ಆರ್‌ಸಿಬಿಗೆ ಮೊದಲ ಐಪಿಎಲ್ ಪ್ರಶಸ್ತಿಯ ದಾರಿ ದುರ್ಗಮ
ಆರ್‌ಸಿಬಿಯ ಗೆಲುವಿನ ಕಥೆಯನ್ನು ದಂತಕತೆಯಾಗಿ ಬದಲಿಸಲು, ರಾಜಸ್ಥಾನ್ ರಾಯಲ್ಸ್ ವಿರುದ್ಧ ಬುಧವಾರದ ಎಲಿಮಿನೇಟರ್ ಪಂದ್ಯದೊಂದಿಗೆ ಪ್ರಾರಂಭವಾಗಿ, ಮೂರು ಪಂದ್ಯಗಳನ್ನು ಗೆಲ್ಲಬೇಕು.;
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಡವಾಗಿ ಪುನರುಜ್ಜೀವಗೊಂಡಿದ್ದು, ಪ್ಲೇಆಫ್ ಹಂತ ತಲುಪಿತು. ತಂಡ ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಎದುರು ನೋಡುತ್ತಿದ್ದು,ಅದು ಅಷ್ಟು ಸುಲಭದ ಕೆಲಸವಲ್ಲ.
ಐಪಿಎಲ್ 2024 ಮಾರ್ಚ್ 22 ರಂದು ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಪ್ರಾರಂಭವಾದಾಗ, ಆರ್‌ಸಿಬಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ಸೆಣಸಾಟ ನಡೆಸಿತು. ಆಗ ಪಾಲ್ಗೊಂಡಿದ್ದ ಹತ್ತು ಫ್ರಾಂಚೈಸಿಗಳ ಮೊದಲ ಆದ್ಯತೆ- ಅಗ್ರ ನಾಲ್ಕು ಸ್ಥಾನ ಪಡೆದು, ಪ್ಲೇಆಫ್‌ಗೆ ಅರ್ಹತೆ ಗಳಿಸುವುದು. ಫಾಫ್ ಡು ಪ್ಲೆಸಿಸ್ ತಂಡ ಮೊದಲ ಏಳು ಪಂದ್ಯಗಳಲ್ಲಿ ಏಕಾಂಗಿ ಗೆಲುವಿನೊಂದಿಗೆ, ಪಾಯಿಂಟ್‌ಗಳ ಪಟ್ಟಿಯಲ್ಲಿ ಕೆಳ ಹಂತದಲ್ಲಿತ್ತು. ಮುಂದಿನ ಪಂದ್ಯ ದಲ್ಲಿ ತಂಡ ಒಂದು ರನ್‌ನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಸೋಲಿಸಲ್ಪಟ್ಟು, ಪರಿಸ್ಥಿತಿ ಕಠೋರವಾಯಿತು.
ಪುನರಾವರ್ತಿತ ಪ್ರಚಾರ: ತಾವು ಸಮಗ್ರವಾಗಿ ವಿಫಲರಾದೆವು ಎಂಬ ಅರಿವುಂಟಾದರೆ, ಭಾರೀ ಸೋಲುಗಳನ್ನು ಜೀರ್ಣಿಸಿಕೊಳ್ಳುವುದು ಸುಲಭ ಎಂದು ಹೇಳುತ್ತಾರೆ. ಐಪಿಎಲ್ ನಲ್ಲಿ ತಂಡದ ಭವಿಷ್ಯ ಕರಾಳವಾಗಿರುವ ಸನ್ನಿವೇಶ ಇರುವಾಗ, ಅತ್ಯಂತ ಕಡಿಮೆ ಅಂತರದ ಸೋಲು ತಂಡದ ಉತ್ಸಾಹ ಮತ್ತು ಚೈತನ್ಯವನ್ನು ಮುರಿದು ಹಾಕುವ ಸಾಧ್ಯತೆ ಇರುತ್ತದೆ. ಎಂಟು ಪಂದ್ಯಗಳಲ್ಲಿ ಏಳರಲ್ಲಿ ಸೋಲು; ಆರ್‌ಸಿಬಿ ಭವಿಷ್ಯ ಅವರ ಕೈ ತಪ್ಪಿದ ಸನ್ನಿವೇಶ ಅದಾಗಿತ್ತು. ತಂಡ ಉಳಿದ ಆರು ಪಂದ್ಯಗಳನ್ನು ಗೆದ್ದಿದ್ದರೂ, ನಿವ್ವಳ ರನ್ ರೇಟ್‌ನಲ್ಲಿ ಪ್ಲೇಆಫ್‌ಗೆ ಅವಕಾಶ ಪಡೆಯಲು ಇನ್ನಿತರ ಫಲಿತಾಂಶಗಳ ಅಗತ್ಯ ಇದ್ದಿತ್ತು.
ಪವಾಡವೋ ಎನ್ನುವಂತೆ, ಇಂಥ ಸಾಧ್ಯತೆ ನಿಖರವಾಗಿ ಸಂಭವಿಸಿತು. ಕೆಕೆಆರ್ ನಿಂದಾದ ಹಿನ್ನಡೆಯನ್ನು ಪ್ಲೇಆಫ್‌ಗೆ ಚಿಮ್ಮುಹಲಗೆಯಾಗಿ ಬಳಸಿಕೊಂಡಿತು. ತಮ್ಮ ನಿರಾಶಾದಾಯಕ ಸೋಲಿನ ಸಮಯದಲ್ಲೂ ತಂಡ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಪರಿಸ್ಥಿತಿ ಫಲಿತಾಂಶಗಳು ಹೇಳುವಷ್ಟು ಕೆಟ್ಟದಾಗಿಲ್ಲ ಎಂದು ಆಟಗಾರರಿಗೆ ತಿಳಿದಿತ್ತು, ಆದರೆ, ಆ ಅರಿವು ಮಾತ್ರವಷ್ಟೇ ಸಾಕಾಗುವುದಿಲ್ಲ ಎನ್ನುವುದು ಅವರಿಗೆ ಗೊತ್ತಿತ್ತು. ತಮಗೆ ಬೇಕಿರುವುದು ಒಂದು ತಿರುವು ಮಾತ್ರ ಎಂದು, ಅಭಿಯಾನವನ್ನು ಪುನರುಜ್ಜೀವನಗೊಳಿಸಲು ಒಂದು ಗೆಲುವು ಸಾಕು ಎಂದು ಅವರು ನಂಬಿದ್ದರು.
ಅಸಾಧಾರಣ ಓಟ: ಆ ಗೆಲುವು ಅಸಂಭವವಾದ ರೀತಿ ಬಂದಿತು. ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಋತುವಿನ ಆರಂಭದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತವನ್ನು ಸಂಗ್ರಹಿ ಸಿತು: ಮೂರು ವಿಕೆಟ್‌ಗೆ 287. ಆಗ ಆರ್‌ಸಿಬಿ 262 ಗಳಿಸಿ ಪ್ರತ್ಯುತ್ತರ ನೀಡಿತು ಎಂಬುದನ್ನು ಕೆಲವರು ಮಾತ್ರ ಗಮನಿಸಿದ್ದರು. ಇದೊಂದು ಅಸಾಧಾರಣವಾದ ಚೇಸ್ ಆಗಿದ್ದು, ಆರ್ ಸಿಬಿ ಕೇವಲ 25 ರನ್ ನಿಂದ ಹಿಂದುಳಿಯಿತು. ಇಂಥ ಪ್ರದರ್ಶನಗಳೇ ಆರ್‌ಸಿಬಿ ತಂಡದಲ್ಲಿ ಜ್ವಾಲೆ ಉರಿಯುತ್ತಿರುವಂತೆ ನೋಡಿಕೊಂಡಿದ್ದವು. ತಂಡ ಸೋಲಿನಲ್ಲಿ ಬೆಳ್ಳಿ ಗೆರೆಗಳನ್ನು ಕಂಡುಕೊಂಡಿತು. ತಮ್ಮನ್ನು ತಾವೇ ಸೋಲಿಸುತ್ತಿದ್ದೇವೆಯೇ ಹೊರತು ಇತರ ತಂಡಗಳಲ್ಲ ಎಂಬುದು ಮನವರಿಕೆಯಾಯಿತು.
ಲೀಗ್ ಅಭಿಯಾನದ ಎರಡು ಭಾಗಗಳು ಸಂಪೂರ್ಣ ವ್ಯತಿರಿಕ್ತವಾಗಿದ್ದವು. ಮೊದಲಾರ್ಧದಲ್ಲಿ ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ಹೊರತುಪಡಿಸಿ, ಆರ್‌ಸಿಬಿ ಬ್ಯಾಟಿಂಗ್ ಕುದುರಲಿಲ್ಲ. ಬೌಲಿಂಗಿನಲ್ಲಿ ಮೊನಚಿನ ಕೊರತೆಯಿಂದಾಗಿ, ಬ್ಯಾಟ್ಸ್‌ಮನ್‌ಗಳು ಪ್ರತಿ ಇನ್ನಿಂಗ್ಸ್‌ನಲ್ಲಿ 200 ರನ್ ಗಳಿಸುವ ಒತ್ತಡದಲ್ಲಿದ್ದಾರೆ ಎಂದು ಸ್ವತಃ ಫಾಫ್ ಡು ಪ್ಲೆಸಿಸ್ ಒಪ್ಪಿಕೊಂಡರು. ಪ್ರಾಯಶಃ ಮೊಹಮ್ಮದ್ ಸಿರಾಜ್ ಮತ್ತು ಕಂಪನಿ ಬೂದಿಯಿಂದ ಫೀನಿಕ್ಸ್‌ನಂತೆ ಎದ್ದು ಬಂದು, ಪುನಶ್ಚೇತನಗೊಂಡು ಬ್ಯಾಟಿಂಗ್ ಲೈನ್ ಅಪ್‌ಗೆ ಪೂರಕವಾದ ನೆರವು ನೀಡಿತು. ಬ್ಯಾಟಿಂಗ್ ಕೊಹ್ಲಿಗೆ ಮಾತ್ರ ಸೀಮಿತವಾಗಿ ಉಳಿಯಲಿಲ್ಲ.
ಏಪ್ರಿಲ್ ಅಂತ್ಯದಲ್ಲಿ ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ ಉಪ್ಪಲ್‌ನಲ್ಲಿ ಗೆಲುವು ಕಂಡಿತು. ಇದು ಈ ಋತುವಿನ ಒಂಬತ್ತು ಪ್ರಯತ್ನಗಳಲ್ಲಿ ಎರಡನೆಯ ಗೆಲುವು.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು ಮಣಿಸಿದಾಗ, ಐದು ಸರಣಿ ವಿಜಯ ತಂಡದ ಪಾಲಾಯಿತು. ಶನಿವಾರ ರಾತ್ರಿ ನಡೆದ ಪಂದ್ಯವು ಹೆಚ್ಚು ಪ್ರಸಿದ್ಧವಾದ ಪೈಪೋಟಿಗಳಲ್ಲಿ ಒಂದು. ಕಳೆದ ವಾರಾಂತ್ಯದವರೆಗೆ ವಾಸ್ತವದಲ್ಲಿ ಪೈಪೋಟಿಯನ್ನೇ ನೀಡದ ತಂಡ ಪುಟಿದೆದ್ದಿತು. ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವಿನ 32 ಮುಖಾಮುಖಿಗಳಲ್ಲಿ 20ರಲ್ಲಿ ಸಿಎಸ್‌ಕೆ ಗೆದ್ದಿದೆ. ಆದರೆ, ಇತಿಹಾಸ ಇರುವುದು ಭೂತಕಾಲದಲ್ಲಿ, ಅಲ್ಲವೇ? ಅದನ್ನೇ ಡು ಪ್ಲೆಸಿಸ್ ಮತ್ತು ಅವರ ತಂಡ ನಂಬಿಕೊಂಡಿತ್ತು. ಉತ್ಸಾಹ, ಹಸಿವು ಮತ್ತು ಮಹತ್ವಾಕಾಂಕ್ಷೆಯ ಅಂತಿಮ ಕಾರ್ಯಾಚರಣೆ ಆರಂಭಿಸಿದರು; ಇದನ್ನು ನಿರೀಕ್ಷಿಸಿದ್ದಂತೆ ಕೊಹ್ಲಿ ಮುನ್ನಡೆಸಿದರು.
ಪರುಷಮಣಿ: ಡು ಪ್ಲೆಸಿಸ್ ತಂಡದ ನಾಯಕ ಆಗಿರಬಹುದು. ಆದರೆ, ಆರ್‌ಸಿಬಿಯ ಸ್ಪರ್ಶಮಣಿ ವಿರಾಟ್ ಕೊಹ್ಲಿ.ಕೊಹ್ಲಿ ಐಪಿಎಲ್ ತಂಡ ಅಥವಾ ರಾಷ್ಟ್ರೀಯ ತಂಡದಲ್ಲಿ ಯಾವುದೇ ಮುಂದಾಳು ಸ್ಥಾನ ಹೊಂದಿಲ್ಲ. ಆದರೆ, ಅವರು ವೀಕ್ಷಕರ ಅನುಭವದ ಒಂದು ಭಾಗವಾಗಿದ್ದಾರೆ: ವಿಶಿಷ್ಟ ಉತ್ಸಾಹದಿಂದ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು ಮತ್ತು ನಾಳೆಯೇ ಇಲ್ಲ ಎಂಬಂತೆ ಫೀಲ್ಡಿಂಗ್ ಮಾಡಿದರು. ಇಷ್ಟೆಲ್ಲದರ ನಂತರವೂ ಒಂದುವೇಳೆ ಆರ್‌ಸಿಬಿ ಗೆಲ್ಲದಿ ದ್ದರೆ, ನಾಳೆ ಎನ್ನುವುದು ಇರುವುದಿಲ್ಲ; ಕನಿಷ್ಠಪಕ್ಷ ಈ ಆವೃತ್ತಿಯಲ್ಲಿ.
ಕೊಹ್ಲಿಯ ಹೆಗಲ ಆಧರಿಸಿ,ಆರ್‌ಸಿಬಿ 218 ರನ್ ಗಳಿಸಿತು. ಆದರೆ, ನಿಯಮಗಳಿಂದಾಗಿ ಸ್ಕೋರ್ 200 ರನ್ ಗೆ ಕುಸಿಯಿತು; ನಾಲ್ಕನೇ ತಂಡವಾಗಿ ಪ್ಲೇಆಫ್‌ಗೆ ಪ್ರವೇಶಿಸಲು ಸಿಎಸ್‌ಕೆಯನ್ನು ನಿರ್ಬಂಧಿಸಬೇಕಿತ್ತು. ರವೀಂದ್ರ ಜಡೇಜಾ ಮತ್ತು ಮಹೇಂದ್ರ ಸಿಂಗ್ ಧೋನಿಯವರ ಕಡೆಯ ಹಂತದ ಆಟದ ನಡುವೆಯೂ ಜಯ ಒಲಿಯಿತು. ಸತತವಾಗಿ ಆರು ವಿಜಯ; ಎಲ್ಲ ಅಡೆತಡೆಗಳ ವಿರುದ್ಧ ಗಳಿಸಿದ ಗೆಲುವು. ಎಂದೆಂದೂ ಮರೆಯಲಾಗದ ಕಥೆ ಇದು!
ಮುಂದಿರುವ ಸವಾಲು: ಈ ಕತೆಯನ್ನು ದಂತ ಕತೆಯಾಗಿ ಪರಿವರ್ತಿಸಲು, ಅಹಮದಾಬಾದ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಬುಧವಾರದ ಎಲಿಮಿನೇಟರ್‌ನಿಂದ ಪ್ರಾರಂಭಿಸಿ, ಆರ್ಸಿಬಿ ಮೂರು ಪಂದ್ಯಗಳನ್ನು ಗೆಲ್ಲಬೇಕು. 2011 ರಲ್ಲಿ ಪ್ಲೇಆಫ್‌ಗಳನ್ನು ಪರಿಚಯಿಸಿದಾಗಿನಿಂದ, ಎಲಿಮಿನೇಟರ್‌ನಲ್ಲಿ ಆಡಿದ ತಂಡ ಒಮ್ಮೆ ಮಾತ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ; ಅದು ಸನ್‌ರೈಸರ್ಸ್ ಹೈದರಾಬಾದ್, 2016 ರಲ್ಲಿ.ಆರ್‌ಸಿಬಿ ಆರು ನಾಕೌಟ್ ಪಂದ್ಯಗಳನ್ನು ಆಡಿ ದೆ ಎಂದು ಹೇಳಬಹುದು. ಆದರೆ, ನಾಕ್ಔಟ್ ಪಂದ್ಯಗಳಲ್ಲಿ ಒತ್ತಡಗಳು ಬೇರೆಯೇ ಆಗಿರುತ್ತವೆ.
ಆದರೆ, ಆರ್‌ಆರ್ ಮೂರು ಬಾರಿ ಫೈನಲ್ ತಲುಪಿದೆ. ಆರ್‌ಸಿಬಿ ಪಂದ್ಯದಿಂದ ಪಂದ್ಯಕ್ಕೆ ಬಲ ಗಳಿಸುತ್ತ ಸಾಗಿದ್ದು, ಅದರ ಎಲಿಮಿನೇಟರ್ ಎದುರಾಳಿಗಳು ವಿರುದ್ಧ ದಿಕ್ಕಿನಲ್ಲಿ ಸಾಗಿದ್ದಾರೆ. ಸಂಜು ಸ್ಯಾಮ್ಸನ್ ತಂಡ ತನ್ನ ಕೊನೆಯ ಐದು ಪಂದ್ಯಗಳಲ್ಲಿ ಕೇವಲ ಒಂದು ಅಂಕ ಗಳಿಸಿದೆ ಮತ್ತು ಇಂಗ್ಲೆಂಡಿನ ವೈಟ್ ಬಾಲ್ ತಂಡದ ನಾಯಕ ಜೋಸ್ ಬಟ್ಲರ್ ಉಪಸ್ಥಿತಿಯಲ್ಲಿ ಆಡಬೇಕಿದೆ. ಆರ್‌ಸಿಬಿ ತಂಡದ ಆತ್ಮವಿಶ್ವಾಸ ಗಗನ ಮುಟ್ಟಿದೆ. ಆದರೆ, ಆರ್‌ಆರ್ ಒಂದು ತಿಂಗಳ ಹಿಂದೆ ತಮ್ಮ ಎದುರಾಳಿಗಳಿದ್ದ ಸ್ಥಾನದಲ್ಲಿದೆ. ಡು ಪ್ಲೆಸಿಸ್ ಅವರಂತೆ ಸ್ಯಾಮ್ಸನ್ ತಮ್ಮ ತಂಡವನ್ನು ಮುನ್ನುಗ್ಗಿ ನಡೆಸಬೇಕು ಮತ್ತು ಮೊದಲ ಒಂಬತ್ತು ಪಂದ್ಯಗಳಲ್ಲಿ ಎಂಟು ಗೆಲುವು ತಂದುಕೊಟ್ಟ ಉತ್ಸಾಹವನ್ನು ಮರುಗಳಿಸಲು ಪ್ರೇರೇಪಿಸಬೇಕು. ಅಂತಾರಾಷ್ಟ್ರೀಯ ತಾರೆಗಳಿಂದ ತುಂಬಿರುವ ಬೌಲಿಂಗ್ ದಾಳಿಯಲ್ಲಿ ಉತ್ಸಾಹ ತುಂಬಬೇಕಿದೆ. ಏಕೆಂದರೆ, ಬೇರೆಲ್ಲರಂತೆ ಸ್ಯಾಮ್ಸನ್ ಗೂ ಗೊತ್ತಿದೆ; ಒಂದು ಇಂಚು ಬಿಟ್ಟುಕೊಟ್ಟರೆ 2024 ರ ಆರ್ ಸಿಬಿ ತಂಡ ಒಂದು ಮೈಲಿ ಜಾಗ ತೆಗೆದುಕೊಳ್ಳುತ್ತದೆ ಎಂದು.