ಈಶಾನ್ಯ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯ ಕುಮಾರ್ ಅವರ ಮೇಲೆ ಕೆಲವರು ಶುಕ್ರವಾರ ಮಸಿ ಬಳಿದಿದ್ದಾರೆ.
ಸ್ಥಳೀಯ ಕೌನ್ಸಿಲರ್ ಛಾಯಾ ಶರ್ಮಾ ಅವರೊಟ್ಟಿಗೆ ಪಕ್ಷದ ಸಭೆ ನಂತರ ಹೊರಗೆ ಬರುತ್ತಿದ್ದಾಗ ನ್ಯೂ ಉಸ್ಮಾನ್‌ಪುರ ಪ್ರದೇಶದ ಎಎಪಿ ಕಚೇರಿ ಹೊರಗೆ ಈ ಘಟನೆ ಸಂಭವಿಸಿದೆ.
ಛಾಯಾ ಶರ್ಮಾ ಅವರ ದೂರಿನ ಪ್ರಕಾರ, ʻಕೆಲವರು ಬಂದು ಕನ್ಹಯ್ಯ ಕುಮಾರ್ ಅವರಿಗೆ ಹಾರ ಹಾಕಿದರು. ಆನಂತರ ಶಾಯಿ ಎರಚಿ, ಹಲ್ಲೆಗೆ ಯತ್ನಿಸಿದರು.ತಾವು ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಅನುಚಿತವಾಗಿ ವರ್ತಿಸಿದರು ಮತ್ತು ಬೆದರಿಕೆ ಹಾಕಿದರುʼ.
ʻಪ್ರತಿಸ್ಪರ್ಧಿ ಮನೋಜ್ ತಿವಾರಿ ಅವರ ಆದೇಶದಂತೆ ದಾಳಿ ನಡೆದಿದೆʼ ಎಂದು ಕನ್ಹಯ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ. ʻಹಾಲಿ ಸಂಸದ ತಿವಾರಿ ತಮ್ಮ ಹೆಚ್ಚುತ್ತಿರುವ ಜನಪ್ರಿಯತೆಯಿಂದ ಹತಾಶರಾಗಿದ್ದಾರೆ. ತಮ್ಮ ಮೇಲೆ ದಾಳಿ ಮಾಡಲು ಗೂಂಡಾಗಳನ್ನು ಕಳುಹಿಸಿದ್ದಾರೆ. ಹಿಂಸಾಚಾರಕ್ಕೆ ಸಾರ್ವಜನಿಕರು ಮೇ 25ರಂದು ಮತದಾನದ ಮೂಲಕ ಉತ್ತರ ನೀಡಲಿದ್ದಾರೆʼ ಎಂದರು.
ಆರನೇ ಹಂತದ ಚುನಾವಣೆಯಲ್ಲಿ ದೆಹಲಿಯಲ್ಲಿ ಮೇ 25 ರಂದು ಮತದಾನ ನಡೆಯಲಿದೆ.