ಬಿಹಾರದಲ್ಲಿ ಸರಣಿ ಸೇತುವೆ ಕುಸಿತ; 15 ದಿನಗಳಲ್ಲಿ 10 ಕುಸಿತ ಪ್ರಕರಣ

Update: 2024-07-04 07:44 GMT

ಬಿಹಾರದ ಸರನ್‌ನಲ್ಲಿ ಗುರುವಾರ ಮತ್ತೊಂದು ಸೇತುವೆ ಕುಸಿದಿದ್ದು, ಹದಿನೈದು ದಿನಗಳಲ್ಲಿ 10 ಸೇತುವೆ ಕುಸಿತ ಪ್ರಕರಣಗಳು ನಡೆದಿವೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮನ್ ಸಮೀರ್ ಪ್ರಕಾರ, ಸರನ್‌ ನಲ್ಲಿ ಬುಧವಾರ ಎರಡು ಸೇತುವೆ ಕುಸಿದಿತ್ತು. 

15 ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆಯು ಗುರುವಾರ ಬೆಳಗ್ಗೆ ಕುಸಿದು ಬಿದ್ದಿತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅವರು ಹೇಳಿದರು.

ಗಂಡಕಿ ನದಿಯ ಮೇಲಿನ ಈ ಸೇತುವೆ ಬನೆಯಪುರ ಬ್ಲಾಕ್‌ನಲ್ಲಿದೆ. ಸರನ್‌ನ ಹಲವು ಹಳ್ಳಿಗಳನ್ನು ನೆರೆಯ ಸಿವಾನ್ ಜಿಲ್ಲೆಯೊಂದಿಗೆ ಸಂಪರ್ಕಿಸುತ್ತದೆ. 

'ಸೇತುವೆಯನ್ನು 15 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ಸೇತುವೆ ಕುಸಿತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.ಇತ್ತೀಚೆಗೆ ಹೂಳು ತೆಗೆಯುವ ಕೆಲಸ ಕೈಗೆತ್ತಿಕೊಳ್ಳಲಾಗಿತ್ತು ಎಂದು ಜಿಲ್ಲಾಧಿಕಾರಿ ತಿಳಿಸಿದರು. 

ಸರನ್ ಜಿಲ್ಲೆಯಲ್ಲಿ ಜಂತಾ ಬಜಾರ್ ಮತ್ತು ಲಹ್ಲಾದ್‌ಪುರ ಪ್ರದೇಶದ ಎರಡು ಸೇತುವೆಗಳು ಬುಧವಾರ ಕುಸಿದಿದ್ದವು. ಸಣ್ಣ ಸೇತುವೆಗಳ ಕುಸಿತಕ್ಕೆ ಕಾರಣ ಕಂಡುಹಿಡಿಯಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಡಿಎಂ ಹೇಳಿದರು. 

ಸ್ಥಳೀಯರ ಪ್ರಕಾರ, ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಭಾರಿ ಮಳೆ ಸೇತುವೆಗಳ ಕುಸಿತಕ್ಕೆ ಕಾರಣ. ಕಳೆದ 16 ದಿನಗಳಲ್ಲಿ ಸಿವಾನ್, ಸರನ್, ಮಧುಬನಿ, ಅರಾರಿಯಾ, ಪೂರ್ವ ಚಂಪಾರಣ್ ಮತ್ತು ಕಿಶನ್‌ಗಂಜ್ ಜಿಲ್ಲೆಗಳಲ್ಲಿ ಒಟ್ಟು 10 ಸೇತುವೆಗಳು ಕುಸಿದಿವೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದ ಎಲ್ಲಾ ಹಳೆಯ ಸೇತುವೆಗಳ ಸಮೀಕ್ಷೆ ನಡೆಸಲು ಮತ್ತು ದುರಸ್ತಿ ಅಗತ್ಯವಿರುವ ಸೇತುವೆಗಳನ್ನು ಗುರುತಿಸಲು ರಸ್ತೆ ನಿರ್ಮಾಣ ಮತ್ತು ಗ್ರಾಮೀಣ ಕಾಮಗಾರಿ ಇಲಾಖೆಗಳಿಗೆ ನಿರ್ದೇಶನ ನೀಡಿದ ಒಂದು ದಿನದ ನಂತರ ಇತ್ತೀಚಿನ ಘಟನೆ ನಡೆದಿದೆ.

ಮುಖ್ಯಮಂತ್ರಿ ನಿರ್ವಹಣೆ ನೀತಿಗಳ ಪರಾಮರ್ಶೆಗೆ ಬುಧವಾರ ಸಭೆ ನಡೆಸಿದ್ದು, ರಸ್ತೆ ನಿರ್ಮಾಣ ಇಲಾಖೆ ಈಗಾಗಲೇ ಸೇತುವೆ ನಿರ್ವಹಣೆ ನೀತಿಯನ್ನು ಸಿದ್ಧಪಡಿಸಿದೆ. ಗ್ರಾಮೀಣ ಕಾಮಗಾರಿ ಇಲಾಖೆ ಯೋಜನೆಯನ್ನು ಶೀಘ್ರವಾಗಿ ರೂಪಿಸಬೇಕು ಎಂದು ಹೇಳಿದರು.

Tags:    

Similar News