ಕಡಪ (ಆಂಧ್ರಪ್ರದೇಶ), ಎ.5- ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಅವರು ಬದ್ವೇಲ್ ಕ್ಷೇತ್ರದ ಅಮಗಂಪಲ್ಲಿ ಯಿಂದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಶುಕ್ರವಾರ ಪ್ರಚಾರ ಆರಂಭಿಸಿದರು.
ʻವೈ.ಎಸ್. ರಾಜಶೇಖರ ರೆಡ್ಡಿ ಅವರು ಕಾಂಗ್ರೆಸ್ಸಿಗ ಮತ್ತು ಮುಖ್ಯಮಂತ್ರಿಯಾಗಿ ಅನೇಕ ಅದ್ಭುತಗಳನ್ನು ಮಾಡಿದರು. ಈಗ ಜಗನ್ ಮುಖ್ಯಮಂತ್ರಿಯಾಗಿದ್ದಾರೆ ಮತ್ತು ಅವರು ರಾಜ್ಯವನ್ನು ಬಿಜೆಪಿಗೆ ಒತ್ತೆ ಇಟ್ಟಿದ್ದಾರೆ,ʼ ಎಂದು ಶರ್ಮಿಳಾ ಅಮಗಂಪಲ್ಲಿಯ ಸಾರ್ವಜನಿಕ ಸಭೆಯಲ್ಲಿ ಹೇಳಿದರು.
ʻರಾಜ್ಯಕ್ಕೆ ವಿಶೇಷ ಸ್ಥಾನಮಾನ ಅಥವಾ ಕಡಪ ಉಕ್ಕು ಸ್ಥಾವರ ಸೇರಿದಂತೆ ಒಂದೇ ಒಂದು ಭರವಸೆಯನ್ನು ಅವರು ಈಡೇರಿಸಿಲ್ಲ.ತಾವು ಕಡಪ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಜಗನ್ ಕಾರಣ. ವೈ.ಎಸ್. ವಿವೇಕಾನಂದ ರೆಡ್ಡಿ ಅವರನ್ನು ಹತ್ಯೆಗೈದವರಿಗೆ ಕ್ಷೇತ್ರದ ಸೀಟು ಹಂಚಿಕೆ ಮಾಡಲಾಗಿದೆʼ ಎಂದು ದೂರಿದರು.
ರಾಜಶೇಖರ್ ರೆಡ್ಡಿ ಅವರ ಕಿರಿಯ ಸೋದರ, ವಿವೇಕಾನಂದ ರೆಡ್ಡಿ ಕಡಪ ಸಂಸದರಾಗಿದ್ದರು. ರಾಜಶೇಖರ್ ರೆಡ್ಡಿ ಅವರನ್ನು ಮಾರ್ಚ್ 15, 2019 ರಂದು ಚುನಾವಣೆಗೆ ಮುನ್ನ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣ ಈವರೆಗೆ ಇತ್ಯರ್ಥವಾಗಿಲ್ಲ. ʻಕೊಲೆಗಾರರನ್ನು ರಕ್ಷಿಸಲಾಗುತ್ತಿದೆ. ಇದು ಶೋಚನೀಯ, ದುರದೃಷ್ಟಕರ ಮತ್ತು ಅನ್ಯಾಯ. ಕೊಲೆಗಾರರು ಶಾಸಕಾಂಗ ಸಂಸ್ಥೆಗಳಿಗೆ ಪ್ರವೇಶಿಸಬಾರದುʼ ಎಂದು ಶರ್ಮಿಳಾ ಹೇಳಿದರು.
ವಿವೇಕಾನಂದ ರೆಡ್ಡಿ ಅವರ ಪುತ್ರಿ ಸುನಿತಾ ನರ್ರೆಡ್ಡಿ ಮಾತನಾಡಿ, ʻವಿವೇಕಾನಂದ ರೆಡ್ಡಿಅವರನ್ನುಕೊಂದವರು ಮತ್ತು ಶರ್ಮಿಳಾ ನಡುವೆ ಸ್ಪರ್ಧೆ ನಡೆಯುತ್ತಿದೆ. ಶರ್ಮಿಳಾ ಸಂಸದೆ ಆಗಬೇಕೆಂಬುದು ತಂದೆಯ ಕೊನೆಯ ಆಸೆಯಾಗಿತ್ತು. ಅವರ ಕೊನೆಯ ಆಸೆ ಈಡೇರಬೇಕು. ವೈ.ಎಸ್. ಅವಿನಾಶ್ ರೆಡ್ಡಿ ಅವರನ್ನು ಸೋಲಿಸಬೇಕುʼ ಎಂದು ಹೇಳಿದರು.
ಏತನ್ಮಧ್ಯೆ, ಇತ್ತೀಚೆಗೆ ಆಡಳಿತಾರೂಢ ವೈಎಸ್‌ಆರ್‌ಸಿಪಿ ತೊರೆದಿದ್ದ ಕೇಂದ್ರ ಮಾಜಿ ಸಚಿವ ಕೆ. ಕೃಪಾರಾಣಿ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.