ಡೇರಾ ಸಚ್ಚಾ ಸೌಧ ಮುಖ್ಯಸ್ಥನಿಗೆ 11ನೇ ಬಾರಿಗೆ ಪೆರೋಲ್ ನೀಡಿದ ನ್ಯಾಯಾಲಯ
ಅತ್ಯಾಚಾರ ಹಾಗೂ ಪತ್ರಕರ್ತನ ಕೊಲೆ ಪ್ರಕರಣದ ಆರೋಪಿಯಾದ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಹರಿಯಾಣ ವಿಧಾನಸಭೆ ಚುನಾವಣೆಯ ಮುನ್ನ ಬುಧವಾರ ರೋಹ್ಟಕ್‌ನ ಸುನಾರಿಯಾ ಜೈಲಿನಿಂದ 20 ದಿನಗಳ ಪೆರೋಲ್ ಮೇಲೆ ಹೊರ ಬಂದರು.
ಪೆರೋಲ್ ಮೇಲೆ ಬಿಡುಗಡೆಯಾದ ಗುರ್ಮಿತ್ ರಾಮ್ ರಹೀಮ್ ಸಿಂಗ್ ಯಾವುದೇ ಚುನಾವಣೆ ಸಂಬಂಧಿತ ಚಟುವಟಿಕೆ, ರಾಜಕೀಯ ಭಾಷಣದಲ್ಲಿ ಭಾಗಿಯಾಗದಂತೆ ಷರತ್ತು ವಿಧಿಸಿದೆ. ಅಲ್ಲದೇ ಹರಿಯಾಣ ರಾಜ್ಯ ಪ್ರವೇಶಿಸದಂತೆಯೂ ಸೂಚಿಸಿದೆ. ಹಾಗಾಗಿ ಗುರ್ಮಿತ್ ಸಿಂಗ್ ಉತ್ತರ ಪ್ರದೇಶದ ಬರ್ನಾವಾದಲ್ಲಿರುವ ಡೇರಾ ಆಶ್ರಮದಲ್ಲಿ ಉಳಿದುಕೊಳ್ಳಲಿದ್ದಾರೆ.
2017ರಲ್ಲಿ ತನ್ನ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಸಿಂಗ್ 20 ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದಾರೆ. 16 ವರ್ಷಗಳ ಹಿಂದೆ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಪ್ರಕರಣದಲ್ಲೂ 2019 ರಲ್ಲಿ ಡೇರಾ ಮುಖ್ಯಸ್ಥ ಹಾಗೂ ಇತರ ಮೂವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಕೊಲೆ ಪ್ರಕರಣದಲ್ಲಿ ಗುರ್ಮಿತ್ ಸಿಂಗ್ ಗೆ ಜೀವಾವಧಿ ಶಿಕ್ಷೆಯಾಗಿದೆ.
ಕುತೂಹಲಕಾರಿ ವಿಷಯವೇನೆಂದರೆ ಗುರ್ಮಿತ್ ಸಿಂಗ್ ಕಳೆದ 4 ವರ್ಷಗಳಲ್ಲಿ 11ನೇ ಬಾರಿಗೆ ಪೆರೋಲ್ ಪಡೆದಿದ್ದಾರೆ. ಒಟ್ಟು 235 ದಿನ ಜೈಲಿನಿಂದ ಹೊರಗಿದ್ದಾರೆ ಎಂದು ತಿಳಿದುಬಂದಿದೆ.
ಅಯೋಧ್ಯೆಯ ರಾಮಮಂದಿರದ 'ಪ್ರಾಣ ಪ್ರತಿಷ್ಠಾ' ಗಿಂತ ಮೂರು ದಿನಗಳ ಮುಂಚಿತವಾಗಿ ಅಂದರೆ ಜ.19 ರಂದು ಹರಿಯಾಣ ಸರ್ಕಾರ ರಾಮ್ ರಹೀಮ್ಗೆ 50 ದಿನಗಳ ಪೆರೋಲ್ ನೀಡಿತ್ತು.
ಹರಿಯಾಣದ ಬಿಜೆಪಿ ಸರ್ಕಾರವು ಡೇರಾ ಮುಖ್ಯಸ್ಥರು ಸುಲಭವಾಗಿ ಜೈಲಿನಿಂದ ಹೊರಬರುವಂತೆ ಮಾಡಲು ಉತ್ತಮ ನಡತೆಯ ಕೈದಿಗಳ (ತಾತ್ಕಾಲಿಕ ಬಿಡುಗಡೆ) ಕಾಯಿದೆ, 2022 ಜಾರಿ ಮಾಡಿದೆ ಎಂದು ಹತ್ಯೆಗೀಡಾದ ಪತ್ರಕರ್ತನ ಪುತ್ರ ಅಂಶುಲ್ ಛತ್ರಪತಿ ಆರೋಪಿಸಿದ್ದಾರೆ.