ರೆಮಲ್ ಚಂಡಮಾರುತ: ಈಶಾನ್ಯ ರಾಜ್ಯಗಳಲ್ಲಿ ವ್ಯಾಪಕ ಹಾನಿ, 35 ಮಂದಿ ಸಾವು

ಮಿಜೋರಾಂ ಕ್ವಾರಿಯಿಂದ 14 ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಎಂಟು ಜನರು ಕಾಣೆಯಾಗಿದ್ದಾರೆ. ಅಸ್ಸಾಂ ಮತ್ತು ನಾಗಾಲ್ಯಾಂಡ್‌ನಲ್ಲಿ ತಲಾ ನಾಲ್ವರು, ಮೇಘಾಲಯದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

Update: 2024-05-29 07:30 GMT
ಐಜ್ವಾಲ್ ಜಿಲ್ಲೆಯಲ್ಲಿ ಕಲ್ಲುಕ್ವಾರಿ ಕುಸಿತದ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ.

ಮಿಜೋರಾಂ ರಾಜ್ಯ ವಿಪತ್ತು ನಿರ್ವಹಣೆ ಅಧಿಕಾರಿಗಳ ಪ್ರಕಾರ, ರೆಮಲ್ ಚಂಡಮಾರುತದಿಂದ ಸಂಭವಿಸಿದ ಭೂಕುಸಿತ ಮತ್ತು ನಿರಂತರ ಮಳೆಯಿಂದ ರಾಜ್ಯದಲ್ಲಿ ಕಲ್ಲುಗಣಿಯಲ್ಲಿ ಕುಸಿತದಲ್ಲಿ 14 ಸೇರಿದಂತೆ ಕನಿಷ್ಠ 25 ಜನರು ಸಾವಿಗೀಡಾಗಿದ್ದಾರೆ.

ಭೂಕುಸಿತದಿಂದ ಹಲವರು ಕಾಣೆಯಾಗಿದ್ದಾರೆ. ರಾಜ್ಯದ ರಾಜಧಾನಿ ದೇಶದ ಇತರ ಭಾಗಗಳಿಂದ ಸಂಪರ್ಕ ಕಳೆದುಕೊಂಡಿದೆ ಮತ್ತು ನೈಸರ್ಗಿಕ ವಿಕೋಪದ ವಿಪರಿಣಾಮ ಎದುರಿಸುತ್ತಿದೆ.

ಸಾವು ಮತ್ತು ವಿನಾಶ: ಐಜ್ವಾಲ್ ಜಿಲ್ಲೆಯಲ್ಲಿ ಭೂಕುಸಿತದಿಂದ ಕಲ್ಲಿನ ಕ್ವಾರಿ ಕುಸಿದು ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ 14 ಜನರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ ನಾಪತ್ತೆಯಾಗಿದ್ದಾರೆ ಎಂದು ಮಿಜೋರಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಚಂಡಮಾರುತದ ನಂತರ ರಾಜ್ಯದಲ್ಲಿ ಬಲವಾದ ಗಾಳಿಯೊಂದಿಗೆ ಮಳೆ ಸುರಿದಿದ್ದು, ಅಸ್ಸಾಂನಲ್ಲಿ ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಮೃತಪಟ್ಟು, 18 ಮಂದಿ ಗಾಯಗೊಂಡಿದ್ದಾರೆ. ನಾಗಾ ಲ್ಯಾಂಡ್‌ನಲ್ಲಿ ನಾಲ್ಕು ಮಂದಿ ಸಾವಿಗೀಡಾಗಿದ್ದು, 40 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಮೇಘಾಲಯದಲ್ಲಿ ಮಳೆಯಿಂದ ಇಬ್ಬರು ಮೃತಪಟ್ಟು, 500 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ತ್ರಿಪುರಾದಲ್ಲಿ 746 ಮಂದಿ ನಿರಾಶ್ರಿತರಾಗಿದ್ದಾರೆ. ಜೀವಹಾನಿ ಸಂಭವಿಸಿಲ್ಲವಾದರೂ, ಚಂಡಮಾರುತದಿಂದ ವಿದ್ಯುತ್ ಮತ್ತು ಕೃಷಿ ಕ್ಷೇತ್ರಕ್ಕೆ ವ್ಯಾಪಕ ಹಾನಿಯಾಗಿದೆ ಎಂದು ಸಾರಿಗೆ ಸಚಿವ ಸುಶಾಂತ ಚೌಧರಿ ಹೇಳಿದ್ದಾರೆ.

ಮಿಜೋರಾಂ ಕ್ವಾರಿ ಕುಸಿತ: ಮಿಜೋರಾಂನ ಐಜ್ವಾಲ್ ಪಟ್ಟಣದ ದಕ್ಷಿಣ ಹೊರ ವಲಯದಲ್ಲಿರುವ ಮೆಲ್ತಮ್ ಮತ್ತು ಹ್ಲಿಮೆನ್ ನಡು ವಿನ ಪ್ರದೇಶದಲ್ಲಿರುವ ಕಲ್ಲಿನ ಕ್ವಾರಿ ಮಂಗಳವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಕುಸಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭೂಕುಸಿತದಿಂದ ಹಲವು ಮನೆಗಳು ಮತ್ತು ಕಾರ್ಮಿಕರ ಶಿಬಿರಗಳು ನೆಲದಡಿ ಸೇರಿದ್ದು, ಅವಶೇಷಗಳ ಅಡಿಯಲ್ಲಿ ಕನಿಷ್ಠ 22 ಮಂದಿ ಮುಚ್ಚಿ ಹೋಗಿದ್ದಾರೆ ಎಂದು ವಿಪತ್ತು ನಿರ್ವಹಣೆ ಮಂಡಳಿ ಹೇಳಿದೆ. ಈವರೆಗೆ 14 ಶವ ಪತ್ತೆಯಾಗಿದೆ ಮತ್ತು ಎಂಟು ಜನ ನಾಪತ್ತೆಯಾಗಿದ್ದಾರೆ ಎಂದಿದೆ. ಮೃತರಲ್ಲಿ ನಾಲ್ಕು ವರ್ಷದ ಬಾಲಕ ಮತ್ತು ಆರು ವರ್ಷದ ಬಾಲಕಿ ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಪರಿಹಾರ ಪಾವತಿ: ಕಲ್ಲು ಕ್ವಾರಿ ಕುಸಿತ ಮತ್ತು ಮಳೆಯಿಂದ ಉಂಟಾದ ಅನಾಹುತಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿ ಲಾಲ್ದುಹೋಮ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಶೋಧ ಕಾರ್ಯ ಮುಂದುವರಿದಿದ್ದು, ಸ್ಥಳವನ್ನು ಸಂಪೂರ್ಣ ತೆರವುಗೊಳಿಸುವವರೆಗೆ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಐಜ್ವಾಲ್‌ನ ಡೆಪ್ಯುಟಿ ಕಮಿಷನರ್ ನಜುಕ್ ಕುಮಾರ್ ತಿಳಿಸಿದ್ದಾರೆ.

ʻಕಲ್ಲಿನ ಕ್ವಾರಿ ಕಳೆದ ಮೂರು ದಶಕಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಕ್ವಾರಿ ಬಳಿಯಿರುವ ಮನೆಗಳು ಕುಸಿದಿವೆ,ʼ ಎಂದು ಮಿಜೋರಾಂ ಪೊಲೀಸ್ ಮಹಾನಿರ್ದೇಶಕ ಅನಿಲ್ ಶುಕ್ಲಾ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವವರಿಗೆ ಮಳೆಯಿಂದ ತೊಂದರೆಯಾಗುತ್ತಿದೆ. ಬದುಕುಳಿದವರಿಗೆ ಹುಡುಕುತ್ತಿದ್ದೇವೆ ಎಂದು ಡಿಜಿಪಿ ಹೇಳಿದರು. ʻಮಿಜೋರಾಂನ ವಿವಿಧ ಸ್ಥಳಗಳಲ್ಲಿ ಮಳೆಯಿಂದಾದ ಭೂಕುಸಿತಗಳು ವರದಿಯಾಗಿವೆ. ಹಲವರು ತೇಲಿಹೋಗಿದ್ದಾರೆ. ಕಲ್ಲುಕ್ವಾರಿಯಿಂದ ಇಬ್ಬರನ್ನು ರಕ್ಷಿಸಿದ್ದೇವೆ,ʼ ಎಂದು ಶುಕ್ಲಾ ಹೇಳಿದರು. 

ಭೂಕುಸಿತದಿಂದ ಸಾವು: ಐಜ್ವಾಲ್ ಜಿಲ್ಲೆಯ ಸಮೀಪದ ಹ್ಲಿಮೆನ್‌ನಲ್ಲಿ, ಭೂಕುಸಿತದಿಂದ ಹಲವು ಮನೆಗಳು ಉರುಳಿ, ಕನಿಷ್ಠ ಐವರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಕಾಣೆಯಾಗಿದ್ದಾರೆ ಎಂದು ವಿಪತ್ತು ನಿರ್ವಹಣೆ ಮಂಡಳಿ ತಿಳಿಸಿದೆ. ಐಜ್ವಾಲ್‌ನ ಸೇಲಂ ವೆಂಗ್‌ನಲ್ಲಿ ಕುಸಿದ ಕಟ್ಟಡದಿಂದ ಮೂವರ ಶವಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಿಲ್ಲೆಯ ಫಾಲ್ಕಾವ್ನ್, ಲುಂಗ್‌ಸೆ ಮತ್ತು ಕೆಲ್ಸಿಹ್‌ನಲ್ಲಿ ಭೂಕುಸಿತದಿಂದ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣೆ ಮಂಡಳಿ ಹೇಳಿದೆ. ಜಿಲ್ಲೆಯ ಚಾನ್‌ಪುಯಿ ಎಂಬಲ್ಲಿ ಭಾರೀ ಭೂಕುಸಿತದಿಂದ ಮನೆಯೊಳಗಿದ್ದ ಒಂದೇ ಕುಟುಂಬದ ಎಂಟು ಸದಸ್ಯರು ಮುಚ್ಚಿ ಹೋಗಿದ್ದಾರೆ ಎಂದು ಹೇಳಿದೆ.

50 ಕುಟುಂಬಗಳ ಸ್ಥಳಾಂತರ: ಐಜ್ವಾಲ್ ನ ಹುಂತಾರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 6 ಮತ್ತು ಬಂಗ್‌ಬಂಗ್ಲಾದಲ್ಲಿ ಎನ್‌ಎಚ್ 54ರಲ್ಲಿ ಭೂಕುಸಿತದಿಂದ ರಾಜಧಾನಿಯು ದೇಶದ ಇತರ ಭಾಗಗಳಿಂದ ಸಂಪರ್ಕ ಕಳೆದುಕೊಂಡಿತ್ತು. ಸಂಜೆ ವೇಳೆಗೆ ರಸ್ತೆ ಅಡೆತಡೆ ತೆರವುಗೊಳಿಸಿ,, ಸಂಚಾರವನ್ನು ಪುನಃಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಜ್ವಾಲ್‌ನಿಂದ 21 ಕಿಮೀ ದೂರದಲ್ಲಿರುವ ಸಾಯಿರಾಂಗ್ ಗ್ರಾಮದಲ್ಲಿ ತ್ಲಾಂಗ್ ನದಿ ಉಕ್ಕಿ ಹರಿದಿದ್ದು, 50 ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಐಜ್ವಾಲ್ ಡಿಸಿ ತಿಳಿಸಿದ್ದಾರೆ. ಸುಮಾರು 150 ಮನೆಗಳು ನಾಶವಾಗಿವೆ.

ಅಸ್ಸಾಂನಲ್ಲಿ ಸಾವು: ಅಸ್ಸಾಂನಲ್ಲಿ ಮಹಿಳೆ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು 18 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಮರೂಪ ಜಿಲ್ಲೆಯ ಸತ್ಗಾಂವ್ ಪ್ರದೇಶದ ನಬಜ್ಯೋತಿ ನಗರದಲ್ಲಿ ಮನೆ ಮೇಲೆ ಮರ ಬಿದ್ದು ಮಿಂಟು ತಾಲುಕ್ದಾರ್(19) ಸಾವನ್ನಪ್ಪಿದರು ಮತ್ತು ಅವರ ತಂದೆ ಗಾಯಗೊಂಡಿದ್ದಾರೆ. ಅದೇ ಜಿಲ್ಲೆಯಲ್ಲಿ ಮರ ಬಿದ್ದು ಲಾವಣ್ಯ ಕುಮಾರಿ(60) ಗಾಯಗೊಂಡರು. ಆನಂತರ ಗೌಹಾಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 

ಲಖಿಂಪುರ ಜಿಲ್ಲೆಯ ಗೆರುಕಾಮುಖ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಕೆಳ ಸುಬರ್ಣಸಿರಿ ಜಲವಿದ್ಯುತ್ ಯೋಜನೆಯಲ್ಲಿ ಭೂಕುಸಿತದಿಂದ ಪುತುಲ್ ಗೊಗೊಯ್ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಮೊರಿಗಾಂವ್ ಜಿಲ್ಲೆಯ ದಿಘಲ್ಬೋರಿಯಲ್ಲಿ ಆಟೋರಿಕ್ಷಾ ಮೇಲೆ ಮರ ಬಿದ್ದು, ಕಾಲೇಜು ವಿದ್ಯಾರ್ಥಿ ಕೌಸಿಕ್ ಬೊರ್ಡೊಲೊಯ್ ಆಂಫಿ(17) ಸಾವನ್ನಪ್ಪಿದ್ದಾರೆ. ವಾಹನದಲ್ಲಿದ್ದ ಇತರ ನಾಲ್ವರು ಗಾಯಗೊಂಡರು. ಸೋನಿತ್‌ಪುರ ಜಿಲ್ಲೆಯ ಧೆಕಿಯಾಜುಲಿಯಲ್ಲಿ ಶಾಲೆ ಬಸ್ ಮೇಲೆ ಮರ ಬಿದ್ದು, 12 ಮಕ್ಕಳು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರೀಮ್‌ಗಂಜ್ ಜಿಲ್ಲೆಯ ಕೆಲವು ಭಾಗಗಳಲ್ಲಿ ಹಠಾತ್‌ ಪ್ರವಾಹ ವರದಿಯಾಗಿದ್ದು, ಎಚ್ಚರಿಕೆಯಿಂದ ಇರಲು ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗಿದೆ. 

ಪೂರ್ವ ಬಾಂಗ್ಲಾ ದೇಶದ ಮೇಲಿನ ಚಂಡಮಾರುತವು ಪೂರ್ವದಿಂದ ಈಶಾನ್ಯಕ್ಕೆ ಗಂಟೆಗೆ 15 ಕಿಮೀ ವೇಗದಲ್ಲಿ ಚಲಿಸುತ್ತಿದ್ದು, ಬುಧವಾರ ರಾತ್ರಿ ವೇಳೆಗೆ ದುರ್ಬಲಗೊಳ್ಳುವ ನಿರೀಕ್ಷೆಯಿದೆ.

Tags:    

Similar News