ಧನಕರ್ ರಾಜೀನಾಮೆ: ಆರೋಗ್ಯದ ಕಾರಣವಲ್ಲ, ಇದರ ಹಿಂದೆ ಆಳವಾದ ಸತ್ಯವಿದೆ ಎಂದ ಕಾಂಗ್ರೆಸ್
ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೇ ಅವರು ದೆಹಲಿಯ ಏಮ್ಸ್‌ನಲ್ಲಿ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದರು.;
ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಸೋಮವಾರ ಸಂಜೆ ತಮ್ಮ ಹುದ್ದೆಗೆ ಹಠಾತ್ ರಾಜೀನಾಮೆ ನೀಡಿದ್ದು, ಇದು ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಆರೋಗ್ಯದ ಕಾರಣಗಳನ್ನು ನೀಡಿ ಅವರು ಪದತ್ಯಾಗ ಮಾಡಿದ್ದರೂ, ಇದರ ಹಿಂದೆ "ಅತ್ಯಂತ ಆಳವಾದ ಕಾರಣಗಳಿವೆ" ಎಂದು ಕಾಂಗ್ರೆಸ್ ಪಕ್ಷ ಗಂಭೀರ ಆರೋಪ ಮಾಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಸೋಮವಾರ ನಡೆದ ಘಟನಾವಳಿಗಳನ್ನು ಉಲ್ಲೇಖಿಸಿ ಈ ಸಂಶಯ ವ್ಯಕ್ತಪಡಿಸಿದ್ದಾರೆ. "ಸೋಮವಾರ ಮಧ್ಯಾಹ್ನ 12.30ಕ್ಕೆ ರಾಜ್ಯಸಭಾ ವ್ಯವಹಾರ ಸಲಹಾ ಸಮಿತಿ (BAC) ಸಭೆ ನಡೆದಿತ್ತು. ಸದನದ ನಾಯಕ ಜೆ.ಪಿ. ನಡ್ಡಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕೂಡ ಹಾಜರಿದ್ದರು. ಸಂಜೆ 4.30ಕ್ಕೆ ಮತ್ತೊಮ್ಮೆ ಸಭೆ ಸೇರಲು ನಿರ್ಧರಿಸಲಾಗಿತ್ತು. ಆದರೆ, ಸಂಜೆಯ ಸಭೆಗೆ ನಡ್ಡಾ ಮತ್ತು ರಿಜಿಜು ಗೈರಾಗಿದ್ದರು ಮತ್ತು ಈ ಬಗ್ಗೆ ಧನಕರ್ ಅವರಿಗೆ ಮಾಹಿತಿಯನ್ನೂ ನೀಡಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಧನಕರ್ ಸಭೆಯನ್ನು ಮುಂದೂಡಿದ್ದರು. ಈ ಬೆಳವಣಿಗೆಯ ನಂತರವೇ ರಾಜೀನಾಮೆ ಸುದ್ದಿ ಬಂದಿದೆ" ಎಂದು ರಮೇಶ್ ಹೇಳಿದ್ದಾರೆ.
"ಧನಕರ್ ಅವರ ರಾಜೀನಾಮೆ ನಿರ್ಧಾರ ಅವರ ವ್ಯಕ್ತಿತ್ವಕ್ಕೆ ಗೌರವ ತರುತ್ತದೆ, ಆದರೆ ಅವರನ್ನು ಆಯ್ಕೆ ಮಾಡಿದವರ ಬಗ್ಗೆ ಕಳಪೆ ಅಭಿಪ್ರಾಯ ಮೂಡಿಸುತ್ತದೆ. ಅವರು ನಿಯಮ, ಸಂಪ್ರದಾಯಗಳನ್ನು ಪಾಲಿಸುವವರಾಗಿದ್ದರು," ಎಂದು ರಮೇಶ್ ತಿಳಿಸಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರು ಧನಕರ್ ಅವರ ಮನವೊಲಿಸಿ, ರಾಜೀನಾಮೆ ಹಿಂಪಡೆಯುವಂತೆ ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
74 ವರ್ಷದ ಜಗದೀಪ್ ಧನಕರ್ ಅವರು ಆಗಸ್ಟ್ 2022 ರಲ್ಲಿ ಉಪರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೇ ಅವರು ದೆಹಲಿಯ ಏಮ್ಸ್‌ನಲ್ಲಿ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದರು.