ತರೂರ್ ಬಗ್ಗೆ ಕಾಂಗ್ರೆಸ್‌ಗೆ ಪಾಠ ಹೇಳುವ ಬಿಜೆಪಿಯಿಂದ ಭಯೋತ್ಪಾದನೆ ವಿರೋಧಿ ರಾಯಭಾರಿಗಳಾಗಿ ದ್ವೇಷ ಭಾಷಣಕಾರರ ಆಯ್ಕೆ

ವಿಶ್ವಾದ್ಯಂತ ಪ್ರವಾಸ ಕೈಗೊಳ್ಳಲಿರುವ ನಾಯಕರ ನಿಯೋಗ ಪಾಕಿಸ್ತಾನದ ​ ಕುಕೃತ್ಯವನ್ನು ಜಗತ್ತಿಗೆ ಹೇಳಲು ಹಾಗೂ ಭಾರತದ ಶಾಂತಿ- ಸಹನೆಯ ಬಾಳ್ವೆಯನ್ನು ಚಿತ್ರಿಸಲಿದೆ. ಇಂಥ ಸದುದ್ದೇಶದ ಯೋಜನೆಗೆ ವಿವಾದಾತ್ಮಕ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ಸೂಕ್ತವೇ ಎಂಬ ಪ್ರಶ್ನೆ ಮೂಡಿದೆ.;

Update: 2025-05-20 12:40 GMT

ಭಾರತದ ಭಯೋತ್ಪಾದನೆ ವಿರೋಧಿ ಸಂದೇಶವನ್ನು ಜಗತ್ತಿಗೆ ತಲುಪಿಸಲು ಕೇಂದ್ರ ಸರ್ಕಾರವು 58 ಸದಸ್ಯರ ತಂಡ ರಚಿಸಿದ್ದು, ಈ ತಂಡದಲ್ಲಿ ಕಾಂಗ್ರೆಸ್‌ನ ಶಶಿ ತರೂರ್ ಅವರನ್ನು ಸೇರಿಸಿಕೊಂಡಿರುವ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ವಾದ ನಡೆಯುತ್ತಿದೆ. ಆದರೆ, ಈ ತಂಡದಲ್ಲಿ ಬಿಜೆಪಿಯ ಕೆಲವು ವಿವಾದಾತ್ಮಕ ಆಯ್ಕೆಗಳಿವೆ ಎಂಬುದು ಚರ್ಚೆಯ ಮತ್ತೊಂದು ಮಜಲು. ಅನುರಾಗ್ ಠಾಕೂರ್, ನಿಶಿಕಾಂತ್ ದುಬೆ, ತೇಜಸ್ವಿ ಸೂರ್ಯ ಮತ್ತು ಎಂಜೆ ಅಕ್ಬರ್ ಈ ನೇತಾರರು.

ಈ ತಂಡದಲ್ಲಿರುವ ಬಿಜೆಪಿಯ ಕನಿಷ್ಠ ನಾಲ್ಕು ನಾಯಕರು ದೇಶದೊಳಗೆ ವಿವಾದಾತ್ಮಕ ಇತಿಹಾಸ ಹೊಂದಿದ್ದಾರೆ. ಅನುರಾಗ್ ಠಾಕೂರ್, ನಿಶಿಕಾಂತ್ ದುಬೆ ಮತ್ತು ತೇಜಸ್ವಿ ಸೂರ್ಯ ಅವರು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷಪೂರಿತ ಭಾಷಣಗಳನ್ನು ನಿರಂತರ ಮಾಡಿದವರು. ಅಲ್ಲದೆ, ಇತಿಹಾಸ ಪುಸ್ತಕಕ್ಕೆ ಕೈ ಹಾಕಿ ಮುಸ್ಲಿಮರನ್ನು ಲೂಟಿಕೋರರು ಎಂದು ಚಿತ್ರಿಸುವ ಪ್ರಯತ್ನಿಸಿದರು. ಇನ್ನು, ಎಂಜೆ ಅಕ್ಬರ್ ಅವರು 2018ರ ಮೀಟೂ ಅಭಿಯಾನದ ವೇಳೆ ಲೈಂಗಿಕ ಕಿರುಕುಳ ಆರೋಪದಲ್ಲಿ ಸಿಲುಕಿದ್ದವರು.

ಆಪರೇಷನ್ ಸಿಂಧೂರ್ ಬಳಿಕ, ಭಾರತದ ಏಕತೆ ಮತ್ತು ಭಯೋತ್ಪಾದನೆ ವಿರುದ್ಧದ ಸಂಕಲ್ಪವನ್ನು ಪ್ರದರ್ಶಿಸುವ ಉದ್ದೇಶದಿಂದ ಈ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ವಿಶ್ವಾದ್ಯಂತ ಪ್ರವಾಸ ಕೈಗೊಂಡು, ಪಾಕಿಸ್ತಾನದ ಕಟ್ಟರ್​ ಇಸ್ಲಾಮಿಕ್ ರಿಪಬ್ಲಿಕ್‌ ಮನಸ್ಥಿತಿಯನ್ನು ಜಗತ್ತಿಗೆ ಹೇಳುವ ಜತೆಗೆ ಭಾರತದ ಶಾಂತಿ, ಸಹನೆ ಹಾಗೂ ಸಹಬಾಳ್ವೆಯನ್ನು ಚಿತ್ರಿಸಲಿವೆ. ಇಂಥ ಸದುದ್ದೇಶದ ಯೋಜನೆಗೆ ವಿವಾದಾತ್ಮಕ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ಸೂಕ್ತವೇ ಎಂಬ ಪ್ರಶ್ನೆ ಇದೀಗ ಎದುರಾಗಿದೆ.

ಈ ನಾಯಕರು ಸೃಷ್ಟಿಸಿರುವ ವಿವಾದಗಳೇನು?

ಅನುರಾಗ್ ಠಾಕೂರ್

ಹಿಮಾಚಲ ಪ್ರದೇಶದ ಹಮೀರ್‌ಪುರ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ಸುಪ್ರಿಯಾ ಸುಳೆ ನೇತೃತ್ವದ ತಂಡದಲ್ಲಿ ಇದ್ದಾರೆ. ಈ ನಿಯೋಗ ಈಜಿಪ್ಟ್, ಕತಾರ್, ಇಥಿಯೋಪಿಯಾ ಮತ್ತು ದಕ್ಷಿಣ ಆಫ್ರಿಕಾಗೆ ಭೇಟಿ ನೀಡಲಿದೆ. 2020ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಗಳ ಸಮಯದಲ್ಲಿ, ಠಾಕೂರ್ ಅವರು ದೆಹಲಿಯ ಚುನಾವಣಾ ರ್ಯಾಲಿಯಲ್ಲಿ "ದೇಶ್ ಕೆ ಗದ್ದಾರೋಂ ಕೋ, ಗೋಲಿ ಮಾರೋ ಸಾಲೋಂ ಕೋ" (ದೇಶ ದ್ರೋಹಿಗಳ ಕಡೆಗೆ ಗುಂಡು ಹಾರಿಸಿ) ಎಂಬ ದ್ವೇಷಪೂರಿತ ಘೋಷಣೆಯನ್ನು ಕೂಗಿದ್ದರು. ಈ ಘಟನೆಯ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿತ್ತು. ಈ ಘೋಷಣೆಯ ನಂತರ ಸಿಎಎ ವಿರೋಧಿ ಪ್ರತಿಭಟನೆಯ ಸ್ಥಳದಲ್ಲಿ ಗುಂಡು ಹಾರಿಸಿದ ಘಟನೆಗಳೂ ವರದಿಯಾದವು. ದೆಹಲಿಯ ಶಾಹೀನ್ ಬಾಗ್‌ನಲ್ಲಿ ಒಬ್ಬ ವ್ಯಕ್ತಿ "ಹಿಂದೂ ರಾಷ್ಟ್ರ ಜಿಂದಾಬಾದ್" ಎಂದು ಕೂಗುತ್ತಾ ಎರಡು ಸುತ್ತು ಗುಂಡು ಹಾರಿಸಿದ್ದ.

ಈ ಘಟನೆಯ ಹಿನ್ನೆಲೆಯಲ್ಲಿ ಚುನಾವಣಾ ಯೋಗವು ಠಾಕೂರ್ ಅವರನ್ನು ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೈಬಿಡುವಂತೆ ಹೇಳಿತು. ಆದರೆ, ಠಾಕೂರ್ ಈ ಆರೋಪವನ್ನು ನಿರಾಕರಿಸಿ, ಮಾಧ್ಯಮಗಳನ್ನೇ "ಸುಳ್ಳುಗಾರರು" ಎಂದು ಕರೆದರು. ಇದು ಮಾಧ್ಯಮಗಳ ಸೃಷ್ಟಿ ಎಂದು ವಾದಿಸಿದರು. 2024ರ ಜುಲೈನಲ್ಲಿ ಬಜೆಟ್ ಚರ್ಚೆಯ ಸಂದರ್ಭದಲ್ಲೂ ರಾಹುಲ್ ಗಾಂಧಿ ಅವರ ಜಾತಿಯ ಬಗ್ಗೆ ಪ್ರಶ್ನಿಸಿ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದರು ಠಾಕೂರ್​.

ಎಂ ಜೆ ಅಕ್ಬರ್

ಪ್ರಖ್ಯಾತ ಪತ್ರಕರ್ತ, ಲೇಖಕ ಮತ್ತು ರಾಜಕಾರಣಿ ಎಂಜೆ ಅಕ್ಬರ್, 2018ರ ವೇಳೆಯಲ್ಲ ನಡೆದ ಮೀಟೂ ಚಳುವಳಿ ವೇಳೆ ಲೈಂಗಿಕ ಕಿರುಕುಳ ಆರೋಪದಲ್ಲಿ ಸಿಲುಕಿದ್ದರು. ಅಕ್ಬರ್​ ಅವರು, ರವಿ ಶಂಕರ್ ಪ್ರಸಾದ್ ನೇತೃತ್ವದ ತಂಡದಲ್ಲಿ ಇದ್ದು, ಯುಕೆ, ಫ್ರಾನ್ಸ್, ಜರ್ಮನಿ, ಇಟಲಿ, ಇಯು ಮತ್ತು ಡೆನ್ಮಾರ್ಕ್‌ಗೆ ಭೇಟಿ ನೀಡಲಿದ್ದಾರೆ. 2018ರ ಅಕ್ಟೋಬರ್‌ನಲ್ಲಿ, ಪತ್ರಕರ್ತೆ ಪ್ರಿಯಾ ರಮಾನಿ ಅವರು ಅಕ್ಬರ್ ಮೇಲೆ 1993ರಲ್ಲಿ ಮುಂಬೈನ ಒಬೆರಾಯ್ ಹೋಟೆಲ್‌ನಲ್ಲಿ ನಡೆದ ಸಂದರ್ಶನದ ಸಮಯದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿದ್ದರು. ಈ ಆರೋಪವನ್ನು 15ಕ್ಕೂ ಹೆಚ್ಚು ಮಹಿಳೆಯರು ಬೆಂಬಲಿಸಿದ್ದರು. ಈ ವಿವಾದದಿಂದಾಗಿ ಅಕ್ಬರ್ ಅವರು ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಅವರು ರುಮಾನಿ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆದರೆ, 2021ರಲ್ಲಿ ದೆಹಲಿ ನ್ಯಾಯಾಲಯವು ರಮಾನಿ ಅವರನ್ನು ಮಾನಹಾನಿ ಆರೋಪದಿಂದ ಮುಕ್ತಗೊಳಿಸಿತು.

ನಿಶಿಕಾಂತ್ ದುಬೆ

ಜಾರ್ಖಂಡ್‌ನ ಗೊಡ್ಡಾ ಕ್ಷೇತ್ರದ ಸಂಸದ ನಿಶಿಕಾಂತ್ ದುಬೆ, ವಿವಾದಾತ್ಮಕ ಹೇಳಿಕೆಗಳಿಂದಲೇ ಪ್ರಖ್ಯಾತಿ ಪಡೆದವರು. ಇತ್ತೀಚೆಗೆ ಅವರು ಸುಪ್ರೀಂ ಕೋರ್ಟ್ ಮತ್ತು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ವಿರುದ್ಧವೇ ಹೇಳಿಕೆಗಳನ್ನು ನೀಡಿದ್ದರು. ವಕ್ಫ್​ (ತಿದ್ದುಪಡಿ) ಕಾಯಿದೆಯನ್ನು ಪ್ರಶ್ನಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವುದಕ್ಕೆ "ಧಾರ್ಮಿಕ ಯುದ್ಧ ಆರಂಭ" ಮತ್ತು "ಸಿವಿಲ್ ದಂಗೆಗಳನ್ನು ಪ್ರಚೋದಿಸಲಾಗುತ್ತದೆ," ಎಂದು ಆರೋಪಿಸಿ ವಿವಾದಕ್ಕೀಡಾದರು. ಅಲ್ಲಿಗೇ ನಿಲ್ಲಿಸದ ಅವರು, "ಸುಪ್ರೀಂ ಕೋರ್ಟ್ ಕಾನೂನು ಮಾಡಲು ಶುರುವಿಟ್ಟರೆ, ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳನ್ನು ಬಾಗಿಲು ಹಾಕಬೇಕಾಗುತ್ತದೆ" ಎಂದೂ ಹೇಳಿಕೆ ನೀಡಿದ್ದರು. 2018ರಲ್ಲಿ ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಘೋಷಿಸಿದ್ದನ್ನು ಟೀಕಿಸಿ, ಎಲ್ಲಾ ಧರ್ಮಗಳು ಅದನ್ನು ಅಪರಾಧವೆಂದು ಪರಿಗಣಿಸುತ್ತವೆ ಕೋರ್ಟ್​ ಆದೇಶವನ್ನೇ ಪ್ರಶ್ನಿಸಿದ್ದರು.

ದುಬೆ ಅವರು ಮಾಜಿ ಚುನಾವಣಾ ಆಯುಕ್ತ ಎಸ್‌ವೈ ಖುರೇಷಿ ಅವರ ಕುರಿತು "ಮುಸ್ಲಿಂ ಆಯುಕ್ತ" ಎಂದು ಅಪಹಾಸ್ಯ ಮಾಡಿದ್ದರು. ಖುರೇಷಿ ಅವಧಿಯಲ್ಲಿ ಬಾಂಗ್ಲಾದೇಶದ ವಲಸಿಗರನ್ನು ಭಾರತೀಯ ಪೌರತ್ವಕ್ಕೆ ಸೇರಿಸಲಾಗಿದೆ ಎಂದು ಆರೋಪಿಸಿದ್ದರು.

ನಿಯೋಗಕ್ಕೆ ಆಯ್ಕೆಯಾದ ನಂತರ ನಿಶಿಕಾಂತ್ ದುಬೆಯ ನಿಲುವಿನಲ್ಲಿ ಬದಲಾವಣೆ ಆಗಿತ್ತು. ಆಯ್ಕೆ ಕುರಿತು ಸಾಮಾಜಿಕ ಜಾಲತಾಣವಾದ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿರುವ ಅವರು, "ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನಾನು ಕೃತಜ್ಞನಾಗಿದ್ದೇನೆ. ಪಾಕಿಸ್ತಾನದ ಕೃತ್ಯಗಳ ಬಗ್ಗೆ ಮತ್ತು ಭಾರತವು ಕಳೆದ 78 ವರ್ಷಗಳಿಂದ ಭಯೋತ್ಪಾದನೆಯ ವಿರುದ್ಧ ನಡೆಸುತ್ತಿರುವ ಹೋರಾಟದ ಕುರಿತು ಮಾತನಾಡಲು ಮುಸ್ಲಿಂ ರಾಷ್ಟ್ರಗಳಿಗೆ ತೆರಳಲು ಅವರು ನನ್ನನ್ನು ಆಯ್ಕೆ ಮಾಡಿದ್ದಾರೆ," ಎಂದು ಹೇಳಿದ್ದಾರೆ.

ಮುಂದುವರಿದ ಅವರು " ಓವೈಸಿ ಮತ್ತು ನಾನು ಒಟ್ಟಾಗಿ ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ಹಾಗೂ ಭಾರತದಲ್ಲಿ ಮುಸ್ಲಿಮರಿಗೆ ಲಭಿಸುತ್ತಿರುವ ಗೌರವ ಮತ್ತು ಕೀರ್ತಿಯ ಕುರಿತು ಮಾತನಾಡುವುದು ಪ್ರಜಾಪ್ರಭುತ್ವದ ಅತ್ಯಂತ ಸುಂದರ ಮುಖ ಅನಾವರಣಗೊಳಿಸುತ್ತದೆ," ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ತೇಜಸ್ವಿ ಸೂರ್ಯ

ಬಿಜೆಪಿಯ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಸಂಕ್ಷಿಪ್ತ ರಾಜಕೀಯ ಜೀವನದಲ್ಲಿ ತಮ್ಮ ವಾಕ್​ಚಾತುರ್ಯದ ಮೂಲಕ ವಿವಾದಾತ್ಮಕ ಭಾಷಣಗಳನ್ನು, ಹೇಳಿಕೆಗಳನ್ನು ನೀಡುವ ಮೂಲಕ ಹಲವಾರು ಸುದ್ದಿಗೆ ಗ್ರಾಸರಾದವರು

2024ರ ಮಾರ್ಚ್‌ನಲ್ಲಿ, ಬೆಂಗಳೂರಿನಲ್ಲಿ ಅಂಗಡಿಯೊಂದರ ಹಿಂದೂ ಸಮುದಾಯಕ್ಕೆ ಮಾಲೀಕನ ಮೇಲೆ ಕಿಡಿಗೇಡಿಗಳ ಗುಂಪೊಂದು ಹಲ್ಲೆ ನಡೆಸಿತ್ತು. ಬಳಿಕ ಅದು ಹನುಮಾನ್ ಚಾಲಿಸಾ ಇಟ್ಟಿದ್ದಕ್ಕೆ ದಾಳಿ ಎಂದು ಬದಲಾಯಿತು. ಈ ಘಟನೆಯನ್ನು ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, "ಕರ್ನಾಟಕದಲ್ಲಿ ಜಿಹಾದಿಗಳಿಂದ ಹಿಂದೂಗಳ ಮೇಲಿನ ದೌರ್ಜನ್ಯ ಹೆಚ್ಚಳ" ಎಂದು ಬರೆದಿದ್ದರು. ಸಮುದಾಯಗಳ ನಡುವೆ ದ್ವೇಷ ಪ್ರಚೋದಿಸಿದ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದ ಆರೋಪದಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಜೊತೆಗೆ, ಚುನಾವಣಾ ಆಯೋಗದಲ್ಲಿ ಭ್ರಷ್ಟಾಚಾರ, ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಸಮುದಾಯಗಳ ಸೌಹಾರ್ದತೆಗೆ ಭಂಗ ತರುವುದು ಮತ್ತು ಕಾನೂನುಬಾಹಿರ ಸಭೆ ಆರೋಪಗಳಲ್ಲಿ ದೂರು ದಾಖಲಾಗಿತ್ತು.

ಮುಂದುವರಿದ ತೇಜಸ್ವಿ ಸೂರ್ಯ, "ಇಂತಹ ಕಿಡಿಗೇಡಿಗಳು ಕಾಂಗ್ರೆಸ್‌ನ ತುಷ್ಟೀಕರಣ ರಾಜಕೀಯದ ಪರಿಣಾಮವಾಗಿ ಹುಟ್ಟಿದ್ದಾರೆ. ಕೆಲವೇ ದಿನಗಳ ಹಿಂದೆ ಪಾಕಿಸ್ತಾನ ಜಿಂದಾಬಾದ್' ಎಂದು ಕೂಗಿದವರಿಗೆ ಜಾಮೀನು ಸಿಕ್ಕಿದೆ. ಜಿಹಾದಿಗಳಿಗೆ ರಾಜಕೀಯ ಬೆಂಬಲ ಸಿಗುತ್ತಿರುವುದರಿಂದ. ಹಿಂದೂಗಳ ಮೇಲಿನ ಅಪರಾಧಗಳು ನಮ್ಮ ರಾಜ್ಯದಲ್ಲಿ ಹೆಚ್ಚಾಗಿವೆ ಎಂದು ಬರೆದಿದ್ದರು. ಆದರೆ, ಪೊಲೀಸರು, ಹಲ್ಲೆ ಪ್ರಕರಣಕ್ಕೆ ಧರ್ಮ ಕಾರಣವಲ್ಲ. ದೂರಿನಲ್ಲಿ ಹನುಮಾನ್ ಚಾಲೀಸಾದ ಉಲ್ಲೇಖವಿಲ್ಲ ಎಂದು ಸ್ಪಷ್ಟಪಡಿಸಿದ್ದರು.

2020ರ ವೇಳೆಗೆ 2015ರಲ್ಲಿ ತೇಜಸ್ವಿ ಸೂರ್ಯ ಮಾಡಿದ್ದ ಒಂದು ಎಕ್ಸ್ ಪೋಸ್ಟ್ ವೈರಲ್ ಆಗಿತ್ತು. ಈ ಪೋಸ್ಟ್‌ನಲ್ಲಿ ಅವರು, ಕೆನಡಾ-ಪಾಕಿಸ್ತಾನಿ ಪತ್ರಕರ್ತ ದಿವಂಗತ ತಾರೇಕ್ ಫತೇಹ್ ಅವರನ್ನು ಉಲ್ಲೇಖಿಸಿ, "95% ಅರಬ್ ಮಹಿಳೆಯರು ಕಳೆದ ಕೆಲವು ನೂರು ವರ್ಷಗಳಲ್ಲಿ ಸಂಭೋಗದ ಸುಖ ಅನುಭವಿಸಿಲ್ಲ! ಪ್ರತಿಯೊಬ್ಬ ತಾಯಿಯೂ ಸಂಭೋಗದ ಕ್ರಿಯೆಯಿಂದ ಮಕ್ಕಳನ್ನು ಉತ್ಪಾದಿಸಿದ್ದಾರೆ, ಪ್ರೀತಿಯಿಂದ ಅಲ್ಲ," ಎಂದು ಬರೆದಿದ್ದರು.

ದುಬೈ ಮೂಲದ ಉದ್ಯಮಿ ನೂರಾ ಅಲ್‌ಘುರೈರ್ ಈ ಪೋಸ್ಟ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡ ನಂತರ ಇದು ವೈರಲ್ ಆಗಿತ್ತು. ಈ ಪೋಸ್ಟ್‌ಗೆ ಅರಬ್ ರಾಷ್ಟ್ರೀಯರಿಂದ ತೀವ್ರ ಪ್ರತಿಕ್ರಿಯೆ ಬಂದವು. ಅನೇಕರು ತೇಜಸ್ವಿ ಸೂರ್ಯ ಎಂದಿಗೂ ಅರಬ್ ದೇಶಗಳಿಗೆ ಪ್ರಯಾಣಿಸಬಾರದು ಕರೆ ಕೊಟ್ಟರು. ಯುನೈಟೆಡ್ ಅರಬ್ ಎಮಿರೇಟ್ಸ್ ರಾಜ ಮನೆತನದ ಸದಸ್ಯ ಪ್ರಿನ್ಸೆಸ್ ಹೆಂಡ್ ಅಲ್ ಕಾಸಿಮಿ ಅವರು, "ಯುಎಇ ಕಾನೂನು, ದ್ವೇಷಪೂರಿತ ಭಾಷಣದ ವಿಷಯದಲ್ಲಿ ರಾಷ್ಟ್ರೀಯರು ಮತ್ತು ರಾಷ್ಟ್ರೀಯರಲ್ಲದವರಿಗೂ ಅನ್ವಯಿಸುತ್ತದೆ," ಎಂದು ಪೋಸ್ಟ್ ಮಾಡಿದ್ದರು.

ತೇಜಸ್ವಿ ಸೂರ್ಯ ಈ ಪೋಸ್ಟ್ ಅನ್ನು ಟೀಕೆಗೊಳಗಾದ ನಂತರ ಡಿಲೀಟ್ ಮಾಡಿದರೂ, ಆರ್ಕೈವ್ ಮಾಡಲಾದ ಕಾಮೆಂಟ್‌ಗಳು ಅವರು ಮೂಲತಃ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರೆಂದು ತೋರಿಸಿದವು.

2020ರ ಘಟನೆಯು ಸೂರ್ಯರ ಮೊದಲ ಸ್ತ್ರೀವಿರೋಧಿ ಹೇಳಿಕೆಯಾಗಿರಲಿಲ್ಲ. 2019ರ ಸಮಯದಲ್ಲಿ 2014ರಲ್ಲಿ ಅವರು ಮಾಡಿದ್ದ ಮತ್ತೊಂದು ಪೋಸ್ಟ್ ಸುದ್ದಿಗೆ ಬಂತು. ಆ ಪೋಸ್ಟ್‌ನಲ್ಲಿ ಅವರು ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಟೀಕಿಸಿದ್ದರು. "ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ವಾಸ್ತವವಾಗುವ ದಿನ ಭಯಾನಕ," ಎಂದು ಅವರು ಬರೆದಿದ್ದರು.

ತೇಜಸ್ವಿ ಸೂರ್ಯ ಈಗ ಶಶಿ ತರೂರ್ ನೇತೃತ್ವದ ತಂಡದ ಭಾಗವಾಗಿದ್ದು. ಯುಎಸ್, ಪನಾಮಾ, ಗಯಾನಾ, ಬ್ರೆಜಿಲ್ ಮತ್ತು ಕೊಲಂಬಿಯಾಗೆ ಭೇಟಿ ನೀಡಲಿದ್ದಾರೆ.   

Tags:    

Similar News