ED RAIDS| ದಲಿತ ನಾಯಕ ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆ ಮೇಲೆ ಇಡಿ ದುರುದ್ದೇಶಪೂರಿತ ದಾಳಿ: ಸುರ್ಜೆವಾಲಾ

ಭಾರತದ ಸಂವಿಧಾನ ಮತ್ತು ಎಸ್​ಸಿ, ಎಸ್​​ಟಿ, ಒಬಿಸಿ ಸಮುದಾಯಗಳ ನಾಯಕರ ಮೇಲೆ ದೇಶಾದ್ಯಂತ ನಡೆಯುತ್ತಿರುವ ನಿರಂತರ ದಾಳಿಯು ಒಂದು ರೀತಿಯ ರೂಢಿಯಾಗಿಬಿಟ್ಟಿದೆ ಎಂದು ರಣದೀಪ್ ಸಿಂಗ್ ಸುರ್ಜೆವಾಲಾ ಮೋದಿಯವರನ್ನು ಟೀಕಿಸಿದ್ದಾರೆ.;

Update: 2025-05-22 11:26 GMT

ರಣದೀಪ್ ಸಿಂಗ್ ಸುರ್ಜೇವಾಲ

ಕರ್ನಾಟಕದ ಪ್ರಮುಖ ದಲಿತ ನಾಯಕರಲ್ಲಿ ಒಬ್ಬರಾದ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿರುವ ದಾಳಿ "ದುರುದ್ದೇಶಪೂರಿತ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ  ರಣದೀಪ್ ಸಿಂಗ್ ಸುರ್ಜೆವಾಲಾ ಆರೋಪಿಸಿದ್ದಾರೆ.

ಬುಧವಾರ ಆರಂಭವಾಗಿ ಗುರುವಾರವೂ ಮುಂದುವರಿದಿರುವ ಇಡಿ ದಾಳಿ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸುರ್ಜೆವಾಲಾ, ಡಾ. ಜಿ. ಪರಮೇಶ್ವರ್ ಅವರು ಪ್ರಮುಖ ದಲಿತ ನಾಯಕರಾಗಿದ್ದಾರೆ. ಮಂಗಳವಾರ ಹೊಸಪೇಟೆಯಲ್ಲಿ 1 ಲಕ್ಷ ಎಸ್‌ಸಿ-ಎಸ್‌ಟಿ ಕುಟುಂಬಗಳಿಗೆ ಮಾಲೀಕತ್ವದ ಹಕ್ಕುಗಳನ್ನು ನೀಡಿದ್ದಕ್ಕೆ ಬಿಜೆಪಿ ಮತ್ತು ಮೋದಿ ಸರ್ಕಾರ ನಿರಾಶೆಗೊಂಡು ಈ ದಾಳಿ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.

ಸುರ್ಜೆವಾಲಾ, "ಭಾರತದ ಸಂವಿಧಾನ ಮತ್ತು ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳ ನಾಯಕರ ಮೇಲೆ ದೇಶಾದ್ಯಂತ ನಡೆಯುತ್ತಿರುವ ನಿರಂತರ ದಾಳಿಯು ರೂಢಿಯಾಗಿಬಿಟ್ಟಿದೆ. ಪರಮೇಶ್ವರ್ ಅವರ ಮೇಲಿನ ದಾಳಿಯೂ ಕೂಡ ಇದೇ ದುಷ್ಟ ಮಾದರಿಯದ್ದಾಗಿದೆ," ಎಂದು ಕೇಂದ್ರ ಹಾಗೂ ಪ್ರಧಾನಿ ವಿರುದ್ಧ ಕಿಡಿಕಾರಿದ್ದಾರೆ.

"ಈ ಸಂಸ್ಥೆಯನ್ನು ಸ್ಥಾಪಿಸಿದ 46 ವರ್ಷಗಳ ನಂತರ, ಮೋದಿ ಸರ್ಕಾರ ತಪ್ಪುಗಳನ್ನು ಹುಡುಕುತ್ತಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ. ಆದರೆ ಬಿಜೆಪಿಯ ಭ್ರಷ್ಟಾಚಾರವನ್ನು ಗೃಹ ಸಚಿವಾಲಯ ಮತ್ತು ಡಾ. ಜಿ. ಪರಮೇಶ್ವರ ಸಕ್ರಿಯವಾಗಿ ತನಿಖೆ ಮಾಡುತ್ತಿದ್ದಾರೆ. ಇಡಿ ದಾಳಿಗಳು ಹಿಂದಿನ ಬಿಜೆಪಿ ಸರ್ಕಾರಗಳ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಮತ್ತು ದಮನಿತರ ಧ್ವನಿಯನ್ನು ಪ್ರತಿಪಾದಿಸುವವರ ಧ್ವನಿಯನ್ನು ಹತ್ತಿಕ್ಕಲು ಹತಾಶ ಪ್ರಯತ್ನ ಮಾಡುತ್ತಿದೆ," ಎಂದು ಸುರ್ಜೆವಾಲಾ ಹೇಳಿದ್ದಾರೆ.

ಕಾಂಗ್ರೆಸ್ ನೀಡಿದ 5 ಭರವಸೆಗಳನ್ನು ಧೈರ್ಯದಿಂದ ಮುಂದುವರಿಸುತ್ತದೆ. ಎಸ್‌ಸಿ-ಎಸ್‌ಟಿ ಸಮುದಾಯಗಳ ಸಹೋದರ ಸಹೋದರಿಯರಿಗೆ 1 ಲಕ್ಷ ಮನೆಗಳ ಮಾಲೀಕತ್ವವನ್ನು ನೀಡುವ 6ನೇ ಕಾಂಗ್ರೆಸ್ ಖಾತರಿಯನ್ನು ಹೆಚ್ಚು ಕಟ್ಟುನಿಟ್ಟಾಗಿ ಅನುಸರಿಸುತ್ತಿದೆ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ಬುಧವಾರ ದಾಳಿ ನಡೆಸಿತ್ತು. ಈ ದಾಳಿ ಗುರುವಾರ ಕೂಡ ಮುಂದುವರಿದಿದೆ. ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜು, ಸಿದ್ಧಾರ್ಥ ಮೆಡಿಕಲ್ ಕಾಲೇಜು ಮತ್ತು ಹೊಸ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಒಟ್ಟು  16 ಕಡೆ ಇಡಿ ಅಧಿಕಾರಿಗಳು ದಾಳಿ  ನಡೆಸಿದ್ದಾರೆ. 40ಕ್ಕೂ ಹೆಚ್ಚು ಅಧಿಕಾರಿಗಳು ಈ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

Tags:    

Similar News