ಭಾರತದ ರಕ್ಷಣಾ ಸಾಮರ್ಥ್ಯಕ್ಕೆ ಬ್ರಹ್ಮೋಸ್ ಹೊಸ ಶಕ್ತಿ: 15 ದೇಶಗಳಿಂದ ಬೇಡಿಕೆ

ಬ್ರಹ್ಮೋಸ್ ಕ್ಷಿಪಣಿಗಳನ್ನು ಲಕ್ನೋದಿಂದಲೇ ರಫ್ತು ಮಾಡಲಾಗುವುದು. ಈ ಸೌಲಭ್ಯವು ನಮ್ಮ ದೇಶದ ರಕ್ಷಣಾ ವಲಯದಲ್ಲಿ ಸ್ವಾವಲಂಬನೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.;

Update: 2025-07-14 03:55 GMT

ಭಾರತದ ರಕ್ಷಣಾ ವಲಯದಲ್ಲಿ ಮಹತ್ವದ ಮೈಲಿಗಲ್ಲನ್ನು ಘೋಷಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆಪರೇಷನ್ ಸಿಂದೂರ್ ನಲ್ಲಿ ಬ್ರಹ್ಮೋಸ್ ಕ್ಷಿಪಣಿ ಅದ್ಭುತ ಪಾತ್ರ ವಹಿಸಿದೆ ಎಂದು ತಿಳಿಸಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯ ನಂತರ, ವಿಶ್ವದಾದ್ಯಂತ 14ರಿಂದ 15 ದೇಶಗಳು ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಖರೀದಿಸಲು ಆಸಕ್ತಿ ತೋರಿಸಿವೆ ಎಂದು ಅವರು ಬಹಿರಂಗಪಡಿಸಿದ್ದಾರೆ.

ಭಾನುವಾರ ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಮಾಜಿ ಉತ್ತರ ಪ್ರದೇಶ ಮುಖ್ಯಮಂತ್ರಿ ಚಂದ್ರಭಾನು ಗುಪ್ತರ ಪ್ರತಿಮೆ ಅನಾವರಣ ಮತ್ತು ಅವರ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಿದ ನಂತರ ರಾಜನಾಥ್ ಸಿಂಗ್ ಈ ಮಹತ್ವದ ಹೇಳಿಕೆ ನೀಡಿದರು.

"ಕೆಲವು ದಿನಗಳ ಹಿಂದಷ್ಟೇ ನಾನು ಲಕ್ನೋದಲ್ಲಿ ಬ್ರಹ್ಮೋಸ್ ಏರ್‌ಸ್ಪೇಸ್ ಇಂಟಗ್ರೇಶನ್ ಮತ್ತು ಟೆಸ್ಟಿಂಗ್ ಸೌಲಭ್ಯವನ್ನು ಉದ್ಘಾಟಿಸಿದ್ದೇನೆ. ಆಪರೇಷನ್ ಸಿಂದೂರ್‌ನಲ್ಲಿ ಬ್ರಹ್ಮೋಸ್ ಕ್ಷಿಪಣಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ ಎಂಬುದನ್ನು ನೀವು ಗಮನಿಸಿರಬಹುದು. ಇದರ ಬೆನ್ನಲ್ಲೇ, ಈ ಕ್ಷಿಪಣಿಯ ಅದ್ಭುತ ಪ್ರದರ್ಶನದಿಂದ ಪ್ರಭಾವಿತರಾಗಿ, ವಿಶ್ವದ 14ರಿಂದ15 ದೇಶಗಳು ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಪಡೆಯಲು ಉತ್ಸುಕವಾಗಿವೆ" ಎಂದು ರಾಜನಾಥ್ ಸಿಂಗ್ ಹೇಳಿದರು.

ಮುಂದುವರಿದು ಮಾತನಾಡಿದ ಅವರು, "ಇನ್ನು ಮುಂದೆ, ಬ್ರಹ್ಮೋಸ್ ಕ್ಷಿಪಣಿಗಳನ್ನು ಲಕ್ನೋದಿಂದಲೇ ರಫ್ತು ಮಾಡಲಾಗುವುದು. ಈ ಸೌಲಭ್ಯವು ನಮ್ಮ ದೇಶದ ರಕ್ಷಣಾ ವಲಯದಲ್ಲಿ ಸ್ವಾವಲಂಬನೆಯನ್ನು ಮತ್ತಷ್ಟು ಬಲಪಡಿಸುವುದಲ್ಲದೆ, ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೂ ಕಾರಣವಾಗಲಿದೆ. ಲಕ್ನೋದೊಂದಿಗೆ ಇಡೀ ರಾಜ್ಯದ ವೇಗದ ಅಭಿವೃದ್ಧಿಗಾಗಿ ಮತ್ತಷ್ಟು ರಕ್ಷಣಾ ಕೈಗಾರಿಕೆಗಳು ಇಲ್ಲಿಗೆ ಬರಬೇಕು ಎಂಬುದು ನನ್ನ ಪ್ರಯತ್ನ" ಎಂದು ಸಿಂಗ್ ತಿಳಿಸಿದರು.

Tags:    

Similar News