ದೆಹಲಿ ಕೋಚಿಂಗ್ ಸೆಂಟರ್ ಸಾವು| ವಿದ್ಯಾರ್ಥಿಗಳಿಂದ ನಿರಶನ

Update: 2024-07-31 07:23 GMT

ದೆಹಲಿಯ ಹಳೆಯ ರಾಜಿಂದರ್ ನಗರ ಪ್ರದೇಶದಲ್ಲಿನ ರಾವ್ಸ್‌ ಐಎಎಸ್ ಸ್ಟಡಿ ಸರ್ಕಲ್ ಕಟ್ಟಡದ ನೆಲಮಾಳಿಗೆಯಲ್ಲಿ ಮೂವರು ವಿದ್ಯಾರ್ಥಿ ಗಳ ಸಾವು ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ನಾಗರಿಕ ಸೇವೆ ಆಕಾಂಕ್ಷಿಗಳು ಅನಿರ್ದಿಷ್ಟಾವಧಿ ನಿರಶನ ಆರಂಭಿಸಿದ್ದಾರೆ. 

ಭಾರೀ ಪೊಲೀಸ್ ಬಂದೋಬಸ್ತ್ ನಡುವೆ, 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. 

ಗಂಭೀರವಾಗಿ ತೆಗೆದುಕೊಂಡಿಲ್ಲ: ಸಂತ್ರಸ್ತರ ಕುಟುಂಬಗಳಿಗೆ 5 ಕೋಟಿ ರೂ. ಪರಿಹಾರ ಸೇರಿದಂತೆ ತಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 10 ಆಕಾಂಕ್ಷಿಗಳು ಅನಿರ್ದಿಷ್ಟಾವಧಿ ನಿರಶನ ಆರಂಭಿಸಿದ್ದಾರೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಯೊಬ್ಬರು ತಿಳಿಸಿದರು. 

ʻಆಡಳಿತವು ನಮ್ಮ ಮಾತನ್ನು ಕೇಳುತ್ತದೆ; ಯುಪಿಎಸ್‌ಸಿ (ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್) ಕೋಚಿಂಗ್ ಲಾಬಿ, ಅಧಿಕಾರಿಗಳು ನಮ್ಮ ಮಾತು ಕೇಳುತ್ತಾರೆ ಎಂಬ ಭರವಸೆ ಇತ್ತು. ಆದರೆ, ನಾಲ್ಕು ದಿನಗಳ ನಂತರ ಈ ಪ್ರತಿಭಟನೆಯಿಂದ ಏನೂ ಆಗುವುದಿಲ್ಲ ಎಂದು ಅರಿತುಕೊಂಡಿದ್ದೇವೆ,ʼ ಎಂದು ನಿರಶನದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಯೊಬ್ಬರು ಹೇಳಿದರು.

ʻನಮ್ಮನ್ನು ಗಂಭೀರವಾಗಿ ಪರಿಗಣಿಸಿಲ್ಲ.ಐಎಎಸ್ ಆಕಾಂಕ್ಷಿಗಳಾಗಿರುವುದರಿಂದ ಶೀಘ್ರವಾಗಿ ವಿಭಾಗವಾಗುತ್ತೇವೆ ಮತ್ತು ಆನಂತರ ಅಧ್ಯಯ ನಕ್ಕೆ ಹಿಂತಿರುಗುತ್ತೇವೆ ಎಂದು ಅವರು ಭಾವಿಸಿದ್ದಾರೆ. ನ್ಯಾಯ ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಇಲ್ಲಿದ್ದೇವೆ, ʼಎಂದು ಅವರು ಹೇಳಿದರು.

ವಿದ್ಯಾರ್ಥಿಗಳ ಬೇಡಿಕೆಗಳೇನು?: ಸಂತ್ರಸ್ತರ ಕುಟುಂಬಗಳಿಗೆ 5 ಕೋಟಿ ರೂ. ಪರಿಹಾರ, ಎಫ್‌ಐಆರ್‌ ವಿವರ, ನಿರ್ದಿಷ್ಟ ಸಮಯದೊಳಗೆ ತನಿಖಾ ಸಮಿತಿ ವರದಿ ನೀಡಬೇಕು ಮತ್ತು ದೆಹಲಿಯಲ್ಲಿ ಗ್ರಂಥಾಲಯಗಳು ಹಾಗೂ ತರಗತಿಗಳಿಗೆ ನೆಲಮಾಳಿಗೆ ಬಳಸುವುದನ್ನು ನಿಷೇಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಮತ್ತೊಬ್ಬ ಪ್ರತಿಭಟನಾಕಾರರು ಹೇಳಿದರು.

ಪೊಲೀಸ್- ಪ್ರತಿಭಟನೆ ನಿರತ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರತಿದಿನ ಸಂವಾದ ನಡೆಸುತ್ತಿದ್ದೇವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ʻಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯುತ್ತಿದ್ದೇವೆ,ʼ ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ಎಂ. ಹರ್ಷವರ್ಧನ್ ತಿಳಿಸಿದ್ದಾರೆ. ವಿದ್ಯಾರ್ಥಿಗಳ ನಿಯೋಗವು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರನ್ನು ಭೇಟಿಯಾಗಿ, ತಮ್ಮ ಬೇಡಿಕೆಗಳನ್ನು ಸಲ್ಲಿಸಿತು ಎಂದು ಹೇಳಿದರು. 

ಮಾಲೀಕರ ಮಾವನ ವಿಚಾರಣೆ: ದೆಹಲಿ ಪೊಲೀಸರು ಮಂಗಳವಾರ ರಾವ್ಸ್‌ ಐಎಎಸ್ ಸ್ಟಡಿ ಸರ್ಕಲ್ ಮಾಲೀಕರ ಮಾವನನ್ನು ಪ್ರಶ್ನಿಸಿದ್ದಾರೆ ಮತ್ತು ವಿದ್ಯಾರ್ಥಿಗಳ ಸಾವಿನ ತನಿಖೆಯಲ್ಲಿ ಭಾಗವಹಿಸುವಂತೆ ನಾಲ್ವರು ಪುರಸಭೆಯ ಅಧಿಕಾರಿಗಳನ್ನು ಕೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕೋಚಿಂಗ್ ಸೆಂಟರ್‌ನ ಮಾಲೀಕತ್ವದ ಬಗ್ಗೆ ವಿ.ಪಿ. ಗುಪ್ತಾ ಅವರನ್ನು ಪ್ರಶ್ನಿಸಿದ್ದಾರೆ. ರಾವ್ಸ್‌ ಐಎಎಸ್ ಸ್ಟಡಿ ಸರ್ಕಲ್ ಮಾಲೀಕ ಅಭಿಷೇಕ್ ಗುಪ್ತಾ ಅವರ ಪತ್ನಿಯನ್ನು ವಿಚಾರಣೆಗೆ ಕರೆಯಬಹುದು ಎಂದು ಹೇಳಿದರು. ವಿ.ಪಿ. ಗುಪ್ತಾ ಅವರು ತಮ್ಮ ಮಗಳು ಮತ್ತು ಅಳಿಯನ ಹೆಸರಿಗೆ ಆಸ್ತಿಯನ್ನು ವರ್ಗಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಖಲೆಗಳ ಪರಿಶೀಲನೆ: ʻನಾವು ನೆಲಮಾಳಿಗೆಯ ಮಾಲೀಕತ್ವ ಸೇರಿದಂತೆ ಕೋಚಿಂಗ್ ಸೆಂಟರ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ,ʼ ಎಂದು ಅಧಿಕಾರಿ ಹೇಳಿದರು. ಅಭಿಷೇಕ್ ಗುಪ್ತಾ ಮತ್ತು ಕೋಚಿಂಗ್ ಸೆಂಟರ್ ಸಂಯೋಜಕ ದೇಶಪಾಲ್ ಸಿಂಗ್ ಅವರನ್ನುಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಜೊತೆಗೆ, ನೆಲಮಾಳಿಗೆಯ ನಾಲ್ವರು ಸಹ ಮಾಲೀಕರು ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಎಸ್‌ಯುವಿಯ ಚಾಲಕ ಬಂಧಿತ ಐವರಲ್ಲಿ ಸೇರಿದ್ದಾನೆ. ಎಸ್‌ಯುವಿಯನ್ನೂ ವಶಪಡಿಸಿಕೊಳ್ಳಲಾಗಿದೆ. 

ಕಾರ್ಯಪಾಲಕ ಎಂಜಿನಿಯರ್ ಮತ್ತು ಸಹಾಯಕ ಎಂಜಿನಿಯರ್ ಸೇರಿದಂತೆ ನಾಲ್ವರು ಪುರಸಭೆ ಅಧಿಕಾರಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

ಕಟ್ಟಡಗಳ ಪಟ್ಟಿ: ಉಲ್ಲಂಘಿಸುವವರ ವಿರುದ್ಧ ಮುಂದಿನ ಕ್ರಮ ಕುರಿತು ರಾಜಿಂದರ್ ನಗರ, ರಂಜಿತ್ ನಗರ, ಪಟೇಲ್ ನಗರ ಮತ್ತು ಕರೋಲ್ ಬಾಗ್ ನ ವಿವಿಧ ಪೊಲೀಸ್ ಠಾಣೆಗಳ ಬೀಟ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅಧಿಕಾರಿ ಹೇಳಿದರು. 

ʻನೆಲಮಾಳಿಗೆ ಇರುವ ಕಟ್ಟಡಗಳ ಪಟ್ಟಿ ತಯಾರಿಸಲು ಮತ್ತು ನೀರು ತುಂಬಿಕೊಳ್ಳುವ ಸಮಸ್ಯೆ ಇರುವ ಸ್ಥಳಗಳನ್ನು ಗುರುತಿಸಲು ಹೇಳಿದ್ದೇವೆ. ಇದುವರೆಗೆ 60ಕ್ಕೂ ಹೆಚ್ಚು ಕಟ್ಟಡಗಳನ್ನು ಗುರುತಿಸಲಾಗಿದೆ. ಈ ಕಟ್ಟಡಗಳು ಯಾವುದೇ ನಿಯಮ ಉಲ್ಲಂಘಿಸಿದ್ದರೆ, ಎಂಸಿಡಿ ಪೊಲೀಸರಿಗೆ ತಿಳಿಸುತ್ತದೆ,ʼ ಎಂದು ಅಧಿಕಾರಿ ಹೇಳಿದರು.

Tags:    

Similar News