ಕುಂಭ ಮೇಳದ ಮೋನಲಿಸಾಗೆ ಸಿನಿಮಾದಲ್ಲಿಅವಕಾಶ ಕೊಡುವೆ ಎಂದಿದ್ದ ನಿರ್ದೇಶಕ ಅತ್ಯಾಚಾರ ಪ್ರಕರಣದಲ್ಲಿ ಬಂಧನ
ಮದುವೆಯಾಗುವಂತೆ ಕೋರಿಕೊಂಡಾಗ, ಆಕೆಯ ವೈಯಕ್ತಿಕ ವಿಡಿಯೋಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದ. ಲಿವ್ ಇನ್ಗೆ ಮೊದಲು ಮಿಶ್ರಾ ಮದುವೆಯಾಗುವ ಭರವಸೆ ನೀಡಿದ್ದ. ಇದೀಗ ಮದುವೆ ನಿರಾಕರಿಸುತ್ತಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.;
ಕುಂಭ ಮೇಳದ ವೇಳೆ ಸಂಚಲನ ಮೂಡಿಸಿದ್ದ ಮೋನಲಿಸಾಗೆ ಮುಂದಿನ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿ ಸುದ್ದಿಗೆ ಗ್ರಾಸವಾಗಿದ್ದ ಚಲನಚಿತ್ರ ನಿರ್ದೇಶಕ ಸನೋಜ್ ಮಿಶ್ರಾ, ಅತ್ಯಾಚಾರ ಆರೋಪದ ಮೇಲೆ ದೆಹಲಿ ಪೊಲೀಸರ ವಶದಲ್ಲಿದ್ದಾರೆ.
45 ವರ್ಷದ ಮಿಶ್ರಾನನ್ನು ಮಾರ್ಚ್ 30ರಂದು ಘಾಜಿಯಾಬಾದಿನಿಂದ ಬಂಧಿಸಲಾಗಿದೆ. ದೆಹಲಿ ಹೈಕೋರ್ಟ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನಿನ ಅರ್ಜಿ ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
ಸನೋಜ್ ಮಿಶ್ರಾ, ಸಿನಿಮಾ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳುವುದಕ್ಕೆ ಬಂದಿದ್ದ 28 ವರ್ಷದ ಯುವತಿಯೊಬ್ಬಳಿಗೆ ವಂಚನೆ ಮಾಡಿರುವ ಆರೋಪ ಹೊತ್ತುಕೊಂಡಿದ್ದಾನೆ. ದೂರಿನ ಪ್ರಕಾರ, ಯುವತಿ 2020ರಲ್ಲಿ ಮಿಶ್ರಾರನ್ನು ಸೋಶಿಯಲ್ ಮೀಡಿಯಾದ ಮೂಲಕ ಭೇಟಿಯಾಗಿದ್ದಳು ಹಾಗೂ ನಂತರದಿಂದ ಮುಂಬೈನಲ್ಲಿಯೇ ನಾಲ್ಕು ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿದ್ದರು. ಈ ಅವಧಿಯಲ್ಲಿ ಮಿಶ್ರಾ ಅನೇಕ ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದ ಎಸಗಿದ್ದ ಹಾಗು ಮೂರು ಬಾರಿ ಗರ್ಭಪಾತ ಮಾಡಿಸಿದ್ದ.
ಮದುವೆಯಾಗುವಂತೆ ಕೋರಿಕೊಂಡಾಗ, ಆಕೆಯ ವೈಯಕ್ತಿಕ ವಿಡಿಯೋಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದ. ಲಿವ್ ಇನ್ಗೆ ಮೊದಲು ಮಿಶ್ರಾ ಮದುವೆಯಾಗುವ ಭರವಸೆ ನೀಡಿದ್ದ. ಇದೀಗ ಮದುವೆ ನಿರಾಕರಿಸುತ್ತಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ವಿಚಾರಣೆ ಶುರು
ಯುವತಿಯ ದೂರಿನ ಆಧಾರದಲ್ಲಿ ಮಾರ್ಚ್ 6ರಂದು ದೆಹಲಿಯ ನಬೀ ಕರೀಂ ಪೊಲೀಸ್ ಠಾಣೆಯಲ್ಲಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆಕೆ ತನ್ನ ಹೇಳಿಕೆಯನ್ನು ದಾಖಲಿಸಿದ್ದಾಳೆ. ವೈದ್ಯಕೀಯ ತಪಾಸಣೆಗೂ ಒಳಪಟ್ಟಿದ್ದಾಳೆ.
ಹೇಳಿಕೆ ಬದಲಾಯಿಸಿದಳೇ ಯುವತಿ?
ದೂರಿನ ಬಳಿಕ ಯುವತಿ ಹಲವು ಬಾರಿ ಸೋಶಿಯಲ್ ಮೀಡಿಯಾಗಳಲ್ಲಿ ಬಂದು ಲೈವ್ ಹೇಳಿಕೆ ನೀಡಿದ್ದಳು. ಘಟನೆಯಲ್ಲಿ ಮಿಶ್ರಾ ದೋಷಿಯಲ್ಲ. ನಾನು ಸ್ವಯಂಪ್ರೇರಿತವಾಗಿ ದೂರು ನೀಡಿಲ್ಲ.ಕೆಲವರ ಒತ್ತಾಯಕ್ಕೆ ನೀಡಿದ್ದೇನೆ. ದೂರು ಹಿಂತೆಗೆದುಕೊಳ್ಳುವ ಕುರಿತು ಕೋರ್ಟ್‌ಗೆ ಪ್ರಮಾಣ ಪತ್ರವೂ ನೀಡಿದ್ದೇನೆ ಎಂದು ಹೇಳಿದ್ದಾಳೆ.
ಮೊನಾಲಿಸಾ ಹಿನ್ನೆಲೆಯಲ್ಲಿ ಮಿಶ್ರಾ
ಸನೋಜ್ ಮಿಶ್ರಾ ಇತ್ತೀಚೆಗಷ್ಟೇ 2025ರ ಮಹಾ ಕುಂಭ ಮೇಳದ ವೇಳೆ ವೈರಲ್ ಆಗಿದ್ದ 16 ವರ್ಷದ ರುದ್ರಾಕ್ಷಿ ಮಾರಾಟಗಾರ್ತಿ ಮೋನಲಿಸಾಗೆ ಮುಂದಿನ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿಕೆ ನೀಡಿದ್ದರು. ಆ ಬಳಿಕದಿಂದ ಮಿಶ್ರಾ ಏಕಾಏಕಿ ಜನಪ್ರಿಯರಾಗಿದ್ದರು.