ಛತ್ತೀಸ್ ಗಢ ಎನ್‌ಕೌಂಟರ್ | ನಕ್ಸಲರ ಸಾವಿನ ಸಂಖ್ಯೆ 31ಕ್ಕೆ ಏರಿಕೆ
ಬಸ್ತಾರ್ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಗುಂಡಿನ ಚಕಮಕಿ ಬಳಿಕ ಶನಿವಾರ ಬೆಳಿಗ್ಗೆ ಮೂವರು ನಕ್ಸಲರ ಶವ ಪತ್ತೆಯಾಗಿದ್ದು, ಇದರೊಂದಿಗೆ ಮೃತ ನಕ್ಸಲೀಯರ ಒಟ್ಟು ಸಂಖ್ಯೆ 31ಕ್ಕೆ ಏರಿಕೆಯಾಗಿದೆ.
ಬಸ್ತಾರ್ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಗುಂಡಿನ ಚಕಮಕಿ ಬಳಿಕ ಶನಿವಾರ ಬೆಳಗ್ಗೆ ಮೂವರು ನಕ್ಸಲರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರೊಂದಿಗೆ ಶುಕ್ರವಾರ ನಡೆದ ಚಕಮಕಿಯಲ್ಲಿ ಮೃತರಾದ ನಕ್ಸಲೀಯರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ʻಶುಕ್ರವಾರ ಎನ್‌ಕೌಂಟರ್ ನಡೆದ ದಟ್ಟ ಅರಣ್ಯದಿಂದ ಇಂದು ಬೆಳಗ್ಗೆ ಮೂರು ಶವಗಳನ್ನು ವಶಪಡಿಸಿಕೊಳ್ಳಲಾಗಿದೆʼ ಎಂದು ಪೊಲೀಸ್ ಮಹಾನಿರೀಕ್ಷಕ (ಬಸ್ತಾರ್) ಪಿ. ಸುಂದರರಾಜ್ ತಿಳಿಸಿದರು.
ʻಇದರೊಂದಿಗೆ ಎನ್‌ಕೌಂಟರ್‌ನಲ್ಲಿ ಮೃತರ ಸಂಖ್ಯೆ 31 ಕ್ಕೆ ಏರಿದೆ. ನಕ್ಸಲರ ಗುರುತು ಇನ್ನೂ ಪತ್ತೆಯಾಗಿಲ್ಲ. ಆದರೆ, ಅವರು ಪಿಎಲ್‌ಜಿಎ (ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ) ಕಂಪನಿ ನಂ. 6, ಪ್ಲಟೂನ್ 16 ಕ್ಕೆ ಸೇರಿದವರು ಎಂದು ತೋರುತ್ತದೆ,ʼ ಎಂದು ಹೇಳಿದರು.
ದಾಂತೇವಾಡ ಮತ್ತು ನಾರಾಯಣಪುರ ಅಂತರ ಜಿಲ್ಲಾ ಗಡಿಯಲ್ಲಿರುವ ನೆಂದೂರು ಮತ್ತು ತುಳುತುಳಿ ಗ್ರಾಮಗಳ ನಡುವಿನ ಅರಣ್ಯದಲ್ಲಿ ಶುಕ್ರವಾರ ಮುಂಜಾನೆ 1 ಗಂಟೆ ಸುಮಾರಿಗೆ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಮತ್ತು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಜಂಟಿ ತಂಡ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆಯಿತು.
24 ವರ್ಷಗಳ ಹಿಂದೆ ರಾಜ್ಯ ರಚನೆಯಾದ ನಂತರ ಒಂದೇ ಕಾರ್ಯಾಚರಣೆಯಲ್ಲಿ ಸಂಭವಿಸಿದ ಮಾವೋವಾದಿಗಳ ಅತ್ಯಧಿಕ ಸಾವು ಇದಾಗಿದೆ. ಏಪ್ರಿಲ್ 16 ರಂದು ಕಂಕೇರ್ ಜಿಲ್ಲೆಯಲ್ಲಿ 29 ನಕ್ಸಲರ ಹತ್ಯೆ ನಡೆಸಿದ ಐದು ತಿಂಗಳ ನಂತರ ಈ ದಾಳಿ ಸಂಭವಿಸಿದೆ.
ಉಗ್ರರು ಸಿಡಿಸಿದ ಬ್ಯಾರಲ್ ಗ್ರೆನೇಡ್ ಲಾಂಚರ್ (ಬಿಜಿಎಲ್) ಸ್ಫೋಟದಿಂದ ರಾಜ್ಯ ಪೊಲೀಸರ ಡಿಆರ್‌ಜಿಯ ಯೋಧನಿಗೆ ಗಾಯಗಳಾಗಿದೆ. ಎಕೆ-47 ರೈಫಲ್, ಒಂದು ಎಸ್‌ಎಲ್‌ಆರ್ (ಸೆಲ್ಫ್ ಲೋಡಿಂಗ್ ರೈಫಲ್), ಒಂದು ಇನ್ಸಾಸ್( ಐಎನ್‌ಎಸ್‌ಎಎಸ್) ರೈಫಲ್, ಒಂದು ಎಲ್‌ಎಂಜಿ ರೈಫಲ್ ಮತ್ತು ಒಂದು .303 ರೈಫಲ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಜಿಪಿ ತಿಳಿಸಿದ್ದಾರೆ.
ಸಿಎಂ ಶ್ಲಾಘನೆ
ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಧಿಕಾರ ಸ್ವೀಕರಿಸಿದ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಯಶಸ್ವಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳನ್ನು ಶ್ಲಾಘಿಸಿದ್ದಾರೆ. 'ಡಬಲ್ ಇಂಜಿನ್' ಸರ್ಕಾರ ನಕ್ಸಲ್ ನಿರ್ಮೂಲನೆಗೆ ಸಂಕಲ್ಪ ಮಾಡಿದೆ,ʼ ಎಂದು ಹೇಳಿದರು.
ಈ ಎನ್‌ಕೌಂಟರ್‌ನೊಂದಿಗೆ ದಾಂತೇವಾಡ ಮತ್ತು ನಾರಾಯಣಪುರ ಸೇರಿದಂತೆ ಏಳು ಜಿಲ್ಲೆಗಳಿರುವ ಬಸ್ತಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳು 188 ಮಾವೋವಾದಿಗಳನ್ನು ಹೊಡೆದುರುಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.