ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಭರವಸೆಗಳ ಮಹಾಪೂರ

ಜಾತಿ ಗಣತಿ, ಶೇ. 50 ಕೋಟಾ ಮಿತಿ ಹೆಚ್ಚಳ, ಅಗ್ನಿಪಥ್ ರದ್ದು,ಎಂಎಸ್ಪಿ ಖಾತ್ರಿ ಕಾನೂನಿನ ಭರವಸೆ

Update: 2024-04-05 09:31 GMT

ಏಪ್ರಿಲ್‌ 5: ಶಿಷ್ಯವೇತನದ ಹಕ್ಕು, ಎಂಎಸ್‌ಪಿಗೆ ಕಾನೂನು ಖಾತರಿ ಮತ್ತು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಶೇ.50 ಮೀಸಲು ಮಿತಿಯನ್ನು ಹೆಚ್ಚಿಸಲು ಸಾಂವಿಧಾನಿಕ ತಿದ್ದುಪಡಿ ಅಂಗೀಕಾರ ಸೇರಿದಂತೆ ಭರವಸೆಗಳ ಮಹಾಪೂರವನ್ನು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹರಿಸಿದೆ.

ಐದು ʻನ್ಯಾಯದ ಆಧಾರ ಸ್ತಂಭʼದ ಅಡಿಯಲ್ಲಿ 25 ಖಾತರಿಗಳನ್ನು ಕೇಂದ್ರೀಕರಿಸಿದ ಪ್ರಣಾಳಿಕೆಯನ್ನು ಎಐಸಿಸಿ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಸ್ಥರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಶುಕ್ರವಾರ ಬಿಡುಗಡೆ ಮಾಡಲಾಯಿತು. 

ಧರ್ಮ, ಭಾಷೆ, ಜಾತಿಗಳನ್ನು ಮೀರಿ ಮತ್ತು ಪ್ರಜಾಪ್ರಭುತ್ವ ಸರ್ಕಾರವನ್ನು ಸ್ಥಾಪಿಸಲು ಬುದ್ಧಿವಂತಿಕೆಯಿಂದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಿದೆ. ಕಳೆದ ದಶಕದ ಆಡಳಿತವನ್ನು ಆಮೂಲಾಗ್ರವಾಗಿ ಬದಲಿಸಲು ಸಾರ್ವತ್ರಿಕ ಚುನಾವಣೆಗಳು ಅವಕಾಶ ಒದಗಿಸುತ್ತವೆ ಎಂದು ಹೇಳಿದೆ. 

ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಖರ್ಗೆ, ʻಜನಸಾಮಾನ್ಯರೊಂದಿಗೆ ಸಮಾಲೋಚನೆ ನಡೆಸಿ, ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯು ನ್ಯಾಯದ ಐದು ಸ್ತಂಭಗಳನ್ನು ಆಧರಿಸಿದೆ. ಇದು ನಮ್ಮ ಪ್ರಣಾಳಿಕೆಯ ಆಧಾರವೂ ಹೌದು. ಭಾಗಿದಾರಿ ನ್ಯಾಯ, ನಾರಿ ನ್ಯಾಯ, ಯುವ ನ್ಯಾಯ, ಕಿಸಾನ್ ನ್ಯಾಯ, ಶ್ರಮಿಕ್ ನ್ಯಾಯದ ಅಡಿಯಲ್ಲಿ ತಲಾ 5 ಗ್ಯಾರಂಟಿಗಳನ್ನು ಪಟ್ಟಿ ಮಾಡಿದ್ದೇವೆ. ಪ್ರಣಾಳಿಕೆಯು ನ್ಯಾಯದ ಐದು ಸ್ತಂಭಗಳ ಅಡಿಯಲ್ಲಿ 25 ಖಾತರಿಗಳನ್ನು ಒಳಗೊಂಡಿದೆʼ ಎಂದರು. 

ʻಸಾಂವಿಧಾನಿಕ ಸಂಸ್ಥೆಗಳನ್ನು ಬಲಪಡಿಸಲು ಸಾಂವಿಧಾನಿಕ ನ್ಯಾಯ, ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಆರ್ಥಿಕ ನ್ಯಾಯ, ಒಕ್ಕೂಟದ ಸಮಸ್ಯೆಗಳನ್ನು ಎದುರಿಸಲು ರಾಜ್ಯಗಳಿಗೆ ನ್ಯಾಯ, ದೇಶದ ರಕ್ಷಣೆಯ ಸಮಸ್ಯೆಗಳನ್ನು ಪರಿಹರಿಸಲು ರಕ್ಷಾ ನ್ಯಾಯ ಮತ್ತು ಪರಿಸರ ಸಂರಕ್ಷಣೆಗಾಗಿ ಪರ್ಯಾವರಣ ನ್ಯಾಯವನ್ನು ಸೇರಿಸಿದ್ದೇವೆʼ ಎಂದು ಅವರು ಹೇಳಿದರು. 

ನ್ಯಾಯಪತ್ರ: ನ್ಯಾಯಪತ್ರ ಎಂಬ ಹೆಸರಿನ ದಾಖಲೆಯಲ್ಲಿ ಎಲ್ಲಾ ಜಾತಿ- ಸಮುದಾಯಗಳಿಗೆ ತಾರತಮ್ಯವಿಲ್ಲದೆ ಉದ್ಯೋಗ, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್) ಶಿಕ್ಷಣ ಸಂಸ್ಥೆಗಳಲ್ಲಿ ಶೇ. 10 ಕೋಟಾ ಜಾರಿ, ಕೇಂದ್ರ ಸರ್ಕಾರದಲ್ಲಿ ವಿವಿಧ ಹಂತಗಳಲ್ಲಿ ಮಂಜೂರಾದ ಹುದ್ದೆಗಳಲ್ಲಿ 30 ಲಕ್ಷ ಖಾಲಿ ಹುದ್ದೆಗಳ ಭರ್ತಿ ಹಾಗೂ ಸಾರ್ವತ್ರಿಕ ಆರೋಗ್ಯ ರಕ್ಷಣೆಗಾಗಿ 25 ಲಕ್ಷ ರೂ.ವರೆಗೆ ನಗದು ರಹಿತ ವಿಮೆಯ ರಾಜಸ್ಥಾನ ಮಾದರಿಯನ್ನು ಅಳವಡಿಕೆ ಮಾಡಿಕೊಳ್ಳಲಾಗುವುದು. ಪಕ್ಷ ಅಧಿಕಾರಕ್ಕೆ ಬಂದರೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲು ಮಿತಿ ಶೇ. 50ಕ್ಕೆ ಹೆಚ್ಚಿಸಲು ಸಾಂವಿಧಾನಿಕ ತಿದ್ದುಪಡಿಯನ್ನು ಅಂಗೀಕರಿಸ ಲಾಗುವುದು ಎಂದು ಪಕ್ಷ ಭರವಸೆ ನೀಡಿದೆ.

ಜಾತಿ ಗಣತಿ: ರಾಷ್ಟ್ರವ್ಯಾಪಿ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ ನಡೆಸುವುದಾಗಿ ಕಾಂಗ್ರೆಸ್ ಹೇಳಿದೆ. 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಬ್ಬ ಡಿಪ್ಲೊಮಾ ಅಥವಾ ಪದವೀಧರರಿಗೆ ಒಂದು ವರ್ಷದ ಶಿಷ್ಯವೇತನ ಒದಗಿಸಲು ಹೊಸ 'ಶಿಕ್ಷಣ ಹಕ್ಕು ಕಾಯಿದೆ, ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಕಾನೂನು ಖಾತರಿ ನೀಡುವುದಾಗಿ ಹೇಳಿದೆ. ʻನಾವು ತಕ್ಷಣ ಜಮ್ಮು- ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡುತ್ತೇವೆ. ನಗರ ಪ್ರದೇಶದ ಬಡವರಿಗೆ ನಗರ ಉದ್ಯೋಗ ಕಾರ್ಯಕ್ರಮವನ್ನು ಪ್ರಾರಂಭಿಸುತ್ತೇವೆ ಎಂದು ಹೇಳಿದೆ. 

ಅಗ್ನಿಪಥ ಯೋಜನೆ ರದ್ದು: ಅಗ್ನಿಪಥ ಯೋಜನೆ ರದ್ದು ಮತ್ತು ಸಾಮಾನ್ಯ ನೇಮಕವನ್ನು ಪುನರಾರಂಭಿಸಲು ಸಶಸ್ತ್ರ ಪಡೆಗಳಿಗೆ ಆದೇಶ ನೀಡುವುದಾಗಿ ತಿಳಿಸಿದೆ. ʻಅಧಿಕಾರಕ್ಕೆ ಬಂದರೆ ಬಡವರಿಗೆ ಬಾಗಿಲು ತೆರೆಯುತ್ತೇವೆ. ಪ್ರಧಾನಿ ಮೋದಿ ಅವರು ನಮ್ಮ ಪಕ್ಷದ ನಾಯಕರನ್ನು ಪಕ್ಷಾಂತರ ಮಡಿಕೊಂಡು '400ಕ್ಕೂ ಹೆಚ್ಚು' ಸಂಸದರು ಎನ್ನುತ್ತಿದ್ದಾರೆ. ಭಯ ಇರುವವರು ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಪ್ರಮುಖ ವಿರೋಧ ಪಕ್ಷದ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿರುವಾಗ, ಚುನಾವಣೆಯಲ್ಲಿ ಯಾವ ರೀತಿಯ ನ್ಯಾಯ ಇರುತ್ತದೆ?ʼ ಎಂದು ಆಶ್ಚರ್ಯ ಪಟ್ಟರು.

ಮೋದಿ ನಿರಂಕುಶ ಆಡಳಿತ ತೊಲಗಿಸಿ: ದೇಶಕ್ಕೆ ನರೇಗಾ, ಆಹಾರದ ಹಕ್ಕು, ಮಾಹಿತಿ ಹಕ್ಕು, ಕಾರ್ಮಿಕ ಸುಧಾರಣೆಗಳು- ಹಕ್ಕುಗಳನ್ನು ನೀಡಿದ ಡಾ. ಮನಮೋಹನ್ ಸಿಂಗ್ ಅವರ 10 ವರ್ಷಗಳ ಆಡಳಿತವನ್ನು ಪ್ರಧಾನಿ ನರೇಂದ್ರ ಮೋದಿ ಟೀಕಿಸುತ್ತಾರೆ. ಆದರೆ, ಕಳೆದ 10 ವರ್ಷಗಳಲ್ಲಿ ಮೋದಿ ಅವರು ಏನು ಮಾಡಿದ್ದಾರೆ? ಯುಪಿಎ ಸರ್ಕಾರದ ಈ ಸಾಧನೆಗಳಿಗೆ ಸರಿಸಾಟಿಯಾಗಬಲ್ಲ ಒಂದು ವಿಷಯ ಕೂಡ ಅವರಿಂದ ಆಗಿಲ್ಲʼ ಎಂದರು.

ಮೋದಿ ಅವರ ನಿರಂಕುಶ ಸರಕಾರವನ್ನು ಕಿತ್ತೊಗೆಯುವುದು ಇಂದಿನ ಅಗತ್ಯ. ಆದರೆ, ಈ ಗುರಿಯನ್ನು ಸಾಧಿಸಲು ಅವರ ಆಡಳಿತದ ʻನೈಜ ಮುಖʼವನ್ನು ಬಹಿರಂಗಪಡಿಸಿ, ಜನರಿಗೆ ತಲುಪಿಸಬೇಕು ಮತ್ತು ಪಕ್ಷದ ಭರವಸೆಗಳನ್ನು ವಿವರಿಸಬೇಕುʼ ಎಂದು ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಹೇಳಿದರು.

ಪ್ರಣಾಳಿಕೆಯ ತಿರುಳು-ನ್ಯಾಯ:  ಪ್ರಣಾಳಿಕೆ ಸಮಿತಿಯ ನೇತೃತ್ವ ವಹಿಸಿದ್ದ ಮಾಜಿ ಸಚಿವ ಪಿ.ಚಿದಂಬರಂ ಮಾತನಾಡಿ, 'ಪ್ರಣಾಳಿಕೆಯ ವಿಸ್ತೃತ ವಿಷಯ- ನ್ಯಾಯ. ಕಳೆದ 10 ವರ್ಷಗಳಲ್ಲಿ ನ್ಯಾಯದ ಪ್ರತಿಯೊಂದು ಅಂಶವೂ ಕಡಿಮೆಯಾಗಿದೆ; ಕೆಲವು ಸಂದರ್ಭಗಳಲ್ಲಿ ನ್ಯಾಯವನ್ನು ನಿರಾಕರಿಸಲಾಗಿದೆ. ಪ್ರಣಾಳಿಕೆ ಕಳೆದ 5-10 ವರ್ಷಗಳಲ್ಲಿ ಆದ ಹಾನಿಯನ್ನು ಹಿಮ್ಮೆಟ್ಟಿಸಲು ದಿಟ್ಟ ಕ್ರಮಗಳನ್ನು ಸೂಚಿಸುತ್ತದೆ. ಕೆಲಸ, ಸಂಪತ್ತು ಮತ್ತು ಕಲ್ಯಾಣ ನಮ್ಮ ಪ್ರಣಾಳಿಕೆಯ ಮೂರು ಮುಖ್ಯ ಸ್ತಂಭಗಳು. ಪ್ರಣಾಳಿಕೆಯ ಕರಡನ್ನು ಸಿಡಬ್ಲ್ಯುಸಿ ಕೂಲಂಕಷವಾಗಿ ಚರ್ಚಿಸಿದೆ ಮತ್ತು ನಂತರ ಕೆಲವು ಬದಲಾವಣೆಗಳನ್ನು ಮಾಡಲಾಗಿದೆʼ ಎಂದು ಅವರು ಹೇಳಿದರು.

ʻಬಿಜೆಪಿ ಶ್ರೀಮಂತರ, ಶ್ರೀಮಂತರಿಂದ ಮತ್ತು ಶ್ರೀಮಂತರ ಸರ್ಕಾರವನ್ನು ನಡೆಸುತ್ತಿದೆ ಎಂದು ನಾನು ಯಾವಾಗಲೂ ಆರೋಪಿಸುತ್ತೇನೆ. ಇದು ಶೇ.1 ರಷ್ಟು ಹಿತಾಸಕ್ತಿಗಳಿಂದ ನಡೆಸಲ್ಪಡುವ ಆಡಳಿತ. ನಾವು ಅಧಿಕಾರಕ್ಕೆ ಬಂದರೆ, ಮುಂದಿನ 5 ವರ್ಷಗಳಲ್ಲಿ ಕನಿಷ್ಠ 23 ಕೋಟಿ ಜನರನ್ನು ಬಡತನದಿಂದ ಮೇಲೆತ್ತು ತ್ತೇವೆ. ನಾವು ಅದನ್ನು ಹಿಂದೆ ಮಾಡಿದ್ದೇವೆ ಮತ್ತು ನಾವು ಅದನ್ನು ಮತ್ತೆ ಮಾಡುತ್ತೇವೆʼಎಂದರು.

Tags:    

Similar News