೇ. 70), ದೋಡಾ ( 73 ರಷ್ಟು) ಮತ್ತು ಕಿಶ್ತ್ವಾರ್ (ಶೇ 76).

ಕಾಶ್ಮೀರಿ ಪಂಡಿತರಿಗೆ ವಿಶೇಷ ಮತಗಟ್ಟೆ: ಏಳು ಜಿಲ್ಲೆಗಳಲ್ಲಿ 3,276 ಮತಗಟ್ಟೆ ಸ್ಥಾಪಿಸಲಾಗಿದ್ದು, ಜಮ್ಮು, ಉಧಂಪುರ ಮತ್ತು ದೆಹಲಿಯಲ್ಲಿ ಕಾಶ್ಮೀರಿ ಪಂಡಿತರಿಗೆ 24 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 35,000 ಕ್ಕೂ ಹೆಚ್ಚು ಅರ್ಹ ಕಾಶ್ಮೀರಿ ವಲಸಿಗ ಮತದಾರರಲ್ಲಿ ಶೇ. 31.42 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮೊದಲ ಹಂತದಲ್ಲಿ ಮತದಾರರ ಭಾಗವಹಿಸುವಿಕೆಯು ಲೋಕಸಭೆ 2024 ರ ಚುನಾವಣೆಯಲ್ಲಿನ ಪಾಲ್ಗೊಳ್ಳುವಿಕೆಯನ್ನು ಮೀರಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Tags:    

Similar News