ಬಿಎಂಡಬ್ಲ್ಯು ಗುದ್ದೋಡು ಪ್ರಕರಣ: ಮಿಹಿರ್ ಶಾಗೆ 14 ದಿನಗಳ ನ್ಯಾಯಾಂಗ ಬಂಧನ

Update: 2024-07-16 11:53 GMT

ಮುಂಬೈ, ಜು.16- ಬಿಎಂಡಬ್ಲ್ಯು ಗುದ್ದೋಡು ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಶಾ ಅವರನ್ನು ಸ್ಥಳೀಯ ನ್ಯಾಯಾಲಯ ಮಂಗಳವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಮುಂಬೈನ ವರ್ಲಿ ಪ್ರದೇಶದಲ್ಲಿ ಬಿಎಂಡಬ್ಲ್ಯು ಕಾರನ್ನು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ, ಕಾವೇರಿ ನಖ್ವಾ (45) ಎಂಬ ಮಹಿಳೆಯ ಸಾವು ಹಾಗೂ ಆಕೆಯ ಪತಿ ಪ್ರದೀಪ್‌ ಅವರನ್ನು ಗಾಯಗೊಳಿಸಿದ ಎರಡು ದಿನಗಳ ನಂತರ ಶಾ(24) ಅವರನ್ನು ಜುಲೈ 9 ರಂದು ಬಂಧಿಸಲಾಗಿತ್ತು. 

ಮಂಗಳವಾರ ಅವರನ್ನು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಸೇವ್ರಿ ನ್ಯಾಯಾಲಯ) ಎಸ್‌.ಪಿ. ಭೋಸಲೆ ಅವರ ಎದುರು ಹಾಜರುಪಡಿಸಲಾಯಿತು. 

ಆರೋಪಿ ಪರಾರಿಯಾಗಿದ್ದಾಗ ತನಗೆ ಆಶ್ರಯ ನೀಡಿದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿಲ್ಲ ಎಂದ ಪೊಲೀಸರು, ಕಸ್ಟಡಿಯನ್ನು ವಿಸ್ತರಿಸುವಂತೆ ಕೋರಿದರು.

ʻನಂಬರ್ ಪ್ಲೇಟ್ ಕಾಣೆಯಾಗಿರುವ ಬಗ್ಗೆ ಅವರು ಇನ್ನೂ ಮಾಹಿತಿ ನೀಡಿಲ್ಲʼ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ರವೀಂದ್ರ ಪಾಟೀಲ್ ಮತ್ತು ಭಾರತಿ ಭೋಸ್ಲೆ ಅವರು ನ್ಯಾಯಾಲಯಕ್ಕೆ ಸಲ್ಲಿಸಿದರು. ʻತನಿಖೆ ನಡೆಯುತ್ತಿದ್ದು, ಅಪರಾಧದ ಗಂಭೀರತೆಯನ್ನು ಪರಿಗಣಿಸಿ ಕಸ್ಟಡಿಯನ್ನು ವಿಸ್ತರಿಸಬೇಕುʼ ಎಂದು ಪ್ರಾಸಿಕ್ಯೂಷನ್ ಹೇಳಿತು.

ಶಾ ಪರ ವಾದ ಮಂಡಿಸಿದ ವಕೀಲರಾದ ಆಯುಷ್ ಪಾಸ್ಬೋಲಾ ಮತ್ತು ಶುದಿರ್ ಭಾರದ್ವಾಜ್, ಆರೋಪಿಗಳಿಂದ ಅಗತ್ಯವಿರುವುದನ್ನೆಲ್ಲ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು 27 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿ ತಲೆಮರೆಸಿಕೊಂಡಿ ದ್ದಾಗ ಯಾರನ್ನು ಸಂಪರ್ಕಿಸಿದ್ದಾರೆಂದು ಕಂಡುಹಿಡಿಯಲು ತನಿಖಾಧಿಕಾರಿಗಳಿಗೆ ಸಾಕಷ್ಟು ಸಮಯ ನೀಡಲಾಗಿದೆ,ʼ ಎಂದು ಹೇಳಿದರು.

ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಲಯ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಹಿನ್ನೆಲೆ: ಅಪಘಾತದ ನಂತರ ಶಿವಸೇನೆ ನಾಯಕ ರಾಜೇಶ್ ಶಾ ಅವರ ಪುತ್ರ ಮಿಹಿರ್ ಪರಾರಿಯಾಗಿದ್ದರು. ರಾಜೇಶ್ ಶಾ ಜಾಮೀನು ಪಡೆದಿದ್ದಾರೆ. ಚಾಲಕ ರಾಜಋಷಿ ಬಿಡಾವತ್ ನ್ಯಾಯಾಂಗ ಬಂಧನದಲ್ಲಿದ್ದಾರೆ. 

Tags:    

Similar News