Jammu & Kashmir Elections| ವಿಧಿ 370 ರದ್ದು ಬಳಿಕ ಮೊದಲ ಚುನಾವಣೆ

ಮೊದಲ ಹಂತದಲ್ಲಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳೆಂದರೆ ಸಿಪಿಐ(ಎಂ)ನ ಮೊಹಮ್ಮದ್ ಯೂಸುಫ್ ತರಿಗಾಮಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ ಅಹ್ಮದ್ ಮಿರ್, ಎನ್‌ಸಿಯ ಸಕೀನಾ ಇಟೂ, ಪಿಡಿಪಿಯ ಇಲ್ತಿಜಾ ಮುಫ್ತಿ ಮತ್ತು ವಹೀದ್ ಪಾರಾ.

Update: 2024-09-18 07:09 GMT

ಜಮ್ಮು- ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಮೊದಲ ಬಾರಿಗೆ ಇಂದು(ಬುಧವಾರ) ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. ಕೇಂದ್ರಾಡಳಿತ ಪ್ರದೇಶದ ಏಳು ಜಿಲ್ಲೆಗಳ 24 ಕ್ಷೇತ್ರಗಳು ಮೊದಲನೇ ಹಂತದಲ್ಲಿ ಮತದಾನ ನಡೆಯಲಿದೆ. 

ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆ ಇದು. ಕೇಂದ್ರ ಸರ್ಕಾರ ಆಗಸ್ಟ್ 5, 2019 ರಂದು ವಿಧಿ 370 ರದ್ದುಗೊಳಿಸಿ, ವಿಶೇಷ ಸ್ಥಾನಮಾನ ನೀಡಿತು; ಹಿಂದಿನ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿತು- ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್. 

24 ವಿಧಾನಸಭೆ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ. 

23 ಲಕ್ಷ ಮತದಾರರು, ಏಳು ಜಿಲ್ಲೆಗಳು: ಮೊದಲ ಹಂತದಲ್ಲಿ ಪಿರ್ ಪಂಜಾಲ್ ಪರ್ವತ ಶ್ರೇಣಿಯ ಎರಡೂ ಬದಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಏಳು ಜಿಲ್ಲೆಗಳು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲಿವೆ. 

ಜಮ್ಮು ಪ್ರದೇಶದ ಮೂರು ಜಿಲ್ಲೆಗಳಲ್ಲಿ ಎಂಟು ಮತ್ತು ಕಾಶ್ಮೀರ ಕಣಿವೆಯ ನಾಲ್ಕು ಜಿಲ್ಲೆಗಳಲ್ಲಿ 16 ಕ್ಷೇತ್ರಗಳಿಗೆ 90 ಸ್ವತಂತ್ರರು ಸೇರಿದಂತೆ 219 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 23,27,580 ಮತದಾರರು ಇದ್ದಾರೆ. ಇವರಲ್ಲಿ 11,76,462 ಪುರುಷರು, 11,51,058 ಮಹಿಳೆಯರು ಮತ್ತು 60 ಟ್ರಾನ್ಸ್‌ ಜೆಂಡರ್‌ ಗಳು, 18-19 ವರ್ಷ ವಯಸ್ಸಿನ 1.23 ಲಕ್ಷ ಯುವಜನರು, 28,309 ವಿಶೇಷಚೇತನರು ಮತ್ತು 85 ವರ್ಷ ಮೇಲ್ಪಟ್ಟ 15,774 ಹಿರಿಯ ನಾಗರಿಕರು ಇದ್ದಾರೆ. 

3,276 ಮತಗಟ್ಟೆಗಳಲ್ಲಿ 14,000 ಮತಗಟ್ಟೆ ಸಿಬ್ಬಂದಿಯಿದ್ದು, 302 ನಗರ ಮತ್ತು 2,974 ಗ್ರಾಮೀಣ ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಯಲ್ಲಿ ನಾಲ್ವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೇಂದ್ರೀಯ ಸಶಸ್ತ್ರ ಪಡೆ, ಅರೆಸೇನಾ ಪಡೆ (ಸಿಎಪಿಎಫ್), ಜಮ್ಮು ಮತ್ತು ಕಾಶ್ಮೀರ ಸಶಸ್ತ್ರ ಪೊಲೀಸ್ ಮತ್ತು ಪೊಲೀಸರು ರಕ್ಷಣೆಯ ಜವಾಬ್ದಾರಿ ಹೊತ್ತಿದ್ದಾರೆ. 

ತಾರಿಗಾಮಿ, ಗುಲಾಮ್ ಮಿರ್: ಪ್ರಮುಖ ಅಭ್ಯರ್ಥಿಗಳ ಪೈಕಿ ಸಿಪಿಐ (ಎಂ)ನ ಮೊಹಮ್ಮದ್ ಯೂಸುಫ್ ತರಿಗಾಮಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ ಅಹ್ಮದ್ ಮಿರ್, ನ್ಯಾಷನಲ್ ಕಾನ್ಫರೆನ್ಸ್‌ನ ಸಕೀನಾ ಇಟೂ, ಪಿಡಿಪಿಯ ಸರ್ತಾಜ್ ಮದ್ನಿ ಮತ್ತು ಅಬ್ದುಲ್ ರೆಹಮಾನ್ ವೀರಿ ಅವರ ಭವಿಷ್ಯ ಪರೀಕ್ಷೆ ನಡೆಯಲಿದೆ. 

ಶ್ರೀಗುಫ್ವಾರಾ-ಬಿಜ್‌ಬೆಹರಾದಿಂದ ಪಿಡಿಪಿಯ ಇಲ್ತಿಜಾ ಮುಫ್ತಿ ಮತ್ತು ಪುಲ್ವಾಮಾದಿಂದ ಪಕ್ಷದ ವಹೀದ್ ಪಾರಾ ಕಣದಲ್ಲಿದ್ದಾರೆ. ಜಮ್ಮುವಿನಲ್ಲಿ ಮಾಜಿ ಸಚಿವರಾದ ಸಜ್ಜದ್ ಕಿಚ್ಲೂ (ಎನ್‌ಸಿ), ಖಾಲಿದ್ ನಜೀಬ್ ಸುಹರ್ವರ್ದಿ (ಎನ್‌ಸಿ), ವಿಕಾರ್ ರಸೂಲ್ ವಾನಿ (ಕಾಂಗ್ರೆಸ್), ಅಬ್ದುಲ್ ಮಜಿದ್ ವಾನಿ (ಡಿಪಿಎಪಿ), ಸುನಿಲ್ ಶರ್ಮಾ (ಬಿಜೆಪಿ), ಶಕ್ತಿ ರಾಜ್ ಪರಿಹಾರ್ (ದೋಡಾ ಪಶ್ಚಿಮ) ಮತ್ತು ಕಾಂಗ್ರೆಸ್ ತೊರೆದು ಡಿಪಿಎಪಿ ಟಿಕೆಟ್ ನಿರಾಕರಿಸಿದ ನಂತರ ಪಕ್ಷೇತರರಾಗಿ ಸ್ಪರ್ಧಿಸಿರುವ, ಮೂರು ಬಾರಿ ಶಾಸಕರಾಗಿರುವ ಗುಲಾಂ ಮೊಹಮ್ಮದ್ ಸರೂರಿ ಇದ್ದಾರೆ. 

ಬಧವಾರ ಮತದಾನ ನಡೆಯಲಿರುವ ಕ್ಷೇತ್ರಗಳೆಂದರೆ, ಪಂಪೋರ್, ಟ್ರಾಲ್, ಪುಲ್ವಾಮಾ, ರಾಜ್‌ಪೋರಾ, ಜೈನಾಪೋರಾ, ಶೋಪಿಯಾನ್, ಡಿಎಚ್ ಪೋರಾ, ಕುಲ್ಗಾಮ್, ದೇವ್‌ಸರ್, ದೂರು, ಕೋಕರ್‌ನಾಗ್ (ಎಸ್‌ಟಿ), ಅನಂತನಾಗ್ ಪಶ್ಚಿಮ, ಅನಂತನಾಗ್, ಶ್ರೀಗುಫ್ವಾರಾ-ಬಿಜ್‌ಬೆಹರಾ, ಶಾಂಗಸ್-ಅನಂತ್‌ನಾಗ್ ಪೂರ್ವ, ಪಹಲ್ಗಾಮ್, ಇಂದರ್ವಾಲ್, ಕಿಶ್ತ್ವಾರ್, ಪಡ್ಡರ್-ನಾಗ್ಸೇನಿ, ಭದರ್ವಾ, ದೋಡಾ, ದೋಡಾ ಪಶ್ಚಿಮ, ರಾಂಬನ್ ಮತ್ತು ಬನಿಹಾಲ್. 

ಇನ್ನೆರಡು ಹಂತಗಳು ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1 ರಂದು ನಡೆಯುತ್ತಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.

Tags:    

Similar News