ಬಿಹಾರದ ಅರಾರಿಯಾ ಜಿಲ್ಲೆಯ ರಾಣಿಗಂಜ್ ಗ್ರಾಮದಲ್ಲಿ ಕಳೆದ ಮೂರು ದಿನದಲ್ಲಿ ನಿಗೂಢ ಜ್ವರದಿಂದ ಕನಿಷ್ಠ ಮೂರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ (ಸೆಪ್ಟೆಂಬರ್ 3) ತಿಳಿಸಿದ್ದಾರೆ.
ಸ್ಥಳೀಯವಾಗಿ ʻಚಮ್ಕಿ ಬುಖಾರ್ ʼ ಎಂದು ಕರೆಯಲ್ಪಡುವ ತೀವ್ರ ಎನ್ಸೆಫಾಲೈಟಿಸ್ ಸಿಂಡ್ರೋಮ್ (ಎಇಎಸ್) ಅಥವಾ ಮೆದುಳು ಜ್ವರದಿಂದ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಆದರೆ, ವೈದ್ಯಕೀಯ ತಜ್ಞರು ಸಾವಿನ ನಿಖರ ಕಾರಣ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಜಿಲ್ಲಾಡಳಿತ ಹೇಳಿದೆ.
ರೌನಕ್ ಕುಮಾರ್ (4), ಅಂಕುಶ್ ಕುಮಾರ್ (2 ತಿಂಗಳು) ಮತ್ತು ಗೌರಿ ಕುಮಾರ್ (7) ಮೃತ ಮಕ್ಕಳು. ರೌನಕ್ ಕುಮಾರ್ ಶನಿವಾರ, ಅಂಕುಶ್ ಕುಮಾರ್ ಭಾನುವಾರ ಮತ್ತು ಸೋಮವಾರದಂದು ಗೌರಿ ಕುಮಾರ್ ಸಾನಿಗೀಡಾಗಿದ್ದಾರೆ. ಜ್ವರದಿಂದ ಬಳಲುತ್ತಿರುವ ಮಕ್ಕಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಗ್ರಾಮಕ್ಕೆ ವೈದ್ಯರ ತಂಡ: ಅರಾರಿಯಾದ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಇನಾಯತ್ ಖಾನ್ ಮಾತನಾಡಿ, ʻರಾಣಿಗಂಜ್ ಗ್ರಾಮದಲ್ಲಿ 3 ಮಕ್ಕಳು ಸಾವಿಗೀಡಾಗಿದ್ದಾರೆ. ಸಾವಿಗೆ ಕಾರಣ ಕಂಡುಹಿಡಿಯಲು ವೈದ್ಯಕೀಯ ತಜ್ಞರ ತಂಡವನ್ನು ಗ್ರಾಮಕ್ಕೆ ಕಳುಹಿಸಲಾಗಿದೆ. ಅರಾರಿಯಾ ಜಿಲ್ಲಾ ಸಿವಿಲ್ ಸರ್ಜನ್ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಕುಟುಂಬ ಸದಸ್ಯರು ಈಗಾಗಲೇ ಮಕ್ಕಳ ಅಂತ್ಯಕ್ರಿಯೆ ಮಾಡಿದ್ದಾರೆ. ಸಾವಿಗೆ ನಿಖರ ಕಾರಣ ಗೊತ್ತಿಲ್ಲ,ʼ ಎಂದು ಹೇಳಿದರು.
ಗ್ರಾಮದ ಮೂರು ಮಕ್ಕಳು ನ್ಯುಮೋನಿಯಾ ರೋಗಲಕ್ಷಣದಿಂದ ಬಳಲುತ್ತಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗೆ ಚಂಡೀಪುರ ವೈರಸ್ ಗುಜರಾತ್ ರಾಜ್ಯವನ್ನುಹೈರಾಣು ಮಾಡಿತ್ತು.
'ಚಮ್ಕಿ ಬುಖಾರ್ ' ಎಂದರೇನು?: ಎನ್ಸೆಫಾಲೈಟಿಸ್ ನ್ನು ʻಚಮ್ಕಿ ಬುಖಾರ್ ʼ ಎಂದು ಕರೆಯುತ್ತಾರೆ. ತೀವ್ರ ಮಿದುಳಿನ ಸೋಂಕಾಗಿದ್ದು, ಗಂಭೀರ ತೊಡಕುಗಳಿಗೆ ಕಾರಣವಾಗಬಹುದು. ಸೊಳ್ಳೆಗಳು ಅಥವಾ ಉಣ್ಣಿಗಳ ಮೂಲಕ ಹರಡುವ ವೈರಸ್‌ಗಳು ಸೋಂಕು ಉಂಟು ಮಾಡು ತ್ತವೆ. ಬ್ಯಾಕ್ಟೀರಿಯಾ, ಶಿಲೀಂಧ್ರ ಅಥವಾ ಪರಾವಲಂಬಿಗಳಿಂದಲೂ ಸೋಂಕು ಬರಬಹುದು.
ಮಕ್ಕಳನ್ನು ಕೊಳಕು ಪರಿಸರದಿಂದ ದೂರವಿಡುವುದು, ಕೈ ತೊಳೆಯುವುದನ್ನು ಖಚಿತಪಡಿಸಿಕೊಳ್ಳುವುದು, ಶುದ್ಧ ಕುಡಿಯುವ ನೀರು ಒದಗಿಸುವುದು ಮತ್ತು ಬೇಸಿಗೆಯಲ್ಲಿ ಬಿಸಿಲು ತಪ್ಪಿಸಬೇಕು. ಮಕ್ಕಳು ಮಲಗುವ ಮುನ್ನ ಕತ್ತಲೆಯಾದ ಬಳಿಕ ಆಹಾರ ಸೇವಿಸಬೇಕು.