Election 2024| ಯುಪಿಯಲ್ಲಿ ಬಿಜೆಪಿಗೆ ಕೇವಲ ಒಂದು ಸ್ಥಾನದಲ್ಲಿ ಗೆಲುವು: ಅಖಿಲೇಶ್ ಯಾದವ್

Update: 2024-05-21 13:44 GMT

ಅಜಂಗಢ (ಯುಪಿ), ಮೇ 21- ʻಉತ್ತರ ಪ್ರದೇಶದಲ್ಲಿ ಇಂಡಿಯ ಒಕ್ಕೂಟಕ್ಕೆ ಭಾರಿ ಬೆಂಬಲ ಸಿಗುತ್ತಿದೆ. ವಾರಣಾಸಿ ಹೊರತುಪಡಿಸಿ ಎಲ್ಲಾ ಲೋಕಸಭೆ ಸ್ಥಾನಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ,ʼ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ಹೇಳಿದ್ದಾರೆ. 

ಎಸ್‌ಪಿಯ ಲಾಲ್‌ಗಂಜ್ ಅಭ್ಯರ್ಥಿ ದರೋಗಾ ಪ್ರಸಾದ್ ಸರೋಜ್ ಅವರನ್ನು ಬೆಂಬಲಿಸಿ ಮಾತನಾಡಿದ ಯಾದವ್, ʻಈ ಬಾರಿ ಬಿಜೆಪಿ ಯಾವುದೇ ಕಾರ್ಯತಂತ್ರ ಮಾಡಿದರೂ, ಉತ್ತರ ಪ್ರದೇಶದ ಜನರು ಸೋಲಿಸಲು ನಿರ್ಧರಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವಾದ ವಾರಣಾಸಿ ʻಕ್ಯೋಟೋʼ ಹೊರತುಪಡಿಸಿ, ಉಳಿದೆಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಲಿದೆ,ʼ ಎಂದು ಹೇಳಿದರು. ವಾರಣಾಸಿಯನ್ನು ಜಪಾನ್‌ನ ಕ್ಯೋಟೋ ನಗರದಂತೆ ಪ್ರವಾಸೋದ್ಯಮ ಕೇಂದ್ರವಾಗಿ ಮಾಡುವುದಾಗಿ ಪ್ರಧಾನಿ ಭರವಸೆ ನೀಡಿದ್ದರು. 

ಯಾದವ್ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಬೇಕಾಯಿತು. ʻಚುನಾವಣೆ ಪ್ರಾರಂಭವಾದಾಗ ಬಿಜೆಪಿ 400 ಪಾರ್‌ ಘೋಷಣೆ ಮಾಡಿತು. ಆದರೆ, ಈಗ ಜನರು 400 ಹಾರ್ ಘೋಷಣೆ ಹಾಕುತ್ತಿದ್ದಾರೆ. ದೇಶದ 140 ಕೋಟಿ ಜನರು ಬಿಜೆಪಿಗೆ 140 ಸ್ಥಾನವೂ ಬರದಂತೆ ನೋಡಿಕೊಳ್ಳಲಿದ್ದಾರೆ,ʼ ಎಂದರು. 

ʻನೀವು ಬಿಜೆಪಿ ನಾಯಕರ ಭಾಷಣ ಕೇಳಬೇಕು; ಅವರು ಅದೇ ಹಳೆ ಕಥೆ ಹೇಳುತ್ತಾರೆ. ಅದನ್ನು ಯಾರೂ ಕೇಳಲು ಬಯಸುವುದಿಲ್ಲ. ಜನರು ಮನಸ್ಸು ಮಾಡಿದ್ದು, ಪಿಡಿಎ (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ಸಮುದಾಯ ಎನ್‌ಡಿಎ ಯನ್ನು ಸೋಲಿಸುತ್ತದೆ,ʼ ಎಂದು ಹೇಳಿದರು. 

ʻಬಿಜೆಪಿ ನೀಡಿದ ಪ್ರತಿ ಭರವಸೆಯೂ ಸುಳ್ಳು.ಕೋವಿಡ್ ಲಸಿಕೆ ಜನರ ಜೀವಕ್ಕೆ ಅಪಾಯ ತಂದಿತು.ಬಿಜೆಪಿ ಲಸಿಕೆ ಕಂಪನಿಯಿಂದ ಹಣವನ್ನು ವಸೂಲಿ ಮಾಡಿತು,ʼ ಎಂದರು.

ಸೋಮವಾರ ಸಂತ ಕಬೀರ್ ನಗರದಲ್ಲಿ ಯಾದವ್‌ ಅವರ ಸಭೆಯಲ್ಲಿ ಜನಜಂಗುಳಿ ನೆರೆದಿತ್ತು. ಇದಕ್ಕೂ ಮೊದಲು, ಫುಲ್ಪುರ್‌ ನಲ್ಲಿ ನಡೆದ ಸಭೆಯಲ್ಲಿ ವೇದಿಕೆ ಬಳಿ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದ, ರಾಹುಲ್ ಗಾಂಧಿ ಮತ್ತು ಯಾದವ್‌ ಮಾತನಾಡದೆ ನಿರ್ಗಮಿಸಬೇಕಾಯಿತು.

ಮೇ 25ರಂದು ಆರನೇ ಹಂತದಲ್ಲಿ ಲಾಲ್‌ಗಂಜ್ ಮತ್ತು ಅಜಂಗಢ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

Tags:    

Similar News