ಅಪ್ಪನ ಮುದ್ದಿನ ಮಗಳಿಂದ ಸರಣಿ ಟ್ವೀಟ್: ಲಾಲು ಕುಟುಂಬದಲ್ಲಿ ಬಿರುಕು?
"ನಾನು ಮಗಳಾಗಿ, ಸಹೋದರಿಯಾಗಿ ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ, ಮುಂದುವರಿಸುತ್ತೇನೆ ಕೂಡ. ನಾನು ಯಾವುದೇ ಸ್ಥಾನಕ್ಕಾಗಿ ಹಂಬಲಿಸುತ್ತಿಲ್ಲ. ನನಗೆ ಸ್ವಾಭಿಮಾನವೇ ಪರಮೋಚ್ಚ"
ಲಾಲು ಪ್ರಸಾದ್ ಯಾದವ್
ಬಿಹಾರ ವಿಧಾನಸಭಾ ಚುನಾವಣೆಯು ಸಮೀಪಿಸುತ್ತಿದೆ. ಆದರೆ ರಾಜ್ಯ ರಾಜಕೀಯದ ಪ್ರಥಮ ಕುಟುಂಬ, ಪ್ರಬಲ ವಿಪಕ್ಷ ಎಂದು ಗುರುತಿಸಿಕೊಂಡಿರುವ ಆರ್‌ಜೆಡಿ ಪಕ್ಷದ ಮುಖ್ಯಸ್ಥರ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಗುಮಾನಿ ಹಬ್ಬಿದೆ.
ಪಕ್ಷದ ಸಂಸ್ಥಾಪಕ ಲಾಲು ಪ್ರಸಾದ್ ಅವರ ತಮ್ಮ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಮತ್ತು ಮಗಳು ರೋಹಿಣಿ ಆಚಾರ್ಯ ಅವರು ಸರಣಿಯೋಪಾದಿಯಾಗಿ ಭಿನ್ನಾಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ.
ಈ ವರ್ಷದ ಆರಂಭದಲ್ಲಿ ಲಾಲು ಅವರು ತಮ್ಮ ಪುತ್ರ ತೇಜ್ ಪ್ರತಾಪ್ ಅವರನ್ನು ಪಕ್ಷದಿಂದ ಹೊರಹಾಕಿದಾಗಿನಿಂದ ತೇಜ್ ಪ್ರತಾಪ್ ಬೇಸರಗೊಂಡಿದ್ದಾರೆ. ಈ ನಡುವೆ ಪುತ್ರಿ ರೋಹಿಣಿ ಆಚಾರ್ಯ ಕೂಡ ಕಳೆದ ಕೆಲವು ದಿನಗಳಿಂದ ಹಲವಾರು ನಿಗೂಢ ಟ್ವೀಟ್‌ಗಳನ್ನು ಮಾಡುತ್ತಾ ತಮಗಿರುವ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಬಿಚ್ಚಿಡುತ್ತಿದ್ದಾರೆ ಎನ್ನಲಾಗುತ್ತಿದೆ.
ಆತ್ಮಗೌರವ ನಮ್ಮ ರಕ್ತದಲ್ಲೇ ಇದೆ: ರೋಹಿಣಿ
ರೋಹಿಣಿ ಆಚಾರ್ಯ ಅವರು ಕಳೆದ ಶುಕ್ರವಾರ(ಸೆ.19) ತಮ್ಮ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ವೊಂದನ್ನು ಹಾಕಿದ್ದರು. ಈ ವೇಳೆ, "ನಾನು ಮಗಳಾಗಿ ಮತ್ತು ಸಹೋದರಿಯಾಗಿ ನನ್ನ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದೇನೆ, ಅವುಗಳನ್ನು ಮುಂದುವರಿಸುತ್ತೇನೆ ಕೂಡ. ನಾನು ಯಾವುದೇ ಸ್ಥಾನಕ್ಕಾಗಿ ಹಂಬಲಿಸುತ್ತಿಲ್ಲ. ನನಗೆ ಯಾವುದೇ ರೀತಿಯ ರಾಜಕೀಯ ಮಹತ್ವಾಕಾಂಕ್ಷೆಗಳೂ ಇಲ್ಲ. ನನಗೆ, ಸ್ವಾಭಿಮಾನವೇ ಪರಮೋಚ್ಚ" ಎಂದು ಬರೆದುಕೊಂಡಿದ್ದರು.
ಮತ್ತೊಂದು ಪೋಸ್ಟ್‌ನಲ್ಲಿ, 2022ರಲ್ಲಿ ಲಾಲು ಅವರನ್ನು ಶಸ್ತ್ರಚಿಕಿತ್ಸೆಗಾಗಿ ಕರೆದೊಯ್ಯುವಾಗಿನ ವೀಡಿಯೊವನ್ನು ಹಂಚಿಕೊಂಡು, "ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ತ್ಯಾಗ ಮಾಡಲು ಸಿದ್ಧರಿರುವವರಿಗೆ, ನಿರ್ಭಯತೆ, ಧೈರ್ಯ ಮತ್ತು ಸ್ವಾಭಿಮಾನವು ರಕ್ತದಲ್ಲೇ ಹರಿಯುತ್ತಿದೆ" ಎಂದು ಗುಟುರು ಹಾಕಿದ್ದರು.
ರೋಹಿಣಿಯ ತ್ಯಾಗ
ವೈದ್ಯಕೀಯ ಪದವೀಧರೆ, ಗೃಹಿಣಿಯೂ ಆಗಿರುವ ರೋಹಿಣಿ, ತನ್ನ ಪತಿಯೊಂದಿಗೆ ಸಿಂಗಾಪುರದಲ್ಲಿ ನೆಲೆಸಿದ್ದರು. 2022ರಲ್ಲಿ ಲಾಲು ಅವರಿಗೆ ಮೂತ್ರಪಿಂಡ ಸಮಸ್ಯೆ ಇದ್ದ ಕಾರಣ ತಾಯ್ನಾಡಿಗೆ ಬಂದಿದ್ದ ರೋಹಿಣಿ, ಮೂತ್ರಪಿಂಡವನ್ನೂ ದಾನ ಮಾಡಿ ಅಪ್ಪನ ಜೀವ ಉಳಿಸಿದ್ದರು.
ಕಳೆದ ವರ್ಷ, ಅವರು ತಮ್ಮ ತಂದೆ ಬಹಳ ಹಿಂದಿನಿಂದಲೂ ಪ್ರತಿನಿಧಿಸುತ್ತಿದ್ದ ಸರನ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ನಂತರ ಸ್ವಲ್ಪ ಸಮಯದವರೆಗೆ ಸುಮ್ಮನಿದ್ದ ಅವರು, ಕಳೆದ ತಿಂಗಳು ಲಾಲು ಅವರ ಉತ್ತರಾಧಿಕಾರಿ ತೇಜಸ್ವಿ ಯಾದವ್ ಮತ್ತು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ 'ಮತದಾರರ ಅಧಿಕಾರ ಯಾತ್ರೆ'ಯಲ್ಲಿ ಭಾಗವಹಿಸಿ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಲು ರೋಹಿಣಿ ಬಯಸಿದ್ದರು. ಆದರೆ ಅದಕ್ಕೆ ತೇಜಸ್ವಿ ಯಾದವ್ ನಿರಾಕರಿಸಿದ್ದು, ಇದೇ ವಿಚಾರ ರೋಹಿಣಿ ಅವರಲ್ಲಿ ಅಸಹನೆ ಮೂಡಿಸಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.
ತೇಜ್ ಪ್ರತಾಪ್ ಬೆಂಬಲ
ಈ ಮಧ್ಯೆ, ರೋಹಿಣಿ ಅವರ ಬೆಂಬಲಕ್ಕೆ ತೇಜ್ ಪ್ರತಾಪ್ ಯಾದವ್ ನಿಂತಿದ್ದಾರೆ ಎನ್ನಲಾಗುತ್ತಿದೆ. "ರೋಹಿಣಿ ನನಗಿಂತ ತುಂಬಾ ದೊಡ್ಡವಳು. ಬಾಲ್ಯದಲ್ಲಿ ನಾನು ಅವಳ ಮಡಿಲಲ್ಲಿ ಆಡಿದ್ದೇನೆ. ಆಕೆ ಮಾಡಿದ ತ್ಯಾಗವನ್ನು ಯಾವ ಮಗಳು, ಸಹೋದರಿ ಮತ್ತು ತಾಯಿಯೂ ಮಾಡಳು. ಅವಳು ವ್ಯಕ್ತಪಡಿಸಿರುವ ವೇದನೆ ಸಮರ್ಥನೀಯ" ಎಂದು ಬಹಿರಂಗವಾಗಿ ಹೇಳಿದ್ದಾರೆ.
ಮಾತು ಮುಂದುವರೆಸಿ, ಶ್ರೀಕೃಷ್ಣನ ಭಕ್ತನಾಗಿರುವ ನಾನು, ಮುಂದೆ ನಡೆಯಲಿರುವ ಸಂಚಿಕೆಗಳಲ್ಲಿ ನಾನು ನನ್ನ ಸಹೋದರಿಗೆ ಸಂಪೂರ್ಣವಾಗಿ ಬೆಂಬಲ ನೀಡುತ್ತೇನೆ. ಅವಳನ್ನು ಅವಮಾನಿಸಲು ಧೈರ್ಯ ಮಾಡುವವರು ಸುದರ್ಶನ ಚಕ್ರವನ್ನು ಎದುರಿಸಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ನೀಡಿದ್ದಾರೆ.
ಆರ್ ಜೆಡಿಯಲ್ಲಿ ರಕ್ತಪಾತ
ಆರ್ ಜೆಡಿ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಜೆಡಿ(ಯು) ರಾಷ್ಟ್ರೀಯ ವಕ್ತಾರ ರಾಜೀವ್ ರಂಜನ್ ಪ್ರಸಾದ್, ಇದು ಪಕ್ಷದೊಳಗಿನ ಬಿರುಕಲ್ಲ, ಆರ್‌ಜೆಡಿ ಸಂಪೂರ್ಣವಾಗಿ ರಕ್ತಪಾತದಲ್ಲಿ ಮುಳುಗಿದಂತೆ ಕಾಣುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
ತೇಜಸ್ವಿ ನಕಾರ
ಕಳೆದ ವರ್ಷ ಮೂರನೇ ಪ್ರಯತ್ನದಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಲಾಲು ಹಿರಿಯ ಪುತ್ರಿ ಮಿಸಾ ಭಾರ್ತಿ ಕೂಡ ತೇಜಸ್ವಿ ಅವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿಲ್ಲ ಎಂದು ರಾಜೀವ್ ರಂಜನ್ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ತೇಜಸ್ವಿ ಯಾದವ್, ನಮ್ಮ ಪಕ್ಷದಲ್ಲಾಗಲಿ ಅಥವಾ ಕುಟುಂಬದಲ್ಲಾಗಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ಆಡಳಿತಾರೂಢ ಪಕ್ಷಗಳಿಗೆ ಮುಂಬರುವ ಚುನಾವಣೆಯಲ್ಲಿ ಸೋಲುವ ಆತಂಕವಿದೆ ಎನ್ನುವ ಮುಖೇನ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.