ಗುಜರಾತಿನಲ್ಲಿ ಚಂಡಿಪುರ ವೈರಸ್‌ಗೆ ಬಾಲಕಿ ಬಲಿ; ಏನಿದು ಹೊಸ ವೈರಸ್‌?

ಗುಜರಾತಿನಲ್ಲಿ ಇದುವರೆಗೆ 14 ಶಂಕಿತ ಚಂಡಿಪುರ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಸಚಿವ ರುಶಿಕೇಶ್ ಪಟೇಲ್ ಹೇಳಿದ್ದಾರೆ.;

Update: 2024-07-18 08:06 GMT

ಗುಜರಾತಿನಲ್ಲಿ ಶಂಕಿತ ಚಂಡಿಪುರ ವೈರಸ್‌ನಿಂದ ಮೊದಲ ಸಾವು ಸಂಭವಿಸಿದ್ದು, ನಾಲ್ಕು ವರ್ಷದ ಬಾಲಕಿ ಸೋಂಕಿಗೆ ಬಲಿಯಾಗಿದ್ದಾಳೆ ಎಂದು ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ) ದೃಢಪಡಿಸಿದೆ.

ಗುಜರಾತ್‌ ರಾಜ್ಯದಲ್ಲಿ ಇದುವರೆಗೆ 14 ಶಂಕಿತ ಚಂಡಿಪುರ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಅವರಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ದೃಢೀಕರಣಕ್ಕೆ ರಕ್ತದ ಮಾದರಿಗಳನ್ನು ಪುಣೆ ಮೂಲದ ಎನ್‌ಐವಿಗೆ ಕಳುಹಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ರುಶಿಕೇಶ್ ಪಟೇಲ್ ತಿಳಿಸಿದ್ದಾರೆ.

ʻಸಬರ್ಕಾಂತ ಜಿಲ್ಲೆಯ ಹಿಮತ್‌ನಗರದ ಸಿವಿಲ್ ಆಸ್ಪತ್ರೆಯಲ್ಲಿ ಸಾವಿಗೀಡಾದ ಅರಾವಳಿಯ ಮೋಟಾ ಕಾಂತರಿಯಾ ಗ್ರಾಮದ ನಾಲ್ಕು ವರ್ಷದ ಬಾಲಕಿಯ ಮಾದರಿಯಲ್ಲಿ ಚಂಡಿಪುರ ವೈರಸ್‌ ಪತ್ತೆಯಾಗಿದೆ. ಇದು ರಾಜ್ಯದಲ್ಲಿ ಚಂಡಿಪುರ ವೈರಸ್ ಸೋಂಕಿನಿಂದ ಸಂಭವಿಸಿದ ಮೊದಲ ಸಾವು,ʼ ಎಂದು ಸಬರ್ಕಾಂತ ಜಿಲ್ಲಾ ಆರೋಗ್ಯ ಅಧಿಕಾರಿ ರಾಜ್ ಸುತಾರಿಯಾ ಹೇಳಿದರು. ಎನ್‌ಐವಿಗೆ ಕಳುಹಿಸಿದ ಸಬರಕಾಂತ ಜಿಲ್ಲೆಯ ಮೂವರ ಮಾದರಿಗಳಲ್ಲಿ ವೈರಸ್‌ ಪತ್ತೆಯಾಗಿಲ್ಲ. ಅವರಲ್ಲಿ ಒಬ್ಬರು ಸಾವನ್ನಪ್ಪಿದ್ದು, ಇಬ್ಬರು ಗುಣಮುಖರಾಗಿದ್ದಾರೆ ಎಂದು ಹೇಳಿದರು. 

ಸಬರಕಾಂತ, ಅರಾವಳಿ, ಮಹಿಸಾಗರ್, ಖೇಡಾ, ಮೆಹ್ಸಾನಾ ಮತ್ತು ರಾಜ್‌ಕೋಟ್ ಜಿಲ್ಲೆಗಳಲ್ಲಿ ಶಂಕಿತ ಚಂಡಿಪುರ ವೈರಸ್ ಸೋಂಕು ಪ್ರಕರಣ ಗಳು ವರದಿಯಾಗಿವೆ ಎಂದು ಸಚಿವ ರುಶಿಕೇಶ್ ಪಟೇಲ್ ತಿಳಿಸಿದ್ದಾರೆ. ರಾಜಸ್ಥಾನದ ಇಬ್ಬರು ಮತ್ತು ಮಧ್ಯಪ್ರದೇಶದ ಒಬ್ಬ ರೋಗಿ‌ ಕೂಡ ರಾಜ್ಯದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಪೀಡಿತ ಪ್ರದೇಶಗಳ 26 ವಸತಿ ವಲಯಗಳ 44,000 ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ಹೇಳಿದರು. 

ಏನಿದು ಚಂಡಿಪುರ ವೈರಸ್?

ಚಂಡೀಪುರ ವೈರಸ್, ಫ್ಲೂ ಮತ್ತು ಮೆದುಳಿನ ಉರಿಯೂತ(ಎನ್ಸೆಫಾಲಿಟಿಸ್)ದ ರೋಗಲಕ್ಷಣದೊಂದಿಗೆ ಜ್ವರಕ್ಕೆ ಕಾರಣವಾಗುತ್ತದೆ. ಈ ವೈರಸ್‌ ರಾಬ್ಡೋವಿರಿಡೆ ಕುಟುಂಬಕ್ಕೆ ಸೇರಿದ ವೆಸಿಕ್ಯುಲೋ ವೈರಸ್. ಸೊಳ್ಳೆ, ಉಣ್ಣಿ ಮತ್ತು ಮರಳು ನೊಣ ಗಳಂತಹ ವಾಹಕಗಳಿಂದ ಹರಡುತ್ತದೆ. 

2003-2004ರಲ್ಲಿ ಮಧ್ಯ ಭಾರತದಲ್ಲಿ ಏಕಾಏಕಿ ಕಾಣಿಸಿಕೊಂಡು, ಆಂಧ್ರಪ್ರದೇಶ ಮತ್ತು ಗುಜರಾತಿನಲ್ಲಿ ಶೇ.56-75ರಷ್ಟು ರೋಗಪೀಡಿತರ ಸಾವಿಗೆ ಕಾರಣವಾಗಿತ್ತು. 1965 ರಲ್ಲಿ ಮೊದಲ ಪ್ರಕರಣ ಮಹಾರಾಷ್ಟ್ರದ ಚಂಡಿಪುರ ಗ್ರಾಮದಲ್ಲಿ ವರದಿಯಾಗಿದ್ದರಿಂದ, ವೈರಸ್ ಗೆ ಚಂಡಿಪುರ ಎಂಬ ಹೆಸರು ಬಂದಿದೆ.

ʻಚಂಡೀಪುರ ವೈರಸ್ ಹೊರಹೊಮ್ಮುತ್ತಿರುವ ರೋಗಕಾರಕ. ಮಕ್ಕಳಲ್ಲಿ ತೀವ್ರ ಮತ್ತು ಕೆಲವೊಮ್ಮೆ ಮಾರಣಾಂತಿಕ ಕಾಯಿಲೆಗೆ ಕಾರಣವಾಗುವುದರಿಂದ, ವೈದ್ಯ ಲೋಕದ ಗಮನ ಸೆಳೆದಿದೆ,ʼ ಎಂದು ಗುರುಗ್ರಾಮದ ಫೋರ್ಟಿಸ್ ಸ್ಮಾರಕ ಸಂಶೋಧನಾ ಸಂಸ್ಥೆಯ ಸಲಹೆಗಾರರಾದ ಡಾ. ನೇಹಾ ರಸ್ತೋಗಿ ಪಾಂಡಾ ಹೇಳಿದರು. 

ʻಹಠಾತ್ ತೀವ್ರ ಜ್ವರ, ಅತಿಸಾರ, ವಾಂತಿ, ಸಂವೇದನೆಯಲ್ಲಿ ಬದಲಾವಣೆ ಇದರ ರೋಗಲಕ್ಷಣಗಳು. ರೋಗಲಕ್ಷಣ ಕಾಣಿಸಿಕೊಂಡ 24 ರಿಂದ 72 ಗಂಟೆಗಳ ಒಳಗೆ ಸಾವಿಗೆ ಕಾರಣವಾಗಬಹುದು,ʼ ಎಂದು ಗುರುಗ್ರಾಮದ ಸಿ.ಕೆ. ಬಿರ್ಲಾ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಶ್ರೇಯಾ ದುಬೆ ಹೇಳಿದರು. 

ಲಸಿಕೆ ಲಭ್ಯವಿಲ್ಲ

ಪ್ರಸ್ತುತ ಚಂಡಿಪುರ ವೈರಸ್ ಸೋಂಕನ್ನು ತಡೆಗಟ್ಟಲು ಯಾವುದೇ ಲಸಿಕೆ ಇಲ್ಲ. ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯ ನರರೋಗ ತಜ್ಞ ಡಾ.ಸುಧೀರ್ ಕುಮಾರ್ ಅವರ ಪ್ರಕಾರ, ಚಂಡಿಪುರ ವೈರಸ್‌ನ ಮುಖ್ಯ ಗುರಿ ಮಕ್ಕಳು. ʻ 9 ತಿಂಗಳಿಂದ 14 ವರ್ಷ ವಯಸ್ಸಿನ ಮಕ್ಕಳು ಈ ಸೋಂಕಿಗೆ ಹೆಚ್ಚಾಗಿ ಗುರಿಯಾಗುತ್ತಾರೆ,ʼ ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಕೀಟನಾಶಕಗಳನ್ನು ಸಿಂಪಡಿಸಬೇಕು. ಪೂರ್ಣ ತೋಳಿನ, ಕಾಲುಗಳನ್ನು ಮುಚ್ಚುವ ವಸ್ತ್ರ ಧರಿಸುವುದು, ನಿದ್ರೆ ಮಾಡುವಾಗ ಸೊಳ್ಳೆ ಪರದೆ ಬಳಸುವುದಲ್ಲದೆ, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಅವರು ಸಲಹೆ ನೀಡಿದ್ದಾರೆ. 

ಸೋಂಕಿಗೆ ಚಿಕಿತ್ಸೆ ನೀಡಲು ನಿರ್ದಿಷ್ಟ ಆಂಟಿವೈರಲ್ ಔಷಧ ಇಲ್ಲ. ಐವಿ ದ್ರಾವಣ, ಸೆಳವು ವಿರೋಧ ಔಷಧಗಳು ಮತ್ತು ಜ್ವರ ನಿಯಂತ್ರಣ ಮಾಡಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಯಂತ್ರದ ನೆರವಿನ ಉಸಿರಾಟ ಅಗತ್ಯವಾಗ ಬಹುದು,ʼ ಎಂದು ಹೇಳಿದರು.


Tags:    

Similar News