Tirupati Laddu : ವಿವಾದದ ನಡುವೆಯೂ ತಿರುಪತಿ ಲಡ್ಡು ಪ್ರಸಾದಕ್ಕೆ ಮಿತಿಮೀರಿದ ಬೇಡಿಕೆ, ಉತ್ಪಾದನೆ ಹೆಚ್ಚಳ
Tirupati Laddu: ಲಡ್ಡು ಕೊರತೆಯ ಬಗ್ಗೆ ಭಕ್ತರಿಂದ ದೂರುಗಳನ್ನು ಬಂದ ಹಿನ್ನೆಲೆಯಲ್ಲಿ ಟಿಟಿಡಿ ಕ್ರಮ ಕೈಗೊಂಡಿದೆ. ಅಕ್ರಮ ಮಾರಾಟದ ವಿರುದ್ಧ ಕಠಿಣ ಕ್ರಮ ನಡೆಯುತ್ತಿದೆ. ಲಡ್ಡು ಉತ್ಪಾದನೆಗೆ ಪ್ರಮಾಣವೂ ಹೆಚ್ಚಿದೆ.
ಕೆಲವು ತಿಂಗಳ ಹಿಂದೆ ವಿಶ್ವ ಪ್ರಸಿದ್ಧ ತಿರುಪತಿ ಬಾಲಾಜಿ ದೇವಸ್ಥಾನದ ಲಡ್ಡು ಪ್ರಸಾದ ವಿವಾದಕ್ಕೆ ಕಾರಣವಾಗಿತ್ತು. ಆಂಧ್ರಪ್ರದೇಶದ ಹಿಂದಿನ ವೈಎಸ್ಆರ್ಪಿ ಪಕ್ಷವು ದನದ ಕೊಬ್ಬು ತುಂಬಿರುವ ಕಲಬೆರಕೆ ತುಪ್ಪವನ್ನು ಲಡ್ಡು ಮಾಡುವ ತುಪ್ಪದೊಂದಿಗೆ ಮಿಶ್ರಣ ಮಾಡಿದೆ ಎಂದು ಹಾಲಿ ಸರ್ಕಾರದ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ಇದು ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ಎಂಬುದಾಗಿಯೂ ಅವರು ಆರೋಪಿಸಿದ್ದರು. ಈ ಪ್ರಕರಣ ದೊಡ್ಡ ಸಂಚಲನ ಮೂಡಿಸಿತ್ತು. ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಳಿಕ ತನಿಕೆಗೆ ಎಸ್ಐಟಿ ತಂಡವನ್ನು ರಚಿಸಲಾಗಿದೆ. ಆದರೆ, ಹೊಸ ವರದಿಯ ಪ್ರಕಾರ, ಇಷ್ಟೆಲ್ಲ ವಿವಾದ ಉಂಟಾಗಿರುವ ಹೊರತಾಗಿಯೂ ಭಕ್ತರು ಮತ್ತು ಅಲ್ಲಿನ ಲಡ್ಡು ಪ್ರಸಾದದ ನಡುವಿನ ನಂಬಿಕೆಗೆ ಯಾವುದೇ ಚ್ಯುತಿ ಬರಲಿಲ್ಲ. ತಿರುಪತಿ ಲಡ್ಡುಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚಾಗಿದೆ.
ವಿವಾದದ ಮೂರು ತಿಂಗಳ ನಂತರ ಮತ್ತು ದೇವಾಲಯದ ಪ್ರಸಾದವನ್ನು ರಾಜಕೀಯಗೊಳಿಸಬೇಡಿ ಎಂದು ಸುಪ್ರೀಂ ಕೋರ್ಟ್ ಹೇಳಿಕೆ ನೀಡಿತ್ತು. ಅಲ್ಲದೆ, ಲಡ್ಡು ವಿಚಾರದಲ್ಲಿ ತನಿಖೆ ನಡೆಸಲು ಸಮಿತಿ ರಚಿಸಲು ಆದೇಶ ನೀಡಿತ್ತು. ಅದಾದ ಬಳಿಕ ಲಡ್ಡು ತಯಾರಿಕೆಯಲ್ಲಿ ಸುಧಾರಣೆಗಳು ನಡೆಯುತ್ತಿವೆ.
ಈ ಎಲ್ಲ ಬೆಳವಣಿಗೆಯ ನಡುವೆಯೂ ತಿರುಪತಿ ವೆಂಕಟೇಶ್ವರನ ಅತ್ಯಂತ ಬೇಡಿಕೆಯ ಪ್ರಸಾದವು ತನ್ನ ಪಾವಿತ್ರ್ಯ ಕಳೆದುಕೊಂಡಿಲ್ಲ. ಇದು ಎಲ್ಲಾ ರೀತಿಯ ಮಾಧ್ಯಗಳು ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಬಂದಿರುವ ಸುದ್ದಿಗಳ ಹೊರತಾಗಿಯೂ ಲಡ್ಡುಗಳ ಪಾವಿತ್ಯಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳುತ್ತವೆ ವರದಿಗಳು.
ಮಿತಿಮೀರಿದ ಬೇಡಿಕೆ
ಸೆಪ್ಟೆಂಬರ್ 2024ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕಲಬೆರಕೆ ತುಪ್ಪದ ಬಳಕೆಯ ಬಗ್ಗೆ ಮೊದಲ ಬಾರಿಗೆ ಆರೋಪಿಸಲಾಗಿದ್ದರೂ, ಭಕ್ತರು ಲಡ್ಡು ಖರೀದಿಸಲು ಹಿಂಜರಿದಿರಲಿಲ್ಲ. ದೇವರ ದರ್ಶನದ ನಂತರ ಲಡ್ಡುಗಳನ್ನು ಪಡೆಯುವುದ ಸಹಜವಾಗಿ ನಡೆಯುತ್ತಿದೆ. ದೇವರ ದರ್ಶನದ ನಂತರ ಲಡ್ಡು ಪಡೆಯುವ ಸಂಪ್ರದಾಯ ಮುರಿಯುವ ಮುರಿಯುವುದಕ್ಕೆ ಮುಂದಾಗಿಲ್ಲ.
ತುಪ್ಪ ಕಲಬೆರಕೆ ಆರೋಪದ ಬಗ್ಗೆ ಎಸ್ಐಟಿ ತನಿಖೆಯ ನಡುವೆಯೂ ಲಡ್ಡುಗೆ ಬೇಡಿಕೆ ಹೆಚ್ಚಾಗಿದೆ. ಟಿಟಿಡಿ ಸಣ್ಣ ಮತ್ತು ದೊಡ್ಡ ಲಡ್ಡುಗಳ ಉತ್ಪಾದನೆಯನ್ನು ಕ್ರಮವಾಗಿ ದಿನಕ್ಕೆ 50,000 ಮತ್ತು 4,000ರಷ್ಟು ಹೆಚ್ಚಿಸಬೇಕಾಗಿದೆ. ಇದು ಹಿಂದಿನ ಪ್ರಮಾಣಕ್ಕಿಂತಲೂ ಹೆಚ್ಚಾಗಿದೆ. ಅದೇ ರೀತಿ ಪ್ರಮುಖ ಪ್ರಸಾದವಾಗಿರುವ ವಡೆಗಳ ಸಂಖ್ಯೆಯನ್ನು ದಿನಕ್ಕೆ 3,500 ಹೆಚ್ಚಿಸಲಾಗಿದೆ.
ಬೇಡಿಕೆ ಎಷ್ಟು ಹೆಚ್ಚಾಗಿದೆಯೆಂದರೆ ಭಕ್ತರು ಲಡ್ಡುಗಳು ಸಿಗುತ್ತಿಲ್ಲ ಎಂಬುದಾಗಿಯೂ ದೂರು ನೀಡುತ್ತಿದ್ದಾರೆ. ಅಕ್ರಮ ಮಾರಾಟವೂ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ.
1990ರ ದಶಕದ ಮೊದಲು ಲಡ್ಡುಗಳ ಅಕ್ರಮ ಮಾರಾಟವೇ ಇರಲಿಲ್ಲ ಎನ್ನುತ್ತಾರೆ ಲೇಖಕ ಮತ್ತು ತಿರುಪತಿ ನಿವಾಸಿ ರಾಘವ ಶರ್ಮಾ. "ಲಡ್ಡು ಪ್ರಸಾದವನ್ನು ಪವಿತ್ರವೆಂದು ಪರಿಗಣಿಸಲಾಗಿತ್ತು. ಜನರು ಅದನ್ನು ಮೋಸದ ಮೂಲಕ ಸ್ವೀಕರಿಸುತ್ತಿರಲಿಲ್ಲ,'' ಎಂದು ''ದ ಫೆಡರಲ್'' ಜತೆ ಮಾತನಾಡುತ್ತಾ ಅಭಿಪ್ರಾಯಪಟ್ಟಿದ್ದಾರೆ.
ಲಡ್ಡುರಾಜಕೀಯ
ರಾಜಕೀಯ ನಾಯಕರ ಮೂಲಕ ವಿಶೇಷವಾಗಿ ನಾಯ್ಡು ಅವರ ಮೂಲಕವೇ ತಿರುಪತಿ ಲಡ್ಡು ವಿಚಾರ ರಾಜಕೀಯ ತಿರುವು ಪಡೆಯಿತು. ನಾಯ್ಡು ಅವರು ಹಿಂದಿನ ಬಾರಿ ಮುಖ್ಯಮಂತ್ರಿಯಾಗಿದ್ದಾಗ ದೆಹಲಿಗೆ ಭೇಟಿ ನೀಡಿದ್ದರು. ಈ ವೇಳೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ವಿವಿಐಪಿಗಳಿಗೆ ತಿರುಪತಿ ವೆಂಕಟೇಶ್ವರನ ಭಾವಚಿತ್ರ ಮತ್ತು ಶೇಷ ವಸ್ತ್ರಂ (ಸಾಂಪ್ರದಾಯಿಕ ಬಟ್ಟೆ) ಜೊತೆಗೆ ಲಡ್ಡುಗಳನ್ನು ಉಡುಗೊರೆಯಾಗಿ ನೀಡಿದ್ದರು.
2015ರಲ್ಲಿ ಆಂಧ್ರಪ್ರದೇಶದ ಹೊಸ ರಾಜಧಾನಿ ನಗರವಾದ ಅಮರಾವತಿ ನಿರ್ಮಿಸಲು ಜಪಾನ್ ಬೆಂಬಲ ಕೋರಲು ಟೋಕಿಯೊಗೆ ಭೇಟಿ ನೀಡಿದಾಗ ಅವರು ಅಂದಿನ ಜಪಾನ್ ಪ್ರಧಾನಿ ಶಿಂಜ್ ಅಬೆ ಅವರಿಗೆ ಪವಿತ್ರ ಲಡ್ಡು ನೀಡಿದ್ದರು.
ಬಳಿಕ ಎಲ್ಲಾ ರಾಜಕಾರಣಿಗಳು ನಾಯ್ಡು ಅವರನ್ನು ಅನುಕರಿಸಲು ಪ್ರಾರಂಭಿಸಿದರು. ಇದು ಲಡ್ಡುಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಲು ಕಾರಣವಾಯಿತು. ಶ್ರೀಮಂತರು ಮತ್ತು ರಾಜಕೀಯ ಪ್ರಭಾವಶಾಲಿಗಳು ಇದನ್ನೇ ನೆಚ್ಚಿಕೊಂಡರಜು. ಹೀಗಾಗಿ ಲಡ್ಡು ಪ್ರಸಾದವನ್ನು 'ಕಾನೂನುಬಾಹಿರವಾಗಿ' ಪಡೆಯಲು ಶುರು ಮಾಡಿದರು.
ಕಾಳಸಂತೆಗೆ ಕಡಿವಾಣ
ತಿರುಮಲ ಲಡ್ಡು ಕಾಳಸಂತೆಯು ಹೇಗೆ ಪ್ರವರ್ಧಮಾನಕ್ಕೆ ಬಂದಿತು ಎಂಬುದನ್ನು 2024 ರ ಸೆಪ್ಟೆಂಬರ್ ಮೊದಲ ವಾರದಲ್ಲಿ ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಜೆ ಶ್ಯಾಮಲ್ ರಾವ್ ಬಹಿರಂಗಪಡಿಸಿದ್ದರು.
1997ರ ಬ್ಯಾಚ್ನ ಐಎಎಸ್ ಅಧಿಕಾರಿ ಶ್ಯಾಮಲ್ ರಾವ್ ಅವರು ಜೂನ್ನಲ್ಲಿ ಇಒ ಆಗಿ ಅಧಿಕಾರ ವಹಿಸಿಕೊಂಡ ನಂತರ ಮಾಡಿದ ಮೊದಲ ಕೆಲಸವೆಂದರೆ ಅಕ್ರಮ ಲಡ್ಡು ವ್ಯಾಪಾರಕ್ಕೆ ಕಡಿವಾಣ ಹಾಕುವುದು. ದೇವರ ದರ್ಶನಕ್ಕಾಗಿ 24 ಗಂಟೆಗಳಿಗಿಂತ ಹೆಚ್ಚು ಕಾಲ ಸರತಿ ಸಾಲಿನಲ್ಲಿ ನಿಂತ ಯಾತ್ರಾರ್ಥಿಗಳಿಗೆ ಲಡ್ಡುಗಳು ಸಿಗುತ್ತಿಲ್ಲ ಎಂಬ ದೂರುಗಳು ಬಂದ ನಂತರ ಅವರು ಈ ಕ್ರಮ ಕೈಗೊಂಡಿದ್ದರು.
ಆಘಾತಕಾರಿ ಸಂಗತಿಗಳು
ಆಂಧ್ರಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ಚಂದ್ರಬಾಬು ನಾಯ್ಡು ಅವರು ಜೂನ್ 2024 ರಲ್ಲಿ ಶ್ಯಾಮಲ್ ರಾವ್ ಅವರನ್ನು ಟಿಟಿಡಿಯ ಇಒ ಆಗಿ ನೇಮಿಸಿದರು. ಇದು ಅನೇಕ ಪ್ರಭಾವಿ ಅಧಿಕಾರಿಗಳಿಗೆ ಆಶ್ಚರ್ಯವನ್ನುಂಟು ಮಾಡಿತು. ಅಧಿಕಾರ ವಹಿಸಿಕೊಂಡ ನಂತರ ಶ್ಯಾಮಲ್ ರಾವ್ ಟಿಟಿಡಿ ಕೌಂಟರ್ಗಳಲ್ಲಿ ಲಡ್ಡು ಮಾರಾಟದ ಬಗ್ಗೆ ತನಿಖೆ ಪ್ರಾರಂಭಿಸಿದರು. ಕೆಲವರು ಸಾವಿರಾರು ಲಡ್ಡುಗಳನ್ನು ದಾಸ್ತಾನು ಮಾಡಿ ಮದುವೆ ಸಮಾರಂಭಗಳಲ್ಲಿ ವಿತರಣೆ ಮಾಡಿದ್ದಾರೆ.
ಶ್ಯಾಮಲ್ ರಾವ್ ಅವರ ಪ್ರಕಾರ, ಪ್ರತಿದಿನ ಉತ್ಪಾದಿಸುವ 3.5 ಲಕ್ಷ ಲಡ್ಡುಗಳಲ್ಲಿ, ಸುಮಾರು 1 ಲಕ್ಷ ಲಡ್ಡುಗಳನ್ನು ದರ್ಶನ ಟೋಕನ್ ಇಲ್ಲದೆ ಜನರು ಖರೀದಿಸುತ್ತಿದ್ದಾರೆ. "ಕೆಲವು ಮಧ್ಯವರ್ತಿಗಳು ಲಡ್ಡುಗಳನ್ನು ಸಾಗಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ. ನಿಯಮ ಪ್ರಕಾರ ದರ್ಶನದ ಟೋಕನ್ ಹೊಂದಿರುವ ಯಾತ್ರಾರ್ಥಿಗಳಿಗೆ ತಲಾ ಒಂದು ಲಡ್ಡುಗಳನ್ನು ನೀಡಬೇಕು. ಹೆಚ್ಚು ಬೇಕಾದರೆ 50 ರೂಪಾಯಿಗೆ ಸೀಮಿತ ಸಂಖ್ಯೆಯಲ್ಲಿ ಲಡ್ಡು ಖರೀದಿ ಮಾಡಬಹುದು. ಆದರೆ ಟೋಕನ್ ಇಲ್ಲದೇ ಲಡ್ಡು ಖರೀದಿ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದ್ದರು.
ಯಾತ್ರಾರ್ಥಿಗಳಿಗೆ ಲಡ್ಡುಗಳು ಲಭ್ಯವಾಗುವಂತೆ ಮಾಡಲು ಅವರು ಲಡ್ಡುಗಳ ಮಾರಾಟವನ್ನು ಆಧಾರ್ ಕಾರ್ಡ್ ಜತೆ ಲಿಂಕ್ ಮಾಡಿದ್ದರು. ಈ ನಿರ್ಧಾರವು ತಿರುಮಲ ಮತ್ತು ತಿರುಪತಿಯಲ್ಲಿ ಮಾತ್ರವಲ್ಲದೆ ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನ ಟಿಟಿಡಿ ಕೇಂದ್ರಗಳಲ್ಲಿಯೂ ಲಡ್ಡುಗಳ ಮಾರಾಟದ ಪ್ರಮಾಣ ಹೆಚ್ಚಿಸಿತು. ಬೇಡಿಕೆಯನ್ನು ಪೂರೈಸಲು ಹೆಚ್ಚಿನ ಅಡುಗೆ ಕಾರ್ಮಿಕರನ್ನು ನೇಮಿಸಲಾಗಿದೆ.
ಲಡ್ಡು ಉತ್ಪಾದನೆ
ಲಡ್ಡು ಉತ್ಪಾದನೆ ಯಾವಾಗಲೂ ಟಿಟಿಡಿಗೆ ಲಾಭದಾಯಕ ವ್ಯವಹಾರ. ಪ್ರಸ್ತುತ, ದೇವಾಲಯದ ಮಂಡಳಿಯು 3.5 ಲಕ್ಷ ಸಣ್ಣ ಲಡ್ಡುಗಳನ್ನು (50 ರೂಪಾಯಿ), 6,000 ದೊಡ್ಡ ಲಡ್ಡುಗಳನ್ನು (ತಲಾ 200 ರೂಪಾಯಿ) ಮತ್ತು 3,500 ವಡೆಗಳನ್ನು (ತಲಾ 100 ರೂ.) ಉತ್ಪಾದಿಸುತ್ತದೆ. ಕಾರ್ಮಿಕರ ವೇತನ, ದಿನಸಿ, ಅನಿಲ ಮತ್ತು ಅಡುಗೆ ಅನಿಲ ಸೇರಿದಂತೆ ಪ್ರಸಾಧ ತಯಾರಿಗೆ ದಿನಕ್ಕೆ 8.07 ಕೋಟಿ ರೂಪಾಯಿ ವೆಚ್ಚಾಗುತ್ತದೆ.
ಲಡ್ಡು ಮಾರಾಟದಿಂದ 11.16 ಕೋಟಿ ರೂಪಾಯಿ ಆದಾಯ ಬರುತ್ತಿದ್ದು ಪ್ರತಿ ದಿನ 3.09 ಕೋಟಿ ರೂಪಾಯಿ ಲಾಭ ಬರುತ್ತಿದೆ. ಪ್ರಸ್ತುತ, 616 ಲಡ್ಡು ತಯಾರಕರು (ಅದರಲ್ಲಿ 415 ವೈಷ್ಣವರು) ಇದ್ದಾರೆ. ತಯಾರಿ ಸಂಖ್ಯೆ ಹೆಚ್ಚಳದಿಂದಾಗಿ ಅಡುಗೆಯವರ ಸಂಖ್ಯೆಯೂ ಹೆಚ್ಚಿದೆ.
ಟಿಟಿಡಿ ಅಧಿಕಾರಿಗಳ ಪ್ರಕಾರ, 84 ಕಾರ್ಮಿಕರನ್ನು (74 ವೈಷ್ಣವರು ಮತ್ತು 10 ವೈಷ್ಣವೇತರರು) ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ.
ನವೆಂಬರ್ 18 ರಂದು ಟಿಟಿಡಿ ಅಧ್ಯಕ್ಷರು ಅನುಮೋದಿಸಿದ ಪ್ರಸ್ತಾವನೆಯ ಪ್ರಕಾರ, ತಯಾರಕರು ದಿನಕ್ಕೆ 700 ಸಣ್ಣ ಲಡ್ಡುಗಳು, 330 ದೊಡ್ಡ ಲಡ್ಡುಗಳು ಮತ್ತು 120 ವಡೆಗಳನ್ನು ತಯಾರಿಸುತ್ತಾರೆ. ಹೆಚ್ಚುವರಿ 84 ಕಾರ್ಮಿಕರೊಂದಿಗೆ, ಸಣ್ಣ ಲಡ್ಡುಗಳ ಒಟ್ಟು ಉತ್ಪಾದನೆಯು ದಿನಕ್ಕೆ 4 ಲಕ್ಷ, ದೊಡ್ಡ ಲಡ್ಡುಗಳು 10,000 ಮತ್ತು ವಡೆಗಳು 7,000 ದಾಟಲಿದೆ.