ಔಡಿ ಸರಣಿ ಡಿಕ್ಕಿ: ನಾಗ್ಪುರ ಬಾರ್‌ನ ಸಿಸಿಟಿವಿ ದೃಶ್ಯಾವಳಿ ನಾಪತ್ತೆ
ನಾಗಪುರದ ರಾಮದಾಸ್‌ಪೇಟೆಯಲ್ಲಿ ಸಂಕೇತ್ ಬಾವಂಕುಲೆ ಸ್ನೇಹಿತ ಅರ್ಜುನ್ ಹಾವ್ರೆ ಚಾಲನೆ ಮಾಡುತ್ತಿದ್ದಔಡಿ ಕಾರು, ಪೋಲೋ ಕಾರ್ ಸೇರಿದಂತೆ ಹಲವು ವಾಹನಗಳಿಗೆ ಸೋಮವಾರ ಮುಂಜಾನೆ ಡಿಕ್ಕಿ ಹೊಡೆದಿತ್ತು;
ನಾಗ್ಪುರ: ಮಹಾರಾಷ್ಟ್ರ ಬಿಜೆಪಿ ಮುಖಂಡ ಚಂದ್ರಶೇಖರ್ ಬಾವಂಕುಲೆ ಅವರ ಪುತ್ರ ಸಂಕೇತ್ ಮತ್ತು ಸ್ನೇಹಿತರು ಅಪಘಾತಕ್ಕೆ ಮುನ್ನ ಭೇಟಿ ನೀಡಿದ್ದ ಬಾರ್ ನ ಸಿಸಿ ಟಿವಿ ದೃಶ್ಯಾವಳಿಗಳು ನಾಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮದಾಸ್‌ಪೇಟೆಯಲ್ಲಿ ಸಂಕೇತ್ ಸ್ನೇಹಿತ ಅರ್ಜುನ್ ಹಾವ್ರೆ ಚಾಲನೆ ಮಾಡುತ್ತಿದ್ದಔಡಿ ಕಾರು, ಸೋಮವಾರ ಮುಂಜಾನೆ ಪೋಲೋ ಕಾರ್ ಸೇರಿದಂತೆ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿತ್ತು.ಮೊಪೆಡ್‌ನಲ್ಲಿದ್ದ ಇಬ್ಬರು ಗಾಯಗೊಂಡಿದ್ದರು. ಪೋಲೋ ಕಾರಿನಲ್ಲಿ ಔಡಿಯನ್ನು ಹಿಂಬಾಲಿಸಿ, ಮಂಕಾಪುರದ ಟಿ. ಪಾಯಿಂಟ್‌ನಲ್ಲಿ ಹಾವ್ರೆ ಮತ್ತು ಒಬ್ಬ ರೋನಿತ್ ಚಿತ್ತವಾಮ್ವಾರ್ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿತ್ತು. ಸೋಮವಾರ ರಾತ್ರಿ ಹಾವ್ರೆಯನ್ನು ಬಂಧಿಸಿ, ಆನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ʻಅಪಘಾತಕ್ಕೆ ಮುನ್ನ ಲಾ ಹೋರಿ ಬಾರ್‌ನಲ್ಲಿ ಇದ್ದಾಗಿನ ಸಿಸಿಟಿವಿ ದೃಶ್ಯಾವಳಿಗಳು ಕಾಣೆಯಾಗಿವೆ. ಬುಧವಾರ ಡಿವಿಆರ್ ನ್ನು ವಶಪಡಿಸಿಕೊಂಡಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ,ʼ ಎಂದು ಸೀತಾಬುಲ್ಡಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ʻಲಾ ಹೋರಿ ಬಾರಿನ ಮ್ಯಾನೇಜರ್ ಸಿಸಿಟಿವಿ ದೃಶ್ಯಾವಳಿ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ತನಿಖಾ ತಂಡಕ್ಕೆ ಹಸ್ತಾಂತರಿಸಲು ನಿರಾಕರಿಸಿದ್ದರು.ಕಾನೂನು ಕ್ರಮದ ಬೆದರಿಕೆ ನಂತರ ಡಿವಿಆರ್ ನೀಡಿದೆ. ಆದರೆ, ಭಾನುವಾರ ರಾತ್ರಿಯಿಂದ ಯಾವುದೇ ದೃಶ್ಯಾವಳಿಗಳಿಲ್ಲ,ʼ ಎಂದು ಅವರು ಹೇಳಿದರು.
ಸಂಕೇತ್ ಕಾರಿನಲ್ಲಿದ್ದರೂ, ಅಪಘಾತದ ಸಮಯದಲ್ಲಿ ಚಾಲನೆ ಮಾಡುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.