‘ಮೆದುಳು ತಿನ್ನುವ ಅಮೀಬಾ’ಕ್ಕೆ ಮೂರು ಮಕ್ಕಳು ಬಲಿ: ನೆಗ್ಲೇರಿಯಾ ಫೌಲೆರಿ ಎಂದರೆ ಏನು?

ಮಕ್ಕಳು 'ಮೆದುಳು ತಿನ್ನುವ ಅಮೀಬಾ' ಸೋಂಕಿಗೆ ಒಳಗಾಗದಂತೆ ರಕ್ಷಿಸಿಕೊಳ್ಳಲು ನೀರಿನಲ್ಲಿ ಆಟ- ಚಟುವಟಿಕೆಗಳನ್ನು ತಪ್ಪಿಸಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ.

Update: 2024-07-15 13:26 GMT

'ಮೆದುಳನ್ನು ತಿನ್ನುವ ಅಮೀಬಾ' ನೆಗ್ಲೇರಿಯಾ ಫೌಲೆರಿಯಿಂದ ಉಂಟಾದ ಸೋಂಕಿನಿಂದ ಕೇರಳದಲ್ಲಿ ಮೂವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.

ರಾಜ್ಯದಲ್ಲಿ ಮೇ ತಿಂಗಳಿನಿಂದ ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (ಪಿಎಎಂ) ನ ನಾಲ್ಕು ಪ್ರಕರಣಗಳು ವರದಿಯಾಗಿವೆ. ಇದೊಂದು ಸ್ವತಂತ್ರ, ಜೀವಂತ ಅಮೀಬಾದಿಂದ ಉಂಟಾಗುವ ಅಪರೂಪದ ಮೆದುಳಿನ ಸೋಂಕು. ಪೀಡಿತರೆಲ್ಲರೂ ಮಕ್ಕಳು. 

ಜುಲೈ ಆರಂಭದಲ್ಲಿ ಕೋಯಿಕ್ಕೋಡ್‌ನಲ್ಲಿ 14 ವರ್ಷದ ಬಾಲಕ, ಅದಕ್ಕೂ ಮೊದಲು ಮೇ 21ರಲ್ಲಿ ಮಲಪ್ಪುರಂನ ಐದು ವರ್ಷದ ಬಾಲಕಿ ಮತ್ತು ಜೂನ್‌ 25ರಂದು ಕಣ್ಣೂರಿನ 13 ವರ್ಷದ ಬಾಲಕಿ ಅಪರೂಪದ ಮೆದುಳಿನ ಸೋಂಕಿನಿಂದ ಸಾವನ್ನಪ್ಪಿದರು. 

2017, 2023ರಲ್ಲಿ ಅಲಪ್ಪುಳ ಜಿಲ್ಲೆಯಲ್ಲಿ ಈ ರೋಗ ವರದಿಯಾಗಿತ್ತು.

'ಮೆದುಳನ್ನು ತಿನ್ನುವ ಅಮೀಬಾ' ಎಂದರೇನು?:


ನೆಗ್ಲೇರಿಯಾ ಫೌಲೆರಿ ಅಮೀಬಾ ಬೆಚ್ಚಗಿನ ಸಿಹಿನೀರಿನ ಸರೋವರ, ನದಿ ಮತ್ತು ಬಿಸಿನೀರಿನ ಬುಗ್ಗೆಗಳಲ್ಲಿ ಬೆಳೆಯುತ್ತದೆ. ಮೆದುಳಿಗೆ ಸೋಂಕು ಮತ್ತು ಮೆದುಳಿನ ಅಂಗಾಂಶವನ್ನು ನಾಶಪಡಿಸುವುದರಿಂದ ಇದನ್ನು ಮೆದು ಳು ತಿನ್ನುವ ಅಮೀಬಾ ಎಂದು ಕರೆಯಲಾಗುತ್ತದೆ. ಅಮೆರಿಕದ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯಾದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ನೆಗ್ಲೇರಿಯಾ ಫೌಲೆರಿಯಿಂದ ಉಂಟಾಗುವ ಮಿದುಳಿನ ಸೋಂಕು ಬಹಳ ಅಪರೂಪ; ಆದರೆ, ಮಾರಣಾಂತಿಕ. 

ಸಿಡಿಸಿ ಪ್ರಕಾರ, ಅತಿ ಅಪರೂಪದ ಸಂದರ್ಭಗಳಲ್ಲಿ ಸರಿಯಾಗಿ ನಿರ್ವಹಿಸದ ಈಜುಕೊಳ ಸೇರಿದಂತೆ ಮನರಂಜನಾ ಸ್ಥಳಗಳಲ್ಲಿ ನೆಗ್ಲೇರಿಯಾ ಫೌಲೆರಿ ಕಂಡುಬಂದಿದೆ. ಕೊಳಾಯಿ ನೀರಿನಲ್ಲಿಯೂ ಪತ್ತೆಯಾಗಿದೆ. 

ಮೂಗಿನ ಮೂಲಕ ಸೋಂಕು: ಕಲುಷಿತ ನೀರಿನಲ್ಲಿ ಈಜುವ ಮಕ್ಕಳು ಅಮೀಬಾ ಸೋಂಕಿಗೆ ಒಳಗಾಗಬಹುದು. ಏಕೆಂದರೆ, ನೆಗ್ಲೇರಿಯಾ ಫೌಲೆರಿ ಮೂಗಿನ ಮೂಲಕ ಪ್ರವೇಶಿಸಿ, ಆನಂತರ ಮೆದುಳಿಗೆ ಪ್ರವೇಶಿಸುತ್ತದೆ. ಇದು ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (ಪಿ ಎಎಂ) ರೋಗ ಉಂಟುಮಾಡುತ್ತದೆ. ಮೆದುಳಿನ ಅಂಗಾಂಶವನ್ನು ನಾಶಪಡಿಸಿ, ಮೆದುಳಿನ ಊತ ಮತ್ತು ಸಾವಿಗೆ ಕಾರಣವಾಗುತ್ತದೆ. 

ವೈದ್ಯರ ಪ್ರಕಾರ, ಈ ಅಮೀಬಾ ಸೋಂಕು ಬೇಸಿಗೆ ತಿಂಗಳಿನಲ್ಲಿ ಸಂಭವಿಸುತ್ತದೆ. 

ಸಿಡಿಸಿ ಪ್ರಕಾರ, ಅಮೀಬಾ ಇರುವ ನೀರಿನ ಸೇವನೆಯಿಂದ ಮತ್ತು ಬೇರೆಯವರಿಂದ ಸೋಂಕು ಬರುವುದಿಲ್ಲ; ಇತರರಿಗೆ ರವಾನಿಸಲು ಸಾಧ್ಯವಿಲ್ಲ. ಅಲ್ಲದೆ, ನೆಗ್ಲೇರಿಯಾ ಫೌಲೆರಿ ಉಪ್ಪು ನೀರಿನಲ್ಲಿ ಕಂಡುಬರುವುದಿಲ್ಲ. 

ರೋಗಲಕ್ಷಣ ಮತ್ತು ಚಿಕಿತ್ಸೆ: ಸೋಂಕಿತರಲ್ಲಿ ಐದು ದಿನಗಳ ನಂತರ ತಲೆನೋವು, ಜ್ವರ, ವಾಕರಿಕೆ ಅಥವಾ ವಾಂತಿ ಮತ್ತಿತರ ರೋಗಲಕ್ಷಣ ಕಂಡುಬರುತ್ತದೆ. ಗಟ್ಟಿ ಕುತ್ತಿಗೆ, ಸಮತೋಲನ ಕಳೆದುಕೊಳ್ಳುವ ಸಾಧ್ಯತೆಯಿದೆ. ʻರೋಗಲಕ್ಷಣ ಆರಂಭವಾದ ಸುಮಾರು 5 ದಿನಗಳಲ್ಲಿ ಸಾವು ಸಂಭವಿಸಬಹುದು (ಈ ಅವಧಿ 1 ರಿಂದ 18 ದಿನ ಇರಬಹುದು)ಎಂದು ಸಿಡಿಸಿ ಹೇಳಿದೆ. 

ʻಪಿಎಎಂ ಇರುವ ಶೇ. 97ಕ್ಕಿಂತ ಹೆಚ್ಚು ಜನ ಸಾವನ್ನಪ್ಪುತ್ತಾರೆ. ಸೋಂಕು ಬಹಳ ಬೇಗ ವ್ಯಾಪಿಸುವುದರಿಂದ, ಚಿಕಿತ್ಸೆ ಕಷ್ಟಕರ. ಕೆಲವು ಔಷಧಗಳು ಪರಿಣಾಮಕಾರಿಯಾಗಬಹುದು. ಉತ್ತರ ಅಮೆರಿಕದಲ್ಲಿ ಆಂಫೊಟೆರಿಸಿನ್ ಬಿ(ಐವಿ ಮತ್ತು ಇಂಟ್ರಾಥೀಕಲ್), ರಿಫಾಂಪಿನ್, ಮೈಕೋನಜೋಲ್, ಫ್ಲುಕೋನಜೋಲ್, ಮಿಲ್ಟೆಫೋಸಿನ್, ಡೆಕ್ಸಮೆಥಾಸೊನ್, ಫೆನಿಟೋಯಿನ್, ಅಜಿಥ್ರೊಮೈಸಿನ್ ಪರಿಣಾಮಕಾರಿಯಾದ ಪ್ರಕರಣಗಳಿವೆʼ ಎಂದು ಹೇಳಿದೆ. 

ʻಬೆನ್ನುಮೂಳೆಯ ದ್ರವ(ಸಿಎಸ್‌ಎಫ್‌ ಪಿಸಿಆರ್‌)ದ ವಿಶ್ಲೇಷಣೆಯಿಂದ ರೋಗ ಖಚಿತಪಡಿಸಿಕೊಳ್ಳಬಹುದು,ʼ ಎಂದು ಕೇರಳದ ಪಾಲಕ್ಕಾಡ್‌ನ ಮೆಡಿಟ್ರಿನಾ ಆಸ್ಪತ್ರೆಯ ಸಲಹೆಗಾರರಾದ ಡಾ.ದೃಶ್ಯಾ ಪಿಳ್ಳೈ ಹೇಳಿದ್ದಾರೆ.

ಕರ್ನಾಟಕದಲ್ಲಿ 5 ತಿಂಗಳ ಮಗು ಸಾವು: ಮಂಗಳೂರಿನಲ್ಲಿ ಬಾವಿ ನೀರಿನಿಂದ ಸ್ನಾನ ಮಾಡಿದ ಐದು ತಿಂಗಳ ಹಸುಳೆ 'ಮೆದುಳು ತಿನ್ನುವ ಅಮೀಬಾ'ದಿಂದ ಸಾವನ್ನಪ್ಪಿದೆ ಎಂದು ಕಸ್ತೂರಬಾ ವೈದ್ಯಕೀಯ ವಿಭಾಗದ ಸೂಕ್ಷ್ಮ ಜೀವವಿಜ್ಞಾನ ವಿಭಾಗದ ವೈದ್ಯರ ಅಧ್ಯಯನ ಹೇಳಿದೆ. ಶಾಲಿನಿ ಶೆಣೈ, ಗಾಡ್ವಿನ್ ವಿಲ್ಸನ್, ಎಚ್.ವಿ.ಪ್ರಶಾಂತ್, ಕೆ.ವಿದ್ಯಾಲಕ್ಷ್ಮಿ, ಬಿ.ಧನಶ್ರೀ ಮತ್ತು ಆರ್. ಭರತ್ ಸಂಶೋಧನಾ ಪ್ರಬಂಧದ ಲೇಖಕರು(2001). 

ಸೋಂಕಿನಿಂದ ರಕ್ಷಣೆ ಹೇಗೆ?: ಈಜು ಮತ್ತಿತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಾಗ ಮೂಗು ಮುಚ್ಚಿಕೊಳ್ಳಬೇಕು, ಕ್ಲಿಪ್‌ ಬಳಕೆ ಅಥವಾ ತಲೆಯನ್ನು ನೀರಿನ ಮೇಲ್ಮಟ್ಟದಲ್ಲಿ ಇರಿಸಿಕೊಳ್ಳಬೇಕು. ಬಿಸಿನೀರಿನ ಬುಗ್ಗೆಗಳಿಗೆ ತಲೆ ಒಡ್ಡಬಾರದು. ನೀರಿನಲ್ಲಿ ಆಟವಾಡುವಾಗ ಕೆಸರು ಅಗೆಯುವುದನ್ನು ಅಥವಾ ಬೆರೆಸುವುದನ್ನು ತಪ್ಪಿಸಬೇಕು ಎಂದು ಸಿಡಿಸಿ ಹೇಳಿದೆ. 

Tags:    

Similar News