ಬಿಹಾರ: ದಲಿತರ 21 ಮನೆಗಳಿಗೆ ಬೆಂಕಿ, 15 ಮಂದಿ ಬಂಧನ
ಬಿಹಾರದ ನವಾಡ ಜಿಲ್ಲೆಯಲ್ಲಿ 21 ಮನೆಗಳಿಗೆ ಬೆಂಕಿ ಹಚ್ಚಿದ ಆರೋಪದ ಮೇಲೆ ಹದಿನೈದು ಜನರನ್ನು ಬಂಧಿಸಲಾಗಿದೆ. ದಲಿತರ ಮೇಲಿನ ದೌರ್ಜನ್ಯಕ್ಕಾಗಿ ಸರ್ಕಾರವನ್ನು ಪ್ರತಿಪಕ್ಷಗಳು ಟೀಕಿಸಿವೆ.;
ಬಿಹಾರದ ನವಾಡ ಜಿಲ್ಲೆಯಲ್ಲಿ ಇಪ್ಪತ್ತೊಂದು ಮನೆಗಳಿಗೆ ಬೆಂಕಿ ಹಚ್ಚಿದ ಆರೋಪದ ಮೇಲೆ 15 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಂಝಿ ತೋಲಾದಲ್ಲಿ ಬುಧವಾರ ಸಂಜೆ ನಡೆದ ಘಟನೆಗೆ ಜಮೀನು ವಿವಾದ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಸುಮಾರು 100 ಮಂದಿ ದುಷ್ಕರ್ಮಿಗಳು ದಲಿತರ ಬಡಾವಣೆಗೆ ನುಗ್ಗಿ, ಗುಂಡಿನ ದಾಳಿ ನಡೆಸಿದರು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ʻಮನೆಗಳಿಗೆ ಬೆಂಕಿ ಹಚ್ಚಿದ ಆರೋಪದ ಮೇಲೆ 15 ಜನರನ್ನು ಬಂಧಿಸಲಾಗಿದೆ. ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಲಾಗಿದ್ದು,ಶಂಕಿತರ ಹುಡುಕಾಟ ನಡೆಯುತ್ತಿದೆʼ ಎಂದು ನವಾಡ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಶುತೋಷ್ ಕುಮಾರ್ ವರ್ಮಾ ತಿಳಿಸಿದ್ದಾರೆ.
ʻಮಾಂಝಿ ತೋಲಾದಲ್ಲಿ ಸುಮಾರು 21 ಮನೆಗಳನ್ನು ಗುಂಪೊಂದು ಸುಟ್ಟುಹಾಕಿದೆ. ಹಾನಿಗೊಳಗಾದ ಮನೆಗಳ ನಿಖರವಾದ ಸಂಖ್ಯೆಯನ್ನು ಪೊಲೀಸರು ಹಾಗೂ ಅಧಿಕಾರಿಗಳು ನೀಡಲಿದ್ದಾರೆ. ನಿರಾಶ್ರಿತರಿಗೆ ಆಹಾರದ ಪೊಟ್ಟಣ, ಕುಡಿಯುವ ನೀರು ಸೇರಿದಂತೆ ಪರಿಹಾರ ಸಾಮಗ್ರಿಗಳನ್ನು ಒದಗಿಸುತ್ತಿದ್ದೇವೆ. ತಾತ್ಕಾಲಿಕ ಟೆಂಟ್‌ಗಳನ್ನು ರಚಿಸಲಾಗಿದೆ,ʼ ಎಂದು ಹೇಳಿದರು. ಜಾನುವಾರುಗಳು ಸುಟ್ಟು ಕರಕಲಾಗಿವೆ ಎಂಬ ಹೇಳಿಕೆಯನ್ನು ನಿರಾಕರಿಸಿದ ಡಿಎಂ, ʻಅದಕ್ಕೆ ಯಾವುದೇ ಪುರಾವೆ ಇಲ್ಲ,ʼ ಎಂದರು.
ʻರಾತ್ರಿ 7.30 ರ ಸುಮಾರಿಗೆ ಮಾಂಝಿ ಟೋಲಾದಲ್ಲಿ ಕೆಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಮಾಹಿತಿ ಬಂತು. ಪೊಲೀಸರು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸಿದರು. ಗ್ರಾಮಸ್ಥರ ಪ್ರಕಾರ, ಜನರ ಗುಂಪೊಂದು 7 ಗಂಟೆ ಸುಮಾರಿಗೆ ಮನೆಗಳಿಗೆ ಬೆಂಕಿ ಹಾಕಲು ಆರಂಭಿಸಿತು,ʼ ಎಂದು ಎಸ್ಪಿ ಅಭಿನವ್ ಧೀಮಾನ್ ಹೇಳಿದರು.
ಬೆಂಕಿ ಹಚ್ಚುವಾಗ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದ್ದು, ಹೆಚ್ಚುವರಿ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
ಗ್ರೇಟ್ ಜಂಗಲ್ ರಾಜ್: ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಟೀಕಿಸಿದ್ದಾರೆ. ʻಗ್ರೇಟ್ ಜಂಗಲ್ ರಾಜ್! ರಾಕ್ಷಸರ ಮಹಾ ನಿಯಮ! ನವಾಡದಲ್ಲಿ 100ಕ್ಕೂ ಹೆಚ್ಚು ದಲಿತರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಬಿಹಾರ ಹೊತ್ತಿ ಉರಿಯುತ್ತಿದೆ,ʼ ಎಂದು ಬರೆದಿದ್ದಾರೆ.
ದಲಿತರು-ವಂಚಿತರ ಅಸಡ್ಡೆ: ಕಾಂಗ್ರೆಸ್- ಇದು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ʻಜಂಗಲ್ ರಾಜ್ʼ ಗೆ ಮತ್ತೊಂದು ಪುರಾವೆ. ದಲಿತರು ಮತ್ತು ವಂಚಿತರ ಬಗ್ಗೆ ಆಡಳಿತದ ಅಸಡ್ಡೆಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ʻಪ್ರಧಾನಿ ಎಂದಿನಂತೆ ಮೌನವಾಗಿದ್ದಾರೆ. ನಿತೀಶ್ ಕುಮಾರ್ ಅಧಿಕಾರದ ದುರಾಸೆಯಲ್ಲಿ ನಿರಾತಂಕರಾಗಿದ್ದಾರೆ ಮತ್ತು ಎನ್‌ಡಿಎ ಮಿತ್ರ ಪಕ್ಷಗಳು ಮೌನವಾಗಿವೆ,ʼ ಎಂದು ಹೇಳಿದರು.
ʻಘಟನೆ ಭಯಾನಕ ಮತ್ತು ಖಂಡನೀಯ. ರೌಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ,ʼ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಕಠಿಣ ಕ್ರಮಕ್ಕೆ ಮಾಯಾವತಿ ಆಗ್ರಹ: ಬಿಹಾರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಸಂತ್ರಸ್ತರ ಪುನರ್ವಸತಿಗೆ ಸರ್ಕಾರ ಹಣಕಾಸಿನ ನೆರವು ನೀಡಬೇಕು ಎಂದು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಆಗ್ರಹಿಸಿದ್ದಾರೆ.