ದೆಹಲಿ ಆಸ್ಪತ್ರೆಯಲ್ಲಿ ಬೆಂಕಿ: ಆರೋಗ್ಯ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಅಮಾನತು

Update: 2024-05-30 10:35 GMT
ದೆಹಲಿಯ ಬೇಬಿ ಕೇರ್ ಆಸ್ಪತ್ರೆಯಲ್ಲಿ ಕಳೆದ ವಾರ ಸಂಭವಿಸಿದ ಬೆಂಕಿ ದುರಂತದಲ್ಲಿ ಆರು ನವಜಾತ ಶಿಶುಗಳು ಸಾವಿಗೀಡಾದವು

ನವದೆಹಲಿ, ಮೇ 29- ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಅವರ ವಿಶೇಷ ಕರ್ತವ್ಯಾಧಿಕಾರಿ (ಒಎಸ್‌ಡಿ) ಆರ್‌.ಎನ್. ದಾಸ್ ಅವರನ್ನು ಅಮಾನತುಗೊಳಿಸಿದ್ದಾರೆ. 

ಆರು ನವಜಾತ ಶಿಶುಗಳು ಬೆಂಕಿಗೆ ಬಲಿಯಾದ ವಿವೇಕ ವಿಹಾರ್ ಆಸ್ಪತ್ರೆ ಸೇರಿದಂತೆ ಖಾಸಗಿ ನರ್ಸಿಂಗ್ ಹೋಮ್‌ಗಳ ಅನಿಯಮಿತ ಮತ್ತು ಅಕ್ರಮ ನೋಂದಣಿಯಲ್ಲಿ ಅವರು ತೊಡಗಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯಿಸಿದ ಭಾರದ್ವಾಜ್, ʻಲೆಫ್ಟಿನೆಂಟ್ ಗವರ್ನರ್ ಎಎಪಿ ಸರ್ಕಾರ ನೇಮಿಸಿದ ಸಲಹೆಗಾರರು, ಪರಿಣತರು ಮತ್ತು ಇತರರನ್ನು ಗುರಿಯಾಗಿಸಿಕೊಂಡಿದ್ದಾರೆ. ಕಚೇರಿಗಳನ್ನು ಖಾಲಿ ಮಾಡಲು ಮತ್ತು ಇಲಾಖೆಗಳ ಕಾರ್ಯನಿರ್ವಹಣೆಯನ್ನು ಕುಂಠಿತಗೊಳಿಸಲು ಅಧಿಕಾರಿ ಗಳನ್ನು ಅಮಾನತುಗೊಳಿಸಲಾಗುತ್ತಿದೆ,ʼ ಎಂದು ದೂರಿದರು. ʻದಾಸ್ ಅವರ ಅಮಾನತು ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲʼ ಎಂದು ಹೇಳಿದರು.

ವಿಚಕ್ಷಣ ನಿರ್ದೇಶನಾಲಯದ ಬುಧವಾರದ ಆದೇಶದಲ್ಲಿ,ʻಆರೋಗ್ಯ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ಆರ್‌.ಎನ್‌. ದಾಸ್ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆʼ. ನರ್ಸಿಂಗ್ ಹೋಮ್‌ಗಳ ನೋಂದಣಿ ಕುರಿತು ತುರ್ತು ಸಮಗ್ರ ತನಿಖೆ ಕೈಗೊಳ್ಳಲು ಮತ್ತು ತಕ್ಷಣ ಕ್ರಮ ಕೈಗೊಂಡ ವರದಿ ಸಲ್ಲಿಸಬೇಕೆಂದು ಎಸಿಬಿಗೆ ನಿರ್ದೇಶನ ನೀಡಿದ್ದಾರೆ.

ಆಸ್ಪತ್ರೆ ಅಗ್ನಿ ದುರಂತವು ಆರೋಗ್ಯ ಇಲಾಖೆ ಅಧಿಕಾರಿಗಳ ದುರಾಡಳಿತ, ಕ್ರಿಮಿನಲ್ ನಿರ್ಲಕ್ಷ್ಯ ಮತ್ತು ಸಹಭಾಗಿತ್ವವನ್ನು ಬಹಿರಂಗಗೊಳಿ ಸಿದೆ. ದಾಸ್‌ ಅವರು ನರ್ಸಿಂಗ್ ಹೋಮ್ ಸೆಲ್‌ನ ವೈದ್ಯಕೀಯ ಅಧೀಕ್ಷಕರಾಗಿದ್ದಾಗ, ಶಹದ್ರಾದದ ಜ್ಯೋತಿ ನರ್ಸಿಂಗ್ ಹೋಮ್ ನ್ನು ಅನಧಿಕೃ ತವಾಗಿ ನಡೆಸುತ್ತಿದ್ದರು. ವಿವೇಕ್ ವಿಹಾರ್‌ನ ಬೇಬಿ ಕೇರ್ ಸೆಂಟರ್‌ನ ನೋಂದಣಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಮತ್ತು ಅಗ್ನಿ ಸುರಕ್ಷತೆ ಮತ್ತಿತರ ವಿವಿಧ ಶಾಸನಬದ್ಧ ಅನುಸರಣೆಗಳಿಲ್ಲದೆ ಅನುಮತಿ ನೀಡಿದರು,ʼ ಎಂದು ಅಧಿಕಾರಿಯೊಬ್ಬರು ಹೇಳಿದರು. 

ವಿವೇಕ್ ವಿಹಾರ್‌ದ ಆಸ್ಪತ್ರೆಯ ನೋಂದಣಿ ಪ್ರಕ್ರಿಯೆಯಲ್ಲಿ ದಾಸ್ ಅವರ ಪಾತ್ರವಿದೆ ಎಂದು ಬಿಜೆಪಿ ಆರೋಪಿಸಿತ್ತು. ಪರವಾನಗಿ ಮುಗಿದಿದ್ದರೂ ನಡೆಯುತ್ತಿದೆ ಎಂದು ಹೇಳಲಾಗಿದೆ.

ಭಾರದ್ವಾಜ್‌ ಹೇಳಿಕೆ: ʻನಗರಾಭಿವೃದ್ಧಿ, ಜಲ ಮಂಡಳಿ ಮತ್ತು ಡಿಎಸ್‌ಐಐಡಿಸಿ ಇಲಾಖೆಗಳಲ್ಲಿನ ಇತರ ಒಎಸ್‌ಡಿಗಳನ್ನು ಸಹ ತೆಗೆದುಹಾಕಲಾಗಿದೆ,ʼ ಎಂದು ಭಾರದ್ವಾಜ್ ಹೇಳಿದ್ದಾರೆ. ʻನನ್ನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಒಎಸ್‌ಡಿಗಳು ಮತ್ತು ಕಾರ್ಯದರ್ಶಿಗಳು ಬಂಧನ ಭೀತಿ ಎದುರಿಸುತ್ತಿದ್ದಾರೆ. ಈ ಪ್ರಕ ರಣಗಳು ನನ್ನ ಅವಧಿಗೆ ಸಂಬಂಧಿಸಿಲ್ಲ. ಅವರು ಹಳೆಯ ಪ್ರಕರಣಗಳನ್ನು ಬಳಸಿಕೊಂಡು ಅಮಾನತು ಮಾಡುತ್ತಿದ್ದಾರೆ,ʼ ಎಂದು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು. 

ನರ್ಸಿಂಗ್ ಹೋಮ್‌ಗಳಿಗೆ ಮೂರು ವರ್ಷಗಳ ಅವಧಿಗೆ ಪರವಾನಗಿ ನೀಡಲಾಗುತ್ತದೆ. ದೆಹಲಿಯಲ್ಲಿ 1,190 ನರ್ಸಿಂಗ್ ಹೋಮ್‌ಗಳಿವೆ. ಅವುಗಳಲ್ಲಿ ಕಾಲು ಭಾಗಕ್ಕಿಂತ ಹೆಚ್ಚು ಮಾನ್ಯತೆ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ. ಅನೇಕ ನರ್ಸಿಂಗ್ ಹೋಮ್‌ಗಳು ನೋಂದಣಿಗೆ ಅರ್ಜಿಯನ್ನೇ ಸಲ್ಲಿಸಿಲ್ಲ ಎಂದು ಎಲ್‌ಜಿ ಕಚೇರಿ ಹೇಳಿದೆ.

Tags:    

Similar News