ಚೆನಾಬ್‌ ನದಿ ನೀರು ಹರಿವು ಸ್ಥಗಿತ; ಪಾಕ್‌ಗೆ ಭಾರತದಿಂದ ಮತ್ತೊಂದು ಜಲ ಆಘಾತ

ಜಮ್ಮುವಿನ ರಾಂಬನ್‌ನಲ್ಲಿರುವ ಬಾಗ್ಲಿಹಾರ್‌ ಹಾಗೂ ಉತ್ತರ ಕಾಶ್ಮೀರ ಭಾಗದಲ್ಲಿರುವ ಕಿಶನ್‌ಗಂಗಾ ಜಲಾಶಯದಿಂದ ಹೊರಹರಿಯುವ ನೀರನ್ನು ಬಂದ್‌ ಮಾಡಲಾಗಿದೆ. ವಿಶ್ವಸಂಸ್ಥೆ ಮದ್ಯಸ್ಥಿಕೆಯಲ್ಲಿ ಪಾಕಿಸ್ತಾನ ಹಾಗೂ ಭಾರತ ನಡುವೆ ಸಿಂಧೂ ನದಿ ಒಪ್ಪಂದವಾಗಿತ್ತು.;

Update: 2025-05-04 12:14 GMT

ಕಣಿವೆಗಳಲ್ಲಿ ಹರಿಯುತ್ತಿರುವ ಚಿನಾಬ್‌ ನದಿ.

ಜಮ್ಮು ಕಾಶ್ಮೀರದ ಚೆನಾಬ್‌ ನದಿಯ ಬಾಗ್ಲಿಹರ್‌ ಅಣೆಕಟ್ಟಿನಿಂದ ಪಾಕಿಸ್ತಾನದ ಕಡೆಗೆ ಹರಿಯುತ್ತಿದ್ದ ನೀರನ್ನು ಭಾರತ ನಿಲ್ಲಿಸಿದೆ. ಕಿಶನ್‌ಗಂಗಾ ಜಲಾಶಯದಿಂದಲೂ ಹೊರಹರಿವನ್ನು ಬಂದ್‌ ಮಾಡಲಾಗುವುದು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿದ್ದು, ಸಿಂಧೂನದಿ ಜಲ ಒಪ್ಪಂದ ಸ್ಥಗಿತಗೊಳಿಸಿದ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮತ್ತೆರಡು ಜಲಾಘಾತಗಳನ್ನು ಕೊಟ್ಟಿದೆ. 

ಜಮ್ಮುವಿನ ರಾಂಬನ್‌ನಲ್ಲಿರುವ ಬಾಗ್ಲಿಹಾರ್‌ ಹಾಗೂ ಉತ್ತರ ಕಾಶ್ಮೀರ ಭಾಗದಲ್ಲಿರುವ ಕಿಶನ್‌ಗಂಗಾ ಜಲಾಶಯದಿಂದ ಹೊರಹರಿಯುವ ನೀರನ್ನು ಬಂದ್‌ ಮಾಡಲಾಗಿದೆ. 1960ರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಸಿಂಧೂನದಿ ಹಾಗೂ ಉಪ ನದಿಗಳ ಜಲ ಒಪ್ಪಂದ ನಡೆದಿತ್ತು.

ಏಪ್ರಿಲ್‌ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಬಂಧ ಹದಗೆಟ್ಟು ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿದ್ದು ಭಯೋತ್ಪಾದಕರ ಮೇಲೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಭಾರತ ಪಣತೊಟ್ಟಿದೆ. 

ಪಾಕ್‌ ವಿರುದ್ಧ ಹಲವು ಕ್ರಮ

ಪಹಲ್ಗಾಮ್‌ ದಾಳಿಯ ನಂತರ ತರ್ತು ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ವಿರುದ್ಧ ಸಿಂಧೂನದಿ ಜಲ ಒಪ್ಪಂದ, ವೀಸಾ ರದ್ಧತಿ, ವಾಘ-ಅಟ್ಟಾರಿ ಗಡಿ ಬಂದ್‌, ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನು ವಾಪಸ್‌ ಕಳಿಸುವುದು ಸೇರಿದಂತೆ ರಾಜತಾಂತ್ರಿಕ ಅಧಿಕಾರಿಗಳ ಸಂಖ್ಯೆ ಕಡಿತಗೊಳಿಸುವಂತೆ ತಿಳಿಸಿತ್ತು. ದೇಶದ ವಿರುದ್ಧ ದ್ವೇಷ ಸುದ್ದಿ ಹಾಗೂ ಸುಳ್ಳು ಸುದ್ದಿ ಪ್ರಸಾರಮಾಡುವ ಮಾಧ್ಯಮಗಳ ನಿರ್ಬಂಧ, ಭಾರತದ ವಾಯುಪ್ರದೇಶ ಹಾಗೂ ಬಂದರುಗಳನ್ನು ಬಳಸದಂತೆ ಸೂಚಿಸಿದೆ. 

ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನದ ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿದೆ. ಪಾಕ್‌ ಸೈನಿಕರು ಗಡಿಯಲ್ಲಿ ಸಣ್ಣಪ್ರಮಾಣದ ಶಸ್ತ್ರಾಸ್ತ್ರಗಳ ಅಪ್ರಚೋದಿತ ದಾಳಿ ನಡೆಸಿದ್ದು ಕುಪ್ವಾರ, ಬಾರಾಮುಲ್ಲಾ, ಪೂಂಚ್‌, ರಜೌರಿ, ಮೆಂಧರ್‌, ಮೆಶೌರ ಸೇರಿದಂತೆ ವಿವಿಧೆಡೆ ಗುಂಡಿನ ದಾಳಿ ನಡೆಸಿ ಕದನ ವಿರಾಮ ಉಲ್ಲಂಘಿಸಿದ್ದಾರೆ. 

ಸಿಂಧೂನದಿ ಕಾಮಗಾರಿ ನಡೆಸಿದರೆ ನಾಶ

ಭಾರತ ಸಿಂಧೂ ನದಿ ನೀರನ್ನು ನಿಲ್ಲಿಸಿದ್ದು ಪಾಕಿಸ್ತಾನಕ್ಕೆ ಮೀಸಲಿರುವ ನೀರನ್ನು ಭಾರತ ಬೇರೆಡೆಗೆ ತಿರುಗಿಸಲು ಕಾಮಗಾರಿಗಳನ್ನು ನಡೆಸಿದರೆ ಅವುಗಳನ್ನು ನಾಶಮಾಡಲಾಗುವುದು ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜ ಅಸೀಫ್‌ ತಿಳಿಸಿದ್ದಾರೆ. ಯುದ್ಧವೆಂದರೆ ಕೇವಲ ಬಾಂಬ್‌ ಹಾಕುವುದು, ಗುಂಡಿನ ದಾಳಿ ನಡೆಸುವುದು ಮಾತ್ರವಲ್ಲ. ನದಿ ನೀರನ್ನು ತಿರುಗಿಸಿದರೆ ಪಾಕಿಸ್ತಾನದ ಜನತೆಗೆ ನೀರು ಕುಡಿಯಲು, ಬೆಳೆ ಬೆಳೆಯಲು ಸಮಸ್ಯೆಯಾಗಿ ಜನರು ಮೃತಪಡುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

Tags:    

Similar News