ಶಿಲ್ಪಾ ಶೆಟ್ಟಿ-ಕುಂದ್ರಾ ದಂಪತಿಯ ವಿದೇಶ ಪ್ರವಾಸದ ಆಸೆಗೆ ತಣ್ಣೀರೆರಚಿದ ಕೋರ್ಟ್
ಮುಂಬೈ ಪೊಲೀಸ್ ಆರ್ಥಿಕ ವಿಭಾಗದ ಅಧಿಕಾರಿಗಳು ಹೊರಡಿಸಿದ ಲುಕ್‌ಔಟ್ ನೋಟಿಸ್‌ಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದ್ದು, ಇದು ನಟಿ ಶಿಲ್ಪಾಶೆಟ್ಟಿ ಹಾಗೂ ಅವರ ಪತಿ ವಿದೇಶ ಪ್ರವಾಸ ಮಾಡದಂತೆ ಸೂಚಿಸಿದೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಉದ್ಯಮಿ ಪತಿ ರಾಜ್ ಕುಂದ್ರಾ ಅವರ ವಿದೇಶ ಪ್ರವಾಸದ ಕನಸಿಗೆ ಬಾಂಬೆ ಹೈಕೋರ್ಟ್ ತಡೆ ನೀಡಿದೆ. ಫುಕೇಟ್ ಮತ್ತು ಥೈಲ್ಯಾಂಡ್‌ಗೆ ಮೂರು ದಿನಗಳ ಪ್ರವಾಸಕ್ಕೆ ಅನುಮತಿ ಕೋರಿ ದಂಪತಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿದ್ದು, ರಾಜ್ ಕುಂದ್ರಾ ವಿರುದ್ಧ ಗಂಭೀರ ಪ್ರಕರಣಗಳು ಬಾಕಿ ಇರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.
ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ರಾಜ್ ಕುಂದ್ರಾ ವಿರುದ್ಧ ಹೊರಡಿಸಿದ್ದ ಲುಕ್‌ಔಟ್ ನೋಟಿಸ್‌ಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಇದರಿಂದಾಗಿ ದಂಪತಿ ಸದ್ಯಕ್ಕೆ ದೇಶ ಬಿಟ್ಟು ತೆರಳುವಂತಿಲ್ಲ. ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾ. ಗೌತಮ್ ಅಂಖಡ್ ಅವರಿದ್ದ ಪೀಠದ ಮುಂದೆ, "ನನ್ನ ಕಕ್ಷಿದಾರರು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದಾರೆ," ಎಂದು ಕುಂದ್ರಾ ಪರ ವಕೀಲರು ವಾದ ಮಂಡಿಸಿದರು. ಆದರೆ, ಸರ್ಕಾರಿ ವಕೀಲರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ, ಪ್ರಕರಣದ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಲಾಗಿದೆ.
ಏನಿದು ಪ್ರಕರಣ?
ಮುಚ್ಚಿಹೋಗಿದ್ದ ಕಂಪನಿಯೊಂದರಲ್ಲಿ 60 ಕೋಟಿ ರೂ. ಹೂಡಿಕೆ ಮಾಡುವಂತೆ ಪ್ರೇರೇಪಿಸಿ, ಆ ಹಣವನ್ನು ತಮ್ಮ ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ದೀಪಕ್ ಕೊಥಾರಿ ಎಂಬುವವರು ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಈಗಾಗಲೇ ಕುಂದ್ರಾ ವಿಚಾರಣೆಗೆ ಹಾಜರಾಗಿದ್ದಾರೆ. ಆದರೆ, ತಮ್ಮ ವಿದೇಶ ಪ್ರಯಾಣದ ಮೇಲಿನ ನಿರ್ಬಂಧವನ್ನು ಸಡಿಲಿಸುವಂತೆ ಕೋರಿ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. "ರಾಜ್ ಕುಂದ್ರಾ ಉದ್ಯಮಿಯಾಗಿರುವುದರಿಂದ ಮತ್ತು ಶಿಲ್ಪಾ ಶೆಟ್ಟಿ ನಟಿಯಾಗಿರುವುದರಿಂದ, ವೃತ್ತಿ ನಿಮಿತ್ತ ಆಗಾಗ ವಿದೇಶಕ್ಕೆ ತೆರಳಬೇಕಾಗುತ್ತದೆ. ಪ್ರಯಾಣ ನಿರ್ಬಂಧಿಸುವುದು ನಮ್ಮ ಮೂಲಭೂತ ಹಕ್ಕಿನ ಉಲ್ಲಂಘನೆ," ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಆದಾಗ್ಯೂ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಹೈಕೋರ್ಟ್, ಅವರ ಮನವಿಯನ್ನು ತಳ್ಳಿಹಾಕಿದೆ.