ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ದೇಶದ ಹಲವೆಡೆ ಭುಗಿಲೆದ್ದ ಪ್ರತಿಭಟನೆ
ಬಿಲ್ ಲೋಕಸಭೆಯಲ್ಲಿ ಏಪ್ರಿಲ್ 3ರ ಮುಂಜಾನೆ ಮತ್ತು ರಾಜ್ಯಸಭೆಯಲ್ಲಿ 13 ಗಂಟೆಗಳ ಚರ್ಚೆಯ ನಂತರ ಏಪ್ರಿಲ್ 4ರ ಮುಂಜಾನೆ ಅಂಗೀಕಾರಗೊಂಡಿತ್ತು.;

ಭಾರತದಾದ್ಯಂತ ಲಕ್ಷಾಂತರ ಮುಸ್ಲಿಮರು ಶುಕ್ರವಾರ (ಏಪ್ರಿಲ್ 4, 2025) ತಮ್ಮ ಸಾಪ್ತಾಹಿಕ ಪ್ರಾರ್ಥನೆಯ ಬಳಿಕ ವಕ್ಫ್ ತಿದ್ದುಪಡಿ ಕಾಯಿದೆ ವಿರೋಧಿಸಿ ಪ್ರತಿಭಟನೆ ನಡೆಸಿದರು. ಪ್ರಮುಖವಾಗಿ ಕೋಲ್ಕತ್ತಾ, ಚೆನ್ನೈ, ಅಹಮದಾಬಾದ್ ಮತ್ತಿತರ ನಗರಗಳಲ್ಲಿ ಪ್ರತಿಭಟನೆಗಳು ನಡೆದವು.
ಬಿಲ್ ಲೋಕಸಭೆಯಲ್ಲಿ ಏಪ್ರಿಲ್ 3ರ ಮುಂಜಾನೆ ಮತ್ತು ರಾಜ್ಯಸಭೆಯಲ್ಲಿ 13 ಗಂಟೆಗಳ ಚರ್ಚೆಯ ನಂತರ ಏಪ್ರಿಲ್ 4ರ ಮುಂಜಾನೆ ಅಂಗೀಕಾರಗೊಂಡಿತ್ತು.
ಕೋಲ್ಕತ್ತಾದಲ್ಲಿ ಪ್ರತಿಭಟನೆ
ಕೋಲ್ಕತ್ತಾದ ವಿವಿಧ ಸ್ಥಳಗಳಲ್ಲಿ ದೊಡ್ಡ ಸಂಖ್ಯೆಯ ಪ್ರತಿಭಟನಾಕಾರರು ತ್ರಿವರ್ಣಧ್ವಜ ಬೀಸುತ್ತಾ, 'ವಕ್ಫ್ ಬಿಲ್ ತಿರಸ್ಕರಿಸಿ ಎಂಬ ಬಿತ್ತಿ ಪತ್ರಗಳನ್ನು ಹಿಡಿದುಕೊಂಡು ಮೆರವಣಿಗೆ ನಡೆಸಿದರು. ಪಾರ್ಕ್ ಸರ್ಕಸ್ ಕ್ರಾಸಿಂಗ್‌ನಲ್ಲಿ ಮುಸ್ಲಿಮ್ ಸಮುದಾಯದ ಸದಸ್ಯರು ಬಿಲ್‌ನ ತಕ್ಷಣದ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. *ಜಾಯಿಂಟ್ ಫೋರಂ ಫಾರ್ ವಕ್ಫ್ ಪ್ರೊಟೆಕ್ಷನ್* ಮತ್ತು ಆಲ್ ಬೆಂಗಾಲ್ ಮೈನಾರಿಟಿ ಯೂತ್ ಫೆಡರೇಷನ್ ನಂತಹ ಅಲ್ಪಸಂಖ್ಯಾತ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದವು.
ಪ್ರತಿಭಟನೆಯಿಂದಾಗಿ ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಯಿತು."ಈ ಕಾಯಿದೆ ದೇಶವನ್ನು ಒಡೆಯುವ ಒಂದು ತಂತ್ರವಾಗಿದೆ. ಅವರು ತಮ್ಮ ಬಹುಮತ ಬಳಸಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಇದನ್ನು ಅಂಗೀಕರಿಸಿದ್ದಾರೆ. ಈ ಸರ್ವಾಧಿಕಾರಿ ವಿಧಾನವನ್ನು ನಾವು ವಿರೋಧಿಸುತ್ತೇವೆ. ಇದು ಕೇವಲ ಮುಸ್ಲಿಮರ ಆಸ್ತಿಗಳನ್ನು ಕಿತ್ತುಕೊಳ್ಳುವ ಪ್ರಯತ್ನವಲ್ಲ, ನಮ್ಮನ್ನು ನಾಶ ಮಾಡುವ ಉದ್ದೇಶ ಹೊಂದಿದೆ" ಎಂದು ಒಬ್ಬ ಪ್ರತಿಭಟನಾಕಾರ ಹೇಳಿದರು.
ಕಲ್ಕತಾ ಹೈಕೋರ್ಟ್‌ನ ಹಿರಿಯ ವಕೀಲರಾದ ಎಂ. ಹೋಕ್ ಅವರು ಮಾತನಾಡಿ, "ವಕ್ಫ್ ಆಸ್ತಿಗಳನ್ನು ಕಿತ್ತುಕೊಳ್ಳುವ ಮತ್ತು ಜನರನ್ನು ಒಡೆಯುವ ಪ್ರಯತ್ನದ ವಿರುದ್ಧ ದೊಡ್ಡ ಪ್ರತಿಭಟನೆಗಳು ನಡೆಯಲಿವೆ" ಎಂದು ಎಚ್ಚರಿಸಿದರು. ಆದಾಗ್ಯೂ , 'ಬೋರ್ಡ್ ಆಫ್ ಔಕಾಫ್ (ವಕ್ಫ್) ವೆಸ್ಟ್ ಬೆಂಗಾಲ್' ಈ ಬೆಳವಣಿಗೆಗೆ ತಕ್ಷಣ ಪ್ರತಿಕ್ರಿಯಿಸಲಿಲ್ಲ. ಬೋರ್ಡ್‌ನ ಹಿರಿಯ ಸದಸ್ಯ ಖಲೀಲುರ್ ರಹಮಾನ್ (ಟಿಎಂಸಿ ಸಂಸದ) ಉತ್ತರ ನೀಡಲು ನಿರಾಕರಿಸಿದರು.
ಮಮತಾ ಬ್ಯಾನರ್ಜಿ ಟೀಕೆ
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈ ಬಿಲ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಪಕ್ಷದ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಈ ಕಾಯಿದೆಯನ್ನು ಬಿಜೆಪಿ ದೇಶವನ್ನು ಒಡೆಯಲು ಪರಿಚಯಿಸಿದೆ ಎಂದು ಆರೋಪಿಸಿದರು. "ಕೇಂದ್ರದಲ್ಲಿ ಪ್ರಸ್ತುತ ಆಡಳಿತವನ್ನು ಉರುಳಿಸಿ ಹೊಸ ಬಿಜೆಪಿಯೇತರ ಸರ್ಕಾರ ರಚನೆಯಾದ ತಕ್ಷಣವೇ ಈ ಬಿಲ್ ರದ್ದುಗೊಳಿಸುವ ತಿದ್ದುಪಡಿ ಪರಿಚಯಿಸುತ್ತೇನೆ" ಎಂದು ಅವರು ಪ್ರತಿಜ್ಞೆ ಮಾಡಿದರು.
ಪಶ್ಚಿಮ ಬಂಗಾಳ ದೇಶದಲ್ಲಿ ಎರಡನೇ ಅತಿ ಹೆಚ್ಚು ವಕ್ಫ್ ಆಸ್ತಿಗಳನ್ನು ಹೊಂದಿದೆ. ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ 80,548 ವಕ್ಫ್ ಆಸ್ತಿಗಳಿವೆ. ಇದು ಉತ್ತರ ಪ್ರದೇಶದ ನಂತರ ಎರಡನೇ ಸ್ಥಾನದಲ್ಲಿದೆ. ರಾಯಲ್ ಕಲಕತ್ತಾ ಗಾಲ್ಫ್ ಕ್ಲಬ್, ಟಾಲಿಗಂಜ್ ಕ್ಲಬ್, 150ಕ್ಕೂ ಹೆಚ್ಚು ಶಾಲೆಗಳು, ಒಂಬತ್ತು ಆಸ್ಪತ್ರೆಗಳು, ಒಂದು ಶಾಪಿಂಗ್ ಕಾಂಪ್ಲೆಕ್ಸ್, ಹಲವಾರು ಮಾಡೆಲ್ ಇಂಗ್ಲಿಷ್ ಮದರಸಾಗಳು ಮತ್ತು ಮುಸ್ಲಿಮ್ ಹಾಸ್ಟೆಲ್‌ಗಳು ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಮೇಲೆ ಕಾರ್ಯನಿರ್ವಹಿಸುತ್ತಿವೆ.
ತಮಿಳುನಾಡಿನಲ್ಲಿ ಧರಣಿಗಳು
ನಟ ವಿಜಯ್ ಅವರ 'ತಮಿಳಗ ವೆಟ್ಟ್ರಿ ಕಳಗಂ' (ಟಿವಿಕೆ) ಚೆನ್ನೈ ಮತ್ತು ಕೊಯಮತ್ತೂರು, ತಿರುಚಿರಾಪಳ್ಳಿಯಂತಹ ಇತರ ಪ್ರಮುಖ ನಗರಗಳಲ್ಲಿ ರಾಜ್ಯವ್ಯಾಪಿ ಪ್ರತಿಭಟನೆಗಳನ್ನು ಆಯೋಜಿಸಿತು. ಟಿವಿಕೆ ಕಾರ್ಯಕರ್ತರು "ಮುಸ್ಲಿಮರ ಹಕ್ಕುಗಳನ್ನು ಕಿತ್ತುಕೊಳ್ಳಬೇಡಿ" ಮತ್ತು 'ವಕ್ಫ್ ಬಿಲ್ ತಿರಸ್ಕರಿಸಿ' ಎಂಬ ಘೋಷಣೆಗಳನ್ನು ಕೂಗಿದರು. ನಟರಾಗಿ ರಾಜಕಾರಣಿಯಾದ ವಿಜಯ್ ಈ ಬಿಲ್ ಅನ್ನು 'ಪ್ರಜಾಪ್ರಭುತ್ವ ವಿರೋಧಿ' ಎಂದು ಹೇಳಿದರಲ್ಲದೆ, ಇದರ ಅಂಗೀಕಾರವು ಭಾರತದ ಜಾತ್ಯತೀತ ಅಡಿಪಾಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ ಎಂದರು.
ಅಹಮದಾಬಾದ್‌ನಲ್ಲೂ ಧರಣಿ
ಗುಜರಾತ್ ರಾಜಧಾನಿ ಅಹಮದಾಬಾದ್‌ನಲ್ಲೂ ಬಿಲ್ ವಿರುದ್ಧ ಪ್ರತಿಭಟನೆಗಳು ನಡೆದವು. ಎಎನ್‌ಐ ವೀಡಿಯೊವೊಂದು ಎಕ್ಸ್‌ನಲ್ಲಿ ಪ್ರಕಟವಾಗಿದ್ದು, ಅದರಲ್ಲಿ ರಸ್ತೆಯಲ್ಲಿ ಪ್ರತಿಭಟನೆಗೆ ಕುಳಿದಿದ್ದದ ವೃದ್ಧರನ್ನು ಪೊಲೀಸರು ಸರಿಸುವುದನ್ನು ಕಾಣಬಹುದು.
ದೆಹಲಿ ಪೊಲೀಸ್ ಪರೇಡ್
ದೆಹಲಿ ಪೊಲೀಸರು ಪಾರಾಮಿಲಿಟರಿ ಪಡೆಗಳೊಂದಿಗೆ ಶುಕ್ರವಾರ ನಗರದ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ, ಜಾಮಿಯಾ ನಗರ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸೇರಿದಂತೆ ಹಲವೆಡೆ ಕವಾಯತು ನಡೆಸಿತು. ಹಲವು ಸೂಕ್ಷ್ಮ ಸ್ಥಳಗಳನ್ನು ಮೇಲ್ವಿಚಾರಣೆ ಮಾಡಲು ಡ್ರೋನ್‌ಗಳ ನಿಯೋಜಿಸಲಾಗಿತ್ತು.
"ಹಿರಿಯ ಪೊಲೀಸ್ ಅಧಿಕಾರಿಗಳು ಈಗಾಗಲೇ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಭದ್ರತಾ ಯೋಜನೆಯನ್ನು ರೂಪಿಸಿದ್ದಾರೆ" ಎಂದು ಒಬ್ಬ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.
ವಿರೋಧ ಪಕ್ಷಗಳ ತೀವ್ರ ಆಕ್ಷೇಪ
ಸಂಸತ್ತಿನಲ್ಲಿ ಮಸೂದೆಯ ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದವು, ಇದನ್ನು "ಮುಸ್ಲಿಮ್ ವಿರೋಧಿ" ಮತ್ತು 'ಅಸಾಂವಿಧಾನಿಕ ಎಂದು ಆರೋಪಿಸಿವೆ. ಆದರೆ ಸರ್ಕಾರವು ಇದನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಯೋಜನಕಾರಿ "ಐತಿಹಾಸಿಕ ಸುಧಾರಣೆ" ಎಂದು ಸಮರ್ಥಿಸಿಕೊಂಡಿದೆ.
ವಕ್ಫ್ (ತಿದ್ದುಪಡಿ) ಬಿಲ್ ಈಗ ಕಾನೂನಾಗಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಗೀಕಾರಕ್ಕಾಗಿ ಕಾಯುತ್ತಿದೆ.