ದೆಹಲಿಯ ಮಹಾಮಳೆ| ಸಾವಿನ ಸಂಖ್ಯೆ 8ಕ್ಕೆ ಏರಿಕೆ

ದೆಹಲಿಯ ಮಹಾಮಳೆಗೆ 8 ಮಂದಿ ಬಲಿಯಾಗಿದ್ದಾರೆ. ಐಎಂಡಿ ಪ್ರಕಾರ, ಮುಂದಿನ ಐದು ದಿನಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ. ದೆಹಲಿಯ ಕೆಲವು ಭಾಗಗಳಲ್ಲಿ ಜುಲೈ 1 ರವರೆಗೆ ಭಾರೀ ಮಳೆಯ ಸಾಧ್ಯತೆಯಿದೆ

Update: 2024-06-29 12:35 GMT
ನವದೆಹಲಿಯ ವಸಂತ ವಿಹಾರ್‌ನಲ್ಲಿ ಶನಿವಾರ ಗೋಡೆ ಕುಸಿತದ ನಂತರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ̤

ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ಸುರಿಯುತ್ತಿರುವ ಭಾರೀ ಮಳೆ ವಿನಾಶಕ್ಕೆ ಕಾರಣವಾಗಿ. ಪ್ರತ್ಯೇಕ ಘಟನೆಗಳಲ್ಲಿ 8 ಜೀವಗಳನ್ನು ಬಲಿತೆಗೆದುಕೊಂಡಿದೆ. ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್‌) ನಲ್ಲಿ ಆರೋಗ್ಯ ಸೇವೆಗಳನ್ನು ಕುಂಠಿತಗೊಳಿಸಿದೆ. 

ಜೂನ್ 28 ರ ಸೂಚನೆ ಪ್ರಕಾರ, ಆಸ್ಪತ್ರೆಯ ಎಲ್ಲಾ ಆಪರೇಷನ್ ಥಿಯೇಟರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಹವಾನಿಯಂತ್ರಣ ವ್ಯವಸ್ಥೆ ಯಲ್ಲಿನ ಸಮಸ್ಯೆ ಮತ್ತು ಗೋಡೆಗಳಿಂದ ನೀರು ಸೋರುತ್ತಿದೆ ಎಂದು ವರದಿಯಾಗಿದೆ.

ಒಟಿ ಸ್ಥಗಿತ: ನರಶಸ್ತ್ರಚಿಕಿತ್ಸೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ರೋಗಿಗಳನ್ನು ಸಫ್ದರ್‌ಜಂಗ್ ಆಸ್ಪತ್ರೆ ಅಥವಾ ಇತರ ಸರ್ಕಾರಿ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ. ʻಹವಾನಿಯಂತ್ರಣ ವ್ಯವಸ್ಥೆ ಕಾರ್ಯನಿರ್ವಹಿಸದ ಕಾರಣ, ಎಲ್ಲಾ ಒಟಿಗಳು ಕಾರ್ಯನಿರ್ವಹಿಸುತ್ತಿಲ್ಲ. ಗೋಡೆಗಳಿಂದ ನೀರು ಸೋರಿಕೆಯಾಗುತ್ತದೆ. ಆದ್ದರಿಂದ, ಶಸ್ತ್ರಚಿಕಿತ್ಸೆ ಮಾಡಲಾಗುವುದಿಲ್ಲ. ತುರ್ತುಸ್ಥಿತಿ ಬಂದರೆ ಸಫ್ದರ್ಜಂಗ್ ಅಥವಾ ಇತರ ಯಾವುದೇ ಸರ್ಕಾರಿ ಆಸ್ಪತ್ರೆಗೆ ಕಳಿಸಲಾಗುತ್ಉತದೆ,ʼ ಎಂದು ತಿಳಿಸಲಾಗಿದೆ. 

ʻಭಾರೀ ಮಳೆಯಿಂದ ಟ್ರಾಮಾ ಸೆಂಟರ್‌ನ ನೆಲಮಾಳಿಗೆಯಲ್ಲಿ ನೀರು ತುಂಬಿದ್ದು, ಅಲ್ಲಿ ಜನರೇಟರ್‌ಗಳು ಮತ್ತು ಇತರ ಉಪಕರಣಗಳನ್ನು ಇರಿಸಲಾಗಿದೆ. ಎನ್‌ಡಿಎಂಸಿಯಿಂದ ವಿದ್ಯುತ್ ಕಡಿತದಿಂದ, ಓಟಿಗಳು ಸಂಜೆ 4 ರವರೆಗೆ ಮುಚ್ಚಲ್ಪಟ್ಟವು. ವಿದ್ಯುತ್ ಪುನಃಸ್ಥಾಪನೆಯಾದ ನಂತರ, ಓಟಿಗಳನ್ನು ಪ್ರಾರಂಭಿಸಿದ್ದೇವೆ ಮತ್ತು ರಾತ್ರಿಯಿಡೀ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದೇವೆ. ನೀರು ತೆರವುಗೊಳಿಸುವ ಕೆಲಸ ನಡೆಯುತ್ತಿದೆ, ಆದರೆ, ಏಮ್ಸ್‌ ನ ಟ್ರಾಮಾದ ಒಟಿ ಇನ್ನೂ ಪ್ರಾರಂಭವಾಗಿಲ್ಲ,ʼ ಎಂದು ಏಮ್ಸ್‌ ನ ಮಾಧ್ಯಮ ಉಸ್ತುವಾರಿ ರಿಮಾ ದಾದಾ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಸಾವಿನ ಸಂಖ್ಯೆ 8ಕ್ಕೆ ಏರಿಕೆ: ವಸಂತ ವಿಹಾರ್ ಪ್ರದೇಶದ ನಿರ್ಮಾಣ ಸ್ಥಳದಲ್ಲಿ ಕುಸಿದ ಗೋಡೆಯ ಅವಶೇಷಗಳಿಂದ ಮೂವರು ಕಾರ್ಮಿಕರ ಶವಗಳನ್ನು ಶನಿವಾರ ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ದೆಹಲಿಯಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 8 ಕ್ಕೆ ಏರಿದೆ.

ಶುಕ್ರವಾರ ನಿರ್ಮಾಣ ಹಂತದ ಗೋಡೆ ಕುಸಿದಿದ್ದು,ಮೂವರು ಕಾರ್ಮಿಕರ ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ ಎಂದು ಡಿಎಫ್‌ಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಇವರಲ್ಲಿ ಇಬ್ಬರನ್ನು ಸಂತೋಷ್ ಕುಮಾರ್ ಯಾದವ್ (19) ಮತ್ತು ಸಂತೋಷ್ (38) ಎಂದು ಗುರುತಿಸಲಾಗಿದೆ. ಮೂರನೇ ಕಾರ್ಮಿಕನ ಗುರುತು ಪತ್ತೆಯಾಗಬೇಕಿದೆ.

88 ವರ್ಷಗಳಲ್ಲಿ ಜೂನ್‌ನ ಒಂದೇ ದಿನದಲ್ಲಿ ಅತಿ ಹೆಚ್ಚು ಮಳೆ ಸುರಿದಿದ್ದು, ಮುಂಗಾರು ಬಿರುಸಿನಿಂದ ಆಗಮಿಸಿದ ಕಾರಣ ಶುಕ್ರವಾರ ಐದು ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಚಾವಣಿ ಕುಸಿದು ಸಾವಿಗೀಡಾದ ಕ್ಯಾಬ್ ಚಾಲಕ, ರೋಹಿಣಿಯ ಪ್ರೇಮ್ ನಗರ ಪ್ರದೇಶದಲ್ಲಿ ವಿದ್ಯುದಾಘಾತಕ್ಕೊಳಗಾದ 39 ವರ್ಷದ ವ್ಯಕ್ತಿ, ನ್ಯೂ ಉಸ್ಮಾನ್‌ಪುರ ಮತ್ತು ಶಾಲಿಮಾರ್ ಬಾಗ್‌ನಲ್ಲಿ ಮುಳುಗಿದ ಮೂವರು ಸೇರಿದ್ದಾರೆ. 

ಸರ್ಕಾರದಿಂದ ತುರ್ತು ಸಭೆ: ದೆಹಲಿಯ ಸೆಕ್ರೆಟರಿಯೇಟ್‌ನಲ್ಲಿ ತುರ್ತು ಸಭೆ ನಡೆದಿದ್ದು, ಅತಿವೃಷ್ಟಿಯಿಂದ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ದಿಲ್ಲಿ ಸಚಿವೆ ಅತಿಶಿ ಅವರು, ಜಲಾವೃತವಾಗಿರುವ 200 ಸ್ಥಳಗಳನ್ನು ಗುರುತಿಸಲಾಗಿದೆ ಎಂದಿದ್ದಾರೆ. ಚರಂಡಿಗಳ ಸಾಮರ್ಥ್ಯವನ್ನು ಮೀರಿ ಮಳೆ ಸುರಿದಿರುವುದು ಸಮಸ್ಯೆಗೆ ಕಾರಣ. ದೆಹಲಿ ಸರ್ಕಾರವು 24 ಗಂಟೆಗಳ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ ಎಂದು ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ. 

ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಪರಿಸ್ಥಿತಿಯನ್ನು ಅವಲೋಕಿಸಿದರು. ತುರ್ತು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲು ಮತ್ತು ನೀರು ತೆರವುಗೊಳಿಸಲು ಪಂಪ್‌ಗಳನ್ನು ನಿಯೋಜಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಳೆಯಿಂದ ತೊಂದರೆ: ಭಾರೀ ಮಳೆ ನಂತರ ದೆಹಲಿಯ ಹಲವು ಪ್ರದೇಶಗಳಲ್ಲಿ ನೀರಿನ ಪೂರೈಕೆ ವ್ಯತ್ಯಯಗೊಂಡಿದೆ. ನೀರು ಪೂರೈಕೆಯಲ್ಲಿನ ವ್ಯತ್ಯಯವು ಶನಿವಾರವೂ ಮುಂದುವರಿಯಲಿದೆ ಎಂದು ದೆಹಲಿ ಜಲ ಮಂಡಳಿ ತಿಳಿಸಿದೆ.

ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್-1 ಅನ್ನು ಮುಚ್ಚಲಾಗಿದೆ. ಚಾವಣಿ ಕುಸಿದು ಒಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದರು. ಎಲ್ಲಾ ವಿಮಾನಗಳ ಚಲನೆಯನ್ನು ಟರ್ಮಿನಲ್ 2 ಮತ್ತು ಟರ್ಮಿನಲ್ 3ಕ್ಕೆ ಸ್ಥಳಾಂತರಿಸಲಾಗಿದೆ. ದೆಹಲಿಯ ಕಿಶನ್‌ಗಂಜ್ ಪ್ರದೇಶದಲ್ಲಿ ಅಂಡರ್‌ಪಾಸ್ ಅಡಿಯಲ್ಲಿ ಸಿಲುಕಿದ್ದ ಬಸ್‌ ನೊಳಗಿದ್ದ ಪ್ರಯಾಣಿಕರನ್ನು ಪೊಲೀಸರು ಮತ್ತು ರಕ್ಷಣಾ ತಂಡಗಳು ರಕ್ಷಿಸಿವೆ.

ಆರೆಂಜ್‌ ಅಲರ್ಟ್‌: ಭಾರತೀಯ ಹವಾಮಾನ ಇಲಾಖೆ ರಾಷ್ಟ್ರೀಯ ರಾಜಧಾನಿ ಪ್ರದೇಶ(ಎನ್‌ಸಿಆರ್)ಕ್ಕೆ ಆರೆಂಜ್‌ ಅಲರ್ಟ್‌ ನೀಡಿದೆ. ಮುಂದಿನ ಐದು ದಿನ ಹಗುರದಿಂದ ಸಾಧಾರಣ ಮಳೆ ಹಾಗೂ ದೆಹಲಿಯ ಕೆಲವು ಭಾಗಗಳಲ್ಲಿ ಜುಲೈ 1 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಭಾನುವಾರ ಮತ್ತು ಸೋಮವಾರದಂದು ಭಾರೀ ಮಳೆ ನಿರೀಕ್ಷಿಸಲಾಗಿದೆ.  

ಇಲಾಖೆ ಪ್ರಕಾರ, ದೆಹಲಿ ಜೊತೆಗೆ ಶಹದಾರ, ಫರೀದಾಬಾದ್, ಗುರುಗ್ರಾಮ, ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಮೋಡ ಕವಿದ ವಾತಾವರಣ ಇರುತ್ತದೆ. ʻಮಧ್ಯಮದಿಂದ ಭಾರೀ ಮಳೆ, ಗುಡುಗು ಸಹಿತ ಗಾಳಿ (30-40 ಕಿಮೀ ವೇಗ)ದ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದ್ವಾರಕಾ, ಪಾಲಮ್, ವಸಂತ್ ವಿಹಾರ್, ವಸಂತ್ ಕುಂಜ್, ಗುರುಗ್ರಾಮ, ಫರೀದಾಬಾದ್, ಮನೇಸರ್ ಸೇರಿದಂತೆ ದೆಹಲಿ-ಎನ್‌ಸಿಆರ್‌ನ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ನೀಡಿದೆ.

Tags:    

Similar News