ಆದ್ಯತೆ ಮೇರೆಗೆ ರಾಜ್ಯಗಳಿಗೆ ಎಲೆಕ್ಟ್ರಿಕ್ ಬಸ್ಗಳ ಹಂಚಿಕೆ: ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಪಡಿಸುವ ಅಗತ್ಯವನ್ನು ಉಲ್ಲೇಖಿಸಿ ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.;
ಕೇಂದ್ರ ಸಚಿವ ಕುಮಾರಸ್ವಾಮಿ.
ನಗರ ಪ್ರದೇಶಗಳಲ್ಲಿ ವಾಹನಗಳಿಂದ ಹೊರಸೂಸುವ ಮಾಲಿನ್ಯವನ್ನು ತಗ್ಗಿಸುವ ಮಹತ್ವದ ಹೆಜ್ಜೆಯಾಗಿ, ಕರ್ನಾಟಕ ಸೇರಿದಂತೆ ದೇಶಾದ್ಯಂತ ವಿದ್ಯುತ್ ಚಾಲಿತ ಬಸ್‌ಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ವ್ಯಾಪಕ ಪ್ರಯತ್ನ ನಡೆಸುತ್ತಿದೆ. ಈ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ರಾಜ್ಯಕ್ಕೆ ಹಂತ-ಹಂತವಾಗಿ ಮತ್ತು ಆದ್ಯತೆಯ ಮೇರೆಗೆ ಬಸ್‌ಗಳನ್ನು ಹಂಚಿಕೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಪ್ರಾಯೋಜಿತ 'ಪಿಎಂ ಇ-ಡ್ರೈವ್' ಉಪಕ್ರಮದಡಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಹಂಚಿಕೆ ಮಾಡುವಂತೆ ಕೋರಿ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಕೇಂದ್ರ ಸಚಿವರು, ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ಅಗತ್ಯವನ್ನು ಒಪ್ಪಿಕೊಂಡರು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ತಿಳಿಸಿದರು.
"ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಪಿಎಂ ಇ-ಡ್ರೈವ್ ಯೋಜನೆ ಅತ್ಯಂತ ಯಶಸ್ವಿಯಾಗಿ ಮುಂದುವರಿಯುತ್ತಿದೆ. ಈ ಯೋಜನೆಯಡಿ ಕರ್ನಾಟಕಕ್ಕೆ ಸೂಕ್ತ ಬೆಂಬಲ ಮತ್ತು ಹೆಚ್ಚಿನ ಸಂಖ್ಯೆಯ ಬಸ್‌ಗಳು ಸಿಗುತ್ತವೆ ಎಂದು ನಾನು ಖಚಿತಪಡಿಸುತ್ತೇನೆ," ಎಂದು ಕುಮಾರಸ್ವಾಮಿ ಹೇಳಿದರು.
ಪಿಎಂ ಇ-ಡ್ರೈವ್ ಉಪಕ್ರಮದ ಅಡಿಯಲ್ಲಿ ಒಟ್ಟು 9 ಪ್ರಮುಖ ನಗರಗಳಿಗೆ 14,028 ವಿದ್ಯುತ್ ಚಾಲಿತ ಬಸ್‌ಗಳನ್ನು ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ. ಈ ಯೋಜನೆಗೆ ಸಂಬಂಧಿಸಿದ ಮೂಲಸೌಕರ್ಯಗಳಾದ ಚಾರ್ಜಿಂಗ್ ಸ್ಟೇಷನ್‌ಗಳು, ಬಸ್ ಡಿಪೋಗಳು ಮತ್ತು ವಾಹನ ನಿರ್ವಹಣಾ ವ್ಯವಸ್ಥೆಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಚರ್ಚೆ ನಡೆಯುತ್ತಿದೆ. ಗುರುತಿಸಲಾದ ನಗರ ಸಮೂಹಗಳಲ್ಲಿ ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ಸಚಿವಾಲಯದ ಹಿರಿಯ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.
ನಾವು ಕೇವಲ ಬಸ್‌ಗಳನ್ನು ವಿತರಿಸುತ್ತಿಲ್ಲ, ಬದಲಿಗೆ ದೇಶದ ಜನತೆಗೆ ಸ್ವಚ್ಛ, ಆಧುನಿಕ ಮತ್ತು ಉತ್ತಮ ಸಾರಿಗೆ ವ್ಯವಸ್ಥೆಯನ್ನು ಒದಗಿಸುತ್ತಿದ್ದೇವೆ. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಮಾಲಿನ್ಯರಹಿತ ಸಾರಿಗೆ ಕಲ್ಪಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಸಚಿವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪ್ರಾರಂಭಿಸಲಾದ ಪಿಎಂ ಇ-ಡ್ರೈವ್ ಉಪಕ್ರಮವು ನಗರಗಳಲ್ಲಿ ವಾಯುಮಾಲಿನ್ಯ ರಹಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಗುರಿಯನ್ನು ಹೊಂದಿದೆ. ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಕೇಂದ್ರ ಸರ್ಕಾರ ಎರಡು ವರ್ಷಗಳ ಅವಧಿಯಲ್ಲಿ 10,900 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ. ಈ ಪರಿವರ್ತನಾಶೀಲ ಗುರಿಯನ್ನು ಸಾಧಿಸಲು ಭಾರೀ ಕೈಗಾರಿಕಾ ಸಚಿವಾಲಯವು ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಪಾಲುದಾರರ ಸಹಯೋಗದೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.