ಐಟಿ ಕಾಯಿದೆ ತಿದ್ದುಪಡಿ ಅಸಂವಿಧಾನಿಕ: ಬಾಂಬೆ ಹೈಕೋರ್ಟ್

ಐಟಿ ನಿಯಮಗಳ ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳಿಗೆ ಸಂಬಂಧಿಸಿದಂತೆ ಜನವರಿಯಲ್ಲಿ ವಿಭಾಗೀಯ ಪೀಠವು ವಿಭಜಿತ ತೀರ್ಪು ನೀಡಿತ್ತು. ಆನಂತರ, ನ್ಯಾಯಮೂರ್ತಿ ಎ.ಎಸ್. ಚಂದೂರ್ಕರ್ ಅವರನ್ನು 'ಟೈ ಬ್ರೇಕರ್ ಜಡ್ಜ್' ಎಂದು ನಿಯೋಜಿಸಲಾಯಿತು.

Update: 2024-09-20 13:15 GMT

‌ಸರ್ಕಾರದ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಮತ್ತು ಸುಳ್ಳು ಸುದ್ದಿಗಳನ್ನು ಗುರುತಿಸಲು ಮಾಹಿತಿ ತಂತ್ರಜ್ಞಾನ (ಐಟಿ)ಕಾಯಿದೆಗೆ ತಂದ ತಿದ್ದುಪಡಿಗಳನ್ನು ಅಸಂವಿಧಾನಿಕ ಎಂದಿರುವ ಬಾಂಬೆ ಹೈಕೋರ್ಟ್, ಶುಕ್ರವಾರ ರದ್ದುಗೊಳಿಸಿದೆ.

ಜನವರಿಯಲ್ಲಿ ವಿಭಾಗೀಯ ಪೀಠವು ಈ ಕುರಿತು ವಿಭಜಿತ ತೀರ್ಪು ನೀಡಿದ ನಂತರ, ನ್ಯಾ. ಎ.ಎಸ್. ಚಂದೂರ್ಕರ್ ಅವರನ್ನು 'ಟೈ ಬ್ರೇಕರ್ ಜಡ್ಜ್' ಎಂದು ನಿಯೋಜಿಸಲಾಯಿತು.

ʻತಿದ್ದುಪಡಿ ನಿಯಮಗಳು ಸಂವಿಧಾನದ ನಿಬಂಧನೆಗಳನ್ನು ಉಲ್ಲಂಘಿಸಿವೆ. ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು), 19 (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಮತ್ತು 19 (1) (ಜಿ) (ಸ್ವಾತಂತ್ರ್ಯ ಮತ್ತು ವೃತ್ತಿಯ ಹಕ್ಕು) ಉಲ್ಲಂಘನೆಯಾಗಿದೆ,ʼ ಎಂದು ನ್ಯಾ. ಚಂದೂರ್ಕರ್ ಹೇಳಿ ದ್ದಾರೆ.

ಅಸ್ಪಷ್ಟ ಅಭಿವ್ಯಕ್ತಿ: ʻನಕಲಿ, ಸುಳ್ಳು ಮತ್ತು ದಾರಿತಪ್ಪಿಸುವ ಅಭಿವ್ಯಕ್ತಿ ಕುರಿತ ವ್ಯಾಖ್ಯಾನಗಳು ಇಲ್ಲದೆ ಇರುವುದರಿಂದ ಅಸ್ಪಷ್ಟವಾಗಿವೆ ಮತ್ತು ಆದ್ದರಿಂದ ತಪ್ಪುʼ ಎಂದು ಹೇಳಿದರು.

ಈ ಮೂಲಕ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಮತ್ತು ಇತರರು ಸರ್ಕಾರದ ಫ್ಯಾಕ್ಟ್ ಚೆಕಿಂಗ್ ಯುನಿಟ್ (ಎಫ್‌ಸಿಯು) ಸ್ಥಾಪಿಸುವುದು ಸೇರಿದಂತೆ ಹೊಸ ನಿಯಮಗಳನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು ಹೈಕೋರ್ಟ್ ಅಂಗೀಕರಿಸಿತು.

ಕಳೆದ ಜನವರಿಯಲ್ಲಿ ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ನೀಲಾ ಗೋಖಲೆ ಅವರ ವಿಭಾಗೀಯ ಪೀಠವು ವಿಭಜಿತ ತೀರ್ಪು ನೀಡಿತ್ತು. ನ್ಯಾ. ಪಟೇಲ್ ಅವರು ನಿಯಮಗಳು ಸೆನ್ಸಾರ್‌ಶಿಪ್‌ಗೆ ಸಮಾನವಾಗಿವೆ ಎಂದು ರದ್ದುಗೊಳಿಸಿದರೆ, ನ್ಯಾ.ಗೋಖಲೆ ಅವರು ನಿಯಮಗಳು ವಾಕ್ ಸ್ವಾತಂತ್ರ್ಯದ ಮೇಲೆ ಯಾವುದೇ `ಗಂಭೀರ ಪರಿಣಾಮ' ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ತಾವು ನ್ಯಾ. ಪಟೇಲ್ (ಈಗ ನಿವೃತ್ತರಾಗಿದ್ದಾರೆ) ಅವರ ಅಭಿಪ್ರಾಯವನ್ನು ಒಪ್ಪುವುದಾಗಿ ನ್ಯಾ.ಚಂದೂರ್ಕರ್ ಹೇಳಿದ್ದಾರೆ.

ಐಟಿ ನಿಯಮಗಳಲ್ಲಿ ತಿದ್ದುಪಡಿ: ಏಪ್ರಿಲ್ 6, 2023 ರಂದು ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ) ನಿಯಮಗಳು 2021 ಗೆ ತಿದ್ದುಪಡಿಗಳನ್ನು ಪ್ರಕಟಿಸಿತು. ಇದರಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ನಕಲಿ, ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಆನ್‌ಲೈನ್ ವಿಷಯವನ್ನು ನಿರ್ಬಂಧಿಸಲು ಅವಕಾಶವಿದೆ.

ನಿರ್ಬಂಧಿತ ಪೋಸ್ಟ್‌ ಗಳನ್ನು ತೆಗೆದುಹಾಕುವ ಅಥವಾ ಅದರ ಮೇಲೆ ಹಕ್ಕು ನಿರಾಕರಣೆಯ ಆಯ್ಕೆಯನ್ನು ಸಾಮಾಜಿಕ ಮಾಧ್ಯಮದ ಮಧ್ಯವರ್ತಿ ಹೊಂದಿರುತ್ತಾನೆ. ಆತ ಎರಡನೆಯದನ್ನು ಆಯ್ಕೆ ಮಾಡಿಕೊಂಡರೆ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

Tags:    

Similar News