Ambedkar Samman March: ನಾಳೆ ಕಾಂಗ್ರೆಸ್‌ನಿಂದ ಅಂಬೇಡ್ಕರ್ ಸಮ್ಮಾನ್ ಜಾಥಾ
Ambedkar Samman March: ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕೆ.ಸಿ.ವೇಣುಗೋಪಾಲ್, ಅಮಿತ್ ಶಾ ಅವರ ರಾಜೀನಾಮೆ ಕೋರಿ ಜಿಲ್ಲಾಧಿಕಾರಿಗಳ ಮೂಲಕ ಅಧ್ಯಕ್ಷ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು;
ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆಯನ್ನು ಖಂಡಿಸಿ ಹಾಗೂ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಡಿಸೆಂಬರ್ 24ರಂದು ರಾಷ್ಟ್ರವ್ಯಾಪಿ 'ಬಾಬಾಸಾಹೇಬ್ ಅಂಬೇಡ್ಕರ್ ಸಮ್ಮಾನ್ ಮಾರ್ಚ್' ಆಯೋಜಿಸಲಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಭಾನುವಾರ (ಡಿಸೆಂಬರ್ 22) ಈ ಮಾಹಿತಿ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಸಂವಿಧಾನ ಕುರಿತ ಚರ್ಚೆಯ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಇತ್ತೀಚೆಗೆ ನೀಡಿದ ಹೇಳಿಕೆಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ವೇಣುಗೋಪಾಲ್, ಅಮಿತ್ ಶಾ ಅವರ ರಾಜೀನಾಮೆ ಕೋರಿ ಜಿಲ್ಲಾಧಿಕಾರಿಗಳ ಮೂಲಕ ಅಧ್ಯಕ್ಷ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಶಾ ಅವರ ಹೇಳಿಕೆಗಳು ಅಂಬೇಡ್ಕರ್ ಅವರನ್ನು ಕೀಳಾಗಿ ಕಂಡಿದೆ. ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವವರನ್ನು ಘಾಸಿಗೊಳಿಸಿದೆ ಎಂದು ಅವರು ಆರೋಪಿಸಿದರು.
ತಪ್ಪು ಹೇಳಿಕೆಗಳ ಹೊರತಾಗಿಯೂ ಅಮಿತ್ ಶಾ, ಪ್ರಧಾನಿ ಅಥವಾ ಬಿಜೆಪಿ ವಿಷಾದ ವ್ಯಕ್ತಪಡಿಸಿಲ್ಲ. ಬದಲಾಗಿ, ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಜಾರ್ಜ್ ಸೊರೋಸ್ ಜತೆ ಅಂಬೇಡ್ಕರ್ ವಿಚಾರವನ್ನು ಮಿಶ್ರಗೊಳಿಸಲು ಯತ್ನಿಸಿ ಮತ್ತಷ್ಟು ಅಗೌರವ ತೋರಿದ್ದಾರೆ" ಎಂದು ವೇಣುಗೋಪಾಲ್ ಹೇಳಿದರು.
ಒತ್ತಡದ ತಂತ್ರ
ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಮತ್ತು ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ವಿರೋಧ ಪಕ್ಷದ ನಾಯಕರ ವಿರುದ್ಧ ಬಿಜೆಪಿ ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಅವರು ಆರೋಪಿಸಿದರು. ಶಾ ಅವರ ಹೇಳಿಕೆಗಳು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಎಂದು ವೇಣಗೋಪಾಳ್ ಹೇಳಿದರು,
ಜೈ ಭೀಮ್, ಜೈ ಸಂವಿಧಾನ್ ರ್ಯಾಲಿ
ಕಾರ್ಪೊರೇಟ್ ಬೆಂಬಲಿತ ಮಾಧ್ಯಮಗಳು ಈ ವಿಷಯವನ್ನು ಹತ್ತಿಕ್ಕುತ್ತಿವೆ ಎಂದು ವೇಣುಗೋಪಲ್ ಆರೋಪಿಸಿದರು. ಈ ವಿಷಯವನ್ನು ಜನರ ಬಳಿಗೆ ಕೊಂಡೊಯ್ಯುವುದಕ್ಕಾಗಿಸ ರ್ಯಾಲಿ ನಡೆಸುವುದಾಗಿ ಹೇಳಿದರು.
ಡಿಸೆಂಬರ್ 26 ಮತ್ತು 27 ರಂದು ಕರ್ನಾಟಕದ ಬೆಳಗಾವಿಯಲ್ಲಿ, ಮಹಾತ್ಮ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ 100 ನೇ ವಾರ್ಷಿಕೋತ್ಸವ ಆಚರಿಸುವುದಾಗಿ ವೇಣುಗೋಪಾಲ್ ಘೋಷಿಸಿದರು.
ಬಿಜೆಪಿಯ ಸಂವಿಧಾನ ವಿರೋಧಿ ಕ್ರಮಗಳನ್ನು ಎತ್ತಿ ತೋರಿಸಲು ಡಿಸೆಂಬರ್ 26 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಮತ್ತು ಡಿಸೆಂಬರ್ 27 ರಂದು 'ಜೈ ಭೀಮ್, ಜೈ ಸಂವಿಧಾನ್' ರ್ಯಾಲಿ ನಡೆಯಲಿದೆ ಎಂದು ವೇಣುಗೋಪಾಲ್ ಹೇಳಿದರು.
ಕಾಂಗ್ರೆಸ್ ತನ್ನ ಪ್ರತಿಭಟನಾ ಕಾರ್ಯಕ್ರಮಗಳ ಭಾಗವಾಗಿ ರಾಜ್ಯ ಮಟ್ಟದ ರ್ಯಾಲಿಗಳು ಮತ್ತು ಗ್ರಾಮ ಸಭೆಗಳನ್ನು ಒಳಗೊಂಡ ಒಂದು ತಿಂಗಳ ಅಭಿಯಾನ ಪ್ರಾರಂಭಿಸಲಿದೆ.
ಪಿಣರಾಯಿ ವಿರುದ್ಧ ಟೀಕೆ
ಅಮಿತ್ ಶಾ ಅವರ ಹೇಳಿಕೆಯ ಬಗ್ಗೆ ಮೌನವಹಿಸಿದ್ದಕ್ಕಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಟೀಕಿಸಿದ ವೇಣುಗೋಪಾಲ್, ಬಿಜೆಪಿಯನ್ನು ಎದುರಿಸಲು ಅವರು ಹೆದರುತ್ತಿದ್ದಾರೆ ಎಂದು ಹೇಳಿದರು.
"ಅಂಬೇಡ್ಕರ್ ಅವರಿಗೆ ಅವಮಾನವಾದಾಗ ರಾಜಕೀಯ ಪ್ರಬುದ್ಧ ರಾಜ್ಯವಾಗಿರುವ ಕೇರಳದ ಮುಖ್ಯಮಂತ್ರಿ ಮೊದಲು ಪ್ರತಿಕ್ರಿಯಿಸಬೇಕಿತ್ತು" ಎಂದು ವೇಣುಗೋಪಾಲ್ ಹೇಳಿದರು.
ವಿವಾದದ ಬಗ್ಗೆ ಸಕ್ರಿಯವಾಗಿ ಪ್ರತಿಭಟಿಸುತ್ತಿರುವ ರಾಹುಲ್ ಗಾಂಧಿಗೆ ಬೆಂಬಲ ನೀಡಲು ಸಿಪಿಐ (ಎಂ) ಪಾಲಿಟ್ ಬ್ಯೂರೋ ಸದಸ್ಯರು ವಿಫಲರಾಗಿದ್ದಾರೆ ಎಂದೂ ಅವರು ಆರೋಪಿಸಿದರು.
2026 ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೇವೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ವೇಣುಗೋಪಾಲ್, ಎಲ್ಲರಿಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕಿದೆ ಎಂದು ಹೇಳಿದರು.
ಚುನಾವಣಾ ಪಾರದರ್ಶಕವಾಗಿಲ್ಲ: ಆರೋಪ
ಬಿಜೆಪಿ ಚುನಾವಣಾ ಆಯೋಗವನ್ನು ಪಕ್ಷಪಾತದ ಸಂಸ್ಥೆಯನ್ನಾಗಿ ಪರಿವರ್ತಿಸುತ್ತಿದೆ ಎಂದು ವೇಣುಗೋಪಾಲ್ ಆರೋಪಿಸಿದರು. ಚುನಾವಣಾ ಆಯೋಗದ ಸದಸ್ಯರನ್ನು ಆಯ್ಕೆ ಮಾಡುವ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ತೆಗೆದುಹಾಕಿ, ಆ ಸ್ಥಾನಕ್ಕೆ ಕೇಂದ್ರ ಸಚಿವರನ್ನು ನೇಮಿಸಲಾಗಿದೆ ಎಂದು ಹೇಳಿದರು.
"ಬಿಜೆಪಿ ನ್ಯಾಯಸಮ್ಮತ ಚುನಾವಣೆ ಬಯಸಿದ್ದರೆ ಮುಖ್ಯ ನ್ಯಾಯಮೂರ್ತಿಯನ್ನು ಆಯ್ಕೆ ಪ್ರಕ್ರಿಯೆಯಿಂದ ಏಕೆ ಹೊರಗಿಡಬೇಕು?" ಎಂದು ಅವರು ಪ್ರಶ್ನಿಸಿದರು. ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂಬುದಾಗಿ ಹೇಳಿದ ವೇಣುಗೋಪಾಲ್, ಈ ಕುರಿತು ಕಾನೂನು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.