ಚೀನಾ ನಿರ್ಮಿತ ಸಿಸಿಟಿವಿ ಕ್ಯಾಮೆರಾ ಮಾರಾಟ ನಿರ್ಬಂಧಿಸಲು ಚಿಂತನೆ

ಕಣ್ಗಾವಲು ಸಾಧನಾ ತಯಾರಿಕೆ ಕ್ಷೇತ್ರದಲ್ಲಿ ಸ್ಥಳೀಯ ಮಾರಾಟಗಾರರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲು ಸಹ ಸರ್ಕಾರ ಮುಂದಾಗಿದೆ

Update: 2024-10-02 12:27 GMT

ಚೀನಾ ನಿರ್ಮಿತ ಸಿಸಿಟಿವಿ ಕ್ಯಾಮೆರಾ ಹಾಗೂ ಕಣ್ಗಾವಲು (ಸರ್ವೆಲೆನ್ಸ್) ಸಾಧನಗಳ ಮಾರಾಟಕ್ಕೆ ನಿರ್ಬಂಧ ಹೇರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಇಸ್ರೇಲ್‌ ತನ್ನ ಶತ್ರುರಾಷ್ಟ್ರಗಳಾದ ಲೆಬನಾನ್ ಹಾಗೂ ಸಿರಿಯಾದಲ್ಲಿ ಸಾವಿರಾರು ಪೇಜರ್‌ ಗಳನ್ನು ಸ್ಫೋಟಿಸಿ ಎಲೆಕ್ಟ್ರಾನಿಕ್‌ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಚೀನಾ ಸಾಧನಗಳ ಮಾರಾಟ ನಿರ್ಬಂಧಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಕಣ್ಗಾವಲು ಸಾಧನಾ ತಯಾರಿಕೆ ಕ್ಷೇತ್ರದಲ್ಲಿ ಸ್ಥಳೀಯ ಮಾರಾಟಗಾರರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲು ಸಹ ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ.

ಅ.8 ರಂದು ಭಾರತದ ಹೊಸ ಕಣ್ಗಾವಲು ನೀತಿ ಜಾರಿಗೆ ಬರಲಿದ್ದು, ಇದರಿಂದ ಚೀನಾ ಮೇಲಿನ ಅವಲಂಬನೆ ತಪ್ಪಿಸಬಹುದಾಗಿದೆ. ಜೊತೆಗೆ ಸ್ವದೇಶಿ ಕಂಪನಿಗಳಿಗೆ ಉತ್ತೇಜನ ನೀಡಿದಂತಾಗಲಿದೆ ಎಂದು ಹೇಳಲಾಗಿದೆ.

ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಸ್ವದೇಶಿ ನಿರ್ಮಿತ ಸಿಪಿ ಪ್ಲಸ್(CP Plus), ಚೀನಾದ ಹಿಕ್ವಿಷನ್ (Hikvision) ಹಾಗೂ ದಹುವಾ (dahua) ಕಂಪನಿಯ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇದೆ. ಸರ್ಕಾರ ಚೀನಾ ನಿರ್ಮಿತ ಉತ್ಪನ್ನಗಳಿಗೆ ನಿರ್ಬಂಧ ಹೇರಿದರೆ ಭಾರತದ ಸಿಪಿ ಪ್ಲಸ್ ಕಂಪನಿಯ ಸಿಸಿಟಿವಿ ಕ್ಯಾಮೆರಾ ಹಾಗೂ ಕಣ್ಗಾವಲು ಸಾಧನಗಳಿಗೆ ಬೇಡಿಕೆ ಹೆಚ್ಚಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಚೀನಾದ ಸಿಸಿಟಿವಿ ಕ್ಯಾಮೆರಾಗಳಿಂದ ದತ್ತಾಂಶ ಸೋರಿಕೆಯಾಗುವ ಭೀತಿಯೂ ಇದೆ ಎನ್ನಲಾಗಿದೆ.

Tags:    

Similar News