18ನೇ ಲೋಕಸಭೆ | ತುರ್ತು ಪರಿಸ್ಥಿತಿ ಸಂವಿಧಾನದ ಮೇಲಿನ ಅತಿ ದೊಡ್ಡ ದಾಳಿ: ರಾಷ್ಟ್ರಪತಿ

ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಸರ್ಕಾರವು ಮಂಡಿಸಲಿರುವ ಬಜೆಟ್ ಅದರ ಭವಿಷ್ಯದ ದೃಷ್ಟಿಕೋನದ ದಾಖಲೆಯಾಗಲಿದೆ ಎಂದು ರಾಷ್ಟ್ರಪತಿ ಹೇಳಿದರು

Update: 2024-06-27 08:33 GMT
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ (ಜೂನ್ 27) ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು.

ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು, ʻ1975 ರ ತುರ್ತುಪರಿಸ್ಥಿತಿಯು ಸಂವಿಧಾನದ ಮೇಲಿನ ನೇರ ದಾಳಿಯ ದೊಡ್ಡ ಮತ್ತು ಕರಾಳ ಅಧ್ಯಾಯ. ಅಂತಹ ಅಸಂವಿಧಾನಿಕ ಶಕ್ತಿಗಳ ವಿರುದ್ಧ ದೇಶ ವಿಜಯಶಾಲಿಯಾಗಿದೆ,ʼ ಎಂದು ಗುರುವಾರ ಹೇಳಿದರು.

ಅವರು ಭಾಷಣದಲ್ಲಿ ತುರ್ತು ಪರಿಸ್ಥಿತಿಯನ್ನು ಉಲ್ಲೇಖಿಸಿದಾಗ, ವಿರೋಧ ಪಕ್ಷದ ಸದಸ್ಯರು ಗದ್ದಲ, ಪ್ರತಿಭಟನೆ ನಡೆಸಿದರು. 

ʻಮುಂಬರುವ ಬಜೆಟ್‌ನಲ್ಲಿ ಅನೇಕ ಐತಿಹಾಸಿಕ ಕ್ರಮಗಳು ಮತ್ತು ಪ್ರಮುಖ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಮುಂದಿನ ಸಂಸತ್ತಿನ ಅಧಿವೇಶನದಲ್ಲಿ ಸರ್ಕಾರ ಮಂಡಿಸಲಿರುವ ಬಜೆಟ್, ಭವಿಷ್ಯದ ದೃಷ್ಟಿಕೋನದ ದಾಖಲೆಯಾಗಲಿದೆ,ʼ ಎಂದು 18 ನೇ ಲೋಕಸಭೆಯ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ಹೇಳಿದರು. 

ʻಬಜೆಟ್ ಪ್ರಮುಖ ಆರ್ಥಿಕ ಮತ್ತು ಸಾಮಾಜಿಕ ನಿರ್ಧಾರಗಳನ್ನು ಹೊಂದಿರುತ್ತದೆ. ಅನೇಕ ಐತಿಹಾಸಿಕ ಕ್ರಮಗಳನ್ನು ತೆಗೆದುಕೊಳ್ಳ ಲಾಗುವುದು. ಜನರ ಆಕಾಂಕ್ಷೆಗಳನ್ನು ಪೂರೈಸಲು ಸುಧಾರಣೆಗಳ ವೇಗವನ್ನು ಹೆಚ್ಚಿಸಲಾಗುವುದು,ʼ ಎಂದು ಹೇಳಿದರು. 

ʻಹೂಡಿಕೆಗಾಗಿ ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆ ಇರಬೇಕೆಂದು ಸರ್ಕಾರ ನಂಬುತ್ತದೆ. ಇದು ಸ್ಪರ್ಧಾತ್ಮಕ-ಸಹಕಾರಿ ಒಕ್ಕೂಟ ವ್ಯವಸ್ಥೆಯ ಚೈತನ್ಯ,ʼ ಎಂದು ಹೇಳಿದರು.

ʻಭಾರತವು ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಯಾಗಿದೆ. ಕಳೆದ 10 ವರ್ಷಗಳಲ್ಲಿ ಸರಾಸರಿ ಶೇ. 8 ಬೆಳವಣಿಗೆಯಾಗಿದೆ.ವಿಶ್ವದ ವಿವಿಧ ದೇಶಗಳಲ್ಲಿ ಸಾಂಕ್ರಾಮಿಕ ರೋಗ ಮತ್ತು ಸಂಘರ್ಷದ ನಡುವೆಯೂ ಈ ಬೆಳವಣಿಗೆ ದರವನ್ನು ಸಾಧಿಸಲಾಗಿದೆ. ಇದು ಕಳೆದ 10 ವರ್ಷಗಳ ಸುಧಾರಣೆಗಳ ಫಲಿತಾಂಶವಾಗಿದೆ. ಭಾರತ ಜಾಗತಿಕ ಬೆಳವಣಿಗೆಗೆ ಶೇ.15 ರಷ್ಟು ಕೊಡುಗೆ ನೀಡುತ್ತಿದೆ. ದೇಶ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯನ್ನಾಗಿಸಲು ಸರ್ಕಾರ ಕೆಲಸ ಮಾಡುತ್ತಿದೆ,ʼ ಎಂದು ಅವರು ಹೇಳಿದರು

ರಾಷ್ಟ್ರಪತಿ ಭಾಷಣ ಕಡ್ಡಾಯ: ಸಂವಿಧಾನದ 87 ನೇ ವಿಧಿಯು ಲೋಕಸಭೆ ಚುನಾವಣೆ ನಂತರ ಮೊದಲ ಅಧಿವೇಶನದಲ್ಲಿ ಸಂಸತ್ತಿನ ಎರಡೂ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ಅವರು ಭಾಷಣ ಮಾಡುವುದನ್ನು ಕಡ್ಡಾಯಗೊಳಿಸಿದೆ. ಅಲ್ಲದೆ, ರಾಷ್ಟ್ರಪತಿ ಪ್ರತಿ ವರ್ಷ ಸಂಸತ್ತಿನ ಮೊದಲ ಅಧಿವೇಶನದಲ್ಲಿ ಎರಡೂ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾರೆ. 

ರಾಷ್ಟ್ರಪತಿ ಭಾಷಣದ ಮೂಲಕ ಸರ್ಕಾರ ತನ್ನ ಕಾರ್ಯಕ್ರಮಗಳು ಮತ್ತು ಕಾರ್ಯನೀತಿಗಳನ್ನು ವಿವರಿಸುತ್ತದೆ. ಹಿಂದಿನ ವರ್ಷ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಮತ್ತು ಮುಂಬರುವ ವರ್ಷದ ಆದ್ಯತೆಗಳನ್ನು ವಿವರಿಸುತ್ತದೆ.

ಅವರ ಭಾಷಣದ ನಂತರ, ಆಡಳಿತ ಪಕ್ಷ ವಂದನಾ ನಿರ್ಣಯವನ್ನು ಮಂಡಿಸುತ್ತದೆ. ಅದನ್ನು ಸದಸ್ಯರು ಚರ್ಚಿಸುತ್ತಾರೆ. ಜುಲೈ 2-3 ರಂದು ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ಮೋದಿ ಅವರು ಉತ್ತರಿಸುವ ಸಾಧ್ಯತೆಯಿದೆ.

ನೀಟ್-ಯುಜಿ ಅಕ್ರಮಗಳು, ಯುಜಿಸಿ-ನೆಟ್‌ ರದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳು, ರೈಲು ಅಪಘಾತಗಳು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಂತಹ ಹಲವು ವಿಷಯಗಳಲ್ಲಿ ವಿರೋಧ ಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ನಿರೀಕ್ಷೆಯಿದೆ. 

2024ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 293 ಸ್ಥಾನ ಗೆದ್ದು, ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡಿದೆ. ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನಗಳ ನಿರೀಕ್ಷೆಯಲ್ಲಿತ್ತು. ಇಂಡಿಯ ಒಕ್ಕೂಟವು 233 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಬಲ ಪ್ರತಿಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್‌ 98 ಸ್ಥಾನ ಗಳಿಸಿದ್ದು, 2019 ರಲ್ಲಿ ಗೆದ್ದ 52 ಸ್ಥಾನಗಳ ದುಪ್ಪಟ್ಟು.

Tags:    

Similar News