ಅಹಮದಾಬಾದ್ ವಿಮಾನ ದುರಂತ: ವಿಮೆ ಮೊತ್ತವೇ 2,400 ಕೋಟಿ ರೂ. ಇದು ಹೊಸ ದಾಖಲೆ

2013ರಲ್ಲಿ ತಯಾರಾದ ಈ ಡ್ರೀಮ್‌ಲೈನರ್ ವಿಮಾನಕ್ಕೆ 75-80 ಮಿಲಿಯನ್ ಡಾಲರ್‌ಗೆ ವಿಮೆ ಇರಬಹುದು ಎಂದು ಒಂದು ಮೂಲ ತಿಳಿಸಿದೆ.;

Update: 2025-06-13 15:05 GMT

ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ಏರ್ ಇಂಡಿಯಾ ವಿಮಾನ ದುರಂತದಿಂದ ಉಂಟಾಗುವ ವಿಮಾ ಪಾವತಿಗಳು ಬರೋಬ್ಬರಿ 210-280 ಮಿಲಿಯನ್ ಡಾಲರ್‌ಗಳಷ್ಟು (ಅಂದಾಜು 2,400 ಕೋಟಿ ರೂಪಾಯಿ) ತಲುಪಬಹುದು ಎಂದು ವಿಮಾ ತಜ್ಞರು ಅಂದಾಜಿಸಿದ್ದಾರೆ. ವಿಮಾನದ ನಷ್ಟ, ಪ್ರಯಾಣಿಕರ ಜವಾಬ್ದಾರಿ ಮತ್ತು ಥರ್ಡ್​ ಪಾರ್ಟಿಗಳ ಕ್ಲೈಮ್‌ಗಳು ಸೇರಿದಂತೆ ಇದು ಭಾರತದ ಇತಿಹಾಸದಲ್ಲಿ ಅತಿ ದೊಡ್ಡ ವಿಮಾ ಪಾವತಿಗಳಲ್ಲಿ ಒಂದಾಗುವ ಸಾಧ್ಯತೆಯಿದೆ. ಏರ್ ಇಂಡಿಯಾದ 2 ಬಿಲಿಯನ್ ಡಾಲರ್ ಮೌಲ್ಯದ ವಿಮಾನಗಳ ಫ್ಲೀಟ್‌ಗೆ ಟಾಟಾ ಎಐಜಿ ಮುಖ್ಯ ವಿಮಾದಾರ ಕಂಪನಿಯಾಗಿದ್ದು, ಇತರ ವಿಮಾದಾರರು ಮತ್ತು ಲಂಡನ್ ಮಾರುಕಟ್ಟೆಯಿಂದ ಮರುವಿಮೆ ಹೊಂದಿದೆ.

ಜೂನ್ 12ರಂದು ಅಹಮದಾಬಾದ್‌ನಲ್ಲಿ ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್‌ಲೈನರ್ (ನೋಂದಣಿ VT-ABN) ಪತನಗೊಂಡಿದ್ದು, ಭಾರತದ ಇತಿಹಾಸದಲ್ಲೇ ಅತ್ಯಂತ ಘೋರ ವಿಮಾನ ದುರಂತಗಳಲ್ಲಿ ಒಂದಾಗಿದೆ. ಈ ಘಟನೆಯು ವಿಮಾನದ ನಷ್ಟ, ಪ್ರಯಾಣಿಕರ ಮತ್ತು ಥರ್ಡ್​ ಪಾರ್ಟಿಗಳ ಜವಾಬ್ದಾರಿಗಳು ಹಾಗೂ ಜಾಗತಿಕ ಮಾರುಕಟ್ಟೆಗಳನ್ನು ಒಳಗೊಂಡ ಮರುವಿಮೆ ಕಾರ್ಯವಿಧಾನಗಳನ್ನು ಒಳಗೊಂಡ ಬಹು ಹಂತದ ವಿಮಾ ಕ್ಲೈಮ್‌ಗೆ ಕಾರಣವಾಗಿದೆ.

2013ರಲ್ಲಿ ತಯಾರಾದ ಈ ಡ್ರೀಮ್‌ಲೈನರ್ ವಿಮಾನಕ್ಕೆ 75-80 ಮಿಲಿಯನ್ ಡಾಲರ್‌ಗೆ ವಿಮೆ ಇರಬಹುದು ಎಂದು ಒಂದು ಮೂಲ ತಿಳಿಸಿದೆ. ಆದರೆ, ಮತ್ತೊಂದು ಮೂಲವು ಇದರ ವಿಮಾ ಮೌಲ್ಯ 120 ಮಿಲಿಯನ್ ಡಾಲರ್‌ವರೆಗೂ ಇರಬಹುದು ಎಂದು ಅಂದಾಜಿಸಿದೆ. ಪೂರ್ಣ ನಷ್ಟದ ಸಂದರ್ಭದಲ್ಲಿ, ವಿಮಾಕಂಪನಿಯು ಸಾಮಾನ್ಯವಾಗಿ ಒಪ್ಪಿಗೆಯಾದ ಸಂಪೂರ್ಣ ಮೊತ್ತ ಪಾವತಿಸುತ್ತಾರೆ.

ಪೂರ್ಣ ಮೊತ್ತವನ್ನು ಪಾವತಿ

ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್‌ನ ಮಾಜಿ ಸಿಎಂಡಿ ಗಿರೀಶ್ ರಾಧಾಕೃಷ್ಣನ್ ಈ ಕುರಿತು ಮಾತನಾಡಿ, "ವಿಮಾನದ ನಷ್ಟ, ಪ್ರಯಾಣಿಕರ ಜವಾಬ್ದಾರಿ, ಮತ್ತು ಥರ್ಡ್​ ಪಾರ್ಟಿ ವ್ಯಕ್ತಿಗಳ ಜವಾಬ್ದಾರಿಗಳನ್ನು ಪಾವತಿಸಬೇಕಾಗಿದೆ. ಪೂರ್ಣ ನಷ್ಟದ ಸಂದರ್ಭದಲ್ಲಿ, ಏರ್‌ಲೈನ್ ಮತ್ತು ವಿಮಾದಾರರ ನಡುವಿನ ಒಪ್ಪಿಗೆಯ ಮೌಲ್ಯದ 100% ಪಾವತಿಯಾಗುತ್ತದೆ" ಎಂದು ತಿಳಿಸಿದ್ದಾರೆ. "ಕೊಚ್ಚಿಯಲ್ಲಿ ಎರಡು ಹಡಗುಗಳು ಮುಳುಗಿದ ಸಂದರ್ಭದಂತೆ ಇಲ್ಲಿ ಯಾವುದೇ ರಿಕವರಿ ಇಲ್ಲ. ವಿಮಾನ ವಿಮೆಯು ಸರ್ವ-ರಿಸ್ಕ್ ಪಾಲಿಸಿಯಾಗಿದ್ದು, ಯಾವುದೇ ಸಂದರ್ಭದಲ್ಲಿ ಹೊರಗಿಡುವಂತಿಲ್ಲ. ಆದ್ದರಿಂದ, ಏರ್ ಇಂಡಿಯಾ ಮತ್ತು ಬಾಧಿತರಿಗೆ ಪೂರ್ಣ ಮೊತ್ತವನ್ನು ಪಾವತಿಯಾಗಲಿದೆ" ಎಂದು ಅವರು ಹೇಳಿದ್ದಾರೆ.

ಸಾವು ಮತ್ತು ಆಸ್ತಿ ನಷ್ಟದ ಪರಿಹಾರ

ವಿಮಾನವು ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ಗೆ ಡಿಕ್ಕಿ ಹೊಡೆದಾಗ, ಕನಿಷ್ಠ ಐದು ವಿದ್ಯಾರ್ಥಿಗಳು ಮತ್ತು ಒಬ್ಬ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಜೊತೆಗೆ, ಹಾಸ್ಟೆಲ್ ಮತ್ತು ಸುತ್ತಮುತ್ತಲಿನ ಕಟ್ಟಡಗಳಿಗೆ ಗಂಭೀರ ರಚನಾತ್ಮಕ ಹಾನಿಯಾಗಿದೆ. ಥರ್ಡ್​ ಪಾರ್ಟಿಗಳ ಸಾವು ಮತ್ತು ಆಸ್ತಿ ನಷ್ಟಕ್ಕೆ ಪರಿಹಾರದ ಮೊತ್ತ ಇನ್ನೂ ಅಂದಾಜಿಸಲಾಗಿಲ್ಲ.

ಮರುವಿಮೆಯಿಂದ ಜವಾಬ್ದಾರಿ ಹಂಚಿಕೆ

ಏರ್ ಇಂಡಿಯಾದ ವಿಮಾನಗಳ 2 ಬಿಲಿಯನ್ ಡಾಲರ್ ವಿಮೆಯನ್ನು ಪ್ರಮುಖವಾಗಿ ಟಾಟಾ ಎಐಜಿ (45%), ನಂತರ ನ್ಯೂ ಇಂಡಿಯಾ (32%), ಓರಿಯಂಟಲ್ ಇನ್ಶೂರೆನ್ಸ್ (14%), ಐಸಿಐಸಿಐ ಲೊಂಬಾರ್ಡ್ (7%), ಯುನೈಟೆಡ್ (1%), ಮತ್ತು ನ್ಯಾಷನಲ್ (1%) ಕಂಪನಿಗಳು ಹಂಚಿಕೊಂಡಿವೆ. ಈ ವಿಮೆಯ ಸುಮಾರು 85% ರಿಸ್ಕ್ ಅನ್ನು ಲಂಡನ್ ಮಾರುಕಟ್ಟೆಯ ಎಒನ್ ಮತ್ತು ವಿಲ್ಲೀಸ್ ಮೂಲಕ ಮರುವಿಮೆ ಮಾಡಲಾಗಿದೆ. ಇದರಿಂದಾಗಿ ಯಾವುದೇ ಒಂದು ವಿಮಾದಾರರ ಮೇಲೆ ದುರಂತದ ಒಟ್ಟು ಹೊರೆ ಬೀಳುವುದಿಲ್ಲ.

ಮಾಂಟ್ರಿಯಲ್ ಕನ್ವೆನ್ಷನ್ ಅಡಿ ಪರಿಹಾರದ ಮಾನದಂಡಗಳು

1999ರಲ್ಲಿ ಅಂಗೀಕಾರಗೊಂಡ ಮಾಂಟ್ರಿಯಲ್ ಕನ್ವೆನ್ಷನ್ (ಏರ್‌ಲೈನ್ ಜವಾಬ್ದಾರಿ ನಿಯಂತ್ರಿಸುವ ಅಂತರರಾಷ್ಟ್ರೀಯ ಒಡಂಬಡಿಕೆ) ಈ ದುರಂತದ ಬಾಧಿತರಿಗೆ ಪರಿಹಾರ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ದುರಂತದಲ್ಲಿ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಮೃತಪಟ್ಟಿದ್ದು. ಕೇವಲ ಒಬ್ಬರು ಬದುಕುಳಿದಿದ್ದಾರೆ. ಟಾಟಾ ಗ್ರೂಪ್ ತಕ್ಷಣದ ಪರಿಹಾರವಾಗಿ ಪ್ರತಿ ಕುಟುಂಬಕ್ಕೆ 1 ಕೋಟಿ ರೂಪಾಯಿ ಘೋಷಿಸಿದೆ.

12 ಮಂದಿ ಸಿಬ್ಬಂದಿಯ ಸಾವಿನ ಪರಿಹಾರವು ಮಾಂಟ್ರಿಯಲ್ ಕನ್ವೆನ್ಷನ್‌ಗೆ ಒಳಪಡದೇ ಇರುವುದರಿಂದ, ಏರ್ ಇಂಡಿಯಾದ ಉದ್ಯೋಗಿಗಳ ವಿಮಾ ಯೋಜನೆಗಳ ಮೂಲಕ ಪರಿಹಾರ ನೀಡಲಾಗುತ್ತದೆ. ಪ್ರತಿ ಪ್ರಯಾಣಿಕರಿಗೆ 128,821 ಡಾಲರ್​ (ಅಂದಾಜು 1.5 ಕೋಟಿ ರೂ.) ರಿಂದ 151,880 ಡಾಲರ್​ ( 1.8 ಕೋಟಿ ರೂಪಾಯಿ) ವರೆಗೆ ಪರಿಹಾರವನ್ನು ವಿಮಾದಾರರು ಉಲ್ಲೇಖಿಸಿದ್ದಾರೆ. ತಕ್ಷಣದ ವೆಚ್ಚಕ್ಕಾಗಿ ಕನಿಷ್ಠ 16,000 ಡಾಲರ್​ ( 18 ಲಕ್ಷ ರೂಪಾಯಿ) ಮುಂಗಡ ಪಾವತಿಯೂ ಲಭ್ಯವಿದೆ.

ಪರಿಹಾರದಲ್ಲಿ ವ್ಯತ್ಯಾಸ ಮತ್ತು ವಿಮಾ ಮಿತಿಯ ಸವಾಲು

ಹಿಂದಿನ ದುರಂತಗಳ ಉದಾಹರಣೆಗಳು, ಪರಿಹಾರವು ಪ್ರಯಾಣಿಕರ ರಾಷ್ಟ್ರೀಯತೆ ಮತ್ತು ಆದಾಯದ ಮೇಲೆ ಆಧಾರಿತವಾಗಿ ಭಿನ್ನವಾಗಿರಬಹುದು ಎಂದು ತೋರಿಸುತ್ತವೆ. ಲಯನ್ ಏರ್ ಮತ್ತು ಎಥಿಯೋಪಿಯನ್ ಏರ್‌ಲೈನ್ಸ್ ದುರಂತಗಳ ಸಂದರ್ಭದಲ್ಲಿ, ಎಥಿಯೋಪಿಯನ್ ಏರ್‌ಲೈನ್ಸ್‌ಗೆ 60%ಕ್ಕಿಂತ ಹೆಚ್ಚಿನ ಪರಿಹಾರ (2.4 ಬಿಲಿಯನ್ ಡಾಲರ್) ದೊರೆತಿತು, ಏಕೆಂದರೆ ಅದರಲ್ಲಿ 18 ಯುಎನ್ ಅಧಿಕಾರಿಗಳು ಮತ್ತು ಕೆಲವು ಯುರೋಪಿಯನ್ನರು ಇದ್ದರು. "ರಾಷ್ಟ್ರೀಯ ಸರಾಸರಿ ಆದಾಯ" ಆಧಾರದ ಮೇಲೆ ಪರಿಹಾರ ಲೆಕ್ಕಾಚಾರ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ವಿಮಾ ಪಾಲಿಸಿಯ ಮಿತಿಯು ಕೆಲವೊಮ್ಮೆ ಗರಿಷ್ಠ ಪರಿಹಾರವನ್ನು ಪಡೆಯಲು ಅಡ್ಡಿಯಾಗಬಹುದು. ಈ ದುರಂತದಿಂದ ಜಾಗತಿಕ ವಿಮಾನಯಾನ ವಿಮಾ ಮಾರುಕಟ್ಟೆಯಲ್ಲಿ ಗಮನಾರ್ಹ ಪರಿಣಾಮಗಳು ಉಂಟಾಗಬಹುದು. 

Similar News