ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಸಿ.ಪಿ. ರಾಧಾಕೃಷ್ಣನ್ ಆಯ್ಕೆ, ತಮಿಳುನಾಡು ರಾಜಕೀಯದ ಮೇಲೆ ಕಣ್ಣು
ಕಳೆದ ತಿಂಗಳು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಅನಾರೋಗ್ಯದ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ, ತೆರವಾದ ಸ್ಥಾನಕ್ಕೆ ಸೆಪ್ಟೆಂಬರ್ 9 ರಂದು ಚುನಾವಣೆ ನಡೆಯಲಿದೆ.;
ಮುಂಬರುವ ಉಪರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರನ್ನು ಆಯ್ಕೆ ಮಾಡಲಾಗಿದ್ದು, ಈ ಮೂಲಕ ಎಲ್ಲಾ ಕುತೂಹಲಗಳಿಗೆ ತೆರೆ ಎಳೆಯಲಾಗಿದೆ. ಆಗಸ್ಟ್ 17, ಭಾನುವಾರದಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಬಿಜೆಪಿ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ಅಂತಿಮಗೊಳಿಸಲಾಯಿತು. ಸಭೆಯ ನಂತರ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ರಾಧಾಕೃಷ್ಣನ್ ಅವರ ಉಮೇದುವಾರಿಕೆಯನ್ನು ಅಧಿಕೃತವಾಗಿ ಘೋಷಿಸಿದರು.
ಕಳೆದ ತಿಂಗಳು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಅನಾರೋಗ್ಯದ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ, ತೆರವಾದ ಸ್ಥಾನಕ್ಕೆ ಸೆಪ್ಟೆಂಬರ್ 9 ರಂದು ಚುನಾವಣೆ ನಡೆಯಲಿದೆ.
ತಮಿಳುನಾಡು ಮೂಲದ 68 ವರ್ಷದ ಸಿ.ಪಿ. ರಾಧಾಕೃಷ್ಣನ್ ಅವರು ತಮ್ಮ 16ನೇ ವಯಸ್ಸಿನಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿದವರು. ಬಿಜೆಪಿಯ ಹಿರಿಯ ನಾಯಕರಾಗಿರುವ ಅವರು, ಈ ಹಿಂದೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪಕ್ಷ ಮುನ್ನಡೆಸಿದ್ದರು. ಅಲ್ಲದೆ, 1998 ಮತ್ತು 1999ರಲ್ಲಿ ಕೊಯಂಬತ್ತೂರು ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ರಾಜ್ಯಪಾಲರಾಗಿ ಅವರಿಗೆ ಅಪಾರ ಅನುಭವವಿದೆ. ಕಳೆದ ವರ್ಷದ ಜುಲೈನಿಂದ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಅವರು, ಇದಕ್ಕೂ ಮುನ್ನ ಜಾರ್ಖಂಡ್, ತೆಲಂಗಾಣ ಹಾಗೂ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿಯೂ ಉನ್ನತ ಸಾಂವಿಧಾನಿಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.
ತಮಿಳುನಾಡಿನ ಗಮನ
ಮುಂದಿನ ವರ್ಷ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ದಕ್ಷಿಣ ಭಾರತದ, ಅದರಲ್ಲೂ ವಿಶೇಷವಾಗಿ ತಮಿಳುನಾಡಿನ ನಾಯಕರೊಬ್ಬರನ್ನು ಉಪರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿರುವುದು ಬಿಜೆಪಿಯ ಪ್ರಮುಖ ರಾಜಕೀಯ ತಂತ್ರಗಾರಿಕೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಮೂಲಕ ತಮಿಳುನಾಡಿನ ಮತದಾರರಿಗೆ ಸ್ಪಷ್ಟ ಸಂದೇಶ ರವಾನಿಸಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.
ಅಭ್ಯರ್ಥಿ ಘೋಷಣೆಯ ನಂತರ ಮಾತನಾಡಿದ ಜೆ.ಪಿ. ನಡ್ಡಾ ಅವರು, ಉಪರಾಷ್ಟ್ರಪತಿ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಬೇಕು ಎನ್ನುವುದು ತಮ್ಮ ಆಶಯವಾಗಿದ್ದು, ಇದಕ್ಕಾಗಿ ವಿರೋಧ ಪಕ್ಷಗಳ ನಾಯಕರೊಂದಿಗೆ ಚರ್ಚಿಸಿ, ಅವರ ಬೆಂಬಲ ಕೋರಲಾಗುವುದು ಎಂದು ತಿಳಿಸಿದ್ದಾರೆ.
ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸದಸ್ಯರು, ನಾಮನಿರ್ದೇಶಿತ ಸದಸ್ಯರನ್ನು ಒಳಗೊಂಡಂತೆ, ಮತದಾನದ ಮೂಲಕ ದೇಶದ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡುತ್ತಾರೆ. ಈ ಉನ್ನತ ಹುದ್ದೆಗೆ ಸ್ಪರ್ಧಿಸುವವರು ಭಾರತದ ಪ್ರಜೆಯಾಗಿರಬೇಕು, 35 ವರ್ಷ ವಯಸ್ಸು ಪೂರ್ಣಗೊಳಿಸಿರಬೇಕು, ರಾಜ್ಯಸಭಾ ಸದಸ್ಯರಾಗಲು ಬೇಕಾದ ಅರ್ಹತೆಗಳನ್ನು ಹೊಂದಿರಬೇಕು ಹಾಗೂ ಯಾವುದೇ ಲಾಭದಾಯಕ ಸರ್ಕಾರಿ ಹುದ್ದೆಯಲ್ಲಿರಬಾರದು ಎಂಬ ನಿಯಮಗಳಿವೆ.