ಕೇರಳ ಕರಾವಳಿಯಲ್ಲಿ ಅಪಾಯಕಾರಿ ವಸ್ತುಗಳನ್ನು ಹೊತ್ತ ಕಾರ್ಗೋ ಹಡಗು ಮುಳುಗಡೆ: ಹೈ ಅಲರ್ಟ್ ಘೋಷಣೆ
ಸಮುದ್ರಕ್ಕೆ ಬಿದ್ದ ಕೆಲವು ಕಂಟೇನರ್‌ಗಳು ಕರಾವಳಿಗೆ ತೇಲಿಬರುವ ಸಾಧ್ಯತೆ ಇರುವುದರಿಂದ, ಕರಾವಳಿ ರಕ್ಷಣಾ ದಳವು ನಾಗರಿಕರಿಗೆ ಎಚ್ಚರಿಕೆ ನೀಡಿದೆ.;
ಕೇರಳ ಕರಾವಳಿಯಲ್ಲಿ ಅರೇಬಿಯನ್ ಸಮುದ್ರದಲ್ಲಿ ಅಪಾಯಕಾರಿ ವಸ್ತುಗಳು ಮತ್ತು ಇಂಧನವನ್ನು ಹೊತ್ತುಕೊಂಡು ಸಾಗುತ್ತಿದ್ದ ಲಿಬೇರಿಯಾ ಮೂಲದ ಕಂಟೇನರ್ ಹಡಗೊಂದು ಶನಿವಾರ (ಮೇ 24) ಭಾಗಶಃ ಮುಳುಗಡೆಯಾಗಿದೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ನೀಡಿರುವ ಮಾಹಿತಿ ಪ್ರಕಾರ, ಈ ಘಟನೆಯು ಆತಂಕಕ್ಕೆ ಕಾರಣವಾಗಿದ್ದು, ಹಡಗಿನಿಂದ ಹಲವಾರು ಕಂಟೇನರ್‌ಗಳು ಸಮುದ್ರಕ್ಕೆ ಬಿದ್ದಿದ್ದು, ಅವುಗಳಲ್ಲಿ ಕೆಲವು ಅಪಾಯಕಾರಿ ವಸ್ತುಗಳನ್ನು ಹೊಂದಿರುವ ಸಾಧ್ಯತೆ ಇದೆ.
ಕೆಎಸ್‌ಡಿಎಂಎ ಪ್ರಕಾರ, ಮುಳುಗಡೆಯಾದ ಹಡಗಿನಿಂದ ಮೆರಿನ್ ಗ್ಯಾಸ್ ಆಯಿಲ್ (ಎಂಜಿಒ) ಮತ್ತು ವೆರಿ ಲೋ ಸಲ್ಫರ್ ಫ್ಯೂಯಲ್ ಆಯಿಲ್ (ವಿಎಲ್‌ಎಸ್‌ಎಫ್‌ಒ) ಸೋರಿಕೆಯಾಗಿದೆ. ಸಮುದ್ರಕ್ಕೆ ಬಿದ್ದ ಕೆಲವು ಕಂಟೇನರ್‌ಗಳು ಕರಾವಳಿಗೆ ತೇಲಿಬರುವ ಸಾಧ್ಯತೆ ಇರುವುದರಿಂದ, ಕರಾವಳಿ ರಕ್ಷಣಾ ದಳವು ನಾಗರಿಕರಿಗೆ ಎಚ್ಚರಿಕೆ ನೀಡಿದೆ. ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದರೆ, ಅವುಗಳನ್ನು ಮುಟ್ಟದಂತೆ ಮತ್ತು ತಕ್ಷಣವೇ ಪೊಲೀಸರಿಗೆ ಅಥವಾ ತುರ್ತು ಸಂಖ್ಯೆ 112 ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಕೆಎಸ್‌ಡಿಎಂಎ ಸದಸ್ಯ ಕಾರ್ಯದರ್ಶಿ ಶೇಖರ್ ಕುರಿಯಾಕೋಸ್ ಅವರ ಪ್ರಕಾರ, ಕರಾವಳಿಯ ಕೆಲವು ಪ್ರದೇಶಗಳಲ್ಲಿ ತೈಲ ಪದರಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ರಕ್ಷಣಾ ಕಾರ್ಯಾಚರಣೆ
ಸರಕಾರಿ ಅಧಿಕಾರಿಗಳ ಪ್ರಕಾರ, ಹಡಗಿನಲ್ಲಿದ್ದ 24 ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಮುಳುಗಡೆಯಾಗಿರುವ ಈ ಹಡಗು ಕೊಚ್ಚಿಯಿಂದ 74 ಕಿ.ಮೀ., ಆಲಪ್ಪುಝದಿಂದ 62 ಕಿ.ಮೀ. ಮತ್ತು ಕೊಲ್ಲಂನಿಂದ 104 ಕಿ.ಮೀ. ದೂರದಲ್ಲಿದೆ. ಎಂಎಸ್‌ಸಿ ಎಲ್ಸಾ 3 ಹೆಸರಿನ 184 ಮೀಟರ್ ಉದ್ದದ ಈ ಹಡಗು ಶುಕ್ರವಾರ ವಿಝಿಂಜಂ ಬಂದರಿನಿಂದ ಕೊಚ್ಚಿಗೆ ಹೊರಟಿತ್ತು. ಶನಿವಾರ ಮಧ್ಯಾಹ್ನ 1:25 ರ ಸುಮಾರಿಗೆ ಹಡಗಿನ ಕಂಪನಿಯು, 26 ಡಿಗ್ರಿ ವಾಲಿಕೊಂಡಿರುವುದಾಗಿ ಭಾರತೀಯ ಅಧಿಕಾರಿಗಳಿಗೆ ತಿಳಿಸಿ, ತುರ್ತು ಸಹಾಯ ಕೋರಿತ್ತು.
ಕರಾವಳಿ ರಕ್ಷಣಾ ದಳವು ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಹಡಗುಗಳು ಮತ್ತು ವಿಮಾನಗಳನ್ನು (ಡಾರ್ನಿಯರ್) ನಿಯೋಜಿಸಿದೆ. ಭಾರತೀಯ ಕರಾವಳಿ ರಕ್ಷಣಾ ದಳವು ಹೆಚ್ಚುವರಿ ಲೈಫ್ ರಾಫ್ಟ್‌ಗಳನ್ನು ಮುಳುಗಡೆಯಾದ ಹಡಗಿನ ಸಮೀಪ ಹಾಕಿದೆ. ಡಿಜಿ ಶಿಪ್ಪಿಂಗ್ ಸಂಸ್ಥೆಯ ಸಹಯೋಗದೊಂದಿಗೆ, ಹಡಗಿನ ವ್ಯವಸ್ಥಾಪಕರಿಗೆ ತುರ್ತು ರಕ್ಷಣಾ ಸೇವೆಗಳನ್ನು ಒದಗಿಸಲು ಸೂಚನೆ ನೀಡಲಾಗಿದೆ.